ADVERTISEMENT

ಕಿರುಕುಳ: ದೂರು ನೀಡಿದರೆ ಕ್ರಮ

​ಪ್ರಜಾವಾಣಿ ವಾರ್ತೆ
Published 23 ಜೂನ್ 2012, 19:30 IST
Last Updated 23 ಜೂನ್ 2012, 19:30 IST

ಕೆಜಿಎಫ್: ಖಾಸಗಿ ಶಾಲೆಗಳಿಗೆ ಅನಗತ್ಯವಾಗಿ ಭೇಟಿ ನೀಡಿ ಕಿರುಕುಳ ನೀಡುವ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಲಿಖಿತ ದೂರು ನೀಡಿದರೆ ಕ್ರಮ ಕೈಗೊಳ್ಳಲಾಗುವುದು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೃಷ್ಣಮೂರ್ತಿ ತಿಳಿಸಿದರು.

ನಗರದ ನ್ಯೂ ಕಾರ್ಮೆಲ್ ಶಾಲೆಯಲ್ಲಿ ಶನಿವಾರ ಖಾಸಗಿ ಶಿಕ್ಷಣ ಸಂಸ್ಥೆಗಳ ವತಿಯಿಂದ ಏರ್ಪಡಿಸಿದ್ದ ಶಿಕ್ಷಣ ಹಕ್ಕು ಕಾಯ್ಕೆ (ಆರ್‌ಟಿಇ) ಕಾರ್ಯಾಗಾರದಲ್ಲಿ ಮಾತನಾಡಿದರು. ಇಲಾಖೆಯ ಸಿಆರ್‌ಪಿ, ಬಿಆರ್‌ಪಿಗಳು ಕೆಲವೊಂದು ನಿಯಮದಡಿ ಕೆಲಸ ನಿರ್ವಹಿಸಬೇಕಾಗುತ್ತದೆ. ಖಾಸಗಿ ಶಿಕ್ಷಣ ಸಂಸ್ಥೆಗಳು ಇಂತಹ ಅಧಿಕಾರಿಗಳು ಅನವಶ್ಯಕವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿದ್ದ ಹಿನ್ನೆಲೆಯಲ್ಲಿ ನಿರ್ದೇಶನ ನೀಡಿದೆ. ಅವುಗಳ ಪಾಲನೆಯಾಗದಿದ್ದರೆ ದೂರು ನೀಡಿದರೆ ಕ್ರಮ ಕೈಗೊಳ್ಳಲು ಸಿದ್ಧ ಎಂದರು.

ಕೆಜಿಎಫ್ ಶೈಕ್ಷಣಿಕ ವಲಯದಲ್ಲಿ ಮಕ್ಕಳ ಶಿಕ್ಷಣ ಹಕ್ಕು ಕಾಯಿದೆಯಡಿ 95 ವಿದ್ಯಾರ್ಥಿಗಳನ್ನು ವಿವಿಧ ಶಾಲೆಗಳಿಗೆ ದಾಖಲು ಮಾಡಲಾಗಿದೆ. ನಗರದಲ್ಲಿ ಬಹುತೇಕ ಕ್ರಿಶ್ಚಿಯನ್ ಅಲ್ಪಸಂಖ್ಯಾತರ ಶಾಲೆಗಳು ಇರುವುದರಿಂದ ಹಾಗೂ ಸಾರ್ವಜನಿಕರಿಗೆ ಕಾಯಿದೆಯ ಪೂರ್ಣ ಅರಿವು ಇಲ್ಲದೆ ದಾಖಲಾತಿ ಕಡಿಮೆಯಾಗಿದೆ. ಸಣ್ಣಪುಟ್ಟ ದೋಷಗಳಿರುವ ಅರ್ಜಿಗಳನ್ನು ಸಹ ಪುರಸ್ಕರಿಸಲು ಶಾಲೆಗಳಿಗೆ ಸೂಚನೆ ನೀಡಲಾಗಿದೆ ಎಂದು ಹೇಳಿದರು.

ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಮೂಲ ಸೌಕರ್ಯಗಳಿಲ್ಲದ ಶಾಲೆಗಳಿಗೆ ಅನುಮತಿ ನೀಡಬಾರದು. ಶಾಲೆಗಳಲ್ಲಿ ಆಡಳಿತ ವರ್ಗ ನೀಡುವ `ಕವರ್~ಗಳಿಗಾಗಿಯೇ ಬರುವ ಶಿಕ್ಷಣ ಇಲಾಖೆ ಅಧಿಕಾರಿಗಳ ವಿರುದ್ಧ ಒಮ್ಮತವಾಗಿ ಪ್ರತಿಭಟನೆ ನಡೆಸಬೇಕು ಎಂದು ವಿವಿಧ ಶಾಲೆಗಳ ಆಡಳಿತ ಮಂಡಳಿಗಳ ಪ್ರತಿನಿಧಿಗಳು ಸಭೆಯಲ್ಲಿ ಒತ್ತಾಯಿಸಿದರು.

ಮುಖಂಡರಾದ ಕಾರ್ಮೆಲ್ ಕೃಷ್ಣಮೂರ್ತಿ, ಎಡ್ವಿನ್, ಪ್ರಭಾಕರ್ ಮಾತನಾಡಿದರು. ಗೋಪಿನಾಥ್ ನಿರೂಪಿಸಿದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.