ADVERTISEMENT

ಎಲೆಕ್ಟ್ರಾನಿಕ್ ತೂಕದ ಯಂತ್ರಕ್ಕೆ ಆದೇಶ

​ಪ್ರಜಾವಾಣಿ ವಾರ್ತೆ
Published 21 ಏಪ್ರಿಲ್ 2012, 7:50 IST
Last Updated 21 ಏಪ್ರಿಲ್ 2012, 7:50 IST

ಬೆಂಗಳೂರು: ಕೋಲಾರ ಜಿಲ್ಲೆಯ ಶ್ರೀನಿವಾಸ ಪುರದ ಕೃಷಿ ಉತ್ಪನ್ನ ಮಾರುಕಟ್ಟೆ ಮಾರಾಟ ಸಮಿತಿಯ (ಎಪಿಎಂಸಿ) ಮೂರು ಕಡೆಗಳಲ್ಲಿ ಎಲೆಕ್ಟ್ರಾನಿಕ್ ತೂಕದ ಯಂತ್ರವನ್ನು ಅಳವಡಿ ಸುವಂತೆ ಹೈಕೋರ್ಟ್ ಸರ್ಕಾರಕ್ಕೆ ಶುಕ್ರವಾರ ನಿರ್ದೇಶಿಸಿದೆ.

ರೈತರು ಬೆಳೆದ ಬೆಳೆಗಳನ್ನು ಹರಾಜು ಮಾಡಿದ ತಕ್ಷಣದಲ್ಲಿಯೇ ಹಣ ರೈತರ ಕೈಸೇರುವಂತೆ ಕ್ರಮ ತೆಗೆದುಕೊಳ್ಳುವಂತೆ ಮುಖ್ಯ ನ್ಯಾಯಮೂರ್ತಿ ವಿಕ್ರಮಜಿತ್ ಸೇನ್ ಹಾಗೂ ನ್ಯಾಯಮೂರ್ತಿ ಬಿ.ವಿ.ನಾಗರತ್ನಾ ಅವರನ್ನು ಒಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ.

ಮಾವು ಬೆಳೆಗಾರರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗೆ ಸಂಬಂಧಿಸಿದಂತೆ  ಈ ಆದೇಶ ಹೊರಡಿಸಲಾಗಿದೆ. ತಾವು ಬೆಳೆದ ಮಾವಿನ ಹಣ್ಣಿನ ಸಮರ್ಪಕ ಮಾರಾಟಕ್ಕೆ ಅನುಕೂಲ ಕಲ್ಪಿ ಸಲು, ಬೆಳೆಗಾರರ ಹಿತ ಕಾಪಾಡಲು ಕೃಷಿ ಉತ್ಪನ್ನು ಮಾರುಕಟ್ಟೆ ಸಮಿತಿ ವಿಫಲವಾಗಿದೆ ಎನ್ನುವುದು ಅರ್ಜಿದಾರರ ದೂರಾಗಿತ್ತು.

ಬೆಳೆಗಳನ್ನು ಖರೀದಿ ಮಾಡುವವರು ಅದನ್ನು ಮಾರಾಟ ಮಾಡಿದವರಿಗೆ ಸಮಿತಿಯ ಅಧಿಕಾರಿಗಳ ಎದುರೇ ಹಣ ಪಾವತಿ ಮಾಡಬೇಕು. ಇದರಿಂದ ತೂಕದಲ್ಲಿ ಮೋಸವಾಗುವುದನ್ನು ತಪ್ಪಿಸಬೇಕು. ಅಷ್ಟೇ ಅಲ್ಲದೇ ಎಪಿಎಂಸಿ ಯಾರ್ಡ್‌ಗಳಲ್ಲಿ ಉಸ್ತುವಾರಿ ವಹಿಸಲು ಜಂಟಿ ನಿರ್ದೇಶಕ ಶ್ರೇಣಿಯ ಅಧಿಕಾರಿಗಳನ್ನು ನಿಯೋಜನೆಗೊಳಿಸಬೇಕು, ಮಧ್ಯವರ್ತಿಗಳ ಕಾಟ ಇಲ್ಲದಂತೆ ಅಧಿಕಾರಿಗಳು ನೋಡಿಕೊಳ್ಳಬೇಕಿದೆ ಎಂದು ನ್ಯಾಯಮೂರ್ತಿಗಳು ಹೇಳಿದ್ದಾರೆ.

ರೈತರ ಕಷ್ಟಗಳ ಕುರಿತು ಅರ್ಜಿದಾರರ ಪರ ವಕೀಲ ಎಂ.ಶಿವಪ್ರಕಾಶ್ ಪೀಠದ ಗಮನಕ್ಕೆ ತಂದರು. ಇದನ್ನು ನ್ಯಾಯಮೂರ್ತಿಗಳು ಗಂಭೀರವಾಗಿ ಪರಿಗಣಿಸಿದರು.

ಈ ಹಿನ್ನೆಲೆಯಲ್ಲಿ ಬೆಳಿಗ್ಗೆ ಪ್ರಕರಣವು ವಿಚಾರಣೆಗೆ ಬಂದ ಸಂದರ್ಭದಲ್ಲಿ ತೋಟಗಾರಿಕಾ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕರಿಗೆ  ಸಮನ್ಸ್ ಜಾರಿಗೊಳಿಸಲಾಯಿತು. ಒಂದು ವೇಳೆ ಅಧಿಕಾರಿ ಬಾರದೇ ಹೋದರೆ ಇಲಾಖೆಯ ಎಲ್ಲ ವಹಿವಾಟುಗಳನ್ನು ನಿಲ್ಲಿಸುವ ಎಚ್ಚರಿಕೆಯನ್ನು ಪೀಠ ನೀಡಿತ್ತು.

ಅದರ ಹೊರತಾಗಿಯೂ ನಿರ್ದೇಶಕರು ಬರಲಿಲ್ಲ. ಅವರು ರಜೆಯಲ್ಲಿ ಇರುವುದಾಗಿ ಸರ್ಕಾರಿ ವಕೀಲರು ಹೇಳಿದರು.

`ನಮ್ಮ ಆದೇಶ ಪಾಲನೆ ಮಾಡದ ಹಿನ್ನೆಲೆಯಲ್ಲಿ ವಾರೆಂಟ್ ಜಾರಿಗೊಳಿಸಬೇಕೆಂದು ನಮ್ಮ ಇಚ್ಛೆ ಇತ್ತು. ಆದರೆ ಸರ್ಕಾರದ ವಕೀಲರು ಸಮಜಾಯಿಷಿ ನೀಡಿರುವ ಕಾರಣ, ಮುಂದಿನ ವಿಚಾರಣೆ ವೇಳೆ ಅವರ ಹಾಜರಿಗೆ ಆದೇಶಿಸಲಾಗಿದೆ~ ಎಂದು ತೀರ್ಪಿನಲ್ಲಿ ಪೀಠ ಉಲ್ಲೇಖಿಸಿತು.

ತೋಟಗಾರಿಕಾ ಇಲಾಖೆಗೆ ತರಾಟೆಗೆ

 ರೈತರ ಹಿತ ಕಾಪಾಡಬೇಕಿರುವ ತೋಟಗಾರಿಕಾ ಇಲಾಖೆಯು ಅವರನ್ನು ಕಡೆಗಣಿಸುತ್ತಿದೆ ಎಂದು ನ್ಯಾಯಮೂರ್ತಿಗಳು ತೀವ್ರ ತರಾಟೆಗೆ ತೆಗೆದುಕೊಂಡರು. `ರೈತರು ಬೆಳೆದ ಬೆಳೆಗಳನ್ನು ಖರೀದಿ ಮಾಡಬೇಕು ಎಂಬ ನಿಯಮ ಇದೆ. ಅದನ್ನು ನೀವು ಮಾಡುತ್ತಿಲ್ಲ. ಹೀಗಾದರೆ ರೈತರು ಎಲ್ಲಿಗೆ ಹೋಗಬೇಕು. ಅವರು ಬೆಳೆದ ಬೆಳೆಗಳಿಗೆ ಸೂಕ್ತ ದರ ದಕ್ಕುತ್ತಿಲ್ಲ.

ಇದರಿಂದ ಅವುಗಳನ್ನು ಬೀದಿಗೆ ಸುರಿದು ಆಕ್ರೋಶ ವ್ಯಕ್ತಪಡುತ್ತಿದ್ದಾರೆ. ಆದರೂ ಏನೂ ಆಗುತ್ತಿಲ್ಲ. ಹಣ ಮಾಡುವ ದಂಧೆಗೆ ಇಲಾಖೆ ಕೈಹಾಕಿದಂತಿದೆ. ತಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಈ ರೈತರು ನ್ಯಾಯಾಲಯದ ಮೊರೆ ಹೋಗಬೇಕಾಗಿ ಬಂದಿರುವುದು ವಿಷಾದನೀಯ~ ಎಂದು ನ್ಯಾಯಮೂರ್ತಿಗಳು ಅಭಿಪ್ರಾಯ ಪಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.