ADVERTISEMENT

ಚುನಾವಣೆಯಲ್ಲಿ ಪಕ್ಷಪಾತ: ಆರೋಪ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2012, 8:28 IST
Last Updated 5 ಡಿಸೆಂಬರ್ 2012, 8:28 IST

ಕೆಜಿಎಫ್: ಬೇತಮಂಗಲ ಗ್ರಾ.ಪಂ.ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕಾಗಿ ಮಂಗಳವಾರ ನಡೆದ ಚುನಾವಣೆಯಲ್ಲಿ ಚುನಾವಣಾಧಿಕಾರಿ ಅವರು ಪಕ್ಷಪಾತ ಎಸಗಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಮತ್ತು ಜೆಡಿಎಸ್ ಬೆಂಬಲಿತ ಸದಸ್ಯರು ಪ್ರತಿಭಟನೆ ನಡೆಸಿದರು.

ಉಪಾಧ್ಯಕ್ಷ ಸ್ಥಾನಕ್ಕಾಗಿ ನಾಮಪತ್ರ ಸಲ್ಲಿಸಿದ್ದ ಬಿ.ಎ.ಯಶೋದಮ್ಮಾ ನಾಮಪತ್ರ ಸಲ್ಲಿಕೆ ಸಮಯದಲ್ಲಿ ಖುದ್ದಾಗಿ ಹಾಜರಿದ್ದು ನಾಮಪತ್ರ ಸಲ್ಲಿಸಿದ್ದರೂ, ಅವರ ಉಮೇದುವಾರಿಕೆಯನ್ನು ಚುನಾವಣಾಧಿಕಾರಿ ತಿರಸ್ಕರಿಸಿದ್ದಾರೆ. ಚುನಾವಣೆ ಸಂಬಂಧ ತಹಶೀಲ್ದಾರ್ ನೀಡಿರುವ ಪ್ರಮಾಣ ಪತ್ರದಲ್ಲಿ ಸಹ ಬಿ.ಎ.ಯಶೋದಮ್ಮ ಎಂಬುದಾಗಿ ನಮೂದಿಸಲಾಗಿತ್ತು. ಸಹಿಯನ್ನು ಯಶೋದಾ ಎಂದು ಮಾಡಿದ್ದರಿಂದ ಅವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಬಹುಮತವಿದ್ದರೂ ಯಶೋದಮ್ಮ ಅವರಿಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದರು.

ಕಾನೂನಿನ ಪ್ರಕಾರ ಚುನಾವಣೆ ನಡೆಸಲಾಗಿದೆ. ಕಾನೂನು ವಿರುದ್ಧವಾಗಿ ನಡೆದುಕೊಂಡಿಲ್ಲ ಎಂದು ಚುನಾವಣಾಧಿಕಾರಿ ಸ್ಪಷ್ಟನೆ ನೀಡಿದರೂ ತೃಪ್ತಿಯಾಗದ ಸದಸ್ಯರು ಅಧಿಕಾರಿ ಅವರ ಮೇಲೆ ದೂರು ನೀಡಲು ನಿರ್ಧರಿಸಿದರು. ಬೇತಮಂಗಲ ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆಯಾಗಿ ಕಾಂಗ್ರೆಸ್  ಬೆಂಬಲಿತ ರಾಧಮ್ಮಾ ಮತ್ತು ಬಿಜೆಪಿ ಬೆಂಬಲಿತ ಪ್ರೇಮಾವತಿ ಉಪಾಧ್ಯಕ್ಷರಾಗಿ ಆಯ್ಕೆಯಾದರು. 

ಬಿಜೆಪಿ ಬೆಂಬಲಿತ ಸದಸ್ಯೆಗೆ ಬಹುಮತವಿರದಿದ್ದರೂ ಯಶೋದಮ್ಮ ಅವರ ನಾಮಪತ್ರ ತಿರಸ್ಕೃತವಾದ ಕಾರಣ ಅವರು ಉಪಾಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾದರು.

ಜಿ.ಪಂ.ಸದಸ್ಯ ಅ.ಮು.ಲಕ್ಷ್ಮೀನಾರಾಯಣ, ಆರ್.ನಾರಾಯಣರೆಡ್ಡಿ, ಮಹಿಳಾ ಕಾಂಗ್ರೆಸ್ ರಾಜ್ಯ ಘಟಕದ ಉಪಾಧ್ಯಕ್ಷೆ ರೂಪಕಲಾ, ಮಾಜಿ ಶಾಸಕ ಎಂ.ಭಕ್ತವತ್ಸಲಂ, ನಗರಸಭೆ ಅಧ್ಯಕ್ಷ ಪಿ.ದಯಾನಂದ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.