ADVERTISEMENT

ಜಿಂಕೆಗಳ ದಾಹ ಇಂಗಲು ಬೆಮಲ್ ನೀರು

​ಪ್ರಜಾವಾಣಿ ವಾರ್ತೆ
Published 6 ಜನವರಿ 2012, 8:55 IST
Last Updated 6 ಜನವರಿ 2012, 8:55 IST

ಕೆಜಿಎಫ್: ಬೆಮಲ್‌ನಗರ ಸುತ್ತಮುತ್ತಲ ಪ್ರದೇಶದಲ್ಲಿರುವ ಸಾವಿರಾರು ಜಿಂಕೆಗಳಿಗೆ ಕುಡಿಯುವ ನೀರು ಒದಗಿಸಲು ಬೆಮಲ್ ಸಂಸ್ಥೆ ನೀರಿನ ತೊಟ್ಟಿ ನಿರ್ಮಿಸಿದೆ.

ಬೆಮಲ್ ಎಚ್ ಅಂಡ್ ಪಿ ಹಿಂಭಾಗದಲ್ಲಿರುವ ಸಾವಿರಾರು ಎಕರೆ ಪ್ರದೇಶದಲ್ಲಿ ಜಿಂಕೆಗಳು ಆಶ್ರಯ ಪಡೆದಿವೆ. ಬಿಜಿಎಂಎಲ್‌ನಿಂದ ಗುತ್ತಿಗೆ ಪಡೆದಿರುವ ಈ ಸ್ಥಳದ ಉಸ್ತುವಾರಿ ಸದ್ಯಕ್ಕೆ ಬೆಮಲ್ ವಹಿಸಿದೆ. ಈ ಪ್ರದೇಶದಲ್ಲಿ ಜಿಂಕೆಗಳ ಸಂತತಿ ದಿನೇ ದಿನೇ ಹೆಚ್ಚುತ್ತಿದ್ದು, ಆಗಾಗ್ಗೆ ಕುಡಿಯುವ ನೀರಿಗಾಗಿ ನಗರ ಪ್ರದೇಶಕ್ಕೆ ಬಂದು ಬೀದಿ ನಾಯಿಗಳಿಗೆ ಬಲಿಯಾಗುತ್ತಿದ್ದವು.

ಎಚ್ ಅಂಡ್ ಪಿ ಹಿಂಭಾಗದಲ್ಲಿ ಒಂದು ಚೆಕ್ ಡ್ಯಾಂ ಕಟ್ಟಲಾಗಿದೆ. ರಾತ್ರಿ ಹಾಗೂ ಮುಂಜಾನೆ ಅಲ್ಲಿಗೂ ಬರುವ ಜಿಂಕೆಗಳು ನೀರನ್ನು ಕುಡಿಯುತ್ತವೆ. ಚೆಕ್‌ಡ್ಯಾಂನಿಂದ ನೇರವಾಗಿ ಕೃಷ್ಣಾಪುರಕ್ಕೆ ಹೋಗುವ ರಾಜಕಾಲುವೆಯಲ್ಲಿ ಮಳೆಗಾಲದಲ್ಲಿ ಮಾತ್ರ ನೀರಿದ್ದು, ಬೇಸಿಗೆಯಲ್ಲಿ ಒಣಗಿ ಹೋಗಿರುತ್ತದೆ. ಈಚೆಗೆ ನೀರಿಗಾಗಿ ಅರಸುತ್ತ ನೀರಿಲ್ಲದ ಬಾವಿಗೆ ಬಿದ್ದು ಗರ್ಭಿಣಿ ಜಿಂಕೆಯೊಂದು ಅಸುನೀಗಿದ್ದ ಘಟನೆ ಹಸಿರಾಗಿಯೇ ಇದೆ.

ಈ ಹಿನ್ನೆಲೆಯಲ್ಲಿ ರಾಜಕಾಲುವೆಗೆ ಸಮೀಪದಲ್ಲೇ ಸಿಮೆಂಟ್ ತೊಟ್ಟಿ ನಿರ್ಮಿಸಿರುವ ಬೆಮಲ್, ವಾರಕ್ಕೆ ಎರಡು ಬಾರಿ ಸಿಹಿ ನೀರನ್ನು ಟ್ಯಾಂಕರ್ ಮೂಲಕ ದಾಸ್ತಾನು ಮಾಡುತ್ತಿದೆ.

ಸದರಿ ಪ್ರದೇಶದಲ್ಲಿ ಸಾರ್ವಜನಿಕ ಪ್ರವೇಶ ನಿಷೇಧಿಸಿ ಜಿಂಕೆಗಳಿಗೆ ಸೂಕ್ತ ವಾತಾವರಣ ಕಲ್ಪಿಸಿಕೊಡಲು ಬೆಮಲ್ ಅಧಿಕಾರಿಗಳು ಆಸಕ್ತಿ ತೋರಿದ್ದರೂ ಬಿಜಿಎಂಎಲ್‌ನಿಂದ ಗುತ್ತಿಗೆ ಪಡೆದಿರುವುದರಿಂದ ಮುಂದಕ್ಕೆ ಬರಲು ಮನಸ್ಸು ಮಾಡುತ್ತಿಲ್ಲ. ಸುಮಾರು ಎರಡು ಕಿ.ಮೀ ಉದ್ದವಿರುವ ರಾಜಕಾಲುವೆಯಲ್ಲಿ ಸಹ ಅಲ್ಲಲ್ಲಿ ಚೆಕ್‌ಡ್ಯಾಂ ನಿರ್ಮಿಸಿದರೆ ನೈಸರ್ಗಿಕವಾಗಿಯೇ ಜಿಂಕೆಗಳಿಗೆ ಸೂಕ್ತ ನೀರಿನ ವ್ಯವಸ್ಥೆ ಮಾಡಬಹುದು. ಬೆಮಲ್ ಈ ನಿಟ್ಟಿನಲ್ಲಿ ಕಾರ್ಯೋನ್ಮುಖವಾದರೆ ಅಂತರ್ಜಲ ಹೆಚ್ಚಿಸಬಹುದು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.