ಕೋಲಾರ: ಜಿಲ್ಲೆಯಲ್ಲಿ ಕಲ್ಯಾಣಿಗಳ ಪುನಶ್ಚೇತನ ಕಾರ್ಯವನ್ನು ಇನ್ನು ಮುಂದೆ ತ್ವರಿತಗತಿಯಲ್ಲಿ ನಡೆಸಬೇಕು. ಪುನಶ್ಚೇತನ ಕಾಮಗಾರಿಗಳನ್ನು ನಡೆಸಿದವರಿಗೆ ಸತಾಯಿಸದೆ ಹಣವನ್ನು ಬಿಡುಗಡೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಿ.ಕೆ.ರವಿ ಸೂಚಿಸಿದರು.
ನಗರದ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಬುಧವಾರ ನಡೆದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಮಳೆಗಾಲ ಎಂಬ ಕಾರಣದಿಂದ ಕಲ್ಯಾಣಿಗಳ ಪುನಶ್ಚೇತನ ಕಾರ್ಯವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿತ್ತು. ಮಳೆಗಾಲ ಮುಗಿದಿದೆ. ಇನ್ನು ಮುಂದೆ ಯಾವುದೇ ಸಬೂಬು ಹೇಳದೆ ಕಾರ್ಯವನ್ನು ನಡೆಸಬೇಕು ಎಂದು ಸೂಚಿಸಿದರು.
ಕೆಲವೆಡೆ ಪುನಶ್ಚೇತನ ಕಾಮಗಾರಿ ನಡೆಸಿದವರಿಗೆ ಪೂರ್ಣಪ್ರಮಾಣದಲ್ಲಿ ಹಣ ನೀಡದೆ ಅಭಿವೃದ್ಧಿ ಅಧಿಕಾರಿಗಳು ಸತಾಯಿಸುತ್ತಿದ್ದಾರೆ ಎಂಬ ದೂರುಗಳಿವೆ. ಅಂಥ ದೂರುಗಳು ಬಾರದ ರೀತಿಯಲ್ಲಿ ಹಣ ಬಿಡುಗಡೆ ಮಾಡಿ. ಕಲ್ಯಾಣಿ ಕಾಮಗಾರಿಗಳನ್ನು ನಡೆಸಲು ಜನರಿಗೆ ಉತ್ತೇಜನ ನೀಡುವ ರೀತಿಯಲ್ಲಿ ಅಧಿಕಾರಿಗಳು ಕೆಲಸ ಮಾಡಬೇಕು ಎಂದು ಹೇಳಿದರು.
ಕೋಲಾರ ತಾಲ್ಲೂಕಿನ ಗ್ರಾಮವೊಂದರಲ್ಲಿ ಕಲ್ಯಾಣಿಯ ಹೂಳೆತ್ತಿದ್ದ ಕಾಮಗಾರಿಗೆ ಮೂರು ಲಕ್ಷ ರೂಪಾಯಿ ಖರ್ಚಾಗಿದೆ. ಆದರೆ ಅಧಿಕಾರಿಗಳು ಒಂದೂವರೆ ಲಕ್ಷವನ್ನು ಮಾತ್ರ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ ಎಂದು ದೂರು ಬಂದಿದೆ. ಇಂಥ ದೂರುಗಳು ಬರಬಾರದು. ಅಧಿಕಾರಿಗಳು ಯಾರನ್ನು ನಿರುತ್ಸಾಹಗೊಳಿಸದಿರಿ ಎಂದು ಹೇಳಿದರು.
ಉದ್ಯೋಗಖಾತ್ರಿ ಯೋಜನೆ ಜಾರಿಯಲ್ಲಿ ಜಿಲ್ಲೆಯು ರಾಜ್ಯಮಟ್ಟದಲ್ಲಿ ಈಗ ಮೂರನೇ ಸ್ಥಾನದಲ್ಲಿದೆ. ಅದಕ್ಕೆ ಅಭಿವೃದ್ಧಿ ಅಧಿಕಾರಿಗಳ ಶ್ರಮವೂ ಕಾರಣ. ಆದರೆ ಖಾತ್ರಿ ಯೋಜನೆಯಲ್ಲಿ ಸಾಧನೆ ಮಾಡಿದರೆ ಸಾಲದು. ಅದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಮಾತ್ರ ಜಿಲ್ಲೆಗೆ ಗಣನೀಯ ಸ್ಥಾನವನ್ನು ತಂದುಕೊಡುತ್ತದೆ. ಅದರೊಂದಿಗೆ, ಸೇವೆಗಳ ವಿಲೇವಾರಿ ನೀಡಿದ ಬಗ್ಗೆ ಸಕಾಲ ಮತ್ತು ಪಂಚತಂತ್ರಗಳಲ್ಲೂ ಸಮರ್ಪಕ ದಾಖಲೀಕರಣ ನಡೆಯಬೇಕು. ಆಗ ಜಿಲ್ಲೆ ಇಡೀ ರಾಜ್ಯದ ಗಮನ ಸೆಳೆಯುವಂಥ ಸಾಧನೆ ಮಾಡಿದಂತಾಗುತ್ತದೆ ಎಂದರು.
ಯಾವುದೇ ದೂರು, ಅರ್ಜಿಗಳನ್ನು ಸಕಾಲದಲ್ಲಿ ವಿಲೇವಾರಿ ಮಾಡಿ. ಜನರ ಸಮಸ್ಯೆಗಳನ್ನು ಪರಿಹರಿಸಿ. ಜನರ ಅರ್ಜಿಗಳನ್ನು ಆಧರಿಸಿ ಕೆಲಸ ಮಾಡಲಾಗದಿದ್ದರೆ, ಸೂಕ್ತ ಉತ್ತರವನ್ನಾದರೂ ನೀಡಬೇಕು. ಹೊಸ ಅರ್ಜಿಗಳನ್ನೂ ಸಕಾಲದಲ್ಲಿ ವಿಲೇ ಮಾಡಬೇಕು ಎಂದರು. ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎಸ್.ಎಂ.ಝುಲ್ಫಿಕರ್ ಉಲ್ಲಾ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.