ಕೋಲಾರ: ಕೇಂದ್ರ ಸಚಿವ ಕೆ.ಎಚ್.ಮುನಿಯಪ್ಪ ಸಮ್ಮುಖದಲ್ಲಿ ಈಚೆಗೆ ನಗರದಲ್ಲಿ ನಡೆದ ಸಭೆಯಲ್ಲಿ ನಗರಸಭೆ ಸದಸ್ಯರ ವಿರುದ್ಧ ಕೆಂಡ ಕಾರಿದ ಪರಿಣಾಮ ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ವರ್ಗಾವಣೆ ದಿನಗಳು ಹತ್ತಿರವಾಗಿವೆಯೇ?
ಈ ಪ್ರಶ್ನೆಗೆ ಹೌದು ಎಂಬ ಉತ್ತರವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶ್ ನೀಡಿದ್ದಾರೆ. ನಗರಸಭೆಗೆ ಬುಧವಾರ ಮಧ್ಯಾಹ್ನ ಭೇಟಿ ನೀಡಿದ ಬಳಿಕ ಸುದ್ದಿಗಾರರೊಡನೆ ಮಾತನಾಡಿದ ಅವರು ಜಿಲ್ಲಾಧಿಕಾರಿ ವರ್ಗಾವಣೆ ಸುಳಿವು ಬಿಟ್ಟುಕೊಟ್ಟಿದ್ದಾರೆ.
ಕೆಳಹಂತದ ಅಧಿಕಾರಿಗಳನ್ನು ಬೆದರಿಸುವ ರೀತಿಯಲ್ಲೆ ಮಾತನಾಡಿಸುವ ಅಭ್ಯಾಸವುಳ್ಳ ಜಿಲ್ಲಾಧಿಕಾರಿ ಕಂಡರೆ ಅಧಿಕಾರಿಗಳಲ್ಲಿ ನಡುಕ ಉಂಟಾಗುತ್ತದೆ. ಅದು ಅವರ ಕೆಲಸದ ಮೇಲೂ ಪರಿಣಾಮ ಬೀರುತ್ತಿದೆ. ತಮ್ಮ ವರ್ತನೆ ಬದಲಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗೆ ಬುಧವಾರ ನಡೆದ ಸಚಿವರ ಸಭೆಯಲ್ಲಿ ಹೇಳಿದ್ದೇನೆ~ ಎಂದು ಸಚಿವರು ತಿಳಿಸಿದರು.
ಜಿಲ್ಲಾಧಿಕಾರಿ ಪ್ರಾಮಾಣಿಕರಿರಬಹುದು. ಹಾಗೆಂದು ತಳಹಂತದ ಅಧಿಕಾರಿಗಳೊಡನೆ ಸಮಾಧಾನಕರ ವೈಖರಿಯಿಂದ ಮಾತನಾಡದೆ, ಒರಟಾಗಿ ವರ್ತಿಸುವುದು ಸರಿಯಲ್ಲ. ಅವರ ಬಗ್ಗೆ ಭಯದ ಭಾವನೆ ಬೇಡ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಧೈರ್ಯದ ಮಾತು ಹೇಳಿದ್ದೇನೆ. ಸೋಮವಾರದ ಹೊತ್ತಿಗೆ ಹೊಸ ಜಿಲ್ಲಾಧಿಕಾರಿ ಬರುವ ಸಾಧ್ಯತೆ ಇದೆ. 10 ದಿನದ ಬಳಿಕ ಜಿಲ್ಲೆಯಲ್ಲಿ ಹೊಸ ವಾತಾವರಣ ಮೂಡಲಿದೆ ಎಂದು ಅವರು ತಿಳಿಸಿದರು.
ಈ ಕುರಿತು `ಪ್ರಜಾವಾಣಿ~ಗೆ ಪ್ರತಿಕ್ರಿಯಿಸಿದ ಮನೋಜ್‌ಕುಮಾರ್ ಮೀನಾ, `ಸಚಿವರಾಗಿ ಅವರ ಕೆಲಸ ಅವರು ಮಾಡುತ್ತಾರೆ. ಅಧಿಕಾರಿಗಳಾಗಿ ನಮ್ಮ ಕೆಲಸ ನಾವು ಮಾಡುತ್ತೇವೆ. ಜಿಲ್ಲಾಧಿಕಾರಿಯಿಂದ ಬರ ನಿರ್ವಹಣೆ ಕೆಲಸ ಸರಿಯಾಗಿ ನಡೆಯಲಿಲ್ಲ ಎನ್ನುವುದಾದರೆ ಅವರು ನನ್ನನ್ನು ವರ್ಗಾವಣೆ ಮಾಡಬಹುದು~ ಎಂದು ನುಡಿದರು.
`ಜಿಲ್ಲಾ ಉಸ್ತುವಾರಿ ಸಚಿವರಾಗಿ ಅವರು ಜಿಲ್ಲೆಯ ಜನರಿಗೆ ನೇರವಾಗಿ ಜವಾಬ್ದಾರರಾಗಿರುವುದು ಸಹಜ. ಈ ನಿಟ್ಟಿನಲ್ಲಿ ಅವರಿಗೆ ತಮ್ಮಿಷ್ಟದ ಯಾವುದೇ ನಿರ್ಧಾರ ಕೈಗೊಳ್ಳುವ ಅಧಿಕಾರವೂ ಇದೆ. ಒಂದು ಪ್ರದೇಶದಲ್ಲಿ ಕೆಲಸ ಮಾಡುವುದು, ಮತ್ತೊಂದೆಡೆಗೆ ವರ್ಗಾವಣೆಯಾಗುವುದು ಅಧಿಕಾರಿಗಳಾದ ನಮಗೆ ಸಹಜ ಪ್ರಕ್ರಿಯೆ ಅಷ್ಟೆ~ ಎಂದು ಮೀನಾ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.