ADVERTISEMENT

‘ಕೈ’ ಗೂಡಿನತ್ತ ಶ್ರೀನಿವಾಸಗೌಡ ಪಯಣ

ಜೆಡಿಎಸ್‌ ಪಾಳಯಕ್ಕೆ ಒಕ್ಕಲಿಗರ ಮತ ಕೈ ತಪ್ಪುವ ಆತಂಕ: ಪಕ್ಷ ಸೇರುವ ನಿರೀಕ್ಷೆ

ಜೆ.ಆರ್.ಗಿರೀಶ್
Published 10 ಏಪ್ರಿಲ್ 2018, 9:45 IST
Last Updated 10 ಏಪ್ರಿಲ್ 2018, 9:45 IST
ಶ್ರೀನಿವಾಸಗೌಡ
ಶ್ರೀನಿವಾಸಗೌಡ   

ಕೋಲಾರ: ಕ್ಷೇತ್ರದಲ್ಲಿ ಜಾತ್ಯತೀತ ಜನತಾ ದಳ (ಜೆಡಿಎಸ್‌) ಪಾಳಯದಿಂದ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮಾಜಿ ಸಚಿವ ಕೆ.ಶ್ರೀನಿವಾಸಗೌಡರಿಗೆ ಕಾಂಗ್ರೆಸ್‌ ಗಾಳ ಬೀಸಿದ್ದು, ಶ್ರೀನಿವಾಸಗೌಡರು ‘ಕೈ’ ಗೂಡು ಸೇರುವ ಕಾಲ ಸನ್ನಿಹಿತವಾಗಿದೆ.

ಜಿಲ್ಲೆಯ ಕೋಲಾರ ವಿಧಾನಸಭಾ ಕ್ಷೇತ್ರ ಹೊರತುಪಡಿಸಿ ಉಳಿದ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್‌ ಅಭ್ಯರ್ಥಿಗಳನ್ನು ಮಾರ್ಚ್‌ ತಿಂಗಳಲ್ಲೇ ಘೋಷಿಸಲಾಗಿತ್ತು. ಕೋಲಾರ ಕ್ಷೇತ್ರದಲ್ಲಿ ಟಿಕೆಟ್‌ಗೆ ತೀವ್ರ ಕಸರತ್ತು ನಡೆಸಿದ್ದ ಶ್ರೀನಿವಾಸಗೌಡರಿಗೆ ಜೆಡಿಎಸ್‌ ವರಿಷ್ಠರು ಮಣೆ ಹಾಕಿಲ್ಲ.

ಇದರಿಂದ ಅಸಮಾಧಾನಗೊಂಡಿರುವ ಅವರು ಕಾಂಗ್ರೆಸ್‌ ಮನೆಯ ಬಾಗಿಲು ತಟ್ಟಿದ್ದು, ರಾಜ್ಯಸಭಾ ಸದಸ್ಯ ಅಹಮ್ಮದ್‌ ಪಟೇಲ್‌ ಮಧ್ಯಸ್ಥಿಕೆ ವಹಿಸಿ ಪಕ್ಷ ಸೇರ್ಪಡೆಗೆ ಭೂಮಿಕೆ ಸಿದ್ಧಪಡಿಸಿದ್ದಾರೆ. ಶ್ರೀನಿವಾಸಗೌಡರು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌ ಮೂಲಕ ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಚರ್ಚೆ ನಡೆಸಿದ್ದು, ಮಾತುಕತೆ ಫಲಪ್ರದವಾಗಿದೆ. ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಸದ್ಯದಲ್ಲೇ ಪಕ್ಷ ಸೇರುತ್ತಾರೆ ಎಂದು ಕಾಂಗ್ರೆಸ್‌ ಮೂಲಗಳು ಹೇಳಿವೆ.

ADVERTISEMENT

ಗರಿಗೆದರಿದ ರಾಜಕೀಯ: ಶ್ರೀನಿವಾಸಗೌಡರು ಪಕ್ಷ ತೊರೆಯುವುದು ಖಚಿತವಾಗಿರುವ ಬೆನ್ನಲ್ಲೇ ಜೆಡಿಎಸ್‌ ಪಾಳಯದಲ್ಲಿ ರಾಜಕೀಯ ಚಟುವ
ಟಿಕೆಗಳು ಗರಿಗೆದರಿವೆ. ಸ್ಥಳೀಯ ಮುಖಂಡರು ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಭೇಟಿಯಾಗಿ ಶೀಘ್ರವೇ ಕೋಲಾರ ಕ್ಷೇತ್ರದ ಅಭ್ಯರ್ಥಿಯನ್ನು ಘೋಷಿಸಿ, ಗೊಂದಲಕ್ಕೆ ತೆರೆ ಎಳೆಯುವಂತೆ ಒತ್ತಾಯಿಸಿದ್ದಾರೆ.

ಶ್ರೀನಿವಾಸಗೌಡರಿಗೆ ಟಿಕೆಟ್‌ ಕೊಡದಂತೆ ತೆರೆಮರೆಯಲ್ಲೇ ಮೊದಲಿನಿಂದಲೂ ಪ್ರಯತ್ನ ನಡೆಸಿದ್ದ ವಿರೋಧಿ ಬಣ ಈಗ ಮೈ ಕೊಡವಿ ನಿಂತಿದ್ದು, ಪರ್ಯಾಯ ಅಭ್ಯರ್ಥಿ ಆಯ್ಕೆಗೆ ಸಭೆಗಳ ಮೇಲೆ ಸಭೆ ನಡೆಸುತ್ತಿದೆ. ಶ್ರೀನಿವಾಸಗೌಡರು ಪಕ್ಷ ತೊರೆಯುವುದರಿಂದ ಪಕ್ಷಕ್ಕೆ ಆಗುವ ಹೊಡೆತ ತಪ್ಪಿಸಲು ರಣತಂತ್ರ ರೂಪಿಸುತ್ತಿದೆ.

ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ, ರಾಮರಾಜು, ಟೊಮೆಟೊ ಮಂಡಿ ಮಾಲೀಕರಾದ ಸುಧಾಕರ್‌ಗೌಡ, ಹರೀಶ್‌, ವೈದ್ಯ ಡಾ.ಡಿ.ಕೆ.ರಮೇಶ್‌, ನಗರಸಭೆ ಮಾಜಿ ಅಧ್ಯಕ್ಷ ಬಿ.ಎಂ.ಮುಬಾರಕ್‌, ಜೆಡಿಎಸ್‌ ತಾಲ್ಲೂಕು ಘಟಕದ ಅಧ್ಯಕ್ಷ ಬಾಬು ಮೌನಿ, ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕ ರಾಮು ತೀವ್ರ ಲಾಬಿ ನಡೆಸಿದ್ದಾರೆ. ಮತ್ತೊಂದೆಡೆ ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ಕ್ಷೇತ್ರದ ಜೆಡಿಎಸ್‌ ಅಭ್ಯರ್ಥಿಯಾಗಿ ಘೋಷಣೆಯಾಗಿರುವ ಚಿತ್ರ ನಿರ್ಮಾಪಕ ಸಿ.ಆರ್‌.ಮನೋಹರ್ ಅವರನ್ನು ಕ್ಷೇತ್ರಕ್ಕೆ ಕರೆತರುವ ಪ್ರಯತ್ನ ನಡೆದಿದೆ.

ಹ್ಯಾಟ್ರಿಕ್‌ ಸಾಧನೆ: ಜನತಾ ಪರಿವಾರದ ಶ್ರೀನಿವಾಸಗೌಡರು 1994ರಲ್ಲಿ ಮೊದಲ ಬಾರಿಗೆ ಜನತಾ ದಳದಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಗೆಲುವು ಸಾಧಿಸಿದ್ದರು. ನಂತರ 1999ರಲ್ಲಿ ಸಂಯುಕ್ತ ಜನತಾ ದಳದಿಂದ ಅದೃಷ್ಟ ಪರೀಕ್ಷೆಗಿಳಿದು ಎರಡನೇ ಬಾರಿ ಶಾಸಕರಾದರು. 2004ರಲ್ಲಿ ಜನತಾ ಪರಿವಾರ ತೊರೆದು ಕಾಂಗ್ರೆಸ್‌ ಪಾಳಯ ಸೇರಿ ಮೂರನೇ ಬಾರಿ ವಿಧಾನಸಭೆ ಪ್ರವೇಶಿಸಿದರು. ಆ ಮೂಲಕ ಹ್ಯಾಟ್ರಿಕ್‌ ಗೆಲುವಿನ ಸಾಧನೆ ಮಾಡಿದ್ದರು. 2008ರಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಪರಾಭವಗೊಂಡ ಅವರು ನಂತರ ಜೆಡಿಎಸ್‌ ಸೇರಿ 2013ರ ಚುನಾವಣೆಯಲ್ಲಿ ಸೋಲು ಕಂಡಿದ್ದರು.

ಶ್ರೀನಿವಾಸಗೌಡರು ಒಕ್ಕಲಿಗ ಸಮುದಾಯಕ್ಕೆ ಸೇರಿದವರಾಗಿದ್ದು, ಕ್ಷೇತ್ರದಲ್ಲಿ ಅದೇ ಸಮುದಾಯದ ಪ್ರಾಬಲ್ಯ ಹೆಚ್ಚಿದೆ. ಪ್ರತಿ ಚುನಾವಣೆಯಲ್ಲೂ ಒಕ್ಕಲಿಗ ಸಮುದಾಯ ಅವರನ್ನು ಬೆಂಬಲಿಸುತ್ತಾ ಬಂದಿದೆ. ಅವರು ಪಕ್ಷ ತೊರೆಯಲು ಮುಂದಾಗಿರುವುದರಿಂದ ಜೆಡಿಎಸ್‌ ಪಾಳಯಕ್ಕೆ ಒಕ್ಕಲಿಗ ಸಮುದಾಯದ ಮತಗಳು ಕೈ ತಪ್ಪುವ ಆತಂಕ ಎದುರಾಗಿದೆ.

**

ಜೆಡಿಎಸ್‌ ವರಿಷ್ಠರು ನನಗೆ ದೂರವಾಣಿ ಕರೆ ಮಾಡಿ ಚರ್ಚಿಸಿದರು. ಪಕ್ಷ ತೊರೆಯುವ ನಿರ್ಧಾರ ಅಚಲವೆಂದು ವರಿಷ್ಠರಿಗೆ ತಿಳಿಸಿದ್ದೇನೆ – ಕೆ.ಶ್ರೀನಿವಾಸಗೌಡ,ಮಾಜಿ ಸಚಿವ.

**

ಶ್ರೀನಿವಾಸಗೌಡರು ಚುನಾವಣೆ ಹೊಸ್ತಿಲಲ್ಲಿ ಪಕ್ಷ ತೊರೆಯುತ್ತಿರುವುದರಿಂದ ಪಕ್ಷಕ್ಕೆ ಸ್ವಲ್ಪ ಮಟ್ಟಿಗೆ ಹಿನ್ನಡೆಯಾಗಬಹುದು – ಜಿ.ರಾಮರಾಜು, ಜೆಡಿಎಸ್‌ ರಾಜ್ಯ ಘಟಕದ ಉಪಾಧ್ಯಕ್ಷ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.