ADVERTISEMENT

ಕೊನೆಗೂ ತರಕಾರಿ ಬೆಲೆ ಕುಸಿತ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2011, 8:35 IST
Last Updated 6 ಫೆಬ್ರುವರಿ 2011, 8:35 IST

ಬಂಗಾರಪೇಟೆ: ಕಳೆದ ಒಂದೆರಡು ತಿಂಗಳಿನಿಂದ ಗಗನಕ್ಕೇರಿದ್ದ ವಿವಿಧ ತರಕಾರಿಗಳ ದರಗಳು ಜನಸಾಮಾನ್ಯರಿಗೆ, ಹೋಟೆಲ್ ಉದ್ಯಮಿಗಳಿಗೆ ಆತಂಕವನ್ನು ಮೂಡಿಸಿದ್ದವು. ತರಕಾರಿ ಬೆಳೆದ ರೈತರಿಗೂ ಕಾಸುಗಿಟ್ಟದೇ ಮಧ್ಯವರ್ತಿಗಳಿಗೆ ಕೈತುಂಬಾ ಹಣ ಸಿಕ್ಕಿತ್ತು. ಆದರೆ ಶುಕ್ರವಾರದಿಂದ ಮತ್ತೆ ಧರೆಗಿಳಿದ ವಿವಿಧ ತರಕಾರಿಗಳ ದರಗಳು ಜನಸಾಮಾನ್ಯನ ಮುಖದಲ್ಲಿ ಸಂತೋಷ ಮಿನುಗಿಸಿದ್ದರೆ, ರೈತನ ಮುಖ ಕಪ್ಪಿಟ್ಟಿದೆ.

ಶುಕ್ರವಾರ ಬಹುತೇಕ ಎಲ್ಲಾ ತರಕಾರಿಗಳ ದರಗಳು ಸಸ್ತಾ ಆಗಿದ್ದವು. ಕಳೆದ ತಿಂಗಳು ಕಣ್ಣೀರೇ ತರಿಸಿದ್ದ ಈರುಳ್ಳಿ ದರ ಕೆ.ಜಿ.ಗೆ ರೂ. 30. ಕಿಲೋಗೆ ಟೊಮಾಟೋ ರೂ. 16, ಬೀನ್ಸ್ ರೂ. 24, ಬದನೇಕಾಯಿ ರೂ. 12, ಮೂಲಂಗಿ ರೂ. 10, ಕ್ಯಾರೆಟ್ ರೂ. 24, ಹಸಿಮೆಣಸಿನಕಾಯಿ ರೂ. 14, ನೌಕೋಲ್ ರೂ. 16, ಬೀಟ್‌ರೂಟ್ ರೂ. 15, ಹೂಕೋಸು ರೂ. 12, ಆಲೂಗಡ್ಡೆ ರೂ. 20, ಗೋರಿಕಾಯಿ ರೂ. 25, ಎಲೆಕೋಸು ರೂ. 12, ಕಾಕರಕಾಯಿ ರೂ. 14 ಗೆ ಇಳಿದಿವೆ.

ತರಕಾರಿ ದರ ಕುಸಿತ ವಿಷಯ ತಿಳಿದ ಗೃಹಿಣಿಯರು, ಸಣ್ಣ ಪುಟ್ಟ ಹೋಟೆಲ್ ಮಾಲೀಕರು ತರಕಾರಿ ಅಂಗಡಿಗಳ ಬಳಿ ನೆರೆದು ಪ್ರತಿಯೊಂದು ತರಕಾರಿ ದರವನ್ನು ಕೇಳಿ ಕೇಳಿ ಖುಷಿಪಡುತ್ತಿದ್ದರು. ದಿನನಿತ್ಯ ಪೂರಿ ಸಾಗುವಿಗೆ ಬೋಂಡಾ ಮೆಣಸಿನಕಾಯಿ ಹಾಕಿ ವರ್ಷಾಂತರದಿಂದ ಬರುತ್ತಿದ್ದ ಗಿರಾಕಿಗಳೇ ತಪ್ಪಿಹೋದರು ಎಂದು ಒಬ್ಬರು ಹೇಳಿದರೆ, ಇನ್ನೊಬ್ಬರು ನಾವು ತಿಂಡಿ ಮಾಡುವುದನ್ನೇ ಬಿಟ್ಟು ಕಾಫಿ, ಟೀ ಕಾಯಿಸೋಕೆ ಶುರುಮಾಡಿದ್ದೆವು ಎಂದು ತಮ್ಮ ಕಷ್ಟಸುಖ ಹೇಳಿಕೊಳ್ಳುತ್ತಿದ್ದರು.

ದಿನನಿತ್ಯ ಕಡಿಮೆ ಬೆಲೆಯ ತರಕಾರಿಗಳನ್ನೇ ಹಾಕಿ ಮಕ್ಕಳು ಸೊರಗಿಹೊಗಿಬಿಟ್ಟವು ಎಂಬುದು ತಾಯಂದಿರ ನುಡಿ. ತರಕಾರಿ ಬೆಲೆ ಏರಿಕೆಯಿಂದ ರೂ. 10 ಕ್ಕೆ ಏರಿದ್ದ ಕಟ್ಟು ಸೊಪ್ಪು ಬೆಲೆ ಈಗ ಮತ್ತೆ ಕಡಿಮೆಯಾಗಲು ಒಲ್ಲೆಯೆನ್ನುತ್ತಿದೆ. ತರಕಾರಿ ದರ ಕುಸಿದರೂ ಸೊಪ್ಪು ಮಾರಾಟಗಾರರು ಅದೇ ದರದಲ್ಲಿ ಮಾರಾಟ ಮುಮದುವರೆಸಿದ್ದರು. ಆದರೆ ಅದರತ್ತ ಸಾಗುವವರ ಸಂಖ್ಯೆ ಕಡಿಮೆಯಿತ್ತು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.