
ಕೋಲಾರ: ನಮಗಾದರೆ ದಿನಕ್ಕೆ 100ರಿಂದ 150 ರೂಪಾಯಿ ಕೂಲಿ, ಗಂಡಸರಿಗಾದರೆ 250ರಿಂದ 350 ರೂಪಾಯಿವರೆಗೂ ಕೂಲಿ ಕೊಡ್ತಾರೆ. ಯಾಕೆ, ನಾವು ಬೆವರು ಹರಿಸಿ ಕೆಲಸ ಮಾಡುವುದಿಲ್ಲವೇ? ಕಡಿಮೆ ಕೆಲಸ ಮಾಡುತ್ತೇವೆಯೇ?
–ಕಳೆದ ವರ್ಷ ನವೆಂಬರ್‌ನಲ್ಲಿ ತಾಲ್ಲೂಕಿನ ಬೆಗ್ಲಿ ಹೊಸಹಳ್ಳಿಯಲ್ಲಿ ರಾಗಿ ತೆನೆ ಕಟಾವು ಮಾಡುತ್ತಾ ಕೂಲಿ ಮಹಿಳೆಯರು ನಗುನಗುತ್ತಲೇ ಕೇಳಿದ ಪ್ರಶ್ನೆ ಇದು.
ಈ ಪ್ರಶ್ನೆಯನ್ನು ಈ ಮಹಿಳೆಯರು ಸೇರಿದಂತೆ ಗ್ರಾಮೀಣ ಪ್ರದೇಶದ ಹಲವು ಕ್ಷೇತ್ರಗಳಲ್ಲಿ ಕೂಲಿ ಮಾಡುತ್ತಿರುವ ಬಹುತೇಕ ಕೃಷಿ ಕಾರ್ಮಿಕ ಮಹಿಳೆಯರು ಹಲವು ವರ್ಷಗಳಿಂದ ಕೇಳುತ್ತಲೇ ಬಂದಿದ್ದಾರೆ. ಆದರೆ ಅದಕ್ಕೆ ಸರಿಯಾದ ಉತ್ತರವಾಗಲೀ ಹೆಚ್ಚಿನ ಕೂಲಿಯಾಗಲೀ ಇದುವರೆಗೂ ಸಿಕ್ಕಿಲ್ಲ.
ಗ್ರಾಮೀಣ ಉದ್ಯೋಗಖಾತ್ರಿ ಯೋಜನೆಯಲ್ಲಿ ಕೆಲಸ ಮಾಡುವ ಪುರುಷ ಮತ್ತು ಮಹಿಳೆಯರಿಗೆ ಸಮಾನ ಕೂಲಿ ದೊರಕುತ್ತಿದೆ. ಸರ್ಕಾರ ವೇತನ ನೀಡುವ ಕ್ಷೇತ್ರಗಳಲ್ಲಿ ಈ ತಾರತಮ್ಯ ಇಲ್ಲ. ಆದರೆ ಅಸಂಘಟಿತ ವಲಯದಲ್ಲಿ ಮಾತ್ರ ಕೂಲಿ ತಾರತಮ್ಯ ಮುಂದುವರಿಯುತ್ತಿದೆ. ಕೃಷಿ ಕೂಲಿ ಕ್ಷೇತ್ರದಲ್ಲೆಡೆ ಮಹಿಳೆಯರನ್ನು ಎರಡನೇ ದರ್ಜೆ ಪ್ರಜೆಯನ್ನಾಗಿಯೇ ಗ್ರಹಿಸಿ ವ್ಯವಹರಿಸಲಾಗುತ್ತಿದೆ.
ಕೃಷಿ ಚಟುವಟಿಕೆ: ಕೃಷಿ, ತೋಟಗಾರಿಕೆ, ರೇಷ್ಮೆ ಕೃಷಿಯನ್ನು ಹೆಚ್ಚು ನೆಚ್ಚಿಕೊಂಡಿರುವ ಜಿಲ್ಲೆಯಲ್ಲಿ ಕೃಷಿ ಕೂಲಿ ಕಾರ್ಮಿಕರಾಗಿ ದುಡಿಯುತ್ತಿರುವ ಮಹಿಳೆಯರಲ್ಲಿ ಬಹುತೇಕರು ಮನೆ ಕೆಲಸವನ್ನೂ ನಿಭಾಯಿಸುತ್ತಲೇ ಹೊರಗೂ ದುಡಿಯುವ ಅನಿವಾರ್ಯಕ್ಕೆ ಸಿಲುಕಿದ್ದಾರೆ. ದುಪ್ಪಟ್ಟು ಜವಾಬ್ದಾರಿ ಹೊತ್ತರೂ ಅವರಿಗೆ ಸಿಕ್ಕುವುದು ಕಡಿಮೆ ಕೂಲಿ ಮತ್ತು ಪ್ರಶಂಸೆ.
ತೋಟಗಳಲ್ಲಿ ಕಳೆ ತೆಗೆಯುವುದು, ಸಾಲು ಮಾಡುವುದು, ಹಣ್ಣು, ತರಕಾರಿ ಬಿಡಿಸುವುದು, ಆಲೂಗಡ್ಡೆ ಆಯವುದು ಸೇರಿದಂತೆ ತೋಟದ ಕೆಲಸಗಳನ್ನು ಮಾಡುವ ಮಹಿಳೆಯರಿಗೆ ಇಂದಿಗೂ ದಿನಕ್ಕೆ 100 ರೂಪಾಯಿಯಷ್ಟೇ ಕೂಲಿಯನ್ನು ನೀಡಲಾಗುತ್ತಿದೆ. ಅದೇ ಕೆಲಸ ಮಾಡುವ ಪುರುಷರಿಗೆ ಮಾತ್ರ ₨ 200ರಿಂದ 250 ಕೊಡಲಾಗುತ್ತದೆ.
ರೇಷ್ಮೆ ಕೃಷಿ ಕ್ಷೇತ್ರದಲ್ಲಿ ಹಿಪ್ಪುನೇರಳೆ ಕಟಾವು, ಹುಳುಗಳಿಗೆ ಆಹಾರ ನೀಡುವುದು, ರೇಷ್ಮೆ ಸಾಕಾಣಿಕೆ ಮನೆಯಲ್ಲಿ ನಿರಂತರ ಕಸ ತೆಗೆಯುವುದು, ಚಂದ್ರಂಕಿಯಿಂದ ಗೂಡುಗಳನ್ನು ಬಿಡಿಸುವುದು ಸೇರಿದಂತೆ ಹಲವು ಕೆಲಸವನ್ನು ಮಹಿಳೆಯರು ಮಾಡುತ್ತಾರೆ. ಅಲ್ಲಿಯೂ ಕೂಲಿ ದರದಲ್ಲಿ ವ್ಯತ್ಯಾಸವೇನಿಲ್ಲ.
ಕಟ್ಟಡ ನಿರ್ಮಾಣ: ಕಟ್ಟಡ ಮತ್ತು ಇತರೆ ನಿರ್ಮಾಣ ಕ್ಷೇತ್ರದಲ್ಲೂ ಮಹಿಳೆಯರಿಗೆ ಕೂಲಿ ಕಮ್ಮಿ. ಗಾರೆ ಕೆಲಸದಲ್ಲಿ ಮುಖ್ಯವಾಗಿ ಅವರನ್ನು ಸಹಾಯಕರನ್ನಾಗಿ ಮಾತ್ರ ನೋಡಲಾಗುತ್ತದೆ. ಮರಳು, ಸಿಮೆಂಟು ಕಲೆಸುವುದು, ಮರಳು, ಇಟ್ಟಿಗೆಗಳನ್ನು ಪೂರೈಸುವುದು ಸೇರಿದಂತೆ ಹಲವು ಕೆಲಸ ಮಾಡುವ ಮಹಿಳೆಯರಿಗೆ ದಿನದಲ್ಲಿ ₨ 150 ಕೂಲಿ ಕೊಟ್ಟರೆ, ಪುರುಷರಿಗೆ ₨ 250 ಕೊಡಲಾಗುತ್ತದೆ.
ಮಕ್ಕಳ ಪಾಲನೆ: ಕೃಷಿ ಮತ್ತು ಕಟ್ಟಡ ನಿರ್ಮಾಣ ಕೆಲಸಗಳ ಸಂದರ್ಭದಲ್ಲಿ ಸ್ಥಳದಲ್ಲೇ ತಮ್ಮ ಎಳೆಯ ಮಕ್ಕಳನ್ನೂ ಪಾಲನೆ ಮಾಡುವ ಮಹಿಳೆಯರೂ ಹೆಚ್ಚಿದ್ದಾರೆ. ಕಾಲಕಾಲಕ್ಕೆ ಮಕ್ಕಳಿಗೆ ಊಟ ಉಣಿಸುತ್ತಲೇ ಅವರು ಕೆಲಸ ಮಾಡುತ್ತಾರೆ.
ಸಮಾನ ಕೂಲಿ: ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಪುರುಷ ಮತ್ತು ಮಹಿಳೆಯರಿಬ್ಬರಿಗೂ ಸಮಾನ ಕೂಲಿ ನೀಡಲಾಗುತ್ತಿದೆ. ಅದೇ ರೀತಿ ಖಾಸಗಿ ಮತ್ತು ಅಸಂಘಟಿಕ ಕ್ಷೇತ್ರದಲ್ಲಿ ಅಕುಶಲ ಕೆಲಸಕ್ಕಾಗಿ ಸಮಾನ ವೇತನ ನೀಡಬೇಕಾಗಿದೆ. ಈ ನಿಟ್ಟಿನಲ್ಲಿ ಕೆಲವೆಡೆ ಮಹಿಳೆಯರು ಜಾಗೃತರಾಗಿ ಸಮಾನ ಕೂಲಿಗಾಗಿ ಆಗ್ರಹಿಸುತ್ತಿರುವ ಘಟನೆಗಳೂ ನಡೆಯುತ್ತಿವೆ. ಆದರೆ ಈ ವಿಷಯದಲ್ಲಿ ಮಹಿಳೆಯರು ಒಗ್ಗಟ್ಟಾಗಬೇಕು. ಅಸಂಘಟಿತ ವಲಯದಲ್ಲೂ ಸಮಾನ ಕೂಲಿ ವ್ಯವಸ್ಥೆಯನ್ನು ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು ಎಂಬುದು ತಾಲ್ಲೂಕಿನ ಸೋಮೇನಹಳ್ಳಿಯ ಯಶಸ್ವಿನಿ ಮಹಿಳಾ ಮಂಡಳಿ ಕಾರ್ಯದರ್ಶಿ ಕೆ.ಎಸ್.ನಾಗವೇಣಿ ಅವರ ಆಗ್ರಹ.
ಅಮಾನವೀಯ
ಕೂಲಿ ಹಣದಲ್ಲಿ ತಾರತಮ್ಯ ಮಾಡುವುದು ಸರಿಯಲ್ಲ. ಪುರುಷರಿಗೇ ಏಕೆ ಹೆಚ್ಚು ಹಣ ಕೊಡಬೇಕು? ಅಷ್ಟೇ ಅವಧಿ, ಅಷ್ಟೇ ಶ್ರಮ ವಹಿಸಿ ಮಹಿಳೆಯೂ ಕೆಲಸ ಮಾಡಿದರೂ ಕಡಿಮೆ ಕೂಲಿ ಕೊಡುವುದು ಅಮಾನವೀಯ. ಕೂಲಿ ವಿಷಯಕ್ಕೆ ಬಂದರೆ ಸಮಾನತೆ ಎಂಬುದು ಎಲ್ಲಿಯೂ ಇಲ್ಲ.
–ಸುಶೀಲಾ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಸಮಿತಿ ಸದಸ್ಯೆ
ದೊಡ್ಡ ದ್ರೋಹ
ಸಮಾನ ಕೆಲಸಕ್ಕೆ ಸಮಾನ ವೇತನ ಎಂಬ ಕಾನೂನು ಇದೆ. ಆದರೆ ಅಸಂಘಟಿತ ಕಾರ್ಮಿಕರ ವಲಯದಲ್ಲಿ ಅನುಷ್ಠಾನ ಮಾತ್ರ ಆಗಿಲ್ಲ. ಕಾರ್ಮಿಕರ ಪರವಾಗಿ ಕೆಲಸ ಮಾಡಬೇಕಾದ ಕಾರ್ಮಿಕ ಇಲಾಖೆ ಅಧಿಕಾರಿಗಳು ಬಹುತೇಕ ಸಂದರ್ಭಗಳಲ್ಲಿ ಮಾಲೀಕರ ಪರವಾಗಿಯೇ ಇರುವುದು ವಿಷಾದನೀಯ. ಅಸಂಘಟಿತ ವಲಯದಲ್ಲಿ ಮಹಿಳೆಯರಿಗೆ ಪುರುಷರಿಗಿಂತಲೂ ಕಡಿಮೆ ಕೂಲಿ ಕೊಡುವುದು ದೊಡ್ಡ ದ್ರೋಹ.
–ಜಿ.ಸಿ.ಬೈಯ್ಯಾರೆಡ್ಡಿ, ಪ್ರಾಂತ ರೈತ ಸಂಘದ ರಾಜ್ಯ ಸಮಿತಿ ಸದಸ್ಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.