ADVERTISEMENT

ದರ್ಪಕ್ಕೆ ತಕ್ಕ ಉತ್ತರ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 6:05 IST
Last Updated 1 ಅಕ್ಟೋಬರ್ 2012, 6:05 IST

ಕೋಲಾರ: ಸಚಿವ ಎಂಬ ದರ್ಪದಿಂದ ಅಧಿಕಾರಿಗಳನ್ನು ಬೆದರಿಸಿ ಏನು ಬೇಕಾದರೂ ಮಾಡಬಹುದು ಎಂದುಕೊಂಡವರಿಗೆ ತಾಲ್ಲೂಕು ಪ್ರಾಥಮಿಕ ಸಹಕಾರ, ಕೃಷಿ ಮತ್ತು ಗ್ರಾಮೀಣ ಭೂ ಅಭಿವೃದ್ಧಿ (ಪಿಎಲ್‌ಡಿ) ಬ್ಯಾಂಕ್‌ನ ಚುನಾವಣೆ ತಕ್ಕ ಉತ್ತರ ನೀಡಿದೆ ಎಂದು ಮಾಜಿ ಸಚಿವ ಕೆ.ಶ್ರೀನಿವಾಸಗೌಡ  ಮಾರ್ಮಿಕವಾಗಿ ನುಡಿದರು.

ನಗರದ ತಮ್ಮ ಮನೆಯಲ್ಲಿ ಭಾನುವಾರ ರೋಗಿಗಳ ವೈದ್ಯಕೀಯ ಚಿಕಿತ್ಸೆಗೆ  ಆರ್ಥಿಕ ಸಹಾಯಧನ ವಿತರಿಸಿ ಮಾತನಾಡಿದ ಅವರು, ಕಳೆದ ಬಾರಿ ಜೆಡಿಎಸ್‌ಗೆ ಬಹುಮತ ಇತ್ತು. ಕಾನೂನು ರೀತಿಯಲ್ಲಿ ಶಂಕರೇಗೌಡ ಚುನಾಯಿತರಾಗಿದ್ದರು.
 
ಆದರೆ ತಾವು ಮಂತ್ರಿ ಸ್ಥಾನದಲ್ಲಿದ್ದೇವೆ ಎಂಬ ಅಹಂಕಾರದಿಂದ ವರ್ತೂರು ಪ್ರಕಾಶ್‌ಕಾನೂನು ಬದಿಗೊತ್ತಿ ಶಂಕರೇಗೌಡರನ್ನು ನಿರ್ದೇಶಕ ಸ್ಥಾನದಿಂದ ತೆಗೆದರು. ಅಂಥ ಕಟ್ಟ ಚಾಳಿ  ಜಿಲ್ಲೆಯಲ್ಲಿ ಹಿಂದೆಂದೂ ಆಗಿಲ್ಲ ಎಂದು ನುಡಿದರು.

ಸಹಕಾರಿ ಸಂಸ್ಥೆಗಳ ಚುನಾವಣೆಯಲ್ಲಿ ರಾಜಕಿಯವನ್ನು ತಲೆಯಲ್ಲಿ ಇಟ್ಟುಕೊಳ್ಳಬಾರದರು. ಪ್ರತಿಯೊಬ್ಬ ಶೇರುದಾರರಿಗೆ ಸಾಮಾಜಿಕ ನ್ಯಾಯ ದೊರಕಿಸಬೇಕು ಎಂದರು.

ಮೂತ್ರಪಿಂಡ ವೈಫಲ್ಯ ಸೇರಿದಂತೆ  ಅನಾರೋಗ್ಯದಿಂದ ಬಳಲುತ್ತಿರುವ  ರಹಮತ್‌ನಗರದ ಸೈಯದ್ ಅಲ್ಲಬಕಾಶ್ ಅವರಿಗೆ ರೂ 25 ಸಾವಿರ, ಶಹಿಂಷಾ ನಗರದ ಪ್ಯಾರೇಜಾನ್ ಅವರಿಗೆ ರೂ 10 ಸಾವಿರ,  ಅಚ್ಚಟ್ನಹಳ್ಳಿಯ  ರಾಮಪ್ಪ ಅವರಿಗೆ ರೂ 15 ಸಾವಿರ, ಮಾರ್ಜೆನಹಳ್ಳಿಯ ಸುಬ್ರಮಣಿ ಅವರಿಗೆ ರೂ 10  ಸಾವಿರ ಹಾಗೂ ಹೋಳೂರಿನ ಎಚ್.ರವಿಕುಮಾರ್ ಅವರಿಗೆ ರೂ 20 ಸಾವಿರ  ಚೆಕ್‌ಗಳನ್ನು ಗೌಡರು ವಿತರಿಸಿದರು.

ಹೋಳೂರು ಎಸ್‌ಎಫ್‌ಸಿಎಸ್‌ಸಿಎಸ್‌ಗೆ  ಅಧ್ಯಕ್ಷರಾಗಿ  ಅವಿರೋಧವಾಗಿ ಆಯ್ಕೆಯಾದ  ಚಿಕ್ಕಕುರುಬರಹಳ್ಳಿಯ ಸಿ.ಎಂ.ವೆಂಕಟಮುನಿಯಪ್ಪ ಅವರನ್ನು ಸನ್ಮಾನಿಸಿದರು. ನಿರ್ದೇಶಕರಾದ  ಬಿ.ಮುನೇಗೌಡ, ಎಲ್.ಆರ್.ಲಕ್ಷ್ಮಿದೇವಮ್ಮ, ನಗರಸಭೆ ಮಾಜಿ ಅಧ್ಯಕ್ಷ ಅಪ್ರೋಸ್ ಪಾಷ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.