ADVERTISEMENT

ಗ್ರಾಮೀಣ ಪಡಿತರದಾರರಿಗೆ ‘ಪುನರ್ಬೆಳಕು’ ಭಾಗ್ಯ

ಬಿಪಿಎಲ್‌ ಕಾರ್ಡ್‌ದಾರರಿಗೆ ಸೌಲಭ್ಯ: ಸಬ್ಸಿಡಿ ಸೀಮೆಎಣ್ಣೆ ಬದಲು ಎರಡು ಎಲ್‌ಇಡಿ ಬಲ್ಬ್‌ ಉಚಿತ

ಜೆ.ಆರ್ ಗಿರೀಶ್
Published 25 ಮೇ 2017, 4:57 IST
Last Updated 25 ಮೇ 2017, 4:57 IST
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ   

ಕೋಲಾರ: ರಾಜ್ಯವನ್ನು ಪಡಿತರ ಸೀಮೆಎಣ್ಣೆ ಬಳಕೆ ಮುಕ್ತವಾಗಿಸಲು ಸರ್ಕಾರವು ಅಡುಗೆ ಅನಿಲ ಸಂಪರ್ಕ ಹೊಂದಿರುವ ಗ್ರಾಮೀಣ ಪ್ರದೇಶದ ಬಡತನ ರೇಖೆಗಿಂತ ಕೆಳಗಿನ (ಬಿಪಿಎಲ್‌) ಪಡಿತರದಾರರಿಗೆ ಉಚಿತ ಎಲ್‌ಇಡಿ ಬಲ್ಬ್‌ ಭಾಗ್ಯ ನೀಡಲು ಮುಂದಾಗಿದೆ. ಈ ಉದ್ದೇಶಕ್ಕಾಗಿ ‘ಪುನರ್ಬೆಳಕು’ ಯೋಜನೆ ರೂಪಿಸಿದೆ.

ಗ್ರಾಮೀಣ ಭಾಗದಲ್ಲಿ ಅಡುಗೆ ಅನಿಲ ಸಂಪರ್ಕ ಹೊಂದಿರುವ ಬಿಪಿಎಲ್‌ ಪಡಿತರದಾರರಿಗೆ ಅವರ ಆಯ್ಕೆ ಮೇರೆಗೆ ಸಬ್ಸಿಡಿ ದರದಲ್ಲಿ ತಿಂಗಳಿಗೆ ಸದ್ಯ 1 ಲೀಟರ್‌ ಮತ್ತು ಅಡುಗೆ ಅನಿಲ ಸಂಪರ್ಕ ಇಲ್ಲದ ಬಿಪಿಎಲ್‌ ಪಡಿತರದಾರರಿಗೆ 3 ಲೀಟರ್‌ ಸೀಮೆಎಣ್ಣೆ ವಿತರಿಸಲಾಗುತ್ತಿದೆ.

ಮುಕ್ತ ಮಾರುಕಟ್ಟೆಯಲ್ಲಿ ಸೀಮೆಎಣ್ಣೆ ಬೆಲೆ ಲೀಟರ್‌ಗೆ ಸುಮಾರು ₹ 60 ಇದ್ದು, ಸರ್ಕಾರ ಬಿಪಿಎಲ್‌ ಪಡಿತರದಾರರಿಗೆ ವಿತರಿಸುವ ಸೀಮೆಎಣ್ಣೆಗೆ ಪ್ರತಿ ಲೀಟರ್‌ಗೆ ₹ 35 ಸಬ್ಸಿಡಿ ಕೊಡುತ್ತಿದೆ. ಹೀಗಾಗಿ ಬಿಪಿಎಲ್‌ ಪಡಿತರ ಕುಟುಂಬಗಳಿಗೆ ಲೀಟರ್‌ಗೆ ₹ 25ರ ದರದಲ್ಲಿ ಸೀಮೆಎಣ್ಣೆ ಸಿಗುತ್ತಿದೆ. ಸೀಮೆಎಣ್ಣೆ ಸಬ್ಸಿಡಿಗಾಗಿ ಸರ್ಕಾರ ಪ್ರತಿ ತಿಂಗಳು ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿದ್ದು, ಇದರಿಂದ ಆರ್ಥಿಕ ಹೊರೆ ಹೆಚ್ಚುತ್ತಿದೆ.

ಬಿಪಿಎಲ್‌ ಪಡಿತರ ಕುಟುಂಬಗಳು ಅಡುಗೆ ಅನಿಲ ಸಂಪರ್ಕ ಹೊಂದಿದ್ದರೂ ವಿದ್ಯುತ್‌ ಸಮಸ್ಯೆಯಿಂದಾಗಿ ರಾತ್ರಿ ವೇಳೆ ಬೆಳಕಿಗೆ ಸೀಮೆಎಣ್ಣೆ ಬಳಕೆ ಮಾಡುತ್ತಿವೆ. ಇದರಿಂದ ವಾತಾವರಣದಲ್ಲಿ ಇಂಗಾಲದ ಡೈ ಆಕ್ಸೈಡ್‌ ಪ್ರಮಾಣ ಹೆಚ್ಚಿ, ವಾಯುಮಾಲಿನ್ಯ ಉಂಟಾಗುತ್ತಿದೆ.

ವಾಯುಮಾಲಿನ್ಯ ದಿಂದ ಜನರ ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದ್ದು, ಉಸಿರಾಟ, ಕೆಮ್ಮು ಹಾಗೂ ಶ್ವಾಸಕೋಶ ಸಂಬಂಧಿ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ.

ಸೀಮೆಎಣ್ಣೆ ಸಬ್ಸಿಡಿಯ ಆರ್ಥಿಕ ಹೊರೆ ತಗ್ಗಿಸಲು ಹಾಗೂ ವಾಯುಮಾಲಿನ್ಯ ತಡೆಗಟ್ಟಲು ಸರ್ಕಾರ ಪುನರ್ಬೆಳಕು ಯೋಜನೆ ಕೈಗೆತ್ತಿಕೊಂಡಿದೆ. ಈ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಅಡುಗೆ ಅನಿಲ ಸಂಪರ್ಕ ಹೊಂದಿರುವ ಬಿಪಿಎಲ್‌ ಪಡಿತರದಾರರಿಗೆ ಸಬ್ಸಿಡಿಯುಕ್ತ ಒಂದು ಲೀಟರ್‌ ಸೀಮೆಎಣ್ಣೆ ಬದಲಿಗೆ ಪುನರ್‌ಭರ್ತಿ ಮಾಡಬಹುದಾದ (ರೀಚಾರ್ಜಬಲ್‌) ಎರಡು ಎಲ್‌ಇಡಿ ಬಲ್ಬ್‌ಗಳನ್ನು ಉಚಿತವಾಗಿ ವಿತರಿಸಲು ಉದ್ದೇಶಿಸಲಾಗಿದೆ.

ತಾಲ್ಲೂಕುವಾರು ಬಳಕೆ: ನಗರ ಹಾಗೂ ಗ್ರಾಮೀಣ ಪ್ರದೇಶ ಸೇರಿದಂತೆ ಜಿಲ್ಲೆಯಲ್ಲಿ ಒಟ್ಟಾರೆ 2,97,960 ಬಿಪಿಎಲ್‌ ಪಡಿತರ ಕುಟುಂಬಗಳಿದ್ದು, ಈ ಪೈಕಿ 2,27,689 ಕುಟುಂಬಗಳು ಅಡುಗೆ ಅನಿಲ ಸಂಪರ್ಕ ಹೊಂದಿವೆ. ಉಳಿದ 70,271 ಪಡಿತರ ಕುಟುಂಬಗಳಿಗೆ ಅಡುಗೆ ಅನಿಲ ಸಂಪರ್ಕ ವಿಲ್ಲ. ಒಟ್ಟಾರೆ ಜಿಲ್ಲೆಗೆ ಪಡಿತರ ವ್ಯವಸ್ಥೆ ಮೂಲಕ ವಿತರಿಸಲು ತಿಂಗಳಿಗೆ  2.12 ಲಕ್ಷ ಲೀಟರ್‌ ಸೀಮೆ ಎಣ್ಣೆ ಅಗತ್ಯವಿದೆ.

ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿ ನಲ್ಲಿ ಅತಿ ಹೆಚ್ಚು ಶೇ 38.88ರಷ್ಟು ಬಿಪಿಎಲ್‌ ಪಡಿತರದಾರರು ಸೀಮೆಎಣ್ಣೆ ಬಳಕೆ ಮಾಡುತ್ತಿದ್ದಾರೆ. ಉಳಿದಂತೆ ಬಂಗಾರಪೇಟೆ ಶೇ 33.84, ಮಾಲೂರು ಶೇ 26.21, ಮುಳಬಾಗಿಲು ಶೇ 24.97 ರಷ್ಟು ಮಂದಿ ಸೀಮೆಎಣ್ಣೆ ಉಪಯೋಗಿಸುತ್ತಿದ್ದಾರೆ. ಕೋಲಾರ ತಾಲ್ಲೂಕಿನಲ್ಲಿ ಅತಿ ಕಡಿಮೆ ಶೇ 0.02ರಷ್ಟು ಮಂದಿ ಸೀಮೆಎಣ್ಣೆ ಬಳಸುತ್ತಿದ್ದಾರೆ.

ಕೋರಿಕೆ ಸಲ್ಲಿಸಬಹುದು: ಜಿಲ್ಲೆಯಲ್ಲಿ ಪುನರ್ಬೆಳಕು ಯೋಜನೆಯಡಿ ಸೀಮೆ ಎಣ್ಣೆ ಬದಲಿಗೆ ಎಲ್‌ಇಡಿ ಬಲ್ಬ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಬಿಪಿಎಲ್‌ ಪಡಿತರದಾರರನ್ನು ಗುರುತಿಸುವಂತೆ ರಾಜ್ಯ ಸರ್ಕಾರ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರ ಗಳ ಇಲಾಖೆಯ ಜಿಲ್ಲಾ ಉಪ ನಿರ್ದೇಶ ಕರಿಗೆ ಸುತ್ತೋಲೆ ಕಳುಹಿಸಿದೆ.

ಆಸಕ್ತ ಬಿಪಿಎಲ್‌ ಪಡಿತರದಾರರು ಇಲಾಖೆಯ ಸೇವಾ ಕೇಂದ್ರ, ಖಾಸಗಿ ಪ್ರಾಂಚೈಸಿ, ಗ್ರಾಮ ಪಂಚಾಯಿತಿಗಳು ಅಥವಾ ಜನ ಸ್ನೇಹಿ ಕೇಂದ್ರಗಳಲ್ಲಿ ತಮ್ಮ ವೈಯಕ್ತಿಕ ವಿವರ, ಆಧಾರ್‌ ಸಂಖ್ಯೆ, ಬೆರಳಚ್ಚು ಮಾದರಿ ದಾಖಲಿಸಿ ಸೀಮೆಎಣ್ಣೆ ಬದಲಿಗೆ ಎಲ್‌ಇಡಿ ಬಲ್ಬ್‌ಗಳಿಗೆ ಕೋರಿಕೆ ಸಲ್ಲಿಸಬಹುದು.

ADVERTISEMENT

ಒಂದು ಆಯ್ಕೆ ಮಾಡಿಕೊಳ್ಳಿ
ಬಿಪಿಎಲ್‌ ಪಡಿತರದಾರರಿಗೆ ಕೊಡುವ ಎಲ್‌ಇಡಿ ಬಲ್ಬ್‌ಗಳ ಬೆಲೆ ಸುಮಾರು ₹ 300 ಇದ್ದು, ಫಲಾನುಭವಿಗಳಿಗೆ ಬಲ್ಬ್‌ ಅಥವಾ ಸೀಮೆಎಣ್ಣೆಯಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳುವ ಅವಕಾಶ ನೀಡಲಾಗಿದೆ. ಬಲ್ಬ್‌ ಪಡೆಯಲು ಇಚ್ಛಿಸುವವರು ಪಡಿತರ ಚೀಟಿಯೊಂದಿಗೆ ಗ್ರಾಮ ಪಂಚಾಯಿತಿಗೆ ಹೋಗಿ ಹೆಸರು ನೋಂದಾಯಿಸಬಹುದು.
–ಬಿ.ಪಿ.ದೇವಯ್ಯ, ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಉಪ ನಿರ್ದೇಶಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.