ADVERTISEMENT

ಜಲದ ಕಣ್ಣಿಗೆ ಕೊನೆಗೂ ಕಾಯಕಲ್ಪ

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 10:50 IST
Last Updated 20 ಜುಲೈ 2012, 10:50 IST

ಕೋಲಾರ: ನಗರದ ಟೇಕಲ್ ಕ್ರಾಸ್‌ನಲ್ಲಿರುವ ವೇಣುಗೋಪಾಲಸ್ವಾಮಿ ಪುಷ್ಕರಿಣಿಗೆ ಕೊನೆಗೂ ಕಾಯಕಲ್ಪದ  ಭಾಗ್ಯ ಲಭಿಸಿದೆ. ಅದನ್ನು ಮುಚ್ಚಿ, ಅ್ಲ್ಲಲೊಂದು ವಾಣಿಜ್ಯ ಸಮುಚ್ಚಯ ನಿರ್ಮಿಸುವ ಉದ್ದೇಶವನ್ನು ವೇಣುಗೋಪಾಲ ದೇವಾಲಯ ಟ್ರಸ್ಟ್ ಕೈಬಿಟ್ಟಿದೆ.

ಈ ಜಲದ ಕಣ್ಣನ್ನು ಮುಚ್ಚಲು ಕೆಲವು ವರ್ಷಗಳಿಂದ ನಡೆಯುತ್ತಿದ್ದ ಪ್ರಯತ್ನಕ್ಕೆ ಕೊನೆಗೂ ತಡೆಯಾಗಿದೆ. ಜಿಲ್ಲಾಡಳಿತ ಈಗಷ್ಟೆ ಆರಂಭಿಸಿರುವ ಶ್ರಮದಾನದ ಮೂಲಕ ಕಲ್ಯಾಣಿ, ಪುಷ್ಕರಿಣಿಗಳ ಅಭಿವೃದ್ಧಿ ಕಾರ್ಯದ ಮೂರನೇ ಪ್ರಯತ್ನವಾಗಿ ಈ ಪುಷ್ಕರಿಣಿ ಪುನಶ್ಚೇತನ ನಡೆಯಲಿದೆ. ಅದಕ್ಕೆ ಸಾರ್ವಜನಿಕರ ಸಹಕಾರವನ್ನೂ ಜಿಲ್ಲಾಡಳಿತ ಕೋರಿರುವುದು ವಿಶೇಷ. ಪುಷ್ಕರಿಣಿಯನ್ನು ಮುಚ್ಚುವ ಪ್ರಯತ್ನದಲ್ಲಿದ್ದ ಟ್ರಸ್ಟ್‌ನ ಪದಾಧಿಕಾರಿಗಳೊಡನೆ ಚರ್ಚಿಸಿದ ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್ ಟ್ರಸ್ಟ್ ನಿಲುವನ್ನು ಬದಲಿಸಲು ಯಶಸ್ವಿಯಾಗಿದ್ದಾರೆ.

ನಗರದ ಹೃದಯ ಭಾಗದಲ್ಲಿರುವ ಈ ಪುಷ್ಕರಿಣಿಯನ್ನು ಮುಚ್ಚುವ ಬದಲು ಜನಾಕರ್ಷಕ ಸ್ಥಳವಾಗಿ ರೂಪಿಸಲು ಸಾಧ್ಯವಿದೆ. ಮೊದಲ ಹಂತವಾಗಿ ಸ್ವಚ್ಛಗೊಳಿಸುವ ಕೆಲಸಕ್ಕೆ ಅನುವು ಮಾಡಬೇಕು ಎಂದು ಟ್ರಸ್ಟ್ ಪದಾಧಿಕಾರಿಗಳನ್ನು ಕೋರಿದೆ. ಅಗತ್ಯ ನೆರವು ನೀಡಲಾಗುವುದು ಎಂದು ಭರವಸೆ ನೀಡಿದೆ ಎಂದು ವಿಶ್ವನಾಥ್ ತಿಳಿಸಿದ್ದಾರೆ.

ಸ್ವಚ್ಛತಾ ಕಾರ್ಯಕ್ಕೆ ಮೊದಲು ಕೊಳದಲ್ಲಿರುವ ನೀರನ್ನು ಹೊರ ತೆಗೆಯಬೇಕು. ಅಲ್ಲಿ ನೀರು ಹೆಚ್ಚಿದೆ. ಐದು ದಿನದಿಂದ ನೀರನ್ನು ಹೊರ ತೆಗೆಯಲಾಗುತ್ತಿದೆ. ಮೊದಲಿಗೆ ಒಂದು ಮೋಟರ್ ಮಾತ್ರ ಅಳವಡಿಸಿ ನೀರು ತೆಗೆಯುವ ಪ್ರಯತ್ನ ಶುರುವಾಯಿತು. ನೀರು ಹೆಚ್ಚಿರುವುದರಿಂದ 2 ಮೋಟರ್ ಅಳವಡಿಸಿ ನೀರು ತೆಗೆಯಲಾಗುತ್ತಿದೆ. ಶೀಘ್ರದಲ್ಲಿ ಸ್ವಚ್ಛತಾ ಕಾರ್ಯ ಆರಂಭವಾಗಲಿದೆ ಎಂದರು.

ಈಗಿನ ಸ್ಥಿತಿ: ಪುಷ್ಕರಿಣಿಯಲ್ಲಿ ಮೊದಲಿಗೆ ತೆಪ್ಪೋತ್ಸವ, ಪೂಜೆಗಳು ಪ್ರತಿ ವರ್ಷವೂ ನಡೆಯುತ್ತಿದ್ದವು. ಈಗ ಅದು ಕಸದ ತೊಟ್ಟಿಗಿಂತಲೂ ಕಡೆಯಾಗಿದೆ. ಇತ್ತೀಚೆಗಷ್ಟೆ ಅಲ್ಲಿ ನಾಯಿಯ ಶವವೊಂದು ಕೊಳೆತ ಸ್ಥಿತಿಯಲ್ಲಿ ತೇಲಿತ್ತು.

ಮಣ್ಣು, ಕಟ್ಟಡ ತ್ಯಾಜ್ಯಗಳನ್ನು ತಂದು ಸುರಿದು ಪುಷ್ಕರಿಣಿ ಮುಚ್ಚುವ ಕೆಲಸ ಎರಡು ವರ್ಷದಿಂದ ನಡೆಯುತ್ತಿತ್ತು. ಜಿಲ್ಲೆಯಲ್ಲಿ ಕೆರೆ- ಕುಂಟೆ, ಪುಷ್ಕರಿಣಿಗಳನ್ನು ಸಂರಕ್ಷಿಸಬೇಕು. ಮಳೆ ನೀರು ಅಲ್ಲಿ ನಿಲ್ಲುವಂತೆ ಮಾಡಬೇಕು ಎಂದು ಜಿಲ್ಲಾಡಳಿತ ಕ್ರಿಯಾ ಯೋಜನೆ ಸಿದ್ಧಪಡಿಸಿದ್ದರೂ ಈ ಪುಷ್ಕರಿಣಿ ಕಡೆಗೆ ಜಿಲ್ಲಾಡಳಿತದ ಯಾರೊಬ್ಬರೂ ಗಮನ ಹರಿಸಿರಲಿಲ್ಲ.  ಪುಷ್ಕರಿಣಿ ಮುಚ್ಚುವ ಪ್ರಯತ್ನಕ್ಕೆ ಹಿಂದಿನ ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ತಡೆಯೊಡ್ಡಿದ್ದರು. ಅದನ್ನು ಮುಚ್ಚುವ ಪ್ರಯತ್ನ ನಡೆಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂಬ ಫಲಕವನ್ನೂ ಪುಷ್ಕರಿಣಿ ಸಮೀಪ ಅಳವಡಿಸಲಾಗಿತ್ತು. ಆದರೆ ಅದನ್ನೂ ಮುಳುಗಿಸುವ ರೀತಿ  ತ್ಯಾಜ್ಯ ಸುರಿಯಲಾಗುತ್ತಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.