ಕೋಲಾರ: ಜಿಲ್ಲೆಯ ಬಂಗಾರಪೇಟೆ ವಿಧಾನಸಭೆ ಕ್ಷೇತ್ರದ ಉಪಚುನಾವಣೆಯ ಸಲುವಾಗಿ 225 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ 52 ಸೂಕ್ಷ್ಮ, 70 ಅತಿಸೂಕ್ಷ್ಮ ಎಂದು ಗುರುತಿಸಲಾಗಿದೆ. ಕ್ಷೇತ್ರದಲ್ಲಿ 1,54,304 ಮತದಾರರಿದ್ದು, ಅವರಲ್ಲಿ 79,193 ಪುರುಷರು ಮತ್ತು 75,111 ಮಹಿಳೆಯರಿದ್ದಾರೆ ಎಂದು ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ತಿಳಿಸಿದ್ದಾರೆ.
1080 ಮತದಾನ ಸಿಬ್ಬಂದಿಯನ್ನು ನೇಮಿಸಲಾಗಿದೆ. ಮಾ.28ರಂದು ಮುಖ್ಯ ಮತಗಟ್ಟೆ ಅಧಿಕಾರಿಗಳಿಗೆ ಮತ್ತು ಏ.2ರಂದು ಸಹಾಯಕ ಮತಗಟ್ಟೆ ಅಧಿಕಾರಿಗಳಿಗೆ ತರಬೇತಿ ನೀಡಲಾಗುವುದು. ಎಲ್ಲ ಮತಗಟ್ಟೆ ಅಧಿಕಾರಿಗಳಿಗೂ ತರಬೇತಿಯನ್ನು ಬಂಗಾರಪೇಟೆಯ ಗೋಲ್ಟ್ ಫೀಲ್ಡ್ ಕಾಲೇಜಿನಲ್ಲಿ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇಬ್ಬರು ಸಹಾಯಕ ಚುನಾವಣಾಧಿಕಾರಿಗಳು, 13 ಸೆಕ್ಟರ್ ಅಧಿಕಾರಿಗಳ/ಸೆಕ್ಟರ್ ಮ್ಯಾಜಿಸ್ಟ್ರೇಟ್‌ಗಳು, 10 ಇ.ವಿ.ಎಂ.ಮಾಸ್ಟರ್ ಟ್ರೈನರ್‌ಗಳನ್ನು ನೇಮಿಸಲಾಗಿದ್ದು ಚುನಾವಣಾಧಿಕಾರಿ ಮತ್ತು ಸಹಾಯಕ ಚುನಾವಣಾಧಿಕಾರಿಗಳಿಗೆ ಕಳೆದ 13ರಂದೇ ತರಬೇತಿ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಚುನಾವಣಾ ವೆಚ್ಚ: ಸ್ಪರ್ಧಿಸಿರುವ ಅಭ್ಯರ್ಥಿಗಳ ಚುನಾವಣಾ ವೆಚ್ಚಗಳ ಪರಿಶೀಲನೆ ಕುರಿತು ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲದ ಸಹಾಯಕ ನಿಯಂತ್ರಕರು ಮತ್ತು ಸ್ಥಳೀಯ ಲೆಕ್ಕ ಪರಿಶೋಧನಾ ವರ್ತುಲದ ಲೆಕ್ಕಾಧಿಕಾರಿಗಳನ್ನು ಮುಖ್ಯನೋಡಲ್ ಅಧಿಕಾರಿಗಳನ್ನಾಗಿ ನೇಮಿಸಲಾಗಿದೆ.
ಮತ ಎಣಿಕೆ: ಮತದಾನ ಸಾಮಗ್ರಿಗಳನ್ನು ಸಿಬ್ಬಂದಿಗೆ ಚುನಾವಣೆಯ ಹಿಂದಿನ ದಿನ ಬಂಗಾರಪೇಟೆಯ ತಾಲ್ಲೂಕು ಕಛೇರಿಯಲ್ಲಿ ನೀಡಲಾಗುವುದು. ಮತ ಎಣಿಕೆ ಕಾರ್ಯವು ಬಂಗಾರಪೇಟೆಯ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಮತದಾನ ಸಿಬ್ಬಂದಿಯನ್ನು ಸಾಗಿಸಲು 26 ಬಸ್, 8 ಜೀಪ್, 4 ಮಿನಿ ಬಸ್‌ಗಳನ್ನು ಬಳಸಲಾಗುವುದು ಚುನಾವಣಾ ವೀಕ್ಷಕರನ್ನಾಗಿ ಚತ್ತೀಸ್‌ಗಡದ ವಿ.ಅವಿನಾಶ್ ಚಂಪಾವತ್ ಅವರನ್ನು ಆಯೋಗ ನೇಮಿಸಿದೆ ಎಂದು ಮೀನಾ ತಿಳಿಸಿದ್ದಾರೆ.
ನಾಮಪತ್ರ ಸಲ್ಲಿಕೆ
ಬಂಗಾರಪೇಟೆ: ವಿಧಾನಸಭೆ ಉಪಚುನಾವಣೆಗೆ ಪಕ್ಷೇತರ ಅಭ್ಯರ್ಥಿಯಾಗಿ ತಾಲ್ಲೂಕಿನ ಮರಗಲ್ ಗ್ರಾಮದ ಶ್ರೀನಿವಾಸ್ ಎಂಬುವರು ಶನಿವಾರ ನಾಮಪತ್ರ ಸಲ್ಲಿಸಿದ್ದಾರೆ. ಈವರೆಗೂ ಒಟ್ಟು ನಾಲ್ಕು ನಾಮಪತ್ರ ಸಲ್ಲಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.