ADVERTISEMENT

ಕೆರೆಗೆ ನೀರು ಹರಿಸಿದ ಗ್ರಾಮಸ್ಥರು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 7:52 IST
Last Updated 16 ಅಕ್ಟೋಬರ್ 2017, 7:52 IST

ಬಂಗಾರಪೇಟೆ: ತಾಲ್ಲೂಕಿನ ಹುಲಿಬೆಲೆ ಪಂಚಾಯಿತಿ ವ್ಯಾಪ್ತಿಯ ಹುಣಸನಹಳ್ಳಿಯಲ್ಲಿ ಮುಚ್ಚಿಹೋಗಿದ್ದ 3 ಕಿಲೋ ಮೀಟರ್ ಕಾಲುವೆಯನ್ನು ಗ್ರಾಮಸ್ಥರು ಸ್ವಂತ ಖರ್ಚಿನಿಂದ ದುರಸ್ತಿಗೊಳಿಸಿ ಗ್ರಾಮದ ಕೆರೆಗೆ ನೀರಿ ಹರಿಸಿದ್ದಾರೆ.

ಐನೋರ ಹೊಸಹಳ್ಳಿ ಕೆರೆ ಒಡ್ಡಿನಿಂದ ಭಾನುವಾರ ಹುಣಸನಹಳ್ಳಿ ಕೆರೆಗೆ ನೀರು ಹರಿಸಲಾಯಿತು. ಕಸಬಾ ವ್ಯಾಪ್ತಿಯಲ್ಲಿ ಬಹುತೇಕ ಕೆರೆಗಳು ತುಂಬಿ ಕೋಡಿ ಹರಿದಿವೆ. ಗ್ರಾಮದ ಕೆರೆಗೆ ನೀರು ಬಾರದಿರುವುದಕ್ಕೆ ಕಳವಳ ವ್ಯಕ್ತಪಡಿಸಿದ ಗ್ರಾಮಸ್ಥರು ಸಮೀಪದಲ್ಲೇ ಹರಿಯುತ್ತಿರುವ ನೀರನ್ನು ಕೆರೆಗೆ ಹರಿಸಲು ಚಿಂತಿಸಿದರು. ಕೆರೆಗೆ ಒಡ್ಡಿನಿಂದ 10 ಅಡಿ ಅಗಲದ ಕಾಲುವೆ ಇರುವುದು ತಿಳಿಯಿತು.

'ಮುಚ್ಚಿದ್ದ ಕಾಲುವೆ ದುರಸ್ತಿಗೊಳಿಸಿ ಕೆರೆಗೆ ನೀರು ಹರಿಸುವಂತೆ ತಾಲ್ಲೂಕು ಆಡಳಿತಕ್ಕೆ ಮನವಿ ಮಾಡಲಾಯಿತು. ಆದರೆ ತಹಶೀಲ್ದಾರ್ ಅವರು ಸ್ಪಂದಿಸದ ಕಾರಣ ಗ್ರಾಮಸ್ಥರೇ ಎಲ್ಲ ಮನೆಗಳಿಂದ ಹಣ ಸಂಗ್ರಹಿಸಿ, ಜೆಸಿಬಿ ಮೂಲಕ ಕಾಲುವೆ ತೆಗೆಸಿದೆವು' ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಚ್.ಆರ್.ಶ್ರೀನಿವಾಸ್ ತಿಳಿಸಿದರು.

ADVERTISEMENT

‘ಕೆರೆ ಬತ್ತಿ 12 ವರ್ಷವಾಯಿತು. ಬಹುತೇಕ ಕೊಳವೆ ಬಾವಿಗಳ ಪೂರ್ಣವಾಗಿ ಸ್ಥಗಿತಗೊಂಡಿವೆ. ಕೆರೆಗೆ ನೀರು ಹರಿಸಿ ಮರುಪೂರಣಗೊಳಿಸುವ ಸಲುವಾಗಿ ಗ್ರಾಮಸ್ಥರೆಲ್ಲಾ ಸೇರಿ ಕಾಲುವೆ ತೆಗೆಯುವ ನಿರ್ಧಾರ ಕೈಗೊಂಡೆವು. ಕಾಲುವೆಗೆ 3.5 ಲಕ್ಷ ವೆಚ್ಚವಾಗಿದೆ’ ಎಂದು ಅವರು ಹೇಳಿದರು.

ಸ್ಥಳಕ್ಕೆ ಭೇಟಿ ನೀಡಿದ್ದ ಜಿಲ್ಲಾ ಪಂಚಾಯಿತಿ ಸದಸ್ಯರಾದ ಬಿ.ವಿ.ಮಹೇಶ್, ಮಾಲಾ ಶ್ರೀನಿವಾಸಗೌಡ ಮತ್ತು ಪಂಚಾಯಿತಿ ಅಧಿಕಾರಿಗಳು ಗ್ರಾಮಸ್ಥರ ಜತೆ ಕೈಜೋಡಿಸುವುದಾಗಿ ತಿಳಿಸಿದ್ದಾರೆ.

‘ಕೆರೆಯ 24 ಎಕರೆ ವಿಸ್ತೀರ್ಣ ಇದೆ. 10 ಎಕರೆಗಿಂತ ಹೆಚ್ಚು ಒತ್ತುವರಿಯಾಗಿದೆ. ಜಾಲಿ ಮರಗಳು, ಗಿಡಗಳು ಆವರಿಸಿವೆ. ಮರಗಳು ಮತ್ತು ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು’ ಎಂದು ಗ್ರಾಮಸ್ಥ ವೆಂಕಟೇಶ್ ಆಗ್ರಹಿಸಿದರು. ಗ್ರಾಮದ ಪ್ರಮುಖರಾದ ಗೋಪಾಲಪ್ಪ, ಚೌಡಪ್ಪ, ಎಸ್.ರಮೇಶ್, ಮುನಿಸ್ವಾಮಿ, ಗೋವಿಂದಪ್ಪ, ಸುರೇಶ್, ಆನಂದ್, ಶಿವು, ಸಿ.ವೆಂಕಟೇಶ್, ಮಂಜುನಾಥ್, ರಾಜು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.