ADVERTISEMENT

ಟೀಕಾಕಾರರಿಗೆ ಉತ್ತರಿಸುವ ಅಗತ್ಯವಿಲ್ಲ

ಮದನಹಳ್ಳಿ ಕ್ರಾಸ್‌ ಆರೋಗ್ಯ ಕೇಂದ್ರ ಉದ್ಘಾಟನೆ; ರಮೇಶ್ ಕುಮಾರ್ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2018, 9:23 IST
Last Updated 8 ಮಾರ್ಚ್ 2018, 9:23 IST

ಕೋಲಾರ: ‘ಸರ್ಕಾರದ ಯೋಜನೆಗಳು ಸಮರ್ಪಕವಾಗಿ ಜಾರಿಯಾಗಿ ಜನರಿಗೆ ತೃಪ್ತಿಯಾದರೆ ಸಾಕು. ಟೀಕಾಕಾರರಿಗೆ ಉತ್ತರಿಸುವ ಅಗತ್ಯವಿಲ್ಲ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್‌ಕುಮಾರ್ ಹೇಳಿದರು.

ತಾಲ್ಲೂಕಿನ ಮದನಹಳ್ಳಿ ಕ್ರಾಸ್‌ನಲ್ಲಿ ಬುಧವಾರ ನೂತನ ಪ್ರಾಥಮಿಕ ಆರೋಗ್ಯ ಕೇಂದ್ರ ಉದ್ಘಾಟಿಸಿ ಮಾತನಾಡಿ, ಎಲ್ಲಾ ಜನರಿಗೂ ಉತ್ತಮ ಆರೋಗ್ಯ ಸೇವೆ ಕಲ್ಪಿಸುವ ಜವಾಬ್ದಾರಿಯಿಂದ ಸರ್ಕಾರ ಆರೋಗ್ಯ ಕರ್ನಾಟಕ ಯೋಜನೆ ಜಾರಿಗೊಳಿಸಿದೆ. ಜನ ಈ ಯೋಜನೆಯ ಸದುಪಯೋಗ ಪಡೆಯಬೇಕು ಎಂದರು.

ಆರೋಗ್ಯ ಕರ್ನಾಟಕ ಯೋಜನೆಯಡಿ ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲಾ ರೀತಿಯ ಚಿಕಿತ್ಸೆಗಳನ್ನು ಉಚಿತವಾಗಿ ನೀಡಲಾಗುವುದು. ಚಿಕಿತ್ಸೆ ಲಭ್ಯವಿಲ್ಲದಿದ್ದರೆ ಖಾಸಗಿ ಆಸ್ಪತ್ರೆಗೆ ತೆರಳಲು ವೈದ್ಯರು ಚೀಟಿ ಬರೆದು ಕೊಡುತ್ತಾರೆ. ಖಾಸಗಿ ಆಸ್ಪತ್ರೆಯಲ್ಲೂ ಉಚಿತ ಚಿಕಿತ್ಸೆ ಪಡೆಯಬಹುದು. ಸರ್ಕಾರ ವೈದ್ಯಕೀಯ ವೆಚ್ಚ ಭರಿಸುತ್ತದೆ ಎಂದು ವಿವರಿಸಿದರು.

ADVERTISEMENT

ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ ಕಾಯ್ದೆ (ಕೆಪಿಎಂಇ) ಅನ್ವಯ ರಾಜ್ಯದ ಎಲ್ಲಾ ಖಾಸಗಿ ಆಸ್ಪತ್ರೆಗಳಲ್ಲಿ ಕಡ್ಡಾಯವಾಗಿ ಚಿಕಿತ್ಸೆಯ ದರಪಟ್ಟಿಯ ಫಲಕ ಹಾಕಬೇಕು. ಸಚಿವನಾಗಿ 20 ತಿಂಗಳು ಕಾರ್ಯ ನಿರ್ವಹಿಸುವ ಅವಕಾಶ ತನಗೆ ಸಿಕ್ಕಿದೆ. ಆರೋಗ್ಯ ಕೇಂದ್ರ ತೆರೆಯುವ ಮೂಲಕ ಈ ಭಾಗದ ಜನರ ಋಣ ತೀರಿಸುವ ಕೆಲಸವನ್ನು ಭಯ ಭಕ್ತಿಯಿಂದ ಮಾಡಿದ್ದೇನೆ ಎಂದು ತಿಳಿಸಿದರು.

ಸಂಕಷ್ಟ ತಪ್ಪಿದೆ: ಜಿಲ್ಲೆಗೆ ಹೊಸದಾಗಿ ಮಂಜೂರಾಗಿರುವ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಪೈಕಿ ಮದನಹಳ್ಳಿ ಕ್ರಾಸ್‌ನ ಆಸ್ಪತ್ರೆಯೂ ಒಂದು ಎಂದು ಅವರು ಹೇಳಿದರು.

ಆಸ್ಪತ್ರೆಯ ಆರಂಭದಿಂದ ಈ ಭಾಗದ ಜನರಿಗೆ ಚಿಕಿತ್ಸೆಗಾಗಿ ಕುರುಬೂರು, ಸುಗಟೂರು, ಕೋಲಾರಕ್ಕೆ ಹೋಗುವ ಸಂಕಷ್ಟ ತಪ್ಪಿದೆ. ಪ್ರಸ್ತುತ ವೈದ್ಯರು, ಶುಶ್ರೂಷಕಿಯರು, ಡಿ ಗ್ರೂಪ್ ನೌಕರರನ್ನು ನೇಮಿಸಲಾಗಿದೆ. ಮುಂದಿನ ದಿನಗಳಲ್ಲಿ ಪೂರ್ಣ ಪ್ರಮಾಣದ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ಎನ್.ವಿಜಯ್‌ಕುಮಾರ್ ವಿವರಿಸಿದರು.

ಕೋಚಿಮುಲ್ ಅಧ್ಯಕ್ಷ ಎನ್.ಜಿ.ಬ್ಯಾಟಪ್ಪ, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ನಂಜುಂಡಪ್ಪ, ತಾಲ್ಲೂಕು ಪಂಚಾಯಿತಿ ಸದಸ್ಯೆ ಪದ್ಮಾವತಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಲ್.ಅನಿಲ್‌ಕುಮಾರ್, ಉಪಾ ಧ್ಯಕ್ಷ ವಿ.ವೆಂಕಟಮುನಿಯಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶಾಂತಮ್ಮ, ಉಪಾಧ್ಯಕ್ಷ ಗೋಪಾಲರೆಡ್ಡಿ, ಲೋಕೋಪಯೋಗಿ ಇಲಾಖೆ ಕಾರ್ಯ ನಿರ್ವಾಹಕ ಎಂಜಿನಿಯರ್ ಮುನಿಆಂಜಪ್ಪ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವಸಂತಕುಮಾರ್, ಎಪಿಎಂಸಿ ಸದಸ್ಯ ವೆಂಕಟೇಶಪ್ಪ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.