ADVERTISEMENT

ಜೀವವಿಲ್ಲದ ಸಂಶೋಧನೆ: ವಿಷಾದ

​ಪ್ರಜಾವಾಣಿ ವಾರ್ತೆ
Published 23 ಮೇ 2014, 8:50 IST
Last Updated 23 ಮೇ 2014, 8:50 IST
ಕೋಲಾರದ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌  ಜಯಂತಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಅಂಬೇಡ್ಕರ್ ಮತ್ತು ಬುದ್ಧ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ರವೀಂದ್ರ ಡಿ.ಗಡ್ಕರ್‌ ಮಾತನಾಡಿದರು. ಲೇಖಕ ಗೊಲ್ಲಳ್ಳಿ ಶಿವಪ್ರಸಾದ್‌, ಕೇಂದ್ರದ ನಿರ್ದೇಶಕ ಡಾ.ಸಿ.ನಾಗಭೂಷಣ ಮತ್ತು ಡಾ.ಪಿ.ಸಿ.ಕೃಷ್ಣಸ್ವಾಮಿ ಇದ್ದಾರೆ.
ಕೋಲಾರದ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದಲ್ಲಿ ಗುರುವಾರ ಏರ್ಪಡಿಸಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿಯಲ್ಲಿ ಕುವೆಂಪು ವಿಶ್ವವಿದ್ಯಾಲಯದ ಅಂಬೇಡ್ಕರ್ ಮತ್ತು ಬುದ್ಧ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ರವೀಂದ್ರ ಡಿ.ಗಡ್ಕರ್‌ ಮಾತನಾಡಿದರು. ಲೇಖಕ ಗೊಲ್ಲಳ್ಳಿ ಶಿವಪ್ರಸಾದ್‌, ಕೇಂದ್ರದ ನಿರ್ದೇಶಕ ಡಾ.ಸಿ.ನಾಗಭೂಷಣ ಮತ್ತು ಡಾ.ಪಿ.ಸಿ.ಕೃಷ್ಣಸ್ವಾಮಿ ಇದ್ದಾರೆ.   

ಕೋಲಾರ: ಇಂದಿನ ಸಂಶೋಧನೆಗಳು ಸಮಕಾಲೀನ ಆಗು ಹೋಗುಗಳಿಗೆ ಸ್ಪಂದಿ­ಸುವ ಜೀವಂತಿಕೆಯೇ ಇಲ್ಲದೆ ಯಾಂತ್ರಿಕವಾಗಿ ನಡೆಯುತ್ತಿವೆ ಎಂದು ಕುವೆಂಪು ವಿಶ್ವವಿದ್ಯಾಲಯದ ಅಂಬೇಡ್ಕರ್ ಮತ್ತು ಬುದ್ಧ ಅಧ್ಯಯನ ಕೇಂದ್ರದ ನಿರ್ದೇಶಕ ಪ್ರೊ.ರವೀಂದ್ರ ಡಿ.ಗಡ್ಕರ್‌ ವಿಷಾದಿಸಿದರು.

ನಗರ ಹೊರವಲಯದ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರ­ದಲ್ಲಿ ಗುರುವಾರ ಏರ್ಪಡಿಸಿದ್ದ ಡಾ.ಬಿ.ಆರ್‌.ಅಂಬೇಡ್ಕರ್‌ ಜಯಂತಿ­ಯಲ್ಲಿ ಮಾತನಾಡಿದರು. ಜ್ಞಾನ ಕ್ಷೇತ್ರಕ್ಕೆ ಸಂಶೋಧನೆಗಳ ಕೊಡುಗೆ ಕಡಿಮೆ­ಯಾಗಿದೆ. ತತ್ವಗಳನ್ನು ಕಟ್ಟುವ ಕೆಲಸ ಸಂಶೋಧನೆಗಳಿಂದ ನಡೆಯುತ್ತಿಲ್ಲ. ಹೀಗಾಗಿಯೇ ಸಂಶೋಧನೆಗಳು ಮಂಡಿ­ಸುವ ಸತ್ಯಗಳು ಕೂಡ ಮಹತ್ವವಲ್ಲದ ಕಾರಣಕ್ಕೆ ಮೂಲೆ ಸೇರುತ್ತಿವೆ ಎಂದು ವಿಶ್ಲೇಷಿಸಿದರು.

ಸಂಶೋಧನೆಗಳನ್ನು ಆಧರಿಸಿ ಸಮಕಾಲೀನ ಸಂದರ್ಭದಲ್ಲಿ ಪ್ರಮುಖ ನಿರ್ಣಯಗಳನ್ನು ಕೈಗೊಳ್ಳಬಹುದಾದ ಸನ್ನಿವೇಶಗಳು ನಿರ್ಮಾಣವಾಗಬೇಕು. ಆದರೆ ಅಂಥ ನಿರ್ಣಯಗಳಿಗೆ ಪೂರಕ­ವಾದ ಘನತೆಯನ್ನು ಸಂಶೋಧನೆಗಳು ಒಳಗೊಳ್ಳುತ್ತಿಲ್ಲ. ಪ್ರಭಾವ, ಪರಿಣಾಮ­ಗಳನ್ನು ಬೀರುವ ಸಂಶೋಧನೆಗಳು ಅತಿ ಕಡಿಮೆ ಎಂದರು.

ಬುದ್ಧ, ಅಂಬೇಡ್ಕರರು ಜ್ಞಾನದ ಸಂಕೇತಗಳಾಗಿ ಉಳಿದಿದ್ದಾರೆ. ಆದರೆ ಅವರ ಕಾಲದಲ್ಲಿ ಅವರು ಕೈಗೊಂಡ ಸುಧಾರಣೆ ಕೆಲಸ ಬೇರೆ ರೀತಿಯಲ್ಲಿ ಇಂದು ಆಗಬೇಕಾಗಿದೆ. ಆದರೆ ಆ ಕಡೆಗೆ ಸಂಶೋಧನೆಗಳು ಗಮನ ಹರಿಸಿಲ್ಲ ಎಂದರು.

ನಿರ್ಲಿಪ್ತ: ಅಸಮಾನತೆ ಎಲ್ಲೆಲ್ಲೂ ಮಿತಿ ಮೀರಿದೆ. ಲಿಂಗ ತಾರತಮ್ಯ, ಜಾತಿ ತಾರ­ತಮ್ಯ, ವರ್ಗತಾರತಮ್ಯಗಳು ತಾಂಡವ­ವಾಡುತ್ತಿವೆ. ಆದರೂ ದೇಶದ ಜನ ನಿರ್ಲಿಪ್ತರಾಗಿರುವುದನ್ನೇ ಅಭ್ಯಾಸ ಮಾಡಿಕೊಂಡಿದ್ದಾರೆ. ಪ್ರತಿಕ್ರಿಯಿಸುವ, ಪ್ರತಿಭಟಿಸುವ ಮನೋಧರ್ಮವನ್ನು ಸಂಕೇತಿಸುವ ಅಂಬೇಡ್ಕರ್‌ ಅವರು ಹಿಂದೆಂದಿಗಿಂತಲೂ ಇಂದು ಹೆಚ್ಚು ಪ್ರಸ್ತುತರಾಗಿ ಕಾಣುತ್ತಾರೆ ಎಂದರು.

ಬೆಂಗಳೂರು ವಿಶ್ವವಿದ್ಯಾಲಯ ಪರಿಶಿಷ್ಟ ಜಾತಿ ಮತ್ತು ಪಂಗಡ ಘಟಕದ ವಿಶೇಷಾಧಿಕಾರಿ ಡಾ.ಪಿ.ಸಿ.ಕೃಷ್ಣಸ್ವಾಮಿ ಮತ್ತು ಲೇಖಕ ಗೊಲ್ಲಳ್ಳಿ ಶಿವಪ್ರಸಾದ್‌ ಮಾತನಾಡಿದರು. ಕೇಂದ್ರದ ನಿರ್ದೇಶಕ ಡಾ.ಸಿ.ನಾಗಭೂಷಣ ಅಧ್ಯಕ್ಷತೆ ವಹಿಸಿದ್ದರು.

‘ಚಿಂತಿಸುವವರು ತಿರಸ್ಕೃತ’
ತಾವು ಜೀವಿಸುವ ಕಾಲಘಟ್ಟ­ಕ್ಕಿಂತಲೂ ಮುಂದೆ ಹೋಗಿ ಚಿಂತಿ­ಸು­ವ­ವರೆಲ್ಲರೂ ಆ ಕಾಲದ ಜನ­ರಿಂದ ತಿರಸ್ಕಾರಕ್ಕೆ ಒಳ­ಗಾಗು­ತ್ತಾರೆ. ಸೋಲು­ತ್ತಾರೆ. ಅಂಬೇಡ್ಕರ್‌ ಕೂಡ ಎಲ್ಲ ವಿಷಯಗಳಲ್ಲೂ ಸೋತಿ­ದ್ದರು. ಆದರೆ ಅವರ ಮಹತ್ವ ಇಂದು ನಮಗೆ ಗೊತ್ತಾಗಿದೆ ಎಂದು ಪ್ರೊ.ರವೀಂದ್ರ ಡಿ.ಗಡ್ಕರ್‌ ತಿಳಿಸಿದರು.

ದೇವಾಲಯವನ್ನು ಪ್ರವೇಶಿಸಿ­ಬಿಟ್ಟರೆ ದಲಿತರು ಉದ್ಧಾರವಾಗಿ­ಬಿಡುತ್ತಾರೆ ಎಂದೇನೂ ಅಂಬೇ­ಡ್ಕರ್‌ ಭಾವಿಸಿರಲಿಲ್ಲ. ಆದರೆ ಸಾರ್ವಜನಿಕ ಪೂಜಾ ಕೇಂದ್ರ­ವಾದ ದೇವಾಲಯಗಳಿಗೆ ಪ್ರವೇಶಿಸುವ ಸಾಮಾಜಿಕ ಹಕ್ಕು ಇತರರಂತೆಯೇ ದಲಿತರಿಗೂ ಇರಬೇಕು ಎಂಬುದು ಅವರ ಪ್ರತಿಪಾದನೆಯಾಗಿತ್ತು. ಅದ­ಕ್ಕಾಗಿ ಅವರು ಹೋರಾಟ ರೂಪಿಸಿದರು ಎಂದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.