ಕೋಲಾರ: ನಗರದ ರೈಲು ನಿಲ್ದಾಣ ಶುಕ್ರವಾರ ಎಂದಿನಂತೆ ಇರಲಿಲ್ಲ. ಬೆಳಿಗ್ಗೆ 7.30ರ ರೈಲು ಬೆಂಗಳೂರಿಗೆ ಪ್ರಯಾಣ ಬೆಳೆಸಿದ ಬಳಿಕ ಮೌನಕ್ಕೆ ಮೊರೆಹೋಗುತ್ತಿದ್ದ ನಿಲ್ದಾಣದಲ್ಲಿ ಬೆಳಿಗ್ಗೆಯಿಂದ ಸಂಜೆವರೆಗೂ ವಿದ್ಯಾರ್ಥಿಗಳು, ಸಾರ್ವಜನಿಕರು, ಜನಪ್ರತಿನಿಧಿಗಳು, ಸಂಘ-ಸಂಸ್ಥೆಗಳ ಕಾರ್ಯ ಕರ್ತರು, ಮಹಿಳಾ ಸ್ವಸಹಾಯ ಸಂಘಗಳ ಸದಸ್ಯೆಯರು, ಆರೋಗ್ಯ ಕಾರ್ಯಕರ್ತರು ಸೇರಿದಂತೆ ಸಾವಿರಾರು ಮಂದಿ ನೆರೆದಿದ್ದರು.
ಅವರೆಲ್ಲರನ್ನು ಹಿಡಿದಿಟ್ಟಿದ್ದು ಒಂದೇ: ರೆಡ್ ರಿಬ್ಬನ್ ಎಕ್ಸ್‌ಪ್ರೆಸ್.
ಎಚ್‌ಐವಿ/ಏಡ್ಸ್ ಜಾಗೃತಿಗಾಗಿ ರೆಡ್ ರಿಬ್ಬನ್ ಎಕ್ಸ್‌ಪ್ರೆಸ್ ರೈಲು ಶುಕ್ರವಾರವಿಡೀ ನಗರದ ನಿಲ್ದಾಣದಲ್ಲಿತ್ತು. ಎಚ್‌ಐವಿ ಸೋಂಕನ್ನು ತಡೆಗಟ್ಟುವ ಪ್ರಾಥಮಿಕ ಸೇವೆಗಳ ಬಗ್ಗೆ ಅರಿವು, ಸೋಂಕಿತರನ್ನು ತಾರತಮ್ಯದಿಂದ ಗ್ರಹಿಸುವುದನ್ನು ತಡೆಯುವುದು, ಸೋಂಕು ತಡೆಗೆ ಜಾಗೃತಿ ಮೂಡಿಸುವ ಸಲುವಾಗಿ ಸಂಚರಿಸುತ್ತಿರುವ ರೈಲು ಅಭಿಯಾನದಲ್ಲಿ ಸಾವಿರಾರು ಮಂದಿ ಬಿರಬಿಸಿಲನ್ನು ಲೆಕ್ಕಿಸದೆ ಪಾಲ್ಗೊಂಡರು.
ಕೇವಲ ಬೆರಳೆಣಿಕೆಯಷ್ಟು ಮಂದಿ ಮಾತ್ರ ಕಾಣುತ್ತಿದ್ದ ರೈಲು ನಿಲ್ದಾಣದುದ್ದಕ್ಕೂ ಶುಕ್ರವಾರ, ರೈಲಿನಲ್ಲಿರುವ ವಸ್ತುಪ್ರದರ್ಶನ ವೀಕ್ಷಿಸಲು ಸಾವಿರಾರು ಮಂದಿ ಸಾಲುಗಟ್ಟಿದ್ದರು.
ರೈಲಿನಲ್ಲಿದ್ದ ನಾಲ್ಕು ವಸ್ತುಪ್ರದರ್ಶನ ಬೋಗಿಗಳ ಪೈಕಿ ಮೂರು ಎಚ್‌ಐವಿ ಕುರಿತ ಮಾಹಿತಿಗಳನ್ನು ಒಳಗೊಂಡಿದ್ದವು.
4ನೇ ಬೋಗಿಯಲ್ಲಿ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನದ ಕುರಿತು ಮಾಹಿತಿ ಇತ್ತು. ಐದನೇ ಬೋಗಿಯಲ್ಲಿ ಅಧಿಕಾರಿಗಳು ಮತ್ತು ಪಂಚಾ ಯಿತಿ ಪ್ರತಿನಿಧಿಗಳಿಗೆ ತರಬೇತಿ ಕಾರ್ಯಕ್ರಮಗಳು ನಡೆದವು. ಆರನೇ ಬೋಗಿಯಲ್ಲಿ ಆಪ್ತ ಸಮಾಲೋಚನೆ, ಲೈಂಗಿಕ ಸೋಂಕುಗಳಿಗೆ ಚಿಕಿತ್ಸೆ ನೀಡಲಾಯಿತು.
ಮಾಹಿತಿ ಮಳಿಗೆ: ಸೋಂಕು ನಿಯಂತ್ರಣ ಮತ್ತು ನಿರ್ವಹಣೆ ಸಂಬಂಧ ಹಲವು ಮಾಹಿತಿ ಫಲಕಗಳನ್ನು ಪ್ರದರ್ಶಿಸಲಾಗಿತ್ತು. ಜಾಗೃತಿ ಮೂಡಿಸುವ ಹತ್ತಾರು ಬಗೆಯ ಕರಪತ್ರಗಳ ಉಚಿತ ವಿತರಣೆಯೂ ನಡೆಯಿತು.
ಯುವಜನ ಮತ್ತು ಅಭಿವೃದ್ಧಿ ಸಂಸ್ಥೆ, ಮೈರಾಡ, ಜೀವನ್‌ಆಶಾ ನೆಟ್‌ವರ್ಕ್, ನವಜೀವನ ಸಂಸ್ಥೆಯ ಸಿಬ್ಬಂದಿ ಕರಪತ್ರಗಳನ್ನು ಹಂಚಿದರು. ಆಸಕ್ತರಿಗೆ ಮಾಹಿತಿಗಳನ್ನೂ ವಿವರಿಸಿದರು. ಆರೋಗ್ಯ ಇಲಾಖೆಯ ಸಮಗ್ರ ರೋಗಗಳ ಕಣ್ಗಾವಲು ಯೋಜನೆ ಘಟಕ, ಕ್ಷಯರೋಗ ನಿಯಂತ್ರಣ ಘಟಕದ ಸಿಬ್ಬಂದಿ ಪಾಲ್ಗೊಂಡರು.
ರಕ್ತದಾನ: ನಿಲ್ದಾಣದ ಕೊಠಡಿಯೊಂದರಲ್ಲಿ ಜಿಲ್ಲಾ ಆಸ್ಪತ್ರೆಯ ವತಿಯಿಂದ ಏರ್ಪಡಿಸಿದ್ದ ರಕ್ತದಾನ ಕಾರ್ಯಕ್ರಮದಲ್ಲಿಯೂ ಹಲವರು ಪಾಲ್ಗೊಂಡು ರಕ್ತದಾನ ಮಾಡಿದರು.
ಬಸ್ ಜಾಥಾ: ಗ್ರಾಮಾತರ ಪ್ರದೇಶಗಳಲ್ಲಿ ಅರಿವು ಮೂಡಿಸಲು ಶುಕ್ರವಾರ ಎರಡು ಬಸ್‌ಗಳ ಮೂಲಕ ಜಾಥಾವನ್ನೂ ಏರ್ಪಡಿಸಲಾಗಿತ್ತು. ಮಾಲೂರು ತಾಲ್ಲೂಕಿನ ಟೇಕಲ್‌ನಲ್ಲಿ ಬೆಳಿಗ್ಗೆ 11.30ರಿಂದ ಮಧ್ಯಾಹ್ನ 1 ರವರೆಗೆ, ಮಾಸ್ತಿಯಲ್ಲಿ ಮಧ್ಯಾಹ್ನ 3.30ರಿಂದ ಸಂಜೆ 5ರ ವರೆಗೆ, ಅದೇ ರೀತಿ ಕೋಲಾರ ತಾಲ್ಲೂಕಿನ ವೇಮ ಗಲ್ ಮತ್ತು ಕ್ಯಾಲನೂರಿನಲ್ಲೂ ಕಾರ್ಯ ಕ್ರಮ ನಡೆಯಿತು. ಬಸ್ ಜಾಥಾಸಂಚರಿಸುವ ಗ್ರಾಮ ಗಳಲ್ಲಿ ಐಸಿಟಿಸಿ ಮೊಬೈಲ್ ವಾಹನಗಳನ್ನು ಒದಗಿಸಲಾಗಿತ್ತು. ಆಪ ಸ್ತಸಮಾಲೋಚನೆ ಮತ್ತು ರಕ್ತಪರೀಕ್ಷೆಯನ್ನು ನಡೆಸಲಾಯಿತು.
`ಸೋಂಕಿತರ ಪ್ರಮಾಣ ಇಳಿಸಿ~
ಕೋಲಾರ: ಎಚ್‌ಐವಿ, ಏಡ್ಸ್ ನಿಯಂತ್ರಿಸುವಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಮತ್ತು ಆರೋಗ್ಯ ಇಲಾಖೆ ಜಂಟಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಸಲಹೆ ನೀಡಿದರು.
ನಗರದ ರೈಲು ನಿಲ್ದಾಣದಲ್ಲಿ ಶುಕ್ರವಾರ ರೆಡ್ ರಿಬ್ಬನ್ ಎಕ್ಸ್‌ಪ್ರೆಸ್ ರೈಲು ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿ, ಏಡ್ಸ್ ನಿಯಂತ್ರಣ ವಿಚಾರ ದಲ್ಲಿ ಕೇಂದ್ರದ ಕಾರ್ಯಕ್ರಮಗಳನ್ನು ಅನುಷ್ಠಾನ ಗೊಳಿಸುವಲ್ಲಿ ರಾಜ್ಯ ಸರ್ಕಾರ ಹೆಚ್ಚು ಒತ್ತು ಕೊಡಬೇಕು ಎಂದು ಅಭಿಪ್ರಾಯಪಟ್ಟರು.
ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ ಕಡಿಮೆ ಇರ ಬಹುದು. ಸೋಂಕು ಹರಡುವುದನ್ನು ತಡೆ ಗಟ್ಟಿದರೆ ಸೋಂಕಿತರ ಪ್ರಮಾಣವನ್ನು ಶೂನ್ಯಕ್ಕೆ ತರಲು ಸಾಧ್ಯವಿದೆ ಎಂದರು.
ಅಭಿಯಾನದ ಮುಖ್ಯ ಕಾರ್ಯನಿರ್ವ ಹಣಾಧಿಕಾರಿ ಮನೀಶ್‌ಕುಮಾರ್, ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿಯ ಸಲ್ಮಾ ಕೆ.ಪಾಹಿಮಾ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಡಿ.ವಿ.ಹರೀಶ್, ಸದಸ್ಯೆ ನಾರಾ ಯಣಮ್ಮ, ಸಿಇಒ ಪಿ.ರಾಜೇಂದ್ರಚೋಳನ್, ಜಿಲ್ಲಾ ಧಿಕಾರಿ ಮನೋಜ್‌ಕುಮಾರ್ ಮೀನಾ, ಆರೋಗ್ಯಾಧಿಕಾರಿ ಡಾ.ಬಿ.ಜಿ. ಪ್ರಕಾಶ ಕುಮಾರ್, ನಗರ ಸಭೆ ಅಧ್ಯಕ್ಷೆ ನಾಜಿಯಾ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಎನ್.ರಮಾದೇವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ರಾಮ ನಿವಾಸ್ ಸಪೆಟ್, ಅಧಿಕಾರಿ ಸಿ.ಎಚ್.ಪ್ರಕಾಶ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.