ADVERTISEMENT

ಕನ್ನಡ ಭಾಷೆ ಉಳಿವಿಗೆ ಎಲ್ಲರ ಯತ್ನ

ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಕೋಗಿಲಹಳ್ಳಿ ಕೃಷ್ಣಪ್ಪ ಅಭಿಮತ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 9:05 IST
Last Updated 15 ಜೂನ್ 2013, 9:05 IST
ಬಂಗಾರಪೇಟೆಯ ಬಾಲಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ  ಶುಕ್ರವಾರದಿಂದ ಆರಂಭವಾದ ತಾಲ್ಲೂಕು ಮಟ್ಟದ 3ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ  ಪ್ರೊ.ಬಿ.ಗಂಗಾಧರಮೂರ್ತಿ ಚಾಲನೆ ನೀಡಿದರು. ಅ.ನಾ.ರಮೇಶ್, ಆರ್.ಅಶ್ವತ್ಥ್, ಕೆ.ಚಂದ್ರಾರೆಡ್ಡಿ, ಅನಸೂಯ, ಸಮ್ಮೇಳನ ಅಧ್ಯಕ್ಷ ಕೋಗಿಲಹಳ್ಳಿ ಕೃಷ್ಣಪ್ಪ, ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಜೆ.ಜಿ.ನಾಗರಾಜ್, ಅ್ಪýಾಜಿಗೌಡ, ಎ.ಅ್ವýಥರೆ್ಡýಿ ಮ್ತýು ಚಂ್ರýಶೇಖರಗೌಡ ಇ್ದýಾರೆ
ಬಂಗಾರಪೇಟೆಯ ಬಾಲಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ ಆವರಣದಲ್ಲಿ ಶುಕ್ರವಾರದಿಂದ ಆರಂಭವಾದ ತಾಲ್ಲೂಕು ಮಟ್ಟದ 3ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಪ್ರೊ.ಬಿ.ಗಂಗಾಧರಮೂರ್ತಿ ಚಾಲನೆ ನೀಡಿದರು. ಅ.ನಾ.ರಮೇಶ್, ಆರ್.ಅಶ್ವತ್ಥ್, ಕೆ.ಚಂದ್ರಾರೆಡ್ಡಿ, ಅನಸೂಯ, ಸಮ್ಮೇಳನ ಅಧ್ಯಕ್ಷ ಕೋಗಿಲಹಳ್ಳಿ ಕೃಷ್ಣಪ್ಪ, ಶಾಸಕ ಎಸ್.ಎನ್.ನಾರಾಯಣಸ್ವಾಮಿ, ಜೆ.ಜಿ.ನಾಗರಾಜ್, ಅ್ಪýಾಜಿಗೌಡ, ಎ.ಅ್ವýಥರೆ್ಡýಿ ಮ್ತýು ಚಂ್ರýಶೇಖರಗೌಡ ಇ್ದýಾರೆ   

ಅರಳು ಮಲ್ಲಿಗೆ ಗಂಗಾಧರ ವೇದಿಕೆ  (ಬಂಗಾರಪೇಟೆ ):  ಕನ್ನಡ ಉಳಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಪ್ರಯತ್ನವೂ ಪೂರಕವಾಗಬೇಕು
-ಪಟ್ಟಣದಲ್ಲಿ ಶುಕ್ರವಾರದಿಂದ ಆರಂಭವಾದ ತಾಲ್ಲೂಕು ಮಟ್ಟದ 3ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ ಕೋಗಿಲಹಳ್ಳಿ ಕೃಷ್ಣಪ್ಪನವರ ಸ್ಪಷ್ಟ ಅಭಿಮತ ಇದು.

ಅರಳು ಮಲ್ಲಿಗೆ ಗಂಗಾಧರ ವೇದಿಕೆಯಲ್ಲಿ ನಡೆದ ಉದ್ಘಾಟನೆ ಕಾರ್ಯಕ್ರಮದ ಕೊನೆಗೆ ಮಾತನಾಡಿದ ಕೃಷ್ಣಪ್ಪ, ಕನ್ನಡದ ಉಳಿವಿನ ಪ್ರಯತ್ನಕ್ಕೆ ಎಲ್ಲರೂ ಕೈ ಜೋಡಿಸಬೇಕು ಎಂದು ಕರೆ ನೀಡಿದರು.

ಭಾಷಾ ಸೌಹಾರ್ದದ ಗಡಿ ಪ್ರಾಂತ್ಯವಾದ ಬಂಗಾರಪೇಟೆ ತಾಲ್ಲೂಕು ಕನ್ನಡ, ತೆಲುಗು ಮತ್ತು ತಮಿಳು ಭಾಷಾ ಸಂಸ್ಕೃತಿಯನ್ನು ರೂಢಿಸಿಕೊಂಡ ಜನರಿಂದ ಕೂಡಿರುವ ಪ್ರದೇಶ. ಕನ್ನಡ ಆಡಳಿತ ಭಾಷೆಯಾಗಿರುವುದರಿಂದ ಕನ್ನಡ ಕಲಿಯುವ ನಿಟ್ಟಿನಲ್ಲಿ ಹೊಂದಾಣಿಕೆಯಾಗುತ್ತಿದ್ದರೂ, ಜಾಗತೀಕರಣದ ಪ್ರಭಾವದಿಂದ ಇಂಗ್ಲಿಷ್ ಮೇಲಿನ ವ್ಯಾಮೋಹವು ದೇಶೀಯ ಜನರಲ್ಲಿ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯಪಟ್ಟರು.

ಕನ್ನಡವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಚರ್ಚೆ, ಸಮಾಲೋಚನೆಗಳು ನಡೆಯುತ್ತಿದ್ದರೂ ಸ್ಥಿತಿ-ಗತಿಗಳು ಜಟಿಲಗೊಳ್ಳುತ್ತಿವೆ. ಜಾಗತೀಕರಣದ ಪರಿಣಾಮವಾಗಿ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಗಳ ನಿರ್ಬೀಜೀಕರಣವೂ ಭರದಿಂದ ನಡೆಯುತ್ತಿದೆ. ಭಾಷೆ ಹಾಳಾದ ಮೇಲೆ ಸಂಸ್ಕೃತಿ ಉಳಿಯದು. ಸಂಸ್ಕೃತಿ ಹಾಳಾದರೆ ದೇಶ, ಭಾಷೆ ಇತಿಹಾಸದ ಪುಟಗಳಲ್ಲೂ ಕಣ್ಮರೆಯಾಗುತ್ತವೆ ಎಂದು ಆತಂಕ ವ್ಯಕ್ತಪಡಿಸಿದರು.

ಶಾಸ್ತ್ರೀಯ ಸ್ಥಾನಮಾನ ಕನ್ನಡಕ್ಕೆ ದೊರೆತಿರುವುದು ಸಂತಸದ ವಿಷಯವೇ. ಆದರೆ ಅದರ ಗೌರವ-ಘನತೆಯನ್ನು ಮತ್ತಷ್ಟು ಹೆಚ್ಚಿಸಿ ಮುನ್ನಡೆಸುವುದರಲ್ಲಿ ಕನ್ನಡಿಗರ ಜವಾಬ್ದಾರಿ ಪ್ರಮುಖವಾದದ್ದು ಎಂಬುದನ್ನು ಮರೆಯುವಂತಿಲ್ಲ. ಸುಧಾರಣೆಗಳು ಘೋಷಣೆಗಳಾಗಿಯಷ್ಟೇ ಉಳಿಯದೆ ಆಚರಣೆಯ ಸೂತ್ರಗಳಾಗಲಿ ಎಂದು ನುಡಿದರು.

ಫೇಲಾದವರ ಗತಿ: ಪದವಿಪೂರ್ವ ತರಗತಿಯಲ್ಲಿ ತೇರ್ಗಡೆಯಾಗದವರ ಜೀವನ ಎತ್ತ ಸಾಗಬೇಕು? ಕೃಷಿ, ವ್ಯಾಪಾರ ಗೊತ್ತಿಲ್ಲ. ಉದ್ಯೋಗ ಸಿಗಲ್ಲ. ಇಲ್ಲಗಳ ಜಗತ್ತಿನಲ್ಲಿ ಜೀವನ ನಿರ್ವಹಣೆ ಹೇಗೆ ಎಂಬ ಸವಾಲು ಎದುರಾಗಿದೆ. ಈ ಸಮಸ್ಯೆಗಳು ನಿವಾರಣೆಯಾಗಬೇಕಾದರೆ ವಿಧಾನಸಭೆ, ಲೋಕಸಭೆ ಸದಸ್ಯರು ಬುದ್ಧಿಕೌಶಲಗಳಲ್ಲಿ ಸಮರ್ಥರಾಗಿರಬೇಕು ಎಂದರು.

ಚಲನಶೀಲ ಸಮಾಜದಲ್ಲಿ ಯುವಜನರ ಪಾತ್ರ ಮತ್ತು ಅವರಿಗೆ ಸಂಪನ್ಮೂಲವನ್ನು ಒದಗಿಸಿಕೊಡುವಲ್ಲಿ ಹಿರಿಯರ ಜವಾಬ್ದಾರಿಗಳ ಬಗ್ಗೆಯೂ ಹೆಚ್ಚು ಚರ್ಚೆಗಳು ನಡೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಶಿಕ್ಷಣದತ್ತ ಗಮನ: ಸಮ್ಮೇಳನವನ್ನು ಉದ್ಘಾಟಿಸಿದ ಪ್ರೊ.ಬಿ.ಗಂಗಾಧರಮೂರ್ತಿ, ಕನ್ನಡ ಸಾಹಿತ್ಯ ಪರಿಷತ್ತು ಕರ್ನಾಟಕದ ಶೈಕ್ಷಣಿಕ ಸಮಸ್ಯೆಗಳ ಕಡೆಗೆ ಹೆಚ್ಚು ಗಮನ ಹರಿಸಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ಉನ್ನತ ಮೌಲ್ಯಗಳನ್ನು ಮಕ್ಕಳಲ್ಲಿ ಪ್ರಾಥಮಿಕ ಶಾಲಾ ಹಂತದಿಂದಲೇ ಮೂಡಿಸಬೇಕಾದ ಸನ್ನಿವೇಶ ನಿರ್ಮಾಣವಾಗಿದೆ. ದೇಶ, ಭಾಷೆ ಮತ್ತು ಸಂಸ್ಕೃತಿಗಳ ಮೇಲಿನ ಅಭಿಮಾನವನ್ನು ಆರಂಭದಲ್ಲೇ ಮಕ್ಕಳಲ್ಲಿ ಅಡಕಗೊಳಿಸಿದರೆ ಯುವಜನರಾಗುವ ಹೊತ್ತಿಗೆ ಅವರಲ್ಲಿ ಸಾಂಸ್ಕೃತಿಕ ಜವಾಬ್ದಾರಿ ಪ್ರಜ್ಞೆ ಎಚ್ಚೆತ್ತುಕೊಳ್ಳುತ್ತದೆ ಎಂದರು.

ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸುವಲ್ಲಿ ಜಿಲ್ಲೆಯ ಎಲ್ಲ ಶಾಸಕರೂ ಒಗ್ಗಟ್ಟಿನ ಪ್ರಯತ್ನವನ್ನು ಶುರು ಮಾಡಿದ್ದಾರೆ ಎಂದು ಶಾಸಕ ಕೆ.ಎಂ.ನಾರಾಯಣಸ್ವಾಮಿ ಇದೇ ಸಂದರ್ಭದಲ್ಲಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಸಮ್ಮೇಳನದ ಸ್ಮರಣ ಸಂಚಿಕೆ  `ಹೊನ್ನಕಿರಣ'ವನ್ನು ಕನ್ನಡ ಸಾಹಿತ್ಯ ಪರಿಷತ್ತಿನ  ಜಿಲ್ಲಾ ಘಟಕದ ಅಧ್ಯಕ್ಷ ಜೆ.ಜಿ.ನಾಗರಾಜ್ ಮತ್ತು ಮಂಜು ಕನ್ನಿಕಾ ಅವರ ನೆರಳು, ಕಾಡಿನ ಜೇಡ ಕೃತಿಗಳನ್ನು ಪ್ರಧಾನ ಸಂಚಾಲಕ ತೇ.ಸಿ.ಬದರೀನಾಥ್ ಬಿಡುಗಡೆ ಮಾಡಿದರು. ಕಲಾಪ್ರದರ್ಶನಕ್ಕೆ ಪುರಸಭೆ ಸದಸ್ಯ ಕೆ.ಚಂದ್ರಾರೆಡ್ಡಿ ಚಾಲನೆ ನೀಡಿದರು. ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಆರ್.ಅಶ್ವತ್ಥ್ ಆಶಯ ನುಡಿಗಳನ್ನು ಆಡಿದರು.

ಸಮ್ಮೇಳನಾಧ್ಯಕ್ಷ ಕೃಷ್ಣಪ್ಪನವರ ಪತ್ನಿ ಅನಸೂಯ, ತಾ.ಪಂ.ಅಧ್ಯಕ್ಷೆ ರೇಣುಕಾ, ಉಪಾಧ್ಯಕ್ಷ ಎಂ.ಸಂಪಂಗಿರೆಡ್ಡಿ,  ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಜಯರಾಜ್, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಸಿ.ಚಂದ್ರಶೇಖರ ಗೌಡ, ಮುಖ್ಯಾಧಿಕಾರಿ ಜಹೀರ್ ಅಬ್ಬಾಸ್, ಪರಿಷತ್ತಿನ ಕೇಂದ್ರ ದತ್ತಿ ಸಮಿತಿ ಸದಸ್ಯ ಎಂ.ಎಸ್.ರಾಮಪ್ರಸಾದ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಜಿ.ವಿ.ಅಪ್ಪಾಜಿಗೌಡ, ಪ್ರೌಢಶಾಲೆ ಸಹ ಶಿಕ್ಷಕರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಶಂಕರಪ್ಪ, ಕೆಜಿಎಫ್ ಕನ್ನಡ ಮಿತ್ರರು ಸಂಘದ ಉಪಾಧ್ಯಕ್ಷ ಸಿ.ಎಸ್.ತ್ಯಾಗರಾಜಯ್ಯ, ಕನ್ನಡ ಸಂಘದ ಅಧ್ಯಕ್ಷ ಪಲ್ಲವಿ ಮಣಿ, ಸರ್ಕಾರಿ ನೌಕರರ ಸಂಘದ ತಾಲ್ಲೂಕು ಘಟಕ ಅಧ್ಯಕ್ಷ ಚಂದ್ರ ಶೇಖರಗೌಡ ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.