ಮಧುಗಿರಿ: ಪಟ್ಟಣಕ್ಕೆ ಹೊಂದಿಕೊಂಡಂತಿರುವ ದಂಡಿನ ಮಾರಮ್ಮ ದೇವಸ್ಥಾನಕ್ಕೆ ಭೇಟಿ ನೀಡುವ ಭಕ್ತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದ್ದು, ಮೂಲ ಸೌಲಭ್ಯ ಇಲ್ಲದಿರುವುದರಿಂದ ಭಕ್ತರು ಸಮಸ್ಯೆಗಳ ಸುಳಿಯಲ್ಲಿ ಸಿಲುಕಿದ್ದಾರೆ.
ದಂಡಿನ ಮಾರಮ್ಮ ಪೂಜೆಗಾಗಿ ಮಂಗಳವಾರ, ಶುಕ್ರವಾರ ಅಪಾರ ಸಂಖ್ಯೆಯಲ್ಲಿ ಭಕ್ತರು ಭೇಟಿ ನೀಡುತ್ತಾರೆ.
ತುಮಕೂರು ರಸ್ತೆ ಪಕ್ಕದಲ್ಲಿ ದೇವಸ್ಥಾನವಿದೆ. ದೇವಸ್ಥಾನದ ಜಾಗವನ್ನು ಕೆಲವರು ಒತ್ತುವರಿ ಮಾಡಿದ್ದಾರೆ.
ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸ್ನಾನಗೃಹ, ಶೌಚಾಲಯ, ಅಡುಗೆ ಮನೆ, ವಿಶ್ರಾಂತಿ ಕೊಠಡಿ ಸೇರಿದಂತೆ ಇತರೆ ಕನಿಷ್ಠ ಸೌಕರ್ಯಗಳು ಇಲ್ಲಿಲ್ಲ.
ಅಡುಗೆ ಮಾಡಲು ಕಲ್ಲು-ಗುಂಡು ಬಳಸಬೇಕು. ಬಯಲನ್ನೇ ಆಶ್ರಯಿಸಬೇಕು. ಪ್ರಸಾದ ಸೇವಿಸುವುದು ಸಹ ಬಯಲಲ್ಲೇ. ಬಿಸಿಲಿದ್ದರೇ ದೂಳು, ಮಳೆ ಬಂದರೆ ಊಟ ಬಿಟ್ಟು ಓಡಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.
ಜಿಲ್ಲಾ ಪಂಚಾಯಿತಿ ವತಿಯಿಂದ 1996 ರಲ್ಲಿ ಶೌಚಾಲಯ ನಿರ್ಮಿಸಲಾಗಿತ್ತು. ಪ್ರಸ್ತುತ ಗಿಡಗಳು ಬೆಳೆದಿದ್ದು, ಬಳಕೆಗೆ ಲಭ್ಯವಿಲ್ಲ. ಶೌಚಕ್ಕೆ ಬಯಲೇ ಗತಿ.
ಆರ್.ಎಲ್.ಜಾಲಪ್ಪ ಸಂಸದರಾಗಿದ್ದ ಅವಧಿಯಲ್ಲಿ ದೇಗುಲಕ್ಕೆ ಬರುವ ಭಕ್ತರಿಗೆ ತೊಂದರೆಯಾಗದಿರಲಿ ಎಂದು ಬದಲಿ ರಸ್ತೆ ನಿರ್ಮಿಸಲಾಗಿತ್ತು. ಅಲ್ಲಿಂದ ಇಲ್ಲಿ ತನಕ ಯಾರೊಬ್ಬರು ರಸ್ತೆ ದುರಸ್ತಿಗೆ ಮುಂದಾಗದಿರುವುದರಿಂದ ರಸ್ತೆ ಹಾಳಾಗಿದೆ. ಇದರಿಂದ ಭಕ್ತರು ತೊಂದರೆ ಎದುರಿಸುತ್ತಿದ್ದಾರೆ. ಸದಾ ದೂಳು ಆವರಿಸಿದ್ದು, ಉಸಿರಾಡುವುದು ಕಷ್ಟ ಎಂಬಂಥ ಸ್ಥಿತಿಯಿದೆ. ಇನ್ನೂ ಬಯಲಲ್ಲೇ ಪ್ರಸಾದ ಸ್ವೀಕರಿಸುವುದು ಕಷ್ಟವಾಗುತ್ತಿದೆ ಎಂದು ಭಕ್ತರು ದೂರುತ್ತಾರೆ.
ಮುಂದಿನ ತಿಂಗಳು ಜಾತ್ರೆ ನಡೆಯುತ್ತದೆ. ಹರಕೆ ತೀರಿಸಲೆಂದೇ ವಿವಿಧ ಭಾಗಗಳಿಂದ ಭಕ್ತರು ಬರುತ್ತಾರೆ. ಆದರೆ ಇದುವರೆಗೂ ಯಾವುದೇ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿಲ್ಲ. ಈ ಬಾರಿಯೂ ಬಯಲೇ ನಮಗೆ ಗತಿ ಎನ್ನುತ್ತಾರೆ ಸಿದ್ದನಾಯ್ಕ.
ಭಕ್ತರು ಬಯಲಲ್ಲಿ ಊಟ ಮಾಡುತ್ತಿರುತ್ತಾರೆ. ವಾಹನ ಬಂದರೆ ದೂಳೇಳುತ್ತದೆ. ವಿಧಿಯಿಲ್ಲದೆ ಪ್ರಸಾದ ಸ್ವೀಕರಿಸಬೇಕಿದೆ ಎಂದು ಜಡಗೊಂಡನಹಳ್ಳಿಯ ಲಾರಿ ಚಾಲಕ ಶಿವಣ್ಣ ದೂರಿದರು.
ದೇವಸ್ಥಾನದ ಅಭಿವೃದ್ಧಿಗೆ ಮುಜರಾಯಿ ಇಲಾಖೆಯಿಂದ ₨ 10 ಲಕ್ಷ ಮಂಜೂರಾಗಿದೆ. ಅಡುಗೆಕೋಣೆ, ಕುಡಿಯುವ ನೀರು , ಶೌಚಾಲಯ ನಿರ್ಮಿಸಲು ಲೋಕೋಪಯೋಗಿ ಇಲಾಖೆಗೆ ಅಂದಾಜು ಪಟ್ಟಿ ಮತ್ತು ನಕ್ಷೆ ತಯಾರಿಸಿ ಕೊಡುವಂತೆ ಸೂಚಿಸಲಾಗಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಿಸಲಾಗುವುದು ಎಂದು ಉಪವಿಭಾಗಾಧಿಕಾರಿ, ದೇವಸ್ಥಾನದ ಆಡಳಿತಾಧಿಕಾರಿ ತಬಸ್ಸುಮ್ ಜಹೇರಾ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.