ಬಂಗಾರಪೇಟೆ: ಕೋಲಾರ ಲೋಕಸಭೆ ಕ್ಷೇತ್ರದ ಚುನಾವಣೆಗೆ ಅಭ್ಯರ್ಥಿಗಳನ್ನು ಘೋಷಿಸಿರುವ ಹಿನ್ನೆಲೆಯಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಭ್ಯರ್ಥಿಗಳ ಪರ ಕಾರ್ಯಕರ್ತರು ಸುಡು ಬಿಸಿಲನ್ನು ಲೆಕ್ಕಿಸದೆ ಪ್ರಚಾರ ಕೈಗೊಂಡರು.
ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್.ಮುನಿಯಪ್ಪ ಅವರ ಪರವಾಗಿ ಶಾಸಕ ಎಸ್.ಎನ್.ನಾರಾಯಣಸ್ವಾಮಿ ನೇತೃತ್ವದಲ್ಲಿ ಪಾದಯಾತ್ರೆ ಸಹ ನಡೆಯಿತು.
ಜೆಡಿಎಸ್ ಪಕ್ಷದ ಅಭ್ಯರ್ಥಿ ಕೇಶವ ಪರವಾಗಿ ನೂರಾರು ಕಾರ್ಯಕರ್ತರು ಒಟ್ಟುಗೂಡಿ ಹಳ್ಳಿಗಳತ್ತ ಹೆಜ್ಜೆ ಹಾಕಿದರು. ಚುನಾವಣೆಯಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.
ಜೆಡಿಎಸ್ ಮುಖಂಡ ಶ್ರೀಕೃಷ್ಣ ಮಾತನಾಡಿ, ಕಾಂಗ್ರೆಸ್ ಸರ್ಕಾರ ಜನರ ಮೂಗಿಗೆ ಬೆಣ್ಣೆ ಸವರುವ ಕೆಲಸ ಮಾಡಿದೆ. ಕ್ಷೇತ್ರದಲ್ಲಿ ಯಾವುದೇ ಗುರುತರ ಅಭಿವೃದ್ಧಿ ಕಾರ್ಯ ನಡೆದಿಲ್ಲ. ಚುನಾವಣೆಯಲ್ಲಿ ಮತಗಳಿಸುವ ಸಲುವಾಗಿ ಎತ್ತಿನ ಹೊಳೆ ಯೋಜನೆ ಪಠಿಸುತ್ತಿದೆ. ಬಿಜೆಪಿ ಕೂಡ ಇದಕ್ಕೆ ಭಿನ್ನವಾಗಿಲ್ಲ ಎಂದು ಟೀಕಿಸಿದರು. ಜೆಡಿಎಸ್ ಬೆಂಬಲಿಸಿದರೆ ಶಾಶ್ವತ ನೀರಾವರಿ ಜಾರಿಗೆ ಶತಸಿದ್ಧ ಎಂದರು.
‘ಬಂಗಾರಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್ ಬಲಿಷ್ಟವಾಗಿದೆ. ಕಳೆದ ವಿಧಾನಸಭೆ ಚುನಾವಣೆ ವೇಳೆ ಇದ್ದ ಗೊಂದಲ ಈಗ ಮಾಯವಾಗಿದೆ. ಎಲ್ಲರೂ ಒಟ್ಟುಗೂಡಿ ಅಭ್ಯರ್ಥಿ ಗೆಲುವಿಗೆ ಶ್ರಮಿಸಲಾಗುವುದು’ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ರಾಮಚಂದ್ರ ತಿಳಿಸಿದರು.
ಮುಳಬಾಗಲಿನ ಕುರುಡುಮಲೆಯಲ್ಲಿ ಪೂಜೆ ಸಲ್ಲಿಸುವ ಮೂಲಕ ಬಿಜೆಪಿ ಅಭ್ಯರ್ಥಿ ಎಂ.ನಾರಾಯಣಸ್ವಾಮಿ ಅವರು ಮಂಗಳವಾರ ಪ್ರಚಾರಕ್ಕೆ ಚಾಲನೆ ನೀಡುವರು ಎಂದು ಮುಖಂಡರು ಹೇಳಿದ್ದಾರೆ. ಪಕ್ಷದ ಸಂಘಟನೆ ಕುರಿತು ಸಭೆ ನಡೆಸಿ ಪ್ರಚಾರಕ್ಕೆ ತೆರಳಲಿದ್ದಾರೆ ಎಂದು ತಿಳಿದುಬಂದಿದೆ.
ಕೖಷಿ ಸಮಾಜದ ಜಿಲ್ಲಾ ಘಟಕ ಅಧ್ಯಕ್ಷ ಡಿ.ಎಲ್.ನಾಗರಾಜ್, ಪುರಸಭೆ ಸದಸ್ಯ ಸುಹೇಲ್,ಮಾಜಿ ಸದಸ್ಯ ಶಿವಕುಮಾರ್, ಮುಖಂಡರಾದ ರಘುಪತಿಗೌಡ, ಶ್ರೀಕಾಂತ್, ಯುವ ಭೋವಿ ಸಂಘದ ಅಧ್ಯಕ್ಷ ವೆಂಕಟರಾಮ್, ಶಿವಣ್ಣ, ಗೋವಿಂದಪ್ಪ, ಗೋಪಾಲ್ ಸಿಂಗ್ ಇತರರು ಜೆಡಿಎಸ್ ಪರ ಪ್ರಚಾರದಲ್ಲಿ ತೊಡಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.