ADVERTISEMENT

ಕೋಲಾರ: ಗಾಯದ ಮೇಲೆ ಬರದ ಬರೆ

​ಪ್ರಜಾವಾಣಿ ವಾರ್ತೆ
Published 8 ಅಕ್ಟೋಬರ್ 2011, 10:15 IST
Last Updated 8 ಅಕ್ಟೋಬರ್ 2011, 10:15 IST

ಕೋಲಾರ: ಜಿಲ್ಲೆಯ ರೈತರು ಈಗ ಗಾಯದ ಮೇಲೆ ಬರೆ ಎಳೆಸಿಕೊಂಡ ಸಂಕಟದಲ್ಲಿದ್ದಾರೆ. ಎರಡು ವರ್ಷದ ಹಿಂದೆ ಕಾಣಿಸಿಕೊಂಡಿದ್ದ ಬರ ಮತ್ತೆ ಎದುರಾಗಿದೆ. ಅಸಮರ್ಪಕ ಮುಂಗಾರು ಮಳೆಯ ಪರಿಣಾಮ ಬೆಳೆಗಳು ಒಣಗುತ್ತಿವೆ.

ಅಪಾರ ಬೆಳೆ ನಷ್ಟದ ಭೀತಿಯೂ ಆವರಿಸಿದೆ. ಮುಖ್ಯವಾಗಿ ಕೋಲಾರ, ಮಾಲೂರು ಮತ್ತು ಬಂಗಾರಪೇಟೆ ತಾಲ್ಲೂಕಿನಲ್ಲಿ ನಷ್ಟದ ಪ್ರಮಾಣ ಹೆಚ್ಚಾಗುವ ಸಾಧ್ಯತೆ ಇದೆ. ರೈತರ ಆಗ್ರಹದ ಮೇರೆಗೆ ಸರ್ಕಾರ ಮೂರು ತಾಲ್ಲೂಕು ಬರಪೀಡಿತ ಎಂದು ಘೋಷಿಸಿದ್ದಾಗಿದೆ.


ಪ್ರಮುಖ ಬೆಳೆಯಾದ ರಾಗಿ ಮುಂಗಾರು ಆರಂಭದಲ್ಲೆ ಬಿತ್ತನೆ ಮಾಡಿದ್ದ ಪ್ರದೇಶದಲ್ಲಿ ತೆನೆ ಬಿಡುವ ಹಂತದಲ್ಲಿದೆ. ತಡವಾಗಿ ಬಿತ್ತನೆ ಮಾಡಿದ ಕಡೆ ಇನ್ನೂ ಬೆಳೆಯುವ ಹಂತದಲ್ಲಿದೆ. ಮಳೆ ಮಾತ್ರ ಮಾಯವಾಗಿದೆ. ಬೆಳೆಗಳು ನೆಲ ಕಚ್ಚಿವೆ. ಸೋಮವಾರ ರಾತ್ರಿ ಬಿದ್ದ ಮಳೆ ಕೊಂಚ ಸಮಾಧಾನ ತರಬಹುದು ಎಂದು ಕೊಂಡರೆ, ಆ ಮಳೆ ಏಟಿಗೆ ಕುಸಿದ ಬೆಳೆಗಳು ಚೇತರಿಸಿಕೊಳ್ಳಲು ನಾಲ್ಕು ದಿನ ಬೇಕು ಎಂಬಂಥ ಸನ್ನಿವೇಶ ನಿರ್ಮಾಣವಾಗಿದೆ.

ಬಾಡಿದ ಬೆ ೆ: ಕೃಷಿ ಇಲಾಖೆಯ ಮೂಲಗಳ ಪ್ರಕಾರ ಕೋಲಾರ ತಾಲ್ಲೂಕಿನಲ್ಲಿ 1386 ಹೆಕ್ಟೇರ್, ಮಾಲೂರು ತಾಲ್ಲೂಕಿನಲ್ಲಿ 2800 ಹೆಕ್ಟೇರ್, ಬಂಗಾರಪೇಟೆಯಲ್ಲಿ 1104 ಹೆಕ್ಟೇರ್, ಶ್ರೀನಿವಾಸಪುರದಲ್ಲಿ 5.300 ಹೆಕ್ಟೇರ್ ಬೆಳೆ ಬಾಡುತ್ತಿದೆ. ಒಟ್ಟಾರೆ ನಾಲ್ಕು ತಾಲ್ಲೂಕಿನ 10,590 ಹೆಕ್ಟೇರ್‌ನಷ್ಟು ಬೆಳೆ ಬಾಡುತ್ತಿದೆ. ಮಳೆಯ ಅಭಾವದ ಪರಿಣಾಮ ಮುಳಬಾಗಲು ತಾಲ್ಲೂಕಿನಲ್ಲಿ ನೆಲಗಡಲೆಯ ಕೊಯಿಲು ನಿಂತಿತ್ತು.

ರಾಗಿ ಶೇ.96: ಜಿಲ್ಲೆಯ ಪ್ರಧಾನ ಬೆಳೆಯಾದ ರಾಗಿಯನ್ನು ಸರಾಸರಿ 62,500 ಹೆಕ್ಟೇರ್‌ನಲ್ಲಿ ಬೆಳೆಯುತ್ತಿದ್ದು, ಈ ಬಾರಿ 60,011 (ಶೇ.96) ರಷ್ಬು ಬಿತ್ತನೆಯಾಗಿದೆ. ಜಿಲ್ಲೆಯ ಹಲವು ರೈತರು ಮುಂಗಾರು ಅವಧಿಯ ಕೊನೆ ದಿನಗಳಾದ ಆಗಸ್ಟ್ ಕೊನೆಯ ವಾರದಲ್ಲೂ ಬಿತ್ತನೆ ಮಾಡಿದ್ದಾರೆ. ಮಳೆ ಅಸಮರ್ಪಕವಾಗಿ ಸುರಿದು ರೈತರಿಗೆ ನಿರಾಶೆ ಮೂಡಿಸಿದೆ.

ಜಿಲ್ಲೆಯ ಒಟ್ಟಾರೆ 1.02 ಲಕ್ಷ ಹೆಕ್ಟೇರ್ ಕೃಷಿ ಭೂಮಿಯ ಪೈಕಿ 91,871 (ಶೇ.90) ಹೆಕ್ಟೇರ್‌ನಷ್ಟು ಭೂಮಿ ಬಿತ್ತನೆಯಾಗಿದೆ. ಏಕದಳ ಧಾನ್ಯಗಳಾದ ರಾಗಿ, ಮುಸುಕಿನ ಜೋಳ, ಮೇವಿನಜೋಳ, ತೃಣಧಾನ್ಯಗಳು ಬೆಳೆಯುವ ಒಟ್ಟು 71,500 ಹೆಕ್ಟೇರ್ ಪೈಕಿ 66,509ರಷ್ಟು (ಶೇ.93) ಬಿತ್ತನೆಯಾಗಿದೆ. ದ್ವಿದಳ ಧಾನ್ಯಗಳಾದ ತೊಗರಿ, ಅಲಸಂದೆ, ಅವರೆ, ಹುರುಳಿ ಸೇರಿ ದ್ವಿದಳ ಧಾನ್ಯಗಳು ಬೆಳೆಯುವ ಒಟ್ಟು 15,500 ಹೆಕ್ಟೇರ್ ಪೈಕಿ 13, 652 (ಶೇ.88)ರಷ್ಟು ಬಿತ್ತನೆಯಾಗಿದೆ.

ನೆಲಗಡಲೆ, ಸೂರ್ಯಕಾಂತಿ, ಎಳ್ಳು, ಹುಚ್ಚೆಳ್ಳು, ಹರಳು, ಸೋಯಾ ಅವರೆ, ಸಾಸುವೆ ಸೇರಿ ಎಣ್ಣೆಕಾಳು ಧಾನ್ಯಗಳು ಬೆಳೆಯುವ ಒಟ್ಟು 14,600 ಹೆಕ್ಟೇರ್ ಪೈಕಿ 11,630 (ಶೇ.80)ರಷ್ಟು ಬಿತ್ತನೆಯಾಗಿದೆ. ವಾಣಿಜ್ಯ ಬೆಳೆಯಾದ ಕಬ್ಬು ಬೆಳೆಯು 400 ಹೆಕ್ಟೇರ್ ಪೈಕಿ 80 (ಶೇ.183) ರಷ್ಟು ಬಿತ್ತನೆಯಾಗಿದೆ. ಪ್ರಮುಖ ಎಣ್ಣೆಕಾಳು ಬೆಳೆಯಾದ ನೆಲಗಡಲೆ ಸರಾಸರಿ 13 ಸಾವಿರ ಹೆಕ್ಟೇರ್‌ನಲ್ಲಿ ಬೆಳೆಯುತ್ತಿದ್ದು, ಈ ಬಾರಿ 10,513 ಹೆಕ್ಟೇರ್‌ನಲ್ಲಿ ಬಿತ್ತನೆಯಾಗಿದೆ.

ಮಳೆ ಇಲ್ಲ: ಕಳೆದ ವರ್ಷ ಆಗಸ್ಟ್ ಅಂತ್ಯದ ಹೊತ್ತಿಗೆ 2904.1 ಮಿಮೀ ಮಳೆ ಸುರಿದಿತ್ತು. ಈ ಬಾರಿ ಕೇವಲ 2,060 ಮಿಮೀ ಮಳೆ ಸುರಿದಿದೆ. ಜಿಲ್ಲೆಯ ರೈತರು ಮಳೆ ನೋಡಿ 20ಕ್ಕೂ ಹೆಚ್ಚು ದಿನಗಳಾಗಿವೆ. ಸೋಮವಾರ ರಾತ್ರಿ ಮಾತ್ರ ಮಳೆ ಸುರಿದಿದೆ.

2009ರಲ್ಲಿ : ಎರಡು ವರ್ಷದ ಹಿಂದೆ ಜಿಲ್ಲೆಯಲ್ಲಿ ಸತತವಾಗಿ 54 ದಿನ ಮಳೆಯೇ ಇಲ್ಲದೆ ಒಣಹವೆ ಹರಡಿತ್ತು. ಸರಾಸರಿ ಮಳೆಯೂ ಆಗಿರಲಿಲ್ಲ. ಆ.23ರ ಹೊತ್ತಿಗೆ ಕೇವಲ ಶೇ.19 ರಷ್ಟು ಮಾತ್ರ ಬಿತ್ತನೆಯಾಗಿತ್ತು. ಅದೂ ಕೂಡ ಮಳೆ ಇಲ್ಲದೆ  ಹಾಳಾಗಿತ್ತು. ಬರ ಪರಿಸ್ಥಿತಿಯನ್ನು ಅಧ್ಯಯನ ಮಾಡಲು ಕೇಂದ್ರ ಸರ್ಕಾರದ ತಂಡ ಆ.24ರಂದು ಜಿಲ್ಲೆಗೆ ಭೇಟಿ ನೀಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.