ADVERTISEMENT

ಉದ್ಘಾಟನೆ ಅವಾಂತರ

​ಪ್ರಜಾವಾಣಿ ವಾರ್ತೆ
Published 18 ಜೂನ್ 2011, 6:55 IST
Last Updated 18 ಜೂನ್ 2011, 6:55 IST
ಉದ್ಘಾಟನೆ ಅವಾಂತರ
ಉದ್ಘಾಟನೆ ಅವಾಂತರ   

ಮಾಲೂರು: ತಾಲ್ಲೂಕಿನ ತೊರಲಕ್ಕಿ ಗ್ರಾಮದಲ್ಲಿ ಗುರುವಾರ ನಡೆದ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರದ ಉದ್ಘಾಟನೆಯು ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳ ಮಧ್ಯೆ ಹಲವು ದಿನಗಳಿಂದ ಇದ್ದ ಆಂತರಿಕ ಜಗಳಕ್ಕೆ ಕಾರಣವಾಯಿತು.

ಕೊನೆಗೆ ಕಾರ್ಯಕ್ರಮವು ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ಅವರ ಮಧ್ಯಸ್ಥಿಕೆಯಲ್ಲಿ  ಸುಖಾಂತ್ಯಗೊಂಡಿತು.

ಉಲ್ಲಂಘನೆ: ನಾಮಫಲಕದಲ್ಲಿ ಶಿಷ್ಟಾಚಾರ ಉಲ್ಲಂಘನೆಯಾಗಿರು ವುದಾಗಿ ನೂಟವೇ ಗ್ರಾ.ಪಂ. ಅಧ್ಯಕ್ಷೆ ಸವಿತಾ, ಜಿಲ್ಲಾಧಿಕಾರಿಗೆ ದೂರು ಸಲ್ಲಿಸಿ ಪ್ರತ್ಯೇಕವಾಗಿ ಪಂಚಾಯಿತಿ ವತಿಯಿಂದ ಉದ್ಘಾಟನಾ ಕಾರ್ಯಕ್ರಮ ನಡೆಸಲು ಅನುಮತಿ ಪಡೆದುಕೊಂಡಿದ್ದರು ಎನ್ನಲಾಗಿದೆ.

ಇನ್ನೊಂದೆಡೆ ಜಿ.ಪಂ. ತಾಂತ್ರಿಕ ವಿಭಾಗದವರಿಗೆ ಮಧ್ಯಾಹ್ನ 12ಕ್ಕೆ  ಕಾರ್ಯಕ್ರಮ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿದ್ದು ಉದ್ಘಾಟನೆ ಅವಾಂತರಕ್ಕೆ ಕಾರಣವಾಯಿತು.    

ಶಾಸಕ ಎಸ್.ಎನ್. ಕೃಷ್ಣಯ್ಯಶೆಟ್ಟಿ ಉದ್ಘಾಟನೆ ನೆರವೇರಿಸಿ ವೇದಿಕೆಗೆ ಆಗಮಿಸಿ ಭಾಷಣ ಮಾಡಲು ಮುಂದಾದರು. ಆಗ ಜೆಡಿಎಸ್ ಪಕ್ಷದ ಕಾರ್ಯಕರ್ತರು ಆಸ್ಪತ್ರೆ ಎದುರು ಧರಣಿ ನಡೆಸಿದರು.

ಇದರಿಂದ ಕುಪಿತರಾದ ಶಾಸಕರು ಕಾರ್ಯಕ್ರಮ ಸ್ಥಗಿತಗೊಳಿಸಿ ಒಂದೇ ಕಟ್ಟಡಕ್ಕೆ ಎರಡು ಸಾರಿ ಉದ್ಘಾಟನೆಗೆ ಅನುಮತಿ ನೀಡಿದ ಜಿಲ್ಲಾಡಳಿತ ವಿರುದ್ಧ ಅಸಮಾಧಾನಗೊಂಡು ಜಿಲ್ಲಾಧಿಕಾರಿ ಸ್ಥಳಕ್ಕೆ ಬರಬೇಕೆಂದು ಆಗ್ರಹಿಸಿ  ಧರಣಿ ನಡೆಸಿದರು.

ಜಿಲ್ಲಾಧಿಕಾರಿ ಮೀನಾ ಸ್ಥಳಕ್ಕೆ ಆಗಮಿಸಿ ಶಾಸಕ ಎಸ್.ಎನ್.ಕೃಷ್ಣಯ್ಯಶೆಟ್ಟಿ, ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ಮನವೊಲಿಸುವಲ್ಲಿ ಯಶಸ್ವಿಯಾದರು.

ಈ ಸಂದರ್ಭದಲ್ಲಿ ಶಾಸಕ ಕೃಷ್ಣಯ್ಯಶೆಟ್ಟಿ, ಟೇಕಲ್ ಹೋಬಳಿಯಾದ್ಯಂತ ಅಕ್ರಮ ಗಣಿಗಾರಿಕೆ ನಡೆಯುತ್ತಿರುವುದರಿಂದ, ಈ ಭಾಗದ ಜನಸಾಮಾನ್ಯರು ನೆಮ್ಮದಿಯಿಂದ ಜೀವನ ಸಾಗಿಸಲು ಸಾಧ್ಯವಾಗುತ್ತಿಲ್ಲ. ಇಲ್ಲಿನ  ರಸ್ತೆಗಳು ಹಾಳಾಗಿವೆ. ಇದರ ಬಗ್ಗೆ ಕೂಡಲೇ ಕ್ರಮ ಜರುಗಿಸಬೇಕೆಂದು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.  ಈ ಕುರಿತು ಸಮಗ್ರ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ ನಂತರ ಧರಣಿ ಹಿಂಪಡೆದರು.

ತಾ.ಪಂ. ಮಾಜಿ ಅಧ್ಯಕ್ಷ ಕೆ.ವೈ. ನಂಜೇಗೌಡ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ತ್ಯಾಗರಾಜನ್, ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧಿಕಾರಿ ಭಗವಾನ್ ದಾಸ್, ಜಿ.ಪಂ. ಸಿಇಒ ಶಾಂತಪ್ಪ, ತಹಶೀಲ್ದಾರ್ ಜಿ.ವಿ.ನಾಗರಾಜ್, ಸರ್ಕಲ್ ಇನ್ಸ್‌ಪೆಕ್ಟರ್ ಸಂಪತ್‌ಕುಮಾರ್, ಸಬ್ ಇನ್ಸ್‌ಪೆಕ್ಟರ್‌ಗಳಾದ ಶಿವಶಂಕರ್, ಸುಬ್ರಮಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT