ಕೋಲಾರ: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ, ಹೆಚ್ಚು ಜನ-ವಾಹನ ದಟ್ಟಣೆಯುಳ್ಳ ನಗರದ ಕೋಲಾರ-ಟೇಕಲ್ ರಸ್ತೆ ವಿಸ್ತರಣೆಗೆ ಕೊನೆಗೂ ಸೋಮವಾರ ಚಾಲನೆ ದೊರೆತಿದ್ದು, ರಸ್ತೆ ಬದಿ ಮರಗಳನ್ನು ಕಡಿಯುವ ಕೆಲಸ ಶುರುವಾಯಿತು. ಅದರ ಬೆನ್ನಿಗೇ ವಿಸ್ತರಣೆ ಸಂಬಂಧ ಹಲವು ಅನುಮಾನಗಳೂ ವ್ಯಕ್ತವಾಗಿವೆ.
ವೇಣುಗೋಪಾಲಸ್ವಾಮಿ ಪುಷ್ಕರಣಿ ವೃತ್ತದಿಂದ ರಾಜ್ಯ ಬೀಜ ನಿಗಮದವರೆಗೆ ರೈಲ್ವೆ ಮೇಲುಸೇತುವೆ ನಿರ್ಮಾಣ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಅಲ್ಲಿಂದ ಮುಂದಕ್ಕೆ ಇರುವ ಮರಗಳನ್ನು ಕಡಿಯುವ ಕೆಲಸವನ್ನು ಆರಂಭಿಸಲಾಗಿದೆ.
ರೂ. 27 ಕೋಟಿ ವೆಚ್ಚದಲ್ಲಿ ಕೊತ್ತಪಲ್ಲಿ-ಮಾಸ್ತಿ ನಡುವಿನ ರಾಜ್ಯ ಪ್ರಮುಖ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಅಡಿಯಲ್ಲಿ ರಸ್ತೆ ವಿಸ್ತರಣೆ ನಡೆಸಲಾಗುತ್ತಿದೆ. ಆ ಮೂಲಕ ಕೋಲಾರ, ಶ್ರೀನಿವಾಸಪುರ ಮತ್ತು ಮಾಲೂರು ತಾಲ್ಲೂಕುಗಳ ಪ್ರಮುಖ ಜಿಲ್ಲಾ ರಸ್ತೆಗಳ ಅಭಿವೃದ್ಧಿ ಕಾಮಗಾರಿಯೂ ನಡೆಯಲಿದೆ. ಆ ಪ್ರಯುಕ್ತ ಕಳೆದ ವರ್ಷವೇ ಶುರುವಾಗಬೇಕಿದ್ದ, ನಗರದ ವೇಣುಗೋಪಾಲಸ್ವಾಮಿ ಪುಷ್ಕರಣಿಯಿಂದ ಟೇಕಲ್ ಬೈಪಾಸ್‌ವರೆಗೂ ರಸ್ತೆ ವಿಸ್ತರಣೆ ನಡೆದಿರಲಿಲ್ಲ. ಈ ಬಗ್ಗೆ ಆಕ್ಷೇಪ, ಅಸಮಾಧಾನಗಳೂ ಸಾರ್ವಜನಿಕರಿಂದ ವ್ಯಕ್ತವಾಗಿತ್ತು.
ಚೌಕಾಶಿ: ಲೋಕೋಪಯೋಗಿ ಇಲಾಖೆ ಮೂಲಗಳ ಪ್ರಕಾರ, ಜಿಲ್ಲಾ ಮುಖ್ಯ ರಸ್ತೆಗಳು (ಎಂಡಿಆರ್-ಮೇಜರ್ ಡಿಸ್ಟ್ರಿಕ್ಟ್ ರೋಡ್) ಮಧ್ಯಭಾಗದಿಂದ ಎರಡೂ ಬದಿಗೆ 40 ಅಡಿ ಅಗಲವಿರಬೇಕು. ಅಂದರೆ ಒಟ್ಟಾರೆ ರಸ್ತೆಯ 80 ಅಡಿ ಅಗಲ ಇರಬೇಕು. ಆದರೆ ಈ ರಸ್ತೆ ವಿಸ್ತರಣೆ ಸಂದರ್ಭದಲ್ಲಿ ಈ ಅಳತೆಯನ್ನು ಮಾನದಂಡವನ್ನಾಗಿಸಿಕೊಳ್ಳದೆ ಚೌಕಾಶಿ ಮಾಡಲಾಗಿದೆ ಎಂದು ಇಲಾಖೆ ಸಿಬ್ಬಂದಿಯೇ ಹೇಳುತ್ತಾರೆ.
ರಸ್ತೆ ಮಧ್ಯದಿಂದ ಕೇವಲ 20-25 ಅಡಿಯಷ್ಟು ಮಾತ್ರ ಎರಡೂ ಬದಿ ವಿಸ್ತರಣೆ ಮಾಡಲಾಗುತ್ತಿದೆ. ಅಂದರೆ ಸುಮರು 50 ಅಡಿಯಷ್ಟು ಮಾತ್ರ ರಸ್ತೆ ನಿರ್ಮಾಣವಾಗಲಿದೆ. ಇದು ಜಿಲ್ಲಾ ಪ್ರಮುಖ ರಸ್ತೆ ಮಾನದಂಡಕ್ಕೆ ವಿರುದ್ಧವಾಗಿದೆ ಎಂಬುದು ಅವರ ಅಭಿಪ್ರಾಯ.
ತಾರತಮ್ಯ: ರಸ್ತೆ ವಿಸ್ತರಣೆ ಸಲುವಾಗಿ ಕಡಿಯಬೇಕಾದ ಮರಗಳ ಆಯ್ಕೆಯಲ್ಲೂ ರಾಜಕೀಯ ನಡೆದಿದೆ ಎಂಬ ಆರೋಪವೂ ಕೇಳಿಬಂದಿದೆ.
ಕೆಲವರ ಕಟ್ಟಡಗಳನ್ನು ರಕ್ಷಿಸುವ ಸಲುವಾಗಿಯೇ ಕೆಲವು ಮರಗಳನ್ನು ಕಡಿಯುವ ಪ್ರಸ್ತಾವ ಕೈಬಿಡಲಾಗಿದೆ. ವಾಹನ ದಟ್ಟಣೆ ಹೆಚ್ಚಿರುವ ಸಂದರ್ಭಗಳಲ್ಲಿ, ಮಿನಿ ಹೋಟೆಲ್ ಮುಂಭಾಗವಿರುವ ಬೃಹತ್ ಮರಕ್ಕೆ ಹಲವು ಬಾರಿ ಲಾರಿ, ಬಸ್‌ಗಳು ತಗುಲಿ ಹಾನಿಯಾಗಿದೆ.
ಮುಂದೆಯೂ ಆ ಮರದಿಂದ ವಾಹನಗಳಿಗೆ, ವಾಹನ ಸಂಚಾರಕ್ಕೆ ಅಡಚಣೆಯುಂಟಾಗುತ್ತದೆ. ಆದರೆ ವಾಸ್ತವ ಮರೆಮಾಚಿ, ಆ ಮರವನ್ನು ಕಡಿಯದಿರಲು ನಿರ್ಧರಿಸಲಾಗಿದೆ ಎಂದು ನಿವಾಸಿಯೊಬ್ಬರು ದೂರುತ್ತಾರೆ. ಈ ರಸ್ತೆಯಲ್ಲಿರುವ ಮರಗಳ ಪೈಕಿ 16 ಮರಗಳನ್ನು ಕಡಿಯಲು ನಿರ್ಧರಿಸಲಾಗಿದೆ ಎಂದು ತಿಳಿದುಬಂದಿದೆ.
ಒತ್ತಡ: ಜಿಲ್ಲಾ ಪ್ರಮುಖ ರಸ್ತೆ ವಿಸ್ತರಣೆ ಮಾನದಂಡವನ್ನು ಸಮರ್ಪಕ ರೀತಿಯಲ್ಲಿ ಅನುಸರಿಸದಿರುವುದು, ಮರಗಳ ಆಯ್ಕೆಯಲ್ಲಿ ತಾರತಮ್ಯ ಮಾಡಿರುವುದು ಹಲವು ಅನುಮಾನಗಳಿಗೆ ಈಡು ಮಾಡಿದೆ. ರಸ್ತೆಯಲ್ಲಿ ಕೆಲವು ಪ್ರಭಾವಿಗಳು ಒತ್ತುವರಿ ಮಾಡಿ ಕಟ್ಟಡಗಳನ್ನು ನಿರ್ಮಿಸಿರುವುದು ಮತ್ತು ಅವುಗಳನ್ನು ವಿಸ್ತರಣೆ ಸಲುವಾಗಿ ಕೆಡವದಂತೆ ಅಧಿಕಾರಿಗಳ ಮೇಲೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.
ಈ ಹಿಂದೆಯೂ ರಸ್ತೆ ವಿಸ್ತರಣೆ ಸಂಬಂಧ ಮರಗಳನ್ನು ಕಡಿಯಲು ಮುಂದಾದ ಸಂದರ್ಭದಲ್ಲಿ ತಮ್ಮ ಕಟ್ಟಡಗಳನ್ನು ರಕ್ಷಿಸಿಕೊಳ್ಳುವ ಸಲುವಾಗಿ, ಕೆಲವರು ಪರಿಸರಕ್ಕೆ ಹಾನಿಯಾಗುತ್ತದೆ ಎಂಬ ನೆಪ ಒಡ್ಡಿ ವಿಸ್ತರಣೆ ಕಾರ್ಯ ಶುರುವಾಗದಂತೆ ಪ್ರತಿಭಟಿಸಿದ್ದರು.
ಆದರೆ, ಸೋಮವಾರ ಮರ ಕಡಿಯುವ ಕೆಲಸ ಶುರುವಾದಾಗ ಯಾವುದೇ ಪ್ರತಿಭಟನೆ ವ್ಯಕ್ತವಾಗಲಿಲ್ಲ. ಮರಗಳನ್ನು ಕಡಿಯುತ್ತಿದ್ದರಿಂದ ಈ ರಸ್ತೆಯಲ್ಲಿ ವಾಹನ ಸಂಚಾರ ಪೂರ್ಣ ನಿರ್ಬಂಧಿಸಲಾಗಿತ್ತು.
ಅಸಹಕಾರ: ರಸ್ತೆ ವಿಸ್ತರಣೆ ವಿಳಂಬವಾಗಲು ಸ್ಥಳೀಯರ ವಿರೋಧವಷ್ಟೇ ಅಲ್ಲ, ಇಲಾಖೆಗಳ ನಡುವಿನ ಅಸಹಕಾರ ಮನೋಭಾವವೂ ಕಾರಣ ಎಂಬುದು ಲೋಕೋಪಯೋಗಿ ಇಲಾಖೆ ಸಿಬ್ಬಂದಿ ಆರೋಪ.
ವಿಸ್ತರಣೆಯಾಗುತ್ತಿರುವ ರಸ್ತೆಯ ಪ್ರದೇಶವು ನಗರ ಸಭೆ ವ್ಯಾಪ್ತಿಯಲ್ಲಿದೆ. ವಿಸ್ತರಣೆ ಸಲುವಾಗಿ ಈ ಪ್ರದೇಶದ ಕೆಲವು ಬಡಾವಣೆಗಳಿಗೆ ರಸ್ತೆ ಸಂಪರ್ಕ ಕಲ್ಪಿಸಬೇಕಾಗುತ್ತದೆ. ಆ ಬಗ್ಗೆ ಮಾಹಿತಿ ನೀಡುವಂತೆ ನಗರಸಭೆಗೆ ಹಲವು ಬಾರಿ ಪತ್ರ ಬರೆದರೂ ಪ್ರಯೋಜನವಾಗಿಲ್ಲ ಎನ್ನುತ್ತವೆ ಇಲಾಖೆ ಮೂಲಗಳು.
ರಸ್ತೆ ವಿಸ್ತರಣೆ ಕಾರ್ಯ ಕೊನೆಗೂ ಶುರುವಾಗಿರುವುದು ಸಂತಸದ ವಿಚಾರವೇ. ಆದರೆ ಜಿಲ್ಲಾ ಹೆದ್ದಾರಿಯನ್ನು ಹೇಗೆ ಅಭಿವೃದ್ಧಿ ಪಡಿಸಬೇಕೋ ಅದೇ ರೀತಿ ಅಭಿವೃದ್ಧಿಪಡಿಸಬೇಕು. ಯಾರನ್ನೋ ಮೆಚ್ಚಿಸಲು, ಯಾರದೋ ಮುಲಾಜಿಗೆ ಸಿಲುಕಿ ವಿಸ್ತರಣೆಯಲ್ಲಿ ತಾರತಮ್ಯ ಮಾಡಬಾರದು ಎನ್ನುತ್ತಾರೆ ಜಯನಗರ ನಿವಾಸಿಯೊಬ್ಬರು.
ರಸ್ತೆಯಲ್ಲಿರುವ ಬಾಪೂಜಿ ಪ್ರೌಢಶಾಲೆ, ಟೇಕಲ್ ವೃತ್ತ, ಮಿನಿ ಹೋಟೆಲ್ ಬಳಿ ಅಪಘಾತಗಳು ನಡೆದು ಸಾವು-ನೋವುಗಳು ಸಂಭವಿಸಿವೆ. ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅದನ್ನು ಪರಿಗಣಿಸಿ ರಸ್ತೆಯನ್ನು ವಿಸ್ತರಣೆ ಮಾಡಬೇಕು ಎಂಬುದು ಅವರ ಆಗ್ರಹ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.