ADVERTISEMENT

ಒಳಜಗಳದಿಂದ ಬಿಜೆಪಿ ಪತನ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2012, 8:05 IST
Last Updated 22 ಫೆಬ್ರುವರಿ 2012, 8:05 IST

ಮುಳಬಾಗಲು: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಒಳಜಗಳಗಳಿಂದ ಶೀಘ್ರದಲ್ಲಿ ಪತನವಾಗಲಿದೆ ಎಂದು ಶಾಸಕ ಶ್ರೀರಾಮುಲು ಭವಿಷ್ಯ ನುಡಿದರು.

ತಾಲ್ಲೂಕಿನ ಆವಣಿ ಗ್ರಾಮದ ರಾಮಲಿಂಗೇಶ್ವರ ಸ್ವಾಮಿ ಬ್ರಹ್ಮರಥೋತ್ಸವಕ್ಕೆ ಮಂಗಳವಾರ ಆಗಮಿಸಿದ್ದ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಮುಖ್ಯಮಂತ್ರಿ ಸದಾನಂದಗೌಡರನ್ನು ಪದಚ್ಯುತ ಗೊಳಿಸಲು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಯತ್ನಿಸುತ್ತಿದ್ದಾರೆ. ಯಡಿಯೂ ರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಈಶ್ವರಪ್ಪ ಮುಂದಾಗಿದ್ದಾರೆ. ಒಬ್ಬರನ್ನು ಕಂಡರೆ ಒಬ್ಬರಿಗಾಗದ ಬಿಜೆಪಿ ಮುಖಂಡರು ಪರಸ್ಪರ ಕಾಲೆಳೆಯುವುದರಲ್ಲೆೀ ನಿರತರಾಗಿದ್ದಾರೆ ಎಂದು ಆರೋಪಿಸಿದರು.

ದಕ್ಷಿಣ ಭಾರತದಲ್ಲಿ ಪ್ರಪ್ರಥಮ ಬಾರಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಜನ ಬಹಳಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ ಜನರ ಆಸೆ ನುಚ್ಚುನೂರಾಗಿದೆ. ತಮ್ಮ ಪಕ್ಷದ ಅಭ್ಯರ್ಥಿಗಳು ರಾಜ್ಯದ ಮತ್ತು ಕೋಲಾರ ಜಿಲ್ಲೆಯ ಎಲ್ಲಾ ಕ್ಷೇತ್ರಗಳಲ್ಲೂ ಸ್ಪರ್ಧಿಸಲಿದ್ದಾರೆ ಎಂದರು.

ರಾಜ್ಯದಲ್ಲಿ ತೀವ್ರ ಬರಗಾಲದ ಪರಿಸ್ಥಿತಿ ಎದುರಾಗಿದೆ. ಯಾವುದೇ ಶಾಶ್ವತ ನೀರಾವರಿ ಯೋಜನೆಗಳಿಲ್ಲದ ಕೋಲಾರ ಜಿಲ್ಲೆಯ ಜನತೆ ಕುಡಿಯುವ ನೀರು ಸಿಗದೆ ತತ್ತರಿಸುತ್ತಿದ್ದಾರೆ. ನಾನು  ಅಧಿಕಾರಕ್ಕೆ ಬಂದರೆ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೆ ತರುವೆ ಎಂದು ಅವರು ಭರವಸೆ ನೀಡಿದರು.

ಬಿಎಸ್‌ಆರ್ ಪಕ್ಷ: ಈಗಾಗಲೇ ಚುನಾವಣಾ ಆಯೋಗದಲ್ಲಿ ಬಿ. ಶ್ರೀರಾಮುಲು ಪಕ್ಷ (ಬಿಎಸ್‌ಆರ್) ಎಂಬ ಪಕ್ಷವನ್ನು ನೋಂದಣಿ ಮಾಡಿಸಲಾಗಿದೆ. ಪಕ್ಷದ ಚಿಹ್ನೆ ಬಗೆಗಿರುವ ಗೊಂದಲ 15- 20 ದಿನಗಳಲ್ಲಿ ಬಗೆಹರಿಯಲಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.