ADVERTISEMENT

ಕೊನೇ ದಿನ ಭರಪೂರ ನಾಮಪತ್ರ: 33 ಮಂದಿ, 46 ನಾಮಪತ್ರ

4ನಾಮಪತ್ರ ಸಲ್ಲಿಸಲು ಅಭ್ಯರ್ಥಿಗಳ ಸಾಲು 4ಗಿಜಿಗುಟ್ಟಿದ ಚುನಾವಣಾಧಿಕಾರಿ ಕಚೇರಿ 4ಸಂಜೆ 6ಗಂಟೆವರೆಗೂ ನಾಮಪತ್ರ ಸ್ವೀಕಾರ 4 ಪಕ್ಷೇತರರಿಂದಲೇ ಹೆಚ್ಚು ನಾಮಪತ್ರ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2014, 10:00 IST
Last Updated 27 ಮಾರ್ಚ್ 2014, 10:00 IST
ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಕೇಂದ್ರ ಕೈಗಾರಿಕಾ ರಕ್ಷಣಾ ಪಡೆ (ಸಿಐಎಸ್‌ಎಫ್‌) ಸಿಬ್ಬಂದಿ ಕೋಲಾರದ ಗಲ್‌ಪೇಟೆ ಠಾಣೆಯಲ್ಲಿ ಬುಧವಾರ ಕರ್ತವ್ಯಕ್ಕೆ ವರದಿ ಮಾಡಿಕೊಂಡರು.
ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿರುವ ಕೇಂದ್ರ ಕೈಗಾರಿಕಾ ರಕ್ಷಣಾ ಪಡೆ (ಸಿಐಎಸ್‌ಎಫ್‌) ಸಿಬ್ಬಂದಿ ಕೋಲಾರದ ಗಲ್‌ಪೇಟೆ ಠಾಣೆಯಲ್ಲಿ ಬುಧವಾರ ಕರ್ತವ್ಯಕ್ಕೆ ವರದಿ ಮಾಡಿಕೊಂಡರು.   

ಕೋಲಾರ: ಲೋಕಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸುವ ಕೊನೆಯ ದಿನವಾದ ಬುಧವಾರ ನಗರದ ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಬೆಳಿಗ್ಗೆಯಿಂದ ಸಂಜೆ 6 ಗಂಟೆಯಾದರೂ ಜನರಿಂದ ಗಿಜಿಗುಡುತ್ತಿತ್ತು.

ವಿವಿಧ ಪಕ್ಷಗಳ ಅಭ್ಯರ್ಥಿಗಳಲ್ಲಿ ಕೆಲವರು ಖುದ್ದಾಗಿ, ಕೆಲವರು ತಮ್ಮ ಬೆಂಬಲಿಗರ ಮೂಲಕ ಮೂರು, ನಾಲ್ಕನೇ ನಾಮಪತ್ರಗಳನ್ನೂ ಸಲ್ಲಿಸಿದರು. ಪಕ್ಷೇತರರೂ ಕಚೇರಿ ಆವರಣದಲ್ಲಿ ಗುಂಪುಗೂಡಿದ್ದರು. ನಾಮಪತ್ರ ಸಲ್ಲಿಸಲು ಸಾಲುಗಟ್ಟುವ ಸನ್ನಿವೇಶ ನಿರ್ಮಾಣವಾಗಿತ್ತು.

ಬೆಳಿಗ್ಗೆ 10.30ರಿಂದ ಮಧ್ಯಾಹ್ನ 3 ಗಂಟೆವರೆಗಷ್ಟೇ ನಾಮಪತ್ರ ಸ್ವೀಕರಿಸಲಾಗುತ್ತದೆ. ಆದರೆ ಬುಧವಾರ ಸಂಖ್ಯೆ ಹೆಚ್ಚಿದ್ದ ಪರಿಣಾಮ ಸಂಜೆ 6 ಗಂಟೆಯಾದರೂ ನಾಮಪತ್ರ ಸ್ವೀಕರಿಸುವ ಕೆಲಸ ನಡೆದೇ ಇತ್ತು. ಕೊನೆಯ ದಿನ ಒಟ್ಟು 21 ಅಭ್ಯರ್ಥಿಗಳು 28 ನಾಮಪತ್ರ ಸಲ್ಲಿಸಿದರು. ಇದುವರೆಗೆ 33 ಮಂದಿ 46 ನಾಮಪತ್ರ ಸಲ್ಲಿಸಿದ್ದಾರೆ.
ಕಾಂಗ್ರೆಸ್‍: ಕಾಂಗ್ರೆಸ್‍ ಅಭ್ಯರ್ಥಿ ಕೆ.ಎಚ್‍.ಮುನಿ­ಯಪ್ಪ ಚುನಾವಣೆ ಅಧಿಸೂಚನೆ ಪ್ರಕಟವಾದ ದಿನವೇ ಎರಡು ನಾಮಪತ್ರ ಸಲ್ಲಿಸಿದ್ದರು. ಬುಧವಾರ ಅವರ ಬೆಂಬಲಿಗರಾದ ಜಿಲ್ಲಾ ಕಾಂಗ್ರೆಸ್‍ ಸಮಿತಿ ಅಧ್ಯಕ್ಷ ಎಂ.ಎಲ್.ಅನಿಲಕುಮಾರ್‍ ಮತ್ತು ಜಿಲ್ಲಾ ಪಂಚಾಯತಿ ಮಾಜಿ ಅಧ್ಯಕ್ಷ ವಿ.ವೆಂಕಟಮುನಿ­ಯಪ್ಪ ಅವರು ಮುನಿಯಪ್ಪ ಪರವಾಗಿ ಮತ್ತೆ ಎರಡು ನಾಮಪತ್ರ ಸಲ್ಲಿಸಿದರು.

ಬಿಜೆಪಿ: ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಕೂಡ ಒಟ್ಟು ನಾಲ್ಕು ನಾಮಪತ್ರ ಸಲ್ಲಿಸಿದ್ದಾರೆ. ಈ ಮುನ್ನ ಸಲ್ಲಿಸಿದ್ದ ನಾಮಪತ್ರಗಳಿಗೆ ತಮ್ಮ ಮಗಳು ಬಿ.ಎನ್‌.ಮಾಲಿನಿ, ಅಳಿಯ ಎ.ಜಿ.ವಿಜಯ­ಕುಮಾರ್‌ ಸೂಚಕರಾಗಿದ್ದರು. ಈಗ ತಮ್ಮ ಮೂರನೇ ಮಗಳು ಬಿ.ಎನ್.ಉಷಾರಾಣಿ ಸೂಚಕರಾಗಿರುವ ನಾಮಪತ್ರ ಸಲ್ಲಿಸಲಾಗಿದೆ. ತಮ್ಮ ಮನೆಯವರೆಲ್ಲರೂ ಸೂಚಕರಾಗಿರುವುದ­ರಿಂದ ಹೆಚ್ಚು ಸಂತೋಷವಾಗಿದೆ ಎಂದು ಅವರು ಸುದ್ದಿಗಾರರಿಗೆ ತಿಳಿಸಿದರು.

ಜೆಡಿಎಸ್‌: ಜೆಡಿಎಸ್‌ ಅಭ್ಯರ್ಥಿ ಕೆ.ಕೇಶವ ಅವರ ಪರವಾಗಿ ನಗರಸಭೆ ಅಧ್ಯಕ್ಷ ಬಿ.ಎಂ.ಮುಬಾರಕ್‌, ಸದಸ್ಯರಾದ ನದೀಂ ಹೈದರ್‌, ವೆಂಕಟೇಶಪತಿ ಸೇರಿದಂತೆ ಮುಖಂಡರು ಮತ್ತೊಂದು ನಾಮಪತ್ರ ಸಲ್ಲಿಸಿದರು.

ಕೆ.ಕೇಶವ ಅವರ ಜಾತಿ ಪ್ರಮಾಣಪತ್ರ ವಿವಾದದಲ್ಲಿ ಸಿಲುಕಿರುವುದರಿಂದ, ಮಾಲೂರು ಶಾಸಕ ಕೆ.ಎಸ್‌.ಮಂಜುನಾಥ್‌ ಮತ್ತು ಪಕ್ಷದ ಮುಖಂಡರ ಸೂಚನೆ ಮೇರೆಗೆ ಜಿಲ್ಲಾ ಪಂಚಾಯತಿ ಸದಸ್ಯ ಎಸ್‌.ಬಿ.ಮುನಿವೆಂಕಟಪ್ಪ ನಾಮಪತ್ರ ಸಲ್ಲಿಸಿದರು. ಪಕ್ಷದ ಅಭ್ಯರ್ಥಿ ಎಂದು ಒಂದು ನಾಮಪತ್ರ ಮತ್ತು ಪಕ್ಷೇತರ ಅಭ್ಯರ್ಥಿ­ಯಾಗಿ ಮತ್ತೊಂದು ನಾಮಪತ್ರ ಸಲ್ಲಿಸಲಾಗಿದೆ ಎಂದು ಅವರು ನಂತರ ಸುದ್ದಿಗಾರರಿಗೆ ತಿಳಿಸಿದರು.

ಬಿ ಫಾರಂ ಅನ್ನು ಈಗಾಗಲೇ ಕೇಶವ ಅವರಿಗೆ ನೀಡಲಾಗಿರುವುದಿಂದ, ಅಗತ್ಯ ಕಂಡು ಬಂದರೆ ವರಿಷ್ಠರು ಸಿ ಫಾರಂ ನೀಡುವ ಸಾಧ್ಯತೆ ಇದೆ. ಜಾತಿ ಪ್ರಮಾಣಪತ್ರ ವಿವಾದ ಸುಸೂತ್ರವಾಗಿ ಅಂತ್ಯ ಕಂಡರೆ, ವರಿಷ್ಠರ ಸೂಚನೆ ಮೇರೆಗೆ ಸೂಕ್ತ ನಿರ್ಧಾರ ಕೈಗೊಳ್ಳುವೆ ಎಂದು ಅವರು ತಿಳಿಸಿದರು.

ಮಂಗಳವಾರ ನಾಮಪತ್ರ ಸಲ್ಲಿಸಿದ್ದ ಆಮ್‌ ಆದ್ಮಿ ಪಕ್ಷದ ಅಭ್ಯರ್ಥಿ ಕೋಟಿಗಾನಹಳ್ಳಿ ರಾಮಯ್ಯ ಬುಧವಾರ ಮತ್ತೊಂದು ನಾಮಪತ್ರವನ್ನು ಸಲ್ಲಿಸಿದರು.

ಪಕ್ಷೇತರರು: ಕೊನೆ ದಿನ ಪಕ್ಷದ ಅಭ್ಯರ್ಥಿಗಳಿಗಿಂತಲೂ ಪಕ್ಷೇತರ ಅಭ್ಯರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ನಾಮಪತ್ರ ಸಲ್ಲಿಸಿದರು. ನಾಮಪತ್ರಗಳಲ್ಲಿ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡದಿರುವುದು, ಸಂಪೂರ್ಣ ದಾಖಲೆ ಒದಗಿಸದಿರುವುದರ ಹಿನ್ನೆಲೆಯಲ್ಲಿ ಕೆಲವರನ್ನು ಚುನಾವಣಾಧಿಕಾರಿ ವಾಪಸು ಕಳಿಸಿದರು. ಎಲ್ಲ ಮಾಹಿತಿಯೊಂದಿಗೆ ಬನ್ನಿ ಎಂದು ಸೂಚಿಸಿದರು.

ಓದಲು ಬಾರದ ಅಭ್ಯರ್ಥಿ
ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ ಬಳಿಕ ಎನ್‌.ವೆಂಕಟೇಶ್‌ ಕನ್ನಡ ಓದಲು ಬಾರದೆ ಪ್ರಮಾಣ ವಚನ ಸ್ವೀಕರಿಸಲು ಆಗದ ಸನ್ನಿವೇಶ ನಿರ್ಮಾಣ­ವಾಗಿತ್ತು.

ಪ್ರಮಾಣ ವಚನ ಸ್ವೀಕರಿಸು­ವಂತೆ ಚುನಾವಣಾಧಿಕಾರಿ ಡಿ.ಕೆ.ರವಿ ಅವರು ಹೇಳಿದ ಸಂದರ್ಭದಲ್ಲಿ ವೆಂಕಟೇಶ್‌ ತಮಗೆ ಕನ್ನಡ ಓದಲು ಬರು­ವುದಿಲ್ಲ ಎಂದು ಹೇಳಿದರು. ಒಂದರೆಕ್ಷಣ ಅವಾಕ್ಕಾದ ಚುನಾವಣಾಧಿಕಾರಿ, ತಾವೇ ಪ್ರಮಾಣವಚನ ಬೋಧಿಸಿ­ದರು. ಅವರು ಹೇಳಿದ ರೀತಿಯಲ್ಲೇ ಅಭ್ಯರ್ಥಿ ಪ್ರಮಾಣ ವಚನ ಸ್ವೀಕರಿಸಿದರು.

18 ವಾಹನ ವಶ
ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಸುತ್ತಮುತ್ತ, ಕೋಲಾರಮ್ಮ ದೇಗುಲದ ಮುಂಭಾಗದಲ್ಲಿ ಅನುಮತಿ ಇಲ್ಲದೆ ಕಂಡುಬಂದ 18 ವಾಹನವನ್ನು ಚುನಾವಣಾ ಸಿಬ್ಬಂದಿ ವಶಕ್ಕೆ ಪಡೆದು ಗಲ್‌ಪೇಟೆ ಠಾಣೆಗೆ ಸಾಗಿಸಿದರು.

8 ಐಷರ್‌ ವಾಹನ ಸೇರಿದಂತೆ 18 ವಾಹನ ವಶ­ಬುಧವಾರ ಪಡಿಸಿಕೊಳ್ಳಲಾಗಿದೆ. ಆಮ್‌ ಆದ್ಮಿ ಪಕ್ಷದ ಕಾರನ್ನು ವಶ­ಪಡಿಸಿಕೊಳ್ಳಲಾಗಿದ್ದು, ಅದರಲ್ಲಿ ಅನುಮತಿ ಇಲ್ಲದ ಸ್ಟಿಕರ್‌, ಪೊರಕೆ, ಟೋಪಿಗಳು ದೊರಕಿವೆ. ಬಿಎಸ್‌ಪಿಗೆ ಸೇರಿದ ವಾಹನ ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದರು.

ಇಂದು ನಾಮಪತ್ರ ಪರಿಶೀಲನೆ
ಕೋಲಾರ: ಲೋಕಸಭಾ ಚುಣಾವಣೆಯಲ್ಲಿ ಸ್ಪರ್ಧಿಸಲು ಆಕಾಂಕ್ಷಿ ಅಭ್ಯರ್ಥಿ­ಗಳು ಸಲ್ಲಿಸಿದ ನಾಮಪತ್ರಗಳ ಪರಿಶೀಲನೆ ನಗರದ ಜಿಲ್ಲಾ ಚುನಾವಣಾ­ಧಿಕಾರಿ ಕಚೇರಿಯಲ್ಲಿ ಗುರುವಾರ ನಡೆಯಲಿದ್ದು, ತೀವ್ರ ಕುತೂಹಲ ಮೂಡಿದೆ.

ಜೆಡಿಎಸ್‌ ಅಭ್ಯರ್ಥಿ ಕೆ.ಕೇಶವ ಜಾತಿ ಪ್ರಮಾಣಪತ್ರದ ವಿವಾದ ಕ್ಷೇತ್ರದ ಎಲ್ಲೆಡೆ ತೀವ್ರ ಚರ್ಚೆಗೆ ದಾರಿ ಮಾಡಿದ್ದು, ನಾಮಪತ್ರ ಪರಿಶೀಲನೆ ವೇಳೆ ಏನಾಗ­ಲಿದೆ ಎಂಬುದರ ಬಗ್ಗೆ ವಿವಿಧ ಪಕ್ಷಗಳು, ಮುಖಂಡರು, ಕಾರ್ಯ­ಕರ್ತರು, ಸಾರ್ವಜನಿಕರು ಆಸಕ್ತಿ ತಾಳಿದ್ದಾರೆ.

ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಜಾತಿ ಪ್ರಮಾಣಪತ್ರದ ಮೂಲ ಪ್ರತಿಯನ್ನು ಸಲ್ಲಿಸದೆ ಚುನಾವಣಾಧಿಕಾರಿಗಳಿಂದ ನೋಟಿಸ್‌ ಪಡೆದ ಬಳಿಕ ಕೇಶವ, ತಮ್ಮ ಸಂಬಂಧಿಕರ ಮೂಲಕ ಪ್ರಮಾಣಪತ್ರ ಸಲ್ಲಿಸಿದ್ದಾರೆ. 1994ರಲ್ಲಿ ಪಡೆಯಲಾದ ಆ ಜಾತಿ ಪ್ರಮಾಣಪತ್ರದ ವಿತರಣೆ ಕುರಿತ ದಾಖಲಾತಿಗಳು ತಮ್ಮಲ್ಲಿ ಲಭ್ಯವಿಲ್ಲ ಎಂದು ಕೋಲಾರ ತಹಶೀಲ್ದಾರರು ವರದಿ ಸಲ್ಲಿಸಿದ್ದಾರೆ.

ಕೇಶವ ಪರಿಶಿಷ್ಟ ಜಾತಿಯವರಲ್ಲ ಎಂದು ಪ್ರತಿಪಾದಿಸುತ್ತಿರುವವರು ಅವರು ಆಂಧ್ರಪ್ರದೇಶದಲ್ಲಿ­ದ್ದಾಗ, ಅಲ್ಲಿ ಹಿಂದುಳಿದ ವರ್ಗಕ್ಕೆ ಸೇರುವ ವಡ್ಡೆ ಜಾತಿ ಪ್ರಮಾಣಪತ್ರವನ್ನು ಪಡೆದಿದ್ದಾರೆ ಎಂದು ಆರೋಪಿಸಿ­ದ್ದಾರೆ. ಕೇಶವ ಆಂಧ್ರಪ್ರದೇಶದ ಮದನಪಲ್ಲಿ ತಾಲ್ಲೂಕಿನ ಮಾಲಪಾಟು ಗ್ರಾಮದ ನಿವಾಸಿಗಳಾಗಿದ್ದು, ಹಿಂದುಳಿದ ವರ್ಗಗಳಿಗೆ ಸೇರಿದ ವಡ್ಡೆ ಜಾತಿಗೆ ಸೇರುತ್ತಾರೆ. 10 ವರ್ಷ ಶಿಕ್ಷಣವನ್ನು ಹಿಂದುಳಿದ ವರ್ಗಗಳ ಕೋಟಾದಡಿ ಅಲ್ಲಿಯೇ ಪಡೆದಿದ್ದಾರೆ. ವಡ್ಡೆ ಜಾತಿ ಆಂಧ್ರದಲ್ಲಿ ಹಿಂದುಳಿದ ಜಾತಿಯೇ ಹೊರತು ಪರಿಶಿಷ್ಟ ಜಾತಿ ಪ್ರವರ್ಗಕ್ಕೆ ಅನ್ವಯಿಸುವುದಿಲ್ಲ ಎಂದು ಆರೋಪಿಸಿದ್ದಾರೆ. ಈ ಕುರಿತು ದೂರನ್ನೂ ಚುನಾವಣಾಧಿಕಾರಿಗಳಿಗೆ ಸಲ್ಲಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.