ADVERTISEMENT

ಜಿಲ್ಲೆಯ 68 ಪ್ರೌಢ ಶಾಲೆಗಳಿಗೆ ನೋಟಿಸ್‌

ಜೆ.ಆರ್.ಗಿರೀಶ್
Published 6 ಜೂನ್ 2017, 5:36 IST
Last Updated 6 ಜೂನ್ 2017, 5:36 IST
ಜಿಲ್ಲೆಯ 68 ಪ್ರೌಢ ಶಾಲೆಗಳಿಗೆ ನೋಟಿಸ್‌
ಜಿಲ್ಲೆಯ 68 ಪ್ರೌಢ ಶಾಲೆಗಳಿಗೆ ನೋಟಿಸ್‌   

ಕೋಲಾರ: 2016–17ನೇ ಶೈಕ್ಷಣಿಕ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ರಾಜ್ಯ ಮಟ್ಟದ ಸರಾಸರಿ ಫಲಿತಾಂಶಕ್ಕಿಂತ ಕಡಿಮೆ ಫಲಿತಾಂಶ ಸಾಧನೆ ಮಾಡಿರುವ ಜಿಲ್ಲೆಯ 68 ಪ್ರೌಢ ಶಾಲೆಗಳಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವ ಹಣಾಧಿಕಾರಿ (ಸಿಇಒ) ಬಿ.ಬಿ. ಕಾವೇರಿ ನೋಟಿಸ್‌ ಜಾರಿ ಮಾಡಿದ್ದಾರೆ.

ಈ ಬಾರಿ ರಾಜ್ಯ ಮಟ್ಟದ ಎಸ್ಸೆಸ್ಸೆಲ್ಸಿ ಸರಾಸರಿ ಫಲಿತಾಂಶ ಶೇ 67.87 ಇದೆ. ಜಿಲ್ಲೆಯ 29 ಸರ್ಕಾರಿ, 13 ಅನುದಾನಿತ ಹಾಗೂ 26 ಖಾಸಗಿ ಪ್ರೌಢ ಶಾಲೆಗಳಿಗೆ ಸರಾಸರಿಗಿಂತ ಕಡಿಮೆ ಫಲಿತಾಂಶ  ಇದೆ.

2015–16ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯು ಶೇ 78.57 ಫಲಿತಾಂಶ ಸಾಧನೆಯೊಂದಿಗೆ ರಾಜ್ಯ ಮಟ್ಟದಲ್ಲಿ 20ನೇ ಸ್ಥಾನದಲ್ಲಿತ್ತು. ಈ ಬಾರಿ ಜಿಲ್ಲೆಯು ಶೇ 78.51 ಫಲಿತಾಂಶ ಪಡೆಯುವುದರೊಂದಿಗೆ ರಾಜ್ಯ ಮಟ್ಟದಲ್ಲಿ 7ನೇ ಸ್ಥಾನಕ್ಕೆ ಏರಿದೆ.

ADVERTISEMENT

ಜಿಲ್ಲೆಯಿಂದ ಈ ಬಾರಿ ಪರೀಕ್ಷೆ ತೆಗೆದುಕೊಂಡಿದ್ದ 19,652 ವಿದ್ಯಾರ್ಥಿಗಳ ಪೈಕಿ 15,428 ಮಂದಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗೆ ಕುಳಿತಿದ್ದ 9,911 ಬಾಲಕರ ಪೈಕಿ 7,507 ಮಂದಿ ತೇರ್ಗಡೆಯಾಗಿದ್ದು, ಶೇ 75.74 ಫಲಿತಾಂಶ ಬಂದಿದೆ. ಅದೇ ರೀತಿ 9,741 ಬಾಲಕಿಯರ ಪೈಕಿ 7,921 ಮಂದಿ ಉತ್ತೀರ್ಣರಾಗಿದ್ದು, ಶೇ 81.32 ಫಲಿತಾಂಶ ಬಂದಿದೆ. ಇದರೊಂದಿಗೆ ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.

ನಗರ ಪ್ರದೇಶಕ್ಕೆ ಹೋಲಿಸಿದರೆ ಈ ಬಾರಿ ಗ್ರಾಮೀಣ ಭಾಗದಲ್ಲಿ ಫಲಿತಾಂಶ ಸಾಧನೆ ಉತ್ತಮವಾಗಿದೆ. ನಗರ ಪ್ರದೇಶದ ಫಲಿತಾಂಶ ಶೇ 70.98 ಇದ್ದರೆ ಗ್ರಾಮೀಣ ಭಾಗದಲ್ಲಿ ಶೇ 84.05 ಫಲಿತಾಂಶ ಬಂದಿದೆ. 2015–16ನೇ ಸಾಲಿನಲ್ಲಿ ನಗರ ಪ್ರದೇಶದ ಫಲಿತಾಂಶ ಶೇ 73.30 ಹಾಗೂ ಗ್ರಾಮೀಣ ಭಾಗದ ಫಲಿತಾಂಶ ಶೇ 82.39 ಇತ್ತು.

ಶಾಲಾವಾರು ಫಲಿತಾಂಶದಲ್ಲಿ ಖಾಸಗಿ ಶಾಲೆಗಳು ಶೇ 86.69 ಫಲಿತಾಂಶ ಪಡೆಯುವುದರೊಂದಿಗೆ ಮುಂದಿವೆ. ಆದರೆ, ಕಳೆದ ವರ್ಷಕ್ಕೆ ಹೋಲಿಸಿದರೆ ಖಾಸಗಿ ಶಾಲೆಗಳ ಫಲಿತಾಂಶ ಈ ಬಾರಿ ಶೇ 2.75ರಷ್ಟು ಕುಸಿದಿದೆ. ಅದೇ ರೀತಿ ಅನುದಾನಿತ ಶಾಲೆಗಳ ಫಲಿತಾಂಶ ಶೇ 0.26ರಷ್ಟು ಕಡಿಮೆಯಾಗಿದೆ. ಆದರೆ, ಸರ್ಕಾರಿ ಶಾಲೆಗಳ ಫಲಿತಾಂಶ ಶೇ 1.25ರಷ್ಟು ಏರಿಕೆಯಾಗಿದೆ. ಈ ಬಾರಿ ಅನುದಾನಿತ ಹಾಗೂ ಸರ್ಕಾರಿ ಶಾಲೆಗಳ ಫಲಿತಾಂಶ  ಶೇ 75.35 ಮತ್ತು ಶೇ 74.06 ಇದೆ.

ವಿವರಣೆಗೆ ನೋಟಿಸ್‌: ಕಳೆದ ವರ್ಷಕ್ಕೆ ಹೋಲಿಸಿದರೆ ಜಿಲ್ಲೆಯ ಒಟ್ಟಾರೆ ಫಲಿತಾಂಶದಲ್ಲಿ ಸ್ವಲ್ಪ ಇಳಿಕೆಯಾಗಿದ್ದರೂ ಜಿಲ್ಲಾವಾರು ಸಾಧನೆಯಲ್ಲಿ ಏಳನೇ ಸ್ಥಾನಕ್ಕೆ ಏರಿರುವುದು ತುಸು ಸಮಾಧಾನ ತಂದಿದೆ. ಆದರೆ, ಸರಾಸರಿಗಿಂತ ಕಡಿಮೆ ಫಲಿತಾಂಶ ಪಡೆದಿರುವುದನ್ನು ಸಿಇಒ ಕಾವೇರಿ ಗಂಭೀರವಾಗಿ ಪರಿಗಣಿಸಿದ್ದಾರೆ. ಫಲಿತಾಂಶ ಕುಸಿತಕ್ಕೆ ಕಾರಣವಾದ ಅಂಶಗಳ ಬಗ್ಗೆ ವಿವರಣೆ ಕೊಡುವಂತೆ ಶಾಲಾ ಮುಖ್ಯ ಶಿಕ್ಷಕರಿಗೆ ನೋಟಿಸ್‌ ಜಾರಿ ಮಾಡಿದ್ದಾರೆ. ಅಲ್ಲದೇ, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಫಲಿತಾಂಶ ಸುಧಾರಣೆಗೆ ಇಂದಿನಿಂದಲೇ ಸಿದ್ಧತೆ ನಡೆಸುವಂತೆ ಕಟ್ಟಪ್ಪಣೆ ಮಾಡಿದ್ದಾರೆ.

ಶಿಕ್ಷಕರಿಗೆ ಶಿಸ್ತುಕ್ರಮದ ಎಚ್ಚರಿಕೆ
ಶತಾಯಗತಾಯ ಎಸ್ಸೆಸ್ಸೆಲ್ಸಿ ಫಲಿತಾಂಶ ಹೆಚ್ಚಿಸಲೇಬೇಕೆಂದು ಪಣ ತೊಟ್ಟಿದ್ದ ಸಿಇಒ ಶೈಕ್ಷಣಿಕ ವರ್ಷದ ಆರಂಭದಿಂದಲೇ ನಿಯಮಿತ ವಾಗಿ ಮುಖ್ಯ ಶಿಕ್ಷಕರ ಮತ್ತು ಶಿಕ್ಷಕರ ಸಭೆ ನಡೆಸಿ ಫಲಿತಾಂಶ ಸುಧಾರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಲಹೆ ಸೂಚನೆ ನೀಡಿದ್ದರು. ಫಲಿತಾಂಶ ಕುಸಿದರೆ ಆಯಾ ಶಾಲೆಯ ಮುಖ್ಯ ಶಿಕ್ಷಕರು ಮತ್ತು ವಿಷಯದ ಶಿಕ್ಷಕರನ್ನೇ ಹೊಣೆಗಾರರನ್ನಾಗಿ ಮಾಡಿ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದರು.

ಫಲಿತಾಂಶ ಹಿನ್ನಡೆಗೆ ಜೂನಿಯರ್ ಕಾಲೇಜುಗಳ ಫಲಿತಾಂಶ ಕುಸಿತವೇ ಕಾರಣ ಎಂಬ ಕಾರಣಕ್ಕೆ ಪರೀಕ್ಷೆಗೆ 2 ತಿಂಗಳು ಮುನ್ನ ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಉಪ ಪ್ರಾಂಶುಪಾಲರು ಮತ್ತು ಶಿಕ್ಷಕರ ಸಭೆ ನಡೆಸಿ ಮಾರ್ಗದರ್ಶನ ನೀಡಿದ್ದರು.

ಪ್ರಶಂಸನಾ ಪತ್ರ
ಜಿಲ್ಲೆಯ 9 ಸರ್ಕಾರಿ, 1 ಅನುದಾನಿತ ಮತ್ತು 31 ಖಾಸಗಿ ಶಾಲೆಗಳು ಈ ಬಾರಿ ಶೇ 100ರ ಫಲಿತಾಂಶ ಸಾಧನೆ ಮಾಡಿವೆ. ಈ ಶಾಲೆಗಳ ಮುಖ್ಯೋಪಾಧ್ಯಾಯರು ಮತ್ತು ಶಿಕ್ಷಕರಿಗೆ ಜಿಲ್ಲಾ ಪಂಚಾಯಿತಿ ಸಿಇಒ ಪ್ರಶಂಸನಾ ಪತ್ರ ನೀಡಿದ್ದಾರೆ.

ಇದಲ್ಲದೆ, ಈ ಶಾಲೆಗಳಲ್ಲಿ ಫಲಿತಾಂಶ ಸುಧಾರಣೆಗೆ ಅನುಸರಿಸಿದ ಕ್ರಮಗಳನ್ನು ಇತರೆ ಶಾಲೆಗಳಲ್ಲೂ ಅಳವಡಿಸಿಕೊಳ್ಳುವಂತೆ ಸೂಚನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.