ADVERTISEMENT

ತಾರಕಕ್ಕೇರಿದ ‘ಕೈ’ ಪಾಳಯದ ಕಲಹ

ಮೇಲ್ನೋಟಕ್ಕೆ ಒಗ್ಗಟ್ಟಿನ ಮಂತ್ರ; ಪಕ್ಷದೊಳಗೆ ಶೀತಲ ಸಮರ, ಮುಖಂಡರ ನಡುವಿನ ಒಡಕು ಬೀದಿಗೆ

ಜೆ.ಆರ್.ಗಿರೀಶ್
Published 5 ಏಪ್ರಿಲ್ 2018, 10:10 IST
Last Updated 5 ಏಪ್ರಿಲ್ 2018, 10:10 IST

ಕೋಲಾರ: ರಾಜ್ಯ ವಿಧಾನಸಭಾ ಚುನಾವಣಾ ದಿನಾಂಕ ಘೋಷಣೆಯಾದ ಬೆನ್ನಲ್ಲೇ ಜಿಲ್ಲಾ ಕಾಂಗ್ರೆಸ್‌ನಲ್ಲಿ ಆಂತರಿಕ ಕಲಹ ತಾರಕಕ್ಕೇರಿದ್ದು, ಮುಖಂಡರ ನಡುವಿನ ಒಡಕು ಬೀದಿಗೆ ಬಂದಿದೆ.ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್‌.ರಮೇಶ್‌ ಕುಮಾರ್‌, ಸಂಸದ ಕೆ.ಎಚ್‌.ಮುನಿಯಪ್ಪ ಹಾಗೂ ಪಕ್ಷದ ಮುಖಂಡರು ಮೇಲ್ನೋಟಕ್ಕೆ ಒಗ್ಗಟ್ಟಿನ ಮಂತ್ರ ಜಪಿಸುತ್ತಿದ್ದರೂ ಪಕ್ಷದೊಳಗೆ ಶೀತಲ ಸಮರವೇ ನಡೆಯುತ್ತಿದೆ. ಬಣ ರಾಜಕೀಯ ಶುರುವಾಗಿದ್ದು, ಆಂತರಿಕ ಬೇಗುದಿಯು ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆಯುತ್ತಿದೆ. ಪ್ರಮುಖವಾಗಿ ಕೋಲಾರ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆ ವಿಚಾರದಲ್ಲಿ ರಮೇಶ್‌ಕುಮಾರ್‌ ಹಾಗೂ ಮುನಿಯಪ್ಪ ನಡುವೆ ಒಮ್ಮತ ಮೂಡದೆ ಪರಸ್ಪರರು ಉತ್ತರ ಧ್ರುವ ದಕ್ಷಿಣ ಧ್ರುವ ಎಂಬಂತಾಗಿದ್ದಾರೆ. ಈ ಇಬ್ಬರು ನಾಯಕರ ನಡುವಿನ ಮುಸುಕಿನ ಗುದ್ದಾಟವು ವರಿಷ್ಠರಿಗೆ ದೊಡ್ಡ ತಲೆ ನೋವಾಗಿದೆ.

ಪಕ್ಷದಲ್ಲಿ ಒಂದು ಡಜನ್‌ಗೂ ಹೆಚ್ಚು ಮಂದಿ ಕೋಲಾರ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿಗಳಿದ್ದು, ಟಿಕೆಟ್‌ಗಾಗಿ ರಮೇಶ್‌ಕುಮಾರ್‌ ಹಾಗೂ ಮುನಿಯಪ್ಪರ ಬೆನ್ನು ಬಿದ್ದಿದ್ದಾರೆ. ಕ್ಷೇತ್ರದ ಹಾಲಿ ಶಾಸಕ ವರ್ತೂರು ಪ್ರಕಾಶ್‌ ಜತೆ ಮೊದಲಿನಿಂದಲೂ ಅನ್ಯೋನ್ಯವಾಗಿರುವ ಮುನಿಯಪ್ಪ, ಅವರನ್ನು ಪಕ್ಷಕ್ಕೆ ಕರೆತರುವ ಪ್ರಯತ್ನ ಮಾಡಿದ್ದರು. ಆದರೆ, ರಮೇಶ್‌ಕುಮಾರ್‌ ಸೇರಿದಂತೆ ಹಲವು ಸ್ಥಳೀಯ ಮುಖಂಡರು ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದರಿಂದ ಮುನಿಯಪ್ಪರ ಪ್ರಯತ್ನ ಕೈಗೂಡಲಿಲ್ಲ.

ಬೀದಿಗೆ ಬಂದ ಕಚ್ಚಾಟ: ಮುನಿಯಪ್ಪ ಅವರು ರಮೇಶ್‌ಕುಮಾರ್‌ ಹಾಗೂ ಅವರ ಬಣದ ಮುಖಂಡರನ್ನು ದೂರವಿಟ್ಟು ಅಭ್ಯರ್ಥಿ ಆಯ್ಕೆ ಸಂಬಂಧ ಅಭಿಪ್ರಾಯ ಸಂಗ್ರಹಿಸಲು ಜಿಲ್ಲಾ ಕೇಂದ್ರದಲ್ಲಿ ಇತ್ತೀಚೆಗೆ ಕಾರ್ಯಕರ್ತರ ಸಭೆ ಕರೆದಿದ್ದರು. ಆದರೆ, ಆ ಸಭೆಯಲ್ಲೇ ಪಕ್ಷದ ಆಂತರಿಕ ಕಚ್ಚಾಟ ಬೀದಿಗೆ ಬಂದಿತು.ಸಭೆಯಲ್ಲಿ ಮುನಿಯಪ್ಪಗೆ ಘೇರಾವ್‌ ಹಾಕಿದ ಕೆಲ ಮುಖಂಡರು ಹಾಗೂ ಕಾರ್ಯಕರ್ತರು, ‘ಮುನಿಯಪ್ಪ ಅವರು ವರ್ತೂರು ಪ್ರಕಾಶ್‌ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ’ ಎಂದು ಬಹಿರಂಗವಾಗಿ ಆಕ್ರೋಶ ವ್ಯಕ್ತಪಡಿಸಿದ್ದರು. ಮುನಿಯಪ್ಪ, ‘ವರ್ತೂರು ಪ್ರಕಾಶ್‌ ಜತೆ ಕೈ ಜೋಡಿಸಿಲ್ಲ’ ಎಂದು ಹೇಳಿ ಆಂತರಿಕ ಬೇಗುದಿ ಶಮನಗೊಳಿಸುವ ಪ್ರಯತ್ನ ಮಾಡಿದರು.

ADVERTISEMENT

ಕೆಸರೆರಚಾಟ: ಮುನಿಯಪ್ಪರ ಸಭೆಯಲ್ಲಿ ನಡೆದ ಗದ್ದಲದ ಹಿಂದೆ ಪಕ್ಷದ ಜಿಲ್ಲಾ ಘಟಕದ ಮಾಜಿ ಅಧ್ಯಕ್ಷ ಎಂ.ಎಲ್‌.ಅನಿಲ್‌ಕುಮಾರ್‌ರ ಕೈವಾಡವಿದೆ ಎಂಬ ಆರೋಪ ಕೇಳಿಬಂದಿದೆ. ರಮೇಶ್‌ಕುಮಾರ್‌ ಬಣದಲ್ಲಿ ಗುರುತಿಸಿಕೊಂಡಿರುವ ಅನಿಲ್‌ಕುಮಾರ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದಾರೆ.‘ಕೈ’ ಪಾಳಯದ ನಾಯಕರು ಪರಸ್ಪರ ಆರೋಪ ಪ್ರತ್ಯಾರೋಪದಲ್ಲಿ ತೊಡಗಿದ್ದು, ರಾಜಕೀಯ ಕೆಸರೆರಚಾಟ ಜೋರಾಗಿದೆ. ಏ.7ರಂದು ಜಿಲ್ಲೆಗೆ ಆಗಮಿಸುತ್ತಿರುವ ರಾಹುಲ್‌ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಆಂತರಿಕ ಕಲಹದ ಗಾಯಕ್ಕೆ ಮುಲಾಮು ಹಚ್ಚುತ್ತಾರೆ ಎಂದು ಕಾರ್ಯಕರ್ತರು ನಿರೀಕ್ಷಿಸಿದ್ದಾರೆ.

**

ಅಭ್ಯರ್ಥಿ ಆಯ್ಕೆಯಲ್ಲಿ ಗೊಂದಲ ಗಳಾಗಿವೆ. ಸಚಿವ ರಮೇಶ್‌ ಕುಮಾರ್‌ ಹಾಗೂ ಸಂಸದ ಮುನಿಯಪ್ಪ ನೇತೃತ್ವದಲ್ಲಿ ಸದ್ಯದಲ್ಲೇ ಸಭೆ ನಡೆಸಿ ಎಲ್ಲಗೊಂದಲ ಬಗೆಹರಿಸುತ್ತೇವೆ –  ಕೆ.ಚಂದ್ರಾರೆಡ್ಡಿ, ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.