ADVERTISEMENT

ಜಿಲ್ಲೆಯಲ್ಲಿ ವ್ಯಾಪಕ ಬೆಂಬಲ: ಜನಜೀವನ ಅಸ್ತವ್ಯಸ್ತ

​ಪ್ರಜಾವಾಣಿ ವಾರ್ತೆ
Published 13 ಜೂನ್ 2017, 7:06 IST
Last Updated 13 ಜೂನ್ 2017, 7:06 IST
1) ಕೋಲಾರದಲ್ಲಿ ಸೋಮವಾರ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಸ್ಥಗಿತಗೊಂಡು ನಿಲ್ದಾಣ ಬಿಕೋ ಎನ್ನುತ್ತಿತ್ತು
1) ಕೋಲಾರದಲ್ಲಿ ಸೋಮವಾರ ಕೆಎಸ್‌ಆರ್‌ಟಿಸಿ ಬಸ್‌ ಸೇವೆ ಸ್ಥಗಿತಗೊಂಡು ನಿಲ್ದಾಣ ಬಿಕೋ ಎನ್ನುತ್ತಿತ್ತು   

ಕೋಲಾರ: ಬಯಲುಸೀಮೆ ಜಿಲ್ಲೆಗಳಲ್ಲಿ ಶಾಶ್ವತ ನೀರಾವರಿ ಯೋಜನೆ ಜಾರಿಗೆ ಒತ್ತಾಯಿಸಿ ಕನ್ನಡಪರ ಸಂಘಟನೆಗಳು ‘ಕರ್ನಾಟಕ ಬಂದ್’ಗೆ ಕರೆ ಕೊಟ್ಟಿದ್ದರಿಂದ ಜಿಲ್ಲೆಯಾದ್ಯಂತ ಸೋಮವಾರ ವಾಣಿಜ್ಯ ವಹಿವಾಟು ಹಾಗೂ ಬಸ್‌ ಸೇವೆ ಸ್ಥಗಿತಗೊಂಡು ಜನಜೀವನ ಅಸ್ತವ್ಯಸ್ತವಾಯಿತು.

ಬಂದ್‌ ಪ್ರಯುಕ್ತ ಇಡೀ ದಿನ ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಬಸ್‌ಗಳು ರಸ್ತೆಗೆ ಇಳಿಯಲೇ ಇಲ್ಲ. ಆಟೊ ಹಾಗೂ ಸರಕು ಸಾಗಣೆ ವಾಹನಗಳ ಸೇವೆಯಲ್ಲಿ ವ್ಯತ್ಯಯವಾಗಿ ಜನಜೀವನಕ್ಕೆ ತೀವ್ರ ತೊಂದರೆಯಾಯಿತು.

ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಹಾಗೂ ನೀರಾವರಿ ಹೋರಾಟ ಸಮಿತಿ ಸದಸ್ಯರು ಮುಂಜಾನೆ ಕೆಎಸ್‌ಆರ್‌ಟಿಸಿ ಡಿಪೊದಿಂದ ಹೊರ ಬರುತ್ತಿದ್ದ ಬಸ್‌ಗಳನ್ನು ಪ್ರವೇಶ ದ್ವಾರದಲ್ಲೇ ತಡೆದರು. ನಿಲ್ದಾಣದಲ್ಲಿ ಬಸ್‌ ಒಂದರ ಮೇಲೆ ಕಲ್ಲು ತೂರಿ ಗಾಜು ಜಖಂಗೊಳಿಸಿದರು ಮತ್ತು ಬಸ್‌ಗಳ ಚಕ್ರದ ಗಾಳಿ ತೆಗೆದರು. ಲಾರಿ, ಆಟೊ, ಖಾಸಗಿ ಬಸ್‌ಗಳನ್ನು ತಡೆದು ಬಂದ್‌ಗೆ ಬೆಂಬಲ ನೀಡುವಂತೆ ಒತ್ತಾಯಿಸುತ್ತಿದ್ದ ದೃಶ್ಯ ಹಲವೆಡೆ ಕಂಡುಬಂತು.

ADVERTISEMENT

ಹೊರ ಊರುಗಳಿಗೆ ಹೋಗಲು ಬಂದಿದ್ದ ಪ್ರಯಾಣಿಕರು ಗಂಟೆಗಟ್ಟಲೆ ಕೆಎಸ್‌ಆರ್‌ಟಿಸಿ ನಿಲ್ದಾಣದಲ್ಲಿ ಕಾದು ಕುಳಿತಿದ್ದರು. ರೋಗಿಗಳು ಹಾಗೂ ಅವರ ಕುಟುಂಬ ಸದಸ್ಯರಿಗೆ ಆಟೊಗಳು ಸಿಗದೆ ನಡೆದೇ ಆಸ್ಪತ್ರೆ ತಲುಪುವಂತಾಯಿತು. ಸರ್ಕಾರಿ ಕಚೇರಿಗಳಲ್ಲಿ ಸಿಬ್ಬಂದಿ ಹಾಜರಾತಿ ಕಡಿಮೆ ಇತ್ತು. ಆಸ್ಪತ್ರೆಗಳು ಮತ್ತು ಹಾಲು ಮಾರಾಟ ಮಳಿಗೆಗಳು ಮಾತ್ರ ಎಂದಿನಂತೆ ತೆರೆದಿದ್ದವು.

ಶಾಲಾ ಕಾಲೇಜಿಗೆ ರಜೆ: ಜಿಲ್ಲಾಡಳಿತವು ಖಾಸಗಿ ಹಾಗೂ ಸರ್ಕಾರಿ ಶಾಲಾ ಕಾಲೇಜುಗಳಿಗೆ ಮುಂಚೆಯೇ ರಜೆ ಘೋಷಿಸಿತ್ತು. ಹೀಗಾಗಿ ವಿದ್ಯಾರ್ಥಿಗಳು ಶಾಲಾ ಕಾಲೇಜುಗಳತ್ತ ಸುಳಿಯಲಿಲ್ಲ. ಮುನ್ನೆಚ್ಚರಿಕೆ ಕ್ರಮವಾಗಿ ಎಟಿಎಂ ಕೇಂದ್ರಗಳನ್ನು ಮುಚ್ಚಲಾಗಿತ್ತು. ಇದರಿಂದ ಗ್ರಾಹಕರು ತೊಂದರೆ ಅನುಭವಿಸಿದರು.

ನಗರದಲ್ಲಿ ಹಾಗೂ ಹೊರವಲಯದ ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬೈಕ್‌ ರ್‌್ಯಾಲಿ ಮತ್ತು ರಸ್ತೆ ತಡೆ ನಡೆಸಿದ ಸಂಘಟನೆಗಳ ಸದಸ್ಯರು, ‘ಬಯಲುಸೀಮೆ ಜಿಲ್ಲೆಗಳಲ್ಲಿ ಶಾಶ್ವತ ನೀರಾವರಿ ಯೋಜನೆ ಜಾರಿಗಾಗಿ ಕಳೆದೊಂದು ದಶಕದಿಂದ ಹೋರಾಟ ನಡೆಯುತ್ತಿದೆ. ಆದರೆ, ಯಾವುದೇ ರಾಜಕೀಯ ಪಕ್ಷ ಈ ಬೇಡಿಕೆಯನ್ನು ಗಂಭೀರವಾಗಿ ಪರಿಗಣಿಸಿಲ್ಲ. ಜನಪ್ರತಿನಿಧಿಗಳಿಗೆ ನೀರಿನ ಸಮಸ್ಯೆ ಪರಿಹರಿಸುವ ಇಚ್ಛಾಶಕ್ತಿ ಇಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಾರುಕಟ್ಟೆಯಲ್ಲಿ ಕ್ರಿಕೆಟ್‌: ಸದಾ ಜನ ಜಂಗುಳಿ ಮತ್ತು ವಾಹನ ದಟ್ಟಣೆಯಿಂದ ಗಿಜಿಗುಡುತ್ತಿದ್ದ ಮಾರುಕಟ್ಟೆಗಳು ಬಿಕೋ ಎನ್ನುತ್ತಿದ್ದವು. ಮಕ್ಕಳು ಮಾರುಕಟ್ಟೆ ಆವರಣದಲ್ಲೇ ಕ್ರಿಕೆಟ್‌ ಆಡಿ ಸಂಭ್ರಮಿಸಿದರು. ಪೆಟ್ರೋಲ್‌ ಬಂಕ್‌ಗಳು ಮುಚ್ಚಿದ್ದರಿಂದ ವಾಹನ ಸವಾರರು ಪೆಟ್ರೋಲ್‌ ಹಾಗೂ ಡೀಸೆಲ್‌ಗಾಗಿ ಬಂಕ್‌ನಿಂದ ಬಂಕ್‌ಗೆ ಅಲೆಯುವಂತಾಯಿತು.

ಪೊಲೀಸ್‌ ಬಂದೋಬಸ್ತ್‌: ಸರ್ಕಾರಿ ಕಚೇರಿಗಳು, ಬಸ್‌ ನಿಲ್ದಾಣ, ರೈಲು ನಿಲ್ದಾಣ, ಪ್ರಮುಖ ವೃತ್ತಗಳು, ರಸ್ತೆಗಳು ಹಾಗೂ ಸೂಕ್ಷ್ಮ ಪ್ರದೇಶಗಳಲ್ಲಿ ಬಿಗಿ ಪೊಲೀಸ್‌ ಬಂದೋಬಸ್ತ್‌ ಮಾಡಲಾಗಿತ್ತು. ಜತೆಗೆ ಪೊಲೀಸ್‌ ಗಸ್ತು ಹೆಚ್ಚಿಸಲಾಗಿತ್ತು. ಹಿರಿಯ ಪೊಲೀಸ್‌ ಅಧಿಕಾರಿಗಳು ನಿಯಮಿತವಾಗಿ ಗಸ್ತು ನಡೆಸುತ್ತಲೇ ಇದ್ದರು.

ನೀರಾವರಿ ಹೋರಾಟ ಸಮಿತಿ, ರೈತ ಸಂಘ ಮತ್ತು ಹಸಿರುಸೇನೆ, ಕರ್ನಾಟಕ ರಕ್ಷಣಾ ವೇದಿಕೆ (ನಾರಾಯಣಗೌಡ ಬಣ), ಜಯ ಕರ್ನಾಟಕ, ಜಿಲ್ಲಾ ಖಾಸಗಿ ಶಿಕ್ಷಣ ಸಂಸ್ಥೆಗಳ ಸಂಘ, ರೈತ ಸೇನೆ, ಅಂಗನವಾಡಿ ಕಾರ್ಯಕರ್ತರು ಮತ್ತು ಸಹಾಯಕಿಯರ ಕ್ಷೇಮಾಭಿವೃದ್ಧಿ ಸಂಘ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌, ಕರ್ನಾಟಕ ರಕ್ಷಣಾ ಸಮಿತಿ, ರೇಣುಕಾ ಯಲ್ಲಮ್ಮ ಅಭಿವೃದ್ಧಿ ಸಮಿತಿ ಸದಸ್ಯರು ಬಂದ್‌ಗೆ ಬೆಂಬಲ ಸೂಚಿಸಿದರು.

ಊಟ ಸವಿದ ಹೋರಾಟಗಾರರು
ಕೆಇಬಿ ಸಮುದಾಯ ಭವನ, ನಾರಾಯಣಿ ಮತ್ತು ಗೋಕುಲ್‌ ಕಲ್ಯಾಣ ಮಂಟಪದಲ್ಲಿ ಆಯೋಜನೆಯಾಗಿದ್ದ ಮದುವೆ ಸಮಾರಂಭಗಳಿಗೂ ಬಂದ್‌ನ ಬಿಸಿ ತಟ್ಟಿತು. ಬಸ್‌ ಸೇವೆ ಸ್ಥಗಿತಗೊಂಡಿದ್ದರಿಂದ ಮದುವೆಗೆ ನಿರೀಕ್ಷಿತ ಪ್ರಮಾಣದಲ್ಲಿ ಜನ ಬರಲಿಲ್ಲ. ಮದುವೆಗೆ ಮಾಡಿದ್ದ ಅಡುಗೆ ಹಾಗೆಯೇ ಉಳಿದಿತ್ತು. ಬಳಿಕ ನೀರಾವರಿ ಹೋರಾಟಗಾರರು, ರೈತ ಸಂಘ ಮತ್ತು ಹಸಿರು ಸೇನೆ ಸದಸ್ಯರು ಕಲ್ಯಾಣ ಮಂಟಪಗಳಿಗೆ ತೆರಳಿ ದಂಪತಿಗೆ ಶುಭ ಕೋರಿ ಊಟ ಸವಿದರು.

* * 

ಬಸ್‌ವೊಂದರ ಗಾಜು ಜಖಂಗೊಳಿಸಿರುವುದನ್ನು ಹೊರತುಪಡಿಸಿದರೆ ಬಂದ್‌ ಶಾಂತಿಯುತವಾಗಿ ನಡೆದಿದೆ. ಜನಜೀವನಕ್ಕೆ ಸ್ವಲ್ಪ ಮಟ್ಟಿಗೆ ತೊಂದರೆಯಾಗಿದೆ
ರೋಹಿಣಿ ಕಟೋಚ್‌ ಸೆಪಟ್‌
ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.