ADVERTISEMENT

ತಾ.ಪಂ ಸದಸ್ಯನ ವಿರುದ್ಧ ಪ್ರಕರಣ ದಾಖಲು

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2018, 10:03 IST
Last Updated 15 ಮಾರ್ಚ್ 2018, 10:03 IST

ಮುಳಬಾಗಿಲು: ಪಡಿತರ ಚೀಟಿ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ ಆಹಾರ ನಿರೀಕ್ಷಕ ಹನುಮಂತಪ್ಪ ಅವರ ಮೇಲೆ ಹಲ್ಲೆ ಮಾಡಲೆತ್ನಿಸಿದ್ದ ತಾಲ್ಲೂಕು ಪಂಚಾಯಿತಿ ಸದಸ್ಯ ಮಾರಪ್ಪ ವಿರುದ್ಧ ನಗರ ಪೊಲೀಸ್‌ ಠಾಣೆಯಲ್ಲಿ ಬುಧವಾರ ದೂರು ದಾಖಲಾಗಿದೆ.

‘ಸಾಕಷ್ಟು ಫಲಾನುಭವಿಗಳಿಗೆ ಪಡಿತರ ಚೀಟಿ ಸಿಕ್ಕಿಲ್ಲ. ಈ ಬಗ್ಗೆ ಅಧಿಕಾರಿಗಳನ್ನು ಪ್ರಶ್ನಿಸಿದರೆ ಸದ್ಯದಲ್ಲೇ ವಿತರಣೆ ಮಾಡುವುದಾಗಿ ಸಬೂಬು ಹೇಳುತ್ತಾರೆ. ಪಡಿತರ ಚೀಟಿ ವಿತರಣೆ ವಿಳಂಬಕ್ಕೆ ಅಧಿಕಾರಿಗಳೇ ಕಾರಣ’ ಎಂದು ಆರೋಪಿಸಿ ಮಾರಪ್ಪ ನಗರದ ಮಿನಿ ವಿಧಾನಸೌಧ ಕಟ್ಟಡದಲ್ಲಿನ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಕಚೇರಿಯಲ್ಲೇ ಮಾ.12ರಂದು ಹನುಮಂತಪ್ಪ ಜತೆ ವಾಗ್ವಾದ ನಡೆಸಿದ್ದರು.

ಹನುಮಂತಪ್ಪ, ಮಾರಪ್ಪರನ್ನು ಸಮಾಧಾನಪಡಿಸಲು ಯತ್ನಿಸಿದಾಗ ಪರಸ್ಪರ ಮಾತಿನ ಚಕಮಕಿ ನಡೆದಿತ್ತು. ಬಳಿಕ ಮಾರಪ್ಪ ಕಚೇರಿಯಲ್ಲಿನ ಕಬ್ಬಿಣದ ಪೆಟ್ಟಿಗೆಯಿಂದ ಹನುಮಂತಪ್ಪರ ಮೇಲೆ ಹಲ್ಲೆ ಮಾಡಲೆತ್ನಿಸಿದ್ದರು ಆಗ ಇತರೆ ಸಿಬ್ಬಂದಿ ಮಧ್ಯ ಪ್ರವೇಶಿಸಿ ಮಾರಪ್ಪನನ್ನು ಸಮಾಧಾನಪಡಿಸಿದ್ದರು.

ADVERTISEMENT

ಘಟನೆ ಸಂಬಂಧ ತಹಶೀಲ್ದಾರ್‌ ಆರ್‌.ಶೋಬಿತಾ ಅವರ ಆದೇಶದಂತೆ ಹನುಮಂತಪ್ಪ ದೂರು ಕೊಟ್ಟಿದ್ದಾರೆ. ಆ ದೂರು ಆಧರಿಸಿ ಮಾರಪ್ಪರ ವಿರುದ್ಧ ಸರ್ಕಾರಿ ನೌಕರರ ಕೆಲಸಕ್ಕೆ ಅಡ್ಡಿ, ಹಲ್ಲೆ ಯತ್ನ ಹಾಗೂ ಅತಿಕ್ರಮ ಪ್ರವೇಶ ಆರೋಪದಡಿ ಪ್ರಕರಣ ದಾಖಲಿಸಲಾಗಿದೆ. ಮಾರಪ್ಪ ತಲೆಮರೆಸಿಕೊಂಡಿದ್ದು, ಪತ್ತೆ ಕಾರ್ಯ ಮುಂದುವರಿದಿದೆ ಎಂದು ಪೊಲಿಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.