ADVERTISEMENT

ಜಿಲ್ಲೆಗೆ ರಾಜ್ಯದಲ್ಲಿ 8ನೇ ಸ್ಥಾನ

ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟ

​ಪ್ರಜಾವಾಣಿ ವಾರ್ತೆ
Published 8 ಮೇ 2018, 13:34 IST
Last Updated 8 ಮೇ 2018, 13:34 IST

ಕೋಲಾರ: ರಾಜ್ಯದೆಲ್ಲೆಡೆ ಸೋಮವಾರ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯು ಶೇ 83.34 ಫಲಿತಾಂಶ ಸಾಧನೆಯೊಂದಿಗೆ ರಾಜ್ಯ ಮಟ್ಟದಲ್ಲಿ 8ನೇ ಸ್ಥಾನ ಪಡೆದಿದೆ.

ಹಿಂದಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯು ಶೇ 78.51 ಫಲಿತಾಂಶ ಪಡೆದು ರಾಜ್ಯ ಮಟ್ಟದಲ್ಲಿ 7ನೇ ಸ್ಥಾನದಲ್ಲಿತ್ತು. ಹಿಂದಿನ ವರ್ಷಕ್ಕಿಂತ ಈ ಬಾರಿ ಶೇ 4.83ರಷ್ಟು ಫಲಿತಾಂಶ ಏರಿಕೆಯಾದರೂ ಜಿಲ್ಲೆಯು 8ನೇ ಸ್ಥಾನಕ್ಕೆ ತಲುಪಿದೆ.

ಜಿಲ್ಲೆಯಿಂದ ಈ ಬಾರಿ ಪರೀಕ್ಷೆ ತೆಗೆದುಕೊಂಡಿದ್ದ 17,868 ವಿದ್ಯಾರ್ಥಿಗಳ ಪೈಕಿ 14,890 ಮಂದಿ ಉತ್ತೀರ್ಣರಾಗಿದ್ದಾರೆ. ಹಿಂದಿನ ವರ್ಷಕ್ಕಿಂತ ಈ ಬಾರಿ ಎರಡು ಪಟ್ಟು ಹೆಚ್ಚು ಅಂದರೆ 69 ಶಾಲೆಗಳು ಶೇ 100ರ ಫಲಿತಾಂಶ ಸಾಧನೆ ಮಾಡಿವೆ. 13 ಸರ್ಕಾರಿ, 3 ಅನುದಾನಿತ ಮತ್ತು 53 ಖಾಸಗಿ ಶಾಲೆಗಳು ಈ ಗೌರವಕ್ಕೆ ಪಾತ್ರವಾಗಿವೆ.

ADVERTISEMENT

ಪರೀಕ್ಷೆಗೆ ಕುಳಿತಿದ್ದ 8,912 ಬಾಲಕರ ಪೈಕಿ 7,277 ಮಂದಿ ತೇರ್ಗಡೆಯಾಗಿದ್ದು, ಶೇ 81.67 ಫಲಿತಾಂಶ ಬಂದಿದೆ. ಅದೇ ರೀತಿ 8,956 ಬಾಲಕಿಯರ ಪೈಕಿ 7,613 ಮಂದಿ ಉತ್ತೀರ್ಣರಾಗಿದ್ದು, ಶೇ 85 ಫಲಿತಾಂಶ ಬಂದಿದೆ. ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ಗ್ರಾಮೀಣ ಭಾಗದಲ್ಲಿ ಹೆಚ್ಚು: ಗ್ರಾಮೀಣ ಭಾಗದ 5,588 ಬಾಲಕರ ಪೈಕಿ, 4,805 ಮಂದಿ ಉತ್ತೀರ್ಣರಾಗಿ ಶೇ 85.99 ಫಲಿತಾಂಶ ಬಂದಿದೆ. 5,067 ಬಾಲಕಿಯರಲ್ಲಿ 4,523 ಮಂದಿ ಉತ್ತೀರ್ಣರಾಗಿ ಶೇ 89.26 ಫಲಿತಾಂಶ ಬಂದಿದೆ.

ನಗರ ಪ್ರದೇಶದಲ್ಲಿ ಪರೀಕ್ಷೆ ತೆಗೆದುಕೊಂಡಿದ್ದ 3,662 ಬಾಲಕರಲ್ಲಿ 2,781 ಮಂದಿ ತೇರ್ಗಡೆಯಾಗಿ ಶೇ 75.94 ಫಲಿತಾಂಶ ಬಂದಿದೆ. ಅದೇ ರೀತಿ 4,233 ಬಾಲಕಿಯರಲ್ಲಿ 3,410 ಮಂದಿ ಉತ್ತೀರ್ಣರಾಗಿ ಶೇ 80.61 ಫಲಿತಾಂಶ ಬಂದಿದೆ. ಒಟ್ಟಾರೆ ಗ್ರಾಮೀಣ ಭಾಗದಲ್ಲಿ ಹೆಚ್ಚು ಶೇ 87.55 ಮತ್ತು ನಗರ ಪ್ರದೇಶದಲ್ಲಿ ಶೇ 78.41 ಫಲಿತಾಂಶ ಬಂದಿದೆ.

ತಾಲ್ಲೂಕುವಾರು ಸಾಧನೆ: ರಾಜ್ಯ ಮಟ್ಟದ ತಾಲ್ಲೂಕುವಾರು ಫಲಿತಾಂಶದಲ್ಲಿ ಶೇ 93.60 ಫಲಿತಾಂಶದೊಂದಿಗೆ ಶ್ರೀನಿವಾಸಪುರ ದ್ವಿತೀಯ, ಶೇ 86.06 ಫಲಿತಾಂಶದೊಂದಿಗೆ ಮಾಲೂರು 47ನೇ ಸ್ಥಾನ, ಶೇ 83.83 ಫಲಿತಾಂಶದೊಂದಿಗೆ ಕೋಲಾರ 69ನೇ ಸ್ಥಾನ ಹಾಗೂ ಶೇ 78.48 ಫಲಿತಾಂಶ ಸಾಧನೆಯೊಂದಿಗೆ ಬಂಗಾರಪೇಟೆ 123ನೇ ಸ್ಥಾನ ಮತ್ತು ಶೇ 77.13 ಫಲಿತಾಂಶದೊಂದಿಗೆ ಮುಳಬಾಗಿಲು 134ನೇ ಸ್ಥಾನ ಪಡೆದಿವೆ.

ಜಿಲ್ಲೆಗೆ ಪ್ರಥಮ: ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗೌನಪಲ್ಲಿ ಗ್ರಾಮದ ಸಪ್ತಗಿರಿ ಶಾಲೆಯ ಬಿ.ಎಸ್.ಲಕ್ಷ್ಮೀಪತಿ 623 ಅಂಕ ಗಳಿಸಿ ರಾಜ್ಯದಲ್ಲಿ 3ನೇ ಸ್ಥಾನ ಹಾಗೂ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಅವರು ಇಂಗ್ಲಿಷ್‌ನಲ್ಲಿ 98 ಅಂಕ ಗಳಿಸಿದ್ದು, ಉಳಿದ ಎಲ್ಲಾ ವಿಷಯಗಳಲ್ಲೂ ಶೇ 100ರ ಸಾಧನೆ ಮಾಡಿದ್ದಾರೆ. ಕನ್ನಡ 125, ಹಿಂದಿ, ಸಮಾಜ ವಿಜ್ಞಾನ, ವಿಜ್ಞಾನ ಮತ್ತು ಗಣಿತದಲ್ಲಿ 100 ಅಂಕ ಪಡೆದಿದ್ದಾರೆ.

ಶ್ರೀನಿವಾಸಪುರ ತಾಲ್ಲೂಕಿನ ಬೈರಗಾನಹಳ್ಳಿಯ ರೈತ ಕುಟುಂಬದ ಸುರೇಶ್‌ಬಾಬು ಮತ್ತು ಕನಕಮ್ಮ ದಂಪತಿಯ ಮಗನಾದ ಲಕ್ಷ್ಮೀಪತಿ ಅವರ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.

ಕೋಲಾರ ನಗರದ ಚಿನ್ಮಯ ವಿದ್ಯಾಲಯದ ಎನ್.ಅಮೂಲ್ಯ ಮತ್ತು ಮುಳಬಾಗಿಲು ನಗರದ ಅಮರಜ್ಯೋತಿ ಶಾಲೆಯ ಎಂ.ನಂದಿನಿ 622 ಅಂಕಗಳ ಗಳಿಗೆ ರಾಜ್ಯದಲ್ಲಿ ನಾಲ್ಕನೇ ಸ್ಥಾನ ಹಾಗೂ ಜಿಲ್ಲೆಗೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಅಮೂಲ್ಯ ಕೋಲಾರ ತಾಲ್ಲೂಕಿನ ಮತ್ತಿಕುಂಟೆ ಗ್ರಾಮದ ರೈತ ನಾರಾಯಣಸ್ವಾಮಿ ಮತ್ತು ಅಮರಾವತಿ ದಂಪತಿಯ ಪುತ್ರಿ. ಅವರು ಕನ್ನಡದಲ್ಲಿ 125, ಇಂಗ್ಲಿಷ್, ಹಿಂದಿ, ಸಮಾಜ ವಿಜ್ಞಾನದಲ್ಲಿ ಶೇ 100ರ ಅಂಕ ಸಾಧನೆ ಮಾಡಿದ್ದು, ಗಣಿತದಲ್ಲಿ 98 ಮತ್ತು ವಿಜ್ಞಾನದಲ್ಲಿ 99 ಅಂಕ ಗಳಿಸಿದ್ದಾರೆ.

ಮುಳಬಾಗಿಲು ತಾಲ್ಲೂಕಿನ ಟಿ.ಗೊಲ್ಲಹಳ್ಳಿ ಗ್ರಾಮದ ಮುನಿರತ್ನಪ್ಪ ಮತ್ತು ಶ್ರೀದೇವಿ ದಂಪತಿಯ ಪುತ್ರಿಯಾದ ನಂದಿನಿ ಅವರು ಕನ್ನಡದಲ್ಲಿ 125, ಇಂಗ್ಲಿಷ್‌, ವಿಜ್ಞಾನ, ಸಮಾಜ ವಿಜ್ಞಾನದಲ್ಲಿ ಶೇ 100ರ ಸಾಧನೆ ಮಾಡಿದ್ದಾರೆ. ಹಿಂದಿಯಲ್ಲಿ 99 ಹಾಗೂ ಗಣಿತದಲ್ಲಿ 98 ಅಂಕ ಪಡೆದಿದ್ದಾರೆ.

ಸರ್ಕಾರಿ ಶಾಲೆಗಳ ಪೈಕಿ ಶ್ರೀನಿವಾಸಪುರ ತಾಲ್ಲೂಕಿನ ಗೌನಪಲ್ಲಿ ಗ್ರಾಮದ ಲಕ್ಷ್ಮೀ ಪಾಟೀಲ್ 606 ಅಂಕಗಳೊಂದಿಗೆ ಮೊದಲಿಗರಾಗಿದ್ದಾರೆ. ಅವರು ಕನ್ನಡದಲ್ಲಿ 123, ಇಂಗ್ಲಿಷ್ 97, ಹಿಂದಿ 98, ಗಣಿತ 95, ವಿಜ್ಞಾನ 94 ಮತ್ತು ಸಮಾಜ ವಿಜ್ಞಾನದಲ್ಲಿ 99 ಅಂಕ ಗಳಿಸಿದ್ದಾರೆ.

ಅಂಕಿ ಅಂಶ.....
* 14,890 ಮಂದಿ ಉತ್ತೀರ್ಣ
* ಶೇ 83.34 ಫಲಿತಾಂಶ ಸಾಧನೆ
* 69 ಶಾಲೆಗಳಿಗೆ ಶೇ 100 ಫಲಿತಾಂಶ

**
ಜಿಲ್ಲಾಧಿಕಾರಿ ಸತ್ಯವತಿ ಹಾಗೂ ಜಿಲ್ಲಾ ಪಂಚಾಯಿತಿ ನಿಕಟಪೂರ್ವ ಸಿಇಒ ಬಿ.ಬಿ.ಕಾವೇರಿ ಗುಣಾತ್ಮಕತೆಗೆ ಒತ್ತು ಕೊಡುವಂತೆ ಮಾರ್ಗದರ್ಶನ ನೀಡಿದರು. ಅವರ ಹಾಗೂ ಶಿಕ್ಷಕರ ಪರಿಶ್ರಮದಿಂದ ಈ ಬಾರಿ ಜಿಲ್ಲೆಯ ಎಸ್ಸೆಸ್ಸೆಲ್ಸಿ ಫಲಿತಾಂಶ 4.83ರಷ್ಟು ಏರಿಕೆಯಾಗಿದೆ
– ಸ್ವಾಮಿ, ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.