ADVERTISEMENT

ಉತ್ತನೂರಿನ ಉತ್ತಮ ಸಂಪ್ರದಾಯ

​ಪ್ರಜಾವಾಣಿ ವಾರ್ತೆ
Published 14 ಫೆಬ್ರುವರಿ 2012, 6:00 IST
Last Updated 14 ಫೆಬ್ರುವರಿ 2012, 6:00 IST

ಮುಳಬಾಗಲು: ಈಚಿನ ದಿನಗಳಲ್ಲಿ ಜನಪದ ಸೊಗಡು ಮಾಯವಾಗುತ್ತಿದ್ದು, ಸಾಂಸ್ಕೃತಿಕ ಕಾರ್ಯಕ್ರಮಗಳು ಸೇರಿದಂತೆ ಹರಿಕಥೆ ಕಾಲಕ್ಷೇಪ, ಪಂಡರಿ ಭಜನೆ, ಕೋಲಾಟ ಕಡಿಮೆಯಾಗಿ ಜನರು ದೂರದರ್ಶನಕ್ಕೆ ಸೀಮಿತರಾಗುತ್ತಿದ್ದಾರೆ. ಇದಕ್ಕೆ ಅಪವಾದವಾಗಿ ತಾಲ್ಲೂಕಿನ ಉತ್ತನೂರು ಗ್ರಾಮದಲ್ಲಿ ಇಂದಿಗೂ ಹಳೆಯ ಸಂಪ್ರದಾಯ ಅನುಸರಿಸುತ್ತಾ ಬಂದು ಮಾದರಿಯಾಗಿ ಉಳಿದಿದೆ.

ಗ್ರಾಮ ನೈರ್ಮಲ್ಯ ಸೇರಿದಂತೆ ಕೆರೆ-ಕುಂಟೆಗಳಲ್ಲಿ ಹೂಳನ್ನು ತೆಗೆದು ಮನೆ ಮನೆಯಲ್ಲಿ ಹೈನುಗಾರಿಕೆ, ರೇಷ್ಮೆ ಸಾಕಣೆ ಸೇರಿದಂತೆ ವಿವಿಧ ಕಸುಬುಗಳಲ್ಲಿ ಉತ್ತನೂರು ಗ್ರಾಮದ ಜನತೆ ತೊಡಗಿಕೊಂಡಿದ್ದಾರೆ.

ಗ್ರಾಮದ ವರದರಾಜಸ್ವಾಮಿ ದೇಗುಲ ಅಭಿವೃದ್ಧಿಯನ್ನು ಸರ್ಕಾರದ ನೆರವಿಲ್ಲದೆ ಗ್ರಾಮಸ್ಥರು ಮತ್ತು ದಾನಿಗಳೆ ಮಾಡಿದ್ದಾರೆ.  ಈಗಾಗಲೇ ದೇಗುಲದ ಮುಂದೆ 108 ಅಡಿ ಎತ್ತರದ ಮಹಾದ್ವಾರ ನಿರ್ಮಾಣ ಕೈಗೊಂಡಿದ್ದಾರೆ.

ಈ ಗ್ರಾಮ ರಾಜ್ಯ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಕೀರ್ತಿ ಗಳಿಸಿದೆ. ಗ್ರಾಮಕ್ಕೆ ಇತರೆ ರಾಷ್ಟ್ರಗಳ ಪ್ರತಿನಿಧಿಗಳು ಭೇಟಿ ನೀಡಿ ಸಮಗ್ರ ಮಾಹಿತಿ ಪಡೆದು, ತಮ್ಮ ರಾಷ್ಟ್ರಗಳಲ್ಲೂ ಅಳವಡಿಸಿಕೊಳ್ಳಲು ಮುಂದಾಗಿದ್ದಾರೆ.

ಗ್ರಾಮದ ಮುಖಂಡ ಉತ್ತನೂರು ಶ್ರೀನಿವಾಸ್ ನೇತೃತ್ವದಲ್ಲಿ ಪ್ರತಿ ಸಂಜೆ ಭಜನೆ, ಹಾಸ್ಯ ಚುಟುಕು ನಡೆಯುತ್ತದೆ. ಆ ಮೂಲಕ ಆರೋಗ್ಯ ಕಾಪಾಡಿಕೊಳ್ಳಲು ಆದ್ಯತೆ ನೀಡಿದ್ದಾರೆ.

ವರದರಾಜ ಸ್ವಾಮಿ ಬ್ರಹ್ಮರಥೋತ್ಸವ ಪ್ರಯುಕ್ತ ಈಚೆಗೆ ಮಲ್ಲಕಂಬ ಸ್ಪರ್ಧೆ ಏರ್ಪಡಿಸಲಾಗಿತ್ತು. ಸಿಪ್ಪೆ ಸುಲಿದ ನೀಲಗಿರಿ ಮರವನ್ನು ನೆಟ್ಟು ಅದಕ್ಕೆ ಗ್ರೀಸ್ ಆಯಿಲ್ ಮೆತ್ತಲಾಗಿತ್ತು. ಸ್ಪರ್ಧಿಗಳು ಬಿದ್ದರೂ ಅಪಾಯವಾಗದಂತೆ ಕೆಳ ಭಾಗದಲ್ಲಿ ಜೇಡಿಮಣ್ಣು ಹಾಕಿ ಸ್ಪರ್ಧೆ ನಡೆಸಲಾಯಿತು.

ಒಂದು ಗುಂಪಿನವರು ಮರ ಹತ್ತುವಾಗ ಮತ್ತೊಂದು ಗುಂಪಿನವರು ಮರಮಲ್ಲರಿಗೆ ನೀರು ಹಾಕಿ ಅವರು ಕೆಳಗೆ ಜಾರಿ ಬಿಳುವಂತೆ ಮಾಡುತ್ತಿದ್ದರು. ಈ ದೃಶ್ಯ ನೋಡುಗರಿಗೆ ರೋಮಾಂಚನಕಾರಿಯಾಗಿತ್ತು. ಈ ಸ್ಪರ್ಧೆಯಲ್ಲಿ ವೈ.ಗೊಲ್ಲಹಳ್ಳಿ ತಂಡದ ಮಧು ಎಂಬ 5ನೇ ತರಗತಿ ವಿದ್ಯಾರ್ಥಿ ಮಲ್ಲಕಂಬ ಏರಿ ಪ್ರಥಮ ಬಹುಮಾನ ಪಡೆದ.

ದ್ವಿತೀಯ ಬಹುಮಾನ ಉತ್ತನೂರು ಅರುಣ ಕುಮಾರ್ ಅವರ ತಂಡ ಹಾಗೂ ತೃತೀಯ ಬಹುಮಾನ ರಾಜ್ಯ ರಸ್ತೆ ಸಾರಿಗೆ ಸಿಬ್ಬಂದಿ ಪಡೆಯುವಲ್ಲಿ ಯಶಸ್ವಿಯಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.