ADVERTISEMENT

`ಗುಣಮಟ್ಟದ ಶಿಕ್ಷಣ: ಅಂಕ ಮಾನದಂಡವಲ್ಲ'

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 8:58 IST
Last Updated 15 ಜೂನ್ 2013, 8:58 IST

ಬಂಗಾರಪೇಟೆ (ಅರಳು ಮಲ್ಲಿಗೆ ಗಂಗಾಧರ ವೇದಿಕೆ): ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಅಂಕ ಗಳಿಸುವುದನ್ನೇ ಪ್ರತಿಭೆ ಮತ್ತು ಅರ್ಹತೆಯ ಮಾನದಂಡವಾಗಿ ಪರಿಗಣಿಸುವುದು ಸರಿಯಲ್ಲ ಎಂದು ಮಂಜುಳಾಪ್ರಸಾದ್ ಅಭಿಪ್ರಾಯಪಟ್ಟರು.

ಪಟ್ಟಣದ ಬಾಲಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಶುಕ್ರವಾರ ಆರಂಭವಾದ ತಾಲ್ಲೂಕು ಮಟ್ಟದ 3ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಏರ್ಪಡಿಸಿದ್ದ `ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ' ಕುರಿತ ಗೋಷ್ಠಿಯಲ್ಲಿ `ಗುಣಮಟ್ಟದ ಶಿಕ್ಷಣದಲ್ಲಿ ಶಿಕ್ಷಕರ ಮತ್ತು ಪೋಷಕರ ಪಾತ್ರ'ಕುರಿತು ಮಾತನಾಡಿದರು.

ಶಿಕ್ಷಕರು ಮತ್ತು ಪೋಷಕರ ಪಾಲ್ಗೊಳ್ಳುವಿಕೆ ಇಲ್ಲದೆ ಗುಣಮಟ್ಟದ ಶಿಕ್ಷಣ ರೂಪುಗೊಳ್ಳುವುದಿಲ್ಲ. ಶಿಕ್ಷಣದಲ್ಲಿ ನಿಜವಾದ ಗುಣಮಟ್ಟವನ್ನು ಕಾಪಾಡುವ ವಾತಾವರಣ ಮೂಡಬೇಕಾಗಿದೆ ಎಂದರು.

ಉತ್ತಮ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಶಿಕ್ಷಣ ಸಂಸ್ಥೆಗಳ ಉತ್ತಮ ಕಟ್ಟಡಗಳು, ಅಲ್ಲಿನ ವಿದ್ಯಾರ್ಥಿಗಳು ಗಳಿಸಿದ ಅಂಕಗಳಷ್ಟೇ ಮಾನದಂಡವಾಗಬಾರದು ಎಂದು ಪ್ರತಿಪಾದಿಸಿದರು.

ಉತ್ತಮ ಶಾಲಾ ಕಟ್ಟಡಗಳು, ಪಾಠೋಪಕರಣ, ಪೀಠೋಪಕರಣಗಳು ಇದ್ದರಷ್ಟೇ ಸಾಲದು. ಗುಣಮಟ್ಟ ಶಿಕ್ಷಣದ ಜೀವ ದ್ರವ್ಯವೇ ಆಗಿರುವ ಸೃಜನಶೀಲ ಶಿಕ್ಷಕರಿರಬೇಕು. ವಿದ್ಯಾರ್ಥಿಗಳಲ್ಲಿ ಕೇವಲ ವಿಷಯ ಜ್ಞಾನತುಂಬಿದರಷ್ಟೇ ಸಾಲದು. ಸಾಮಾನ್ಯ ಜ್ಞಾನ, ಲೋಕದೃಷ್ಟಿ, ಮಾನವೀಯ, ನೈತಿಕ ಮೌಲ್ಯಗಳನ್ನು ರೂಢಿಸಬೇಕು ಎಂದರು.

ಅಂಕಗಳಿಕೆಯೇ ಮಹತ್ವದ್ದು ಎಂಬ ನಂಬಿಕೆಯನ್ನು ಪೋಷಿಸುವ ಶಿಕ್ಷಕರುಮತ್ತು ಪೋಷಕರು ಹೇರುತ್ತಿರುವ ಅನಗತ್ಯ ಒತ್ತಡವು ಮಕ್ಕಳ ಮನಸ್ಸಿನ ಮೇಲೆ ಮಾರಕ ಪರಿಣಾಮಗಳನ್ನು ಬೀರುತ್ತಿದೆ. ಮಕ್ಕಳಲ್ಲಿ ವಿಮರ್ಶಾತ್ಮಕ ಚಿಂತನೆಮತ್ತು ಉತ್ತಮ ವ್ಯಕ್ತಿತ್ವ ನಿರ್ಮಾಣವಾಗಬೇಕಾದರೆ ಸಮಗ್ರ ಶಿಕ್ಷಣ ದೊರಕಬೇಕು ಎಂದರು.

ಮಕ್ಕಳ ಶಿಕ್ಷಣದ ಹಕ್ಕು ಕಾಯಿದೆಯ ಸಾಧಕ-ಬಾಧಕಗಳ  ಕುರಿತು ಎಸ್.ಮಾದಮಂಗಳ ಪ್ರೌಢ ಶಾಲೆಯ ಶಿಕ್ಷಕ ಎಲ್.ರಾಜಪ್ಪ ಮಾತನಾಡಿದರು. ಡಯಟ್ ಹಿರಿಯ ಉಪನ್ಯಾಸಕ ಜಿ.ವೆಂಕಟರಾಮರೆಡ್ಡಿ ಅಧ್ಯಕ್ಷತೆ ವಹಿಸಿದ್ದರು. ಸಮ್ಮೇಳನಾಧ್ಯಕ್ಷ ಕೋಗಿಲಹಳ್ಳಿ ಕೃಷ್ಣಪ್ಪ, ಶಿಕ್ಷಕಿ ನಿರ್ಮಲಾ ಉಪಸ್ಥಿತರಿದ್ದರು. ನಂತರ ನ್ಯೂ ಇಂಡಿಯನ್ ಡಾನ್ಸ್ ಇನ್ಸ್‌ಟುಟಿಟ್ಯೂಟ್‌ನ ಕಲಾವಿದರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.