ADVERTISEMENT

ಗ್ರಾಮ ಸ್ವರಾಜ್ಯ ಅಭಿಯಾನಕ್ಕೆ ಸಹಕರಿಸಿ

ಪೂರ್ವಭಾವಿ ಸಭೆಯಲ್ಲಿ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ವಿದ್ಯಾಕುಮಾರಿ ಸೂಚನೆ

​ಪ್ರಜಾವಾಣಿ ವಾರ್ತೆ
Published 19 ಮೇ 2018, 12:26 IST
Last Updated 19 ಮೇ 2018, 12:26 IST

ಕೋಲಾರ: ‘ಗ್ರಾಮ ಸ್ವರಾಜ್ಯ ಅಭಿಯಾನದ ಯಶಸ್ಸಿಗ ಪ್ರತಿ ಇಲಾಖೆ ಮುಖ್ಯಸ್ಥರು ಸಹಕರಿಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಸೂಚಿಸಿದರು.

ಗ್ರಾಮ ಸ್ವರಾಜ್ಯ ಅಭಿಯಾನ ಅನುಷ್ಠಾನ ಕುರಿತು ನಗರದಲ್ಲಿ ಶುಕ್ರವಾರ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ‘ಈ ಅಭಿಯಾನವು ರಾಷ್ಟ್ರ ಮಟ್ಟದ ಅಭಿಯಾನವಾಗಿದೆ. ಅಭಿಯಾನದ ಸಂಬಂಧ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ನೀಡಿರುವ ಜವಾಬ್ದಾರಿಯನ್ನು ಸರಿಯಾಗಿ ನಿರ್ವಹಿಸಬೇಕು’ ಎಂದು ಹೇಳಿದರು.

‘ಮಗು ಹುಟ್ಟಿದ ತಕ್ಷಣ ಪೋಷಕರು ಸಕಾಲಕ್ಕೆ ಲಸಿಕೆ ಕೊಡಿಸದ ಕಾರಣ ಮಕ್ಕಳಲ್ಲಿ ಅಂಗವೈಕಲ್ಯ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಪೋಷಕರಲ್ಲಿನ ಅರಿವಿನ ಕೊರತೆಯಿಂದಾಗಿ ಹೀಗೆಲ್ಲಾ ಆಗುತ್ತಿದೆ. ಹುಟ್ಟುವ ಶಿಶುವನ್ನು ಸೋಂಕಿನಿಂದ ತಪ್ಪಿಸಲು ಈ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಕಾಲ ಕಾಲಕ್ಕೆ ಮಗುವಿಗೆ ಕೊಡಿಸಬೇಕಾದ ಲಸಿಕೆಗಳ ಬಗ್ಗೆ ಅಭಿಯಾನದ ಮೂಲಕ ತಾಯಿಯರಿಗೆ ಅರಿವು ಮೂಡಿಸಲಾಗುವುದು’ ಎಂದರು.

ADVERTISEMENT

ಸಹಕಾರ ಅಗತ್ಯ: ‘ಮಕ್ಕಳು ವಿವಿಧ ಸೋಂಕಿಗೆ ತುತ್ತಾಗಿ ಅಂಗವಿಕಲರಾಗುತ್ತಿರುವುದನ್ನು ತಪ್ಪಿಸಲು ಕೇಂದ್ರ ಸರ್ಕಾರ ಗ್ರಾಮ ಸ್ವರಾಜ್ಯ ಯೋಜನೆ ಜಾರಿಗೆ ತಂದಿದೆ. ಈ ಯೋಜನೆ ಯಶಸ್ಸಿಗೆ ಪ್ರತಿಯೊಬ್ಬರ ಸಹಕಾರ ಅಗತ್ಯ’ ಎಂದು ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ (ಆರ್‌ಸಿಎಚ್‌) ಡಾ.ಚಂದನ್‌ ತಿಳಿಸಿದರು.

‘ಮೇ 23, 25, 26, ಜೂನ್ 20, 22, 23 ಹಾಗೂ ಜುಲೈ 18, 20, 21ರಂದು ಈ ಅಭಿಯಾನ ನಡೆಯುತ್ತದೆ. ಮಕ್ಕಳಿಗೆ ತಗುಲುವ ಸೋಂಕುಗಳ ಬಗ್ಗೆ ಅಭಿಯಾನದಲ್ಲಿ ಪೋಷಕರಿಗೆ ಮಾಹಿತಿ ನೀಡಲಾಗುತ್ತದೆ’ ಎಂದು ವಿವರಿಸಿದರು.

22 ಹಳ್ಳಿಗಳು: ‘ರಾಜ್ಯದ 530 ಗ್ರಾಮಗಳಲ್ಲಿ ಅಭಿಯಾನ ನಡೆಯಲಿದ್ದು, ಈ ಪೈಕಿ ಜಿಲ್ಲೆಯ 22 ಹಳ್ಳಿಗಳಲ್ಲಿ ಅಭಿಯಾನ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ. ಆಯ್ಧ ಗ್ರಾಮಗಳಲ್ಲಿ ನಡೆಯುವ ಅಭಿಯಾನದ ಬಗ್ಗೆ ಸ್ಥಳೀಯ ಆರೋಗ್ಯ ಮತ್ತು ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ವ್ಯಾಪಕ ಪ್ರಚಾರ ನೀಡಬೇಕು’ ಎಂದು ಸೂಚಿಸಿದರು.

‘ಹೆಚ್ಚಾಗಿ ಕೊಳಚೆ ಪ್ರದೇಶ, ಕಾಲೊನಿಗಳಲ್ಲಿ ಹಾಗೂ ಕೂಲಿ ಕಾರ್ಮಿಕರ ಕುಟುಂಬಗಳಲ್ಲಿ ತಾಯಂದಿರಿಗೆ ಮಗುವಿಗೆ ಯಾವ ಲಸಿಕೆ ಹಾಕಿಸಬೇಕೆಂಬ ಮಾಹಿತಿ ಇರುವುದಿಲ್ಲ. ತಿಳಿವಳಿಕೆ ಕೊರತೆಯಿಂದ ಮಕ್ಕಳು ಸೋಂಕಿಗೆ ತುತ್ತಾಗಿ ಅಂಕವಿಕಲರಾಗುತ್ತಿವೆ.  ಇದನ್ನು ತಡೆಗಟ್ಟುವುದು ಅಭಿಯಾನದ ಉದ್ದೇಶ’ ಎಂದು ಮಾಹಿತಿ ನೀಡಿದರು.

ಎಲ್ಲೆಲ್ಲಿ ಶಿಬಿರ?: ‘ಶ್ರೀನಿವಾಸಪುರ ತಾಲ್ಲೂಕಿನ ಕೋಡಿಪಲ್ಲಿ, ಜೆ.ತಿಮ್ಮಸಂದ್ರ, ಚಲ್ದಿಗಾನಹಳ್ಳಿ, ತೂಮಲಪಲ್ಲಿ, ಗೌಡತಾಟಗಡ್ಡೆ, ಕೋಲಾರ ತಾಲ್ಲೂಕಿನ ಮುಳ್ಳಹಳ್ಳಿ, ಆಲಂಬಾಡಿ, ಚಲಗಾನಹಳ್ಳಿ, ಮಾಲೂರು ತಾಲ್ಲೂಕಿನ ಕೂರಂಡಹಳ್ಳಿ, ಬೆಂಗನೂರು, ಕೊಪ್ಪ, ಪೆದ್ದಪಲ್ಲಿ, ಎನ್‌.ಜಿ.ಹುಲ್ಲೂರು, ಮಹದೇವಪುರ, ಪಂತನಹಳ್ಳಿ ಹಾಗೂ ಮುಳಬಾಗಿಲು ತಾಲ್ಲೂಕಿನ ಕನ್ನಸಂದ್ರ, ಬೇವಹಳ್ಳಿ, ಭಟ್ರಹಳ್ಳಿ, ಮುದಿಗೆರೆ ಗ್ರಾಮದಲ್ಲಿ ಅಭಿಯಾನದ ಶಿಬಿರ ನಡೆಯಲಿವೆ’ ಎಂದರು.

‘ಮಕ್ಕಳಿಗೆ ಸೋಂಕು ನಿವಾರಕ ಚುಚ್ಚುಮದ್ದು ನೀಡುವುದರಿಂದ ಅಪಾಯದಿಂದ ಪಾರಾಗಬಹುದೆಂಬ ಅರಿವು ಗ್ರಾಮೀಣ ಜನರಿಗೆ ಇರುವುದಿಲ್ಲ. ಮಕ್ಕಳಿಗೆ ಸಕಾಲಕ್ಕೆ ಚುಚ್ಚುಮದ್ದು ಕೊಡಸಲೇಬೇಕೆಂಬ ಅರಿವು ಮೂಡಿಸಲು ಸರ್ಕಾರ ಮಿಷನ್ ಇಂದ್ರಧನುಷ್ ಅಭಿಯಾನ ನಡೆಸುತ್ತಿದೆ’ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್.ವಿಜಯ್‌ಕುಮಾರ್, ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ನಾಗರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕಿ ಎಂ.ಸೌಮ್ಯ, ಆರೋಗ್ಯಾಧಿಕಾರಿ ಡಾ.ವಸಂತ್‌, ಆರೋಗ್ಯ ಶಿಕ್ಷಣಾಧಿಕಾರಿ ಪ್ರಸನ್ನ ಹಾಜರಿದ್ದರು.

**
ಮಿಷನ್ ಇಂದ್ರಧನುಷ್ ಅಭಿಯಾನದ ಮೂಲಕ ಚಿಕಿತ್ಸೆಯಿಂದ ಹೊರಗುಳಿದ ಮಕ್ಕಳಿಗೆ ಚುಚ್ಚುಮದ್ದು ನೀಡಲಾಗುವುದು  
– ಡಾ.ಚಂದನ್‌, ತಾಯಿ ಮತ್ತು ಮಕ್ಕಳ ಆರೋಗ್ಯ ಯೋಜನಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.