ADVERTISEMENT

ಕಲೆ ಅರಳಲು ಚಾಕ್‌ಪೀಸ್ ಸಾಕು!

​ಪ್ರಜಾವಾಣಿ ವಾರ್ತೆ
Published 19 ಜೂನ್ 2011, 8:40 IST
Last Updated 19 ಜೂನ್ 2011, 8:40 IST

ಕೋಲಾರ: ಮೋಹಕ ಕಲೆಯನ್ನು ಶಿಲ್ಪವಾಗಿ, ಚಿತ್ರವಾಗಿ, ಅರಳಿಸಲು ಆತನಿಗೊಂದು ಚಾಕ್‌ಪೀಸ್ ಸಾಕು !
ಬೆಂಗಳೂರು ವಿಶ್ವವಿದ್ಯಾಲಯದ ಕೋಲಾರ ಸ್ನಾತಕೋತ್ತರ ಕೇಂದ್ರದಲ್ಲಿ ಈತ ಎಂ.ಕಾಂ ವಿದ್ಯಾರ್ಥಿ.

ಬಂಗಾರಪೇಟೆಯ ಕಾಮಸಮುದ್ರದ ವಾಸಿಯಾದ, 21ರ ಹರೆಯದ ಯುವಕ ಕೆ.ಐ.ಪದ್ಮನಾಭ ಲೆಕ್ಕದಲ್ಲಿ ಪಳಗುವ ಜೊತೆಗೆ ಕಲೆಯಲ್ಲೂ ಕೌಶಲ ಸಾಧಿಸಿದ್ದಾನೆ ಎಂಬುದೇ ವಿಶೇಷ.

ಅತ್ಯಂತ ಸೂಕ್ಷ್ಮ ಕುಸುರಿಯೇ ಮುಖ್ಯವಾದ, ಅಪಾರ ಏಕಾಗ್ರತೆಯನ್ನು, ಗಂಟೆಗಟ್ಟಲೆ ಸಮಯವನ್ನು ಬಯಸುವ `ಚಾಕ್‌ಪೀಸ್ ಶಿಲ್ಪಕಲೆ~ಯಲ್ಲಿ 4 ವರ್ಷದಿಂದ ತೊಡಗಿರುವ ಪದ್ಮನಾಭ ಯಾರಲ್ಲೂ ಈ ಬಗ್ಗೆ ತರಬೇತಿ ಪಡೆದಿಲ್ಲ ಎಂಬುದು ಮತ್ತೊಂದು ಅಚ್ಚರಿಯ ಸಂಗತಿ. ಚಾಕ್‌ಪೀಸ್‌ನಲ್ಲಿ ನರ್ತನ ಶಿಲ್ಪ, ವಿವಿಧ ಭಂಗಿಯ ನವಿಲು, ಅಮೆರಿಕಾದ ಸ್ವಾತಂತ್ರ್ಯ ಪ್ರತಿಮೆ, ನಾಟ್ಯಗಣಪತಿ ಹೀಗೆ... ಆಕರ್ಷಕ ವಿನ್ಯಾಸದ ಹಲವು ಕೊಂಡಿ ಚೈನ್‌ಗಳನ್ನು ಸೃಷ್ಟಿಸಿಟ್ಟಿರುವ ಆತನಿಗೆ ಅದೊಂದು ಹವ್ಯಾಸವಷ್ಟೆ ಅಲ್ಲ: ದಿನಚರಿಯನ್ನು ಅತ್ಯಂತ ವಿಶೇಷವಾಗಿ, ಸೃಜನಶೀಲವಾಗಿ ಕಳೆಯಲಿಕ್ಕೆ ಹುಡುಕಿಕೊಂಡಿರುವ ಕಲಾತ್ಮಕ ದಾರಿಯೂ ಹೌದು. ಚಾಕ್‌ಪೀಸ್ ಬಳಿಕ ಈಗ ಆತ ಸೀಸದ ಕಡ್ಡಿಯಲ್ಲೂ ಶಿಲ್ಪಕಲೆಯ ಅಸ್ತಿತ್ವ ಹುಡುಕುತ್ತಿದ್ದಾನೆ!

ಕಟ್ಟರ್ (ಸಣ್ಣ ಚಾಕು), ಸೂಜಿ, ಹಾಗೂ ಚಾಕ್‌ಪೀಸ್ ಅನ್ನು ನಿಲ್ಲಿಸುವ ಒಂದು ಸ್ಟ್ಯಾಂಡ್ ಇವಿಷ್ಟೆ ಆತನ ಸಾಮಗ್ತಿ. ಓದಿನ ವೇಳೆ ಬಿಟ್ಟರೆ ಆತ ಸಮಯ ಕಳೆಯುವುದೆಲ್ಲ ಈ ಆಪ್ತಸಂಗಾತಿಗಳ ಜೊತೆಗೆ. ಮನದ ಕಲ್ಪನೆಗೆ ತಕ್ಕಂತೆ ಕೈ ಕೌಶಲದಿಂದ ಮುಂದುವರಿಯುತ್ತಿದ್ದಂತೆ ಚಿತ್ರಶಿಲ್ಪವೊಂದು ಮೂಡುತ್ತದೆ. ಕೊನೆ ಹಂತದ ಟಚ್ ಕೊಟ್ಟ ಬಳಿಕವಷ್ಟೆ ಮುಂದಿನ ಕೆಲಸ.

ಎಲೆಕ್ಟ್ರಿಷಿಯನ್ ತಂದೆ ಇನ್ಬನಾದನ್, ಗೃಹಿಣಿ ತಾಯಿ ರತ್ನ ಅವರ ಮಗನಾದ ಪದ್ಮನಾಭ ಬಿಕಾಂ ಪದವಿಯನ್ನು ಬಂಗಾರಪೇಟೆ ಸಮೀಪದ ಜೈನ್ ಕಾಲೇಜಿನಲ್ಲಿ ಪಡೆದು, ಸ್ನಾತಕೋತ್ತರ ಕೇಂದ್ರಕ್ಕೆ ಸೇರಿದ್ದಾನೆ. ಸ್ನಾತಕೋತ್ತರ ಅಧ್ಯಯನ ಆತನ ಕಲಾಶ್ರದ್ಧೆಯನ್ನು ಕುಗ್ಗಿಸಿಲ್ಲ. ಚಾಕ್‌ಪೀಸ್‌ನಲ್ಲಿ ಒಂದು ಶಿಲ್ಪವನ್ನು ಮೂಡಿಸಲು ಕನಿಷ್ಠ ಎರಡು ಗಂಟೆ ಕಾಲ ಬೇಕು. ಚಾಕ್‌ಪೀಸ್‌ನಲ್ಲಿ ಕಲೆ ಅರಳಿಸುವ ಈತ ಕುಂಬಳಕಾಯಿ ಶಿಲ್ಪಕಲೆಯಲ್ಲೂ ಪ್ರತಿಭೆಯುಳ್ಳವ. ರಂಗೋಲಿ ಬಿಡಿಸುವುದರಲ್ಲೂ ಪಳಗಿದವ.
ಈ ಆಸಕ್ತಿ ಹೇಗೆ ಮೂಡಿತು ಎಂಬ ಪ್ರಶ್ನೆಗೆ ಆತ, `ಬಾಲ್ಯದಿಂದಲೂ ಕಲೆಯಲ್ಲಿ ಆಸಕ್ತಿ ಇತ್ತು.

ಪ್ರಯೋಗಕ್ಕೆಂದು ಚಾಕ್‌ಪೀಸ್ ಹಿಡಿದೆ. ಅದು ಇಲ್ಲಿವರೆಗೂ ನನ್ನ ಕೈ ಹಿಡಿದಿದೆ~ ಎಂದು ಮೌನಕ್ಕೆ ಶರಣಾದ. ಇತ್ತೀಚೆಗೆ ಸ್ನಾತಕೋತ್ತರ ಕೇಂದ್ರದಲ್ಲಿ ನಡೆದ ವಾರ್ಷಿಕೋತ್ಸವದಲ್ಲಿ ಏರ್ಪಡಿಸಿದ್ದ ಆತನ ಕಲಾಕೃತಿಗಳ ವಸ್ತುಪ್ರದರ್ಶನವನ್ನು ವೀಕ್ಷಿಸಿದ ಸಹಪಾಠಿಗಳು, ಸಿಬ್ಬಂದಿ ಅಚ್ಚರಿ,ಮೆಚ್ಚುಗೆ ವ್ಯಕ್ತಪಡಿಸಿದರು. ಅದಕ್ಕೂ ಆತನ ಮೌನವೇ ಪ್ರತಿಕ್ರಿಯೆಯಾಗಿತ್ತು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.