ADVERTISEMENT

ಕೋತಿಗಳ ಕಾಟ: ಜನರಿಗೆ ಸಂಕಟ

​ಪ್ರಜಾವಾಣಿ ವಾರ್ತೆ
Published 29 ಜೂನ್ 2012, 7:25 IST
Last Updated 29 ಜೂನ್ 2012, 7:25 IST
ಕೋತಿಗಳ ಕಾಟ: ಜನರಿಗೆ ಸಂಕಟ
ಕೋತಿಗಳ ಕಾಟ: ಜನರಿಗೆ ಸಂಕಟ   

ಬಂಗಾರಪೇಟೆ: ಪಟ್ಟಣದಲ್ಲಿ ಕೋತಿ ಹಿಂಡು ಹೆಚ್ಚಾಗುತ್ತಿದೆ. ಮನೆಗಳಲ್ಲಿ ದಿನಸಿ, ತರಕಾರಿ ಮತ್ತು ಹಣ್ಣುಗಳನ್ನು ರಕ್ಷಿಸುವುದು ಜನರಿಗೆ ತಲೆನೋವಾಗಿ ಪರಿಣಮಿಸಿದೆ.

ಪಟ್ಟಣದ ಟೆಲಿಕಾಂ ಟವರ್, ತೆಂಗಿನ ಮರಗಳಲ್ಲಿ ಮನೆ ಮಾಡಿಕೊಂಡಿರುವ ಕೋತಿಗಳು ಮನೆಗೆ ನುಗ್ಗಿ ಕೈಗೆ ಸಿಕ್ಕ ಪದಾರ್ಥಗಳನ್ನು ಬಾಚಿಕೊಂಡು ಹೋಗುತ್ತವೆ. ಟವರ್ ಪಕ್ಕದಲ್ಲಿ ಮನೆ ಇದ್ದರಂತೂ ಮನೆಯ ಬಾಗಿಲು ತೆಗಿಯುವುದನ್ನೇ ನಿರೀಕ್ಷಿಸಿ ಹೊಂಚು ಹಾಕುತ್ತವೆ. ಪುಟ್ಟ ಮಕ್ಕಳು ಕೈಯಲ್ಲಿ ತಿಂಡಿ- ತಿನಿಸುಗಳನ್ನು ಹಿಡಿದು ಹೊರಗೆ ಬರುವಂತಿಲ್ಲ. ದೊಡ್ಡ ಕೋತಿಗಳು ಜನರಿಗೆ ಹೆದರುವುದಿಲ್ಲ. ಕೈಯಲ್ಲಿ ಕೋಲು ಹಿಡಿದು ಗದರಿಸಿದರೆ ಮಾತ್ರ ಪಕ್ಕಕ್ಕೆ ಸರಿಯುತ್ತವೆ. ಕೋಲು ಇಲ್ಲದಿದ್ದರೆ ಮೈಮೇಲೆ ಬರುವುದು ಸಾಮಾನ್ಯವಾಗಿದೆ.

ಪಟ್ಟಣದ ವಿಜಯನಗರದ 2ನೇ ಅಡ್ಡ ರಸ್ತೆಯಲ್ಲಿರುವ ಟೆಲಿಕಾಂ ಟವರ್‌ನಲ್ಲಿ ಸುಮಾರು 40-50 ಕೋತಿಗಳ ಹಿಂಡು ವಾಸವಾಗಿದೆ. ಪ್ರತಿದಿನ ಈ ದಾರಿಯಲ್ಲಿ ಓಡಾಡುವ ಮಕ್ಕಳು, ಮಹಿಳೆಯರಿಗೆ ತೊಂದರೆಯಾಗುತ್ತಿದೆ. ಕೈಯಲ್ಲಿ ಚೀಲ ಹಿಡಿದು ಈ ದಾರಿಯಲ್ಲಿ ನಡೆದಾಡುವಂತಿಲ್ಲ. ಎರಡು ವರ್ಷಗಳಿಂದ ಕೋತಿಗಳ ಕಿರುಕುಳದ ನಡುವೆಯೇ ಜೀವನ ನಡೆಸುವ ಅನಿವಾರ್ಯ ಎದುರಾಗಿದೆ ಎನ್ನುತ್ತಾರೆ ಟವರ್ ಪಕ್ಕದ ಮನೆ ನಿವಾಸಿಗಳಾದ ಕುಮಾರ್, ಜಯಣ್ಣ, ಮಾಧವ ರಾಜ್.

ಈ ಟವರ್ ಎದುರಿನಲ್ಲಿಯೇ ಶಿಕ್ಷಕರೊಬ್ಬರು ಶಾಲಾ ಮಕ್ಕಳಿಗೆ ಟ್ಯೂಷನ್ ಹೇಳಿಕೊಡುತ್ತಿದ್ದಾರೆ. ಟ್ಯೂಷನ್ ಮುಗಿಸಿ ಮನೆಗೆ ಹಿಂತಿರುಗುತ್ತಿದ್ದ ಬಾಲಕಿಯನ್ನು ಕೋತಿ ಕಚ್ಚಿ ಗಾಯಗೊಳಿದ ಘಟನೆ ಕೆಲ ತಿಂಗಳ ಹಿಂದೆ ನಡೆದಿದೆ. ಕೋತಿ ಕಾಟದ ಬಗ್ಗೆ ಹಲುವು ಬಾರಿ ಪುರಸಭೆ ಆರೋಗ್ಯ ಅಧಿಕಾರಿ ಗೋವಿಂದ ರಾಜು ಅವರಿಗೆ ದೂರು ನೀಡಲಾಗಿದೆ. ಆದರೆ ಯಾವುದೇ ಪ್ರಯೋಜನ ಆಗಲಿಲ್ಲ ಎಂದು ಪುರಸಭೆ ಮಾಜಿ ಸದಸ್ಯ ಕುಮಾರ್ ಅಸಮಾಧಾನ ವ್ಯಕ್ತಪಡಿಸುತ್ತಾರೆ.

ಈ ಹಿಂದೆ ಕೋತಿಗಳು ಗ್ರಾಮೀಣ ಪ್ರದೇಶದ ತೆಂಗು, ಹುಣಸೆ, ಮಾವು ತೋಪುಗಳಲ್ಲಿ ಮಾತ್ರ ಕಾಣಿಸುತ್ತಿದ್ದವು. ಆಗಾಗ ಒಂದೊ ಅಥವಾ ಎರಡು ಕೋತಿ ಹಿಂಡು ಬರುತ್ತಿತ್ತು. ಓಡಿಸಿದರೆ ಹೊರಟು ಹೋಗುತಿತ್ತು. ಆದರೆ ಈಗ ಹಾಗಲ್ಲ. ಪಟ್ಟಣದ ಕೆಲವು ಬೀದಿಗಳ ಟೆಲಿಕಾಂ ಟವರ್‌ಗಳಲ್ಲಿ ಶಾಶ್ವತವಾಗಿ ನೆಲೆಯೂರಿವೆ. ಪುರಸಭೆ ಅಧಿಕಾರಿಗಳು ಇನ್ನಾದರೂ ಕ್ರಮ ಕೈಗೊಂಡು ಈ ಸಮಸ್ಯೆಯಿಂದ ಮುಕ್ತಿ ನೀಡಬೇಕು ಎಂಬುದು ನಿವಾಸಿಗಳ ಆಗ್ರಹ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.