ADVERTISEMENT

ದಲಿತ ಸಮುದಾಯ ಒಗ್ಗೂಡಲಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2011, 7:35 IST
Last Updated 18 ಜನವರಿ 2011, 7:35 IST

ಶ್ರೀನಿವಾಸಪುರ: ದಲಿತ ಸಮುದಾಯ ಭಿನ್ನಾಭಿಪ್ರಾಯ ಮರೆತು ಒಗ್ಗೂಡಬೇಕು. ಶಿಕ್ಷಣ, ಸಂಘಟನೆ ಮತ್ತು ಹೋರಾಟದ ಮೂಲಕ ತನ್ನ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಬೇಕು ಎಂದು ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಘಟನಾ ಸಂಚಾಲಕ ವಿ.ನಾರಾಯಣಸ್ವಾಮಿ ಕರೆ ನೀಡಿದರು.

ಪಟ್ಟಣದ ಸರ್ಕಾರಿ ನೌಕರರ ಭವನದಲ್ಲಿ ಜಿಲ್ಲಾ ದಲಿತ ಸಂಘರ್ಷ ಸಮಿತಿಯ ವತಿಯಿಂದ ಭಾನುವಾರ ಏರ್ಪಡಿಸಿದ್ದ ದಲಿತರ ಸ್ವಾಭಿಮಾನ ದಿನಾಚರಣೆ, ದಲಿತ ಮುಖಂಡರಾಗಿದ್ದ ದಿವಂಗತ ಎನ್.ಶಿವಣ್ಣ ಅವರ 61ನೇ ಜನ್ಮದಿನ ಆಚರಣೆ ಮತ್ತು ಸ್ವಾಭಿಮಾನ ಕ್ಯಾಲೆಂಡರ್ ಬಿಡುಗಡೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

 ಡಿವೈಎಸ್‌ಪಿ ವಿ.ಗೋವಿಂದಯ್ಯ ಮಾತನಾಡಿ, ದಲಿತ ಸಮುದಾಯಕ್ಕೆ ಅನಕ್ಷರತೆ ಮತ್ತು ಆರ್ಥಿಕ ಹಿನ್ನಡೆಯು ಶಾಪವಾಗಿ ಪರಿಣಮಿಸಿದೆ ಎಂದು ಅವರು ತಿಳಿಸಿದರು. ಮೊದಲು ದಲಿತ ಸಮುದಾಯ ಮಕ್ಕಳಿಗೆ ಶಿಕ್ಷಣ ಕೊಡಿಸಬೇಕು ಎಂದು ಸಲಹೆ ನೀಡಿದರು.

ಜಾತಿ ವ್ಯವಸ್ಥೆ ಪ್ರಗತಿಗೆ ಮಾರಕವಾಗಿದೆ. ಸಾಮಾಜಿಕ ಸಮಾನತೆಗೆ ಅಡ್ಡಿಯನ್ನುಂಟುಮಾಡಿದೆ. ಈ ನಿಟ್ಟಿನಲ್ಲಿ ಭೇದ-ಭಾವ ತೊಲಗಬೇಕಾದರೆ ಜಾತಿವಾದ ಅಳಿಯಬೇಕು.ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ವಾತಂತ್ರ್ಯ ಸಿಕ್ಕಿದಾಗ ಮಾತ್ರ ನಮ್ಮ ಸ್ವಾತಂತ್ರ್ಯಕ್ಕೆ ಹೆಚ್ಚಿನ ಬೆಲೆ ಬರುತ್ತದೆ.

ಯಾವುದೇ ಕಾರಣಕ್ಕೂ ಸಮಾಜವನ್ನು ಒಡೆಯಬಾರದು ಎಂದು ಸಲಹೆ ನೀಡಿದರು.ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸೂಲಿಕುಂಟೆ ರಮೇಶ್ ಮಾತನಾಡಿ, ಎನ್.ಶಿವಣ್ಣ ಅವರು ಹೋರಾಟಕ್ಕೆ ಸ್ಫೂರ್ತಿಯಾಗಿದ್ದರು. ಅವರ ಕಾಲದಲ್ಲಿ ಕೈಗೊಳ್ಳಲಾದ ಹೋರಾಟಗಳು ದಲಿತರಲ್ಲಿ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿವೆ ಎಂದು ಹೇಳಿದರು.

ಸಮಿತಿಯ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಬಿ.ವಿ.ವೆಂಕಟಾಚಲಪತಿ ಪ್ರಾಸ್ತಾವಿಕವಾಗಿ ಮಾತನಾಡಿದರು.ತಾಲ್ಲೂಕು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ನಾಗರಾಜ್,  ಅನಂತರಾಮು, ಜಿಲ್ಲಾ ಸಂಘಟನಾ ಸಂಚಾಲಕ ನಾಗನಾಳ ಮುನಿಯಪ್ಪ ಸಂಘಟನೆ ಕುರಿತು ಮಾತನಾಡಿದರು.

ಈ ಸಂದರ್ಭದಲ್ಲಿ  ಎಚ್.ಮುನಿಚೌಡಪ್ಪ, ರೆಡ್ಡಪ್ಪ ಮತ್ತು ಸಂಗಡಿಗರು ಕ್ರಾಂತಿ ಗೀತೆ ಹಾಡಿದರು. ಡಿ.ಚಿಕ್ಕಣ್ಣ, ಆರ್.ಕುಮಾರ್, ಎನ್.ನಟರಾಜ್, ಬಿ.ಚಂದ್ರಶೇಖರ್, ಗೌನಿಪಲ್ಲಿ ವೆಂಕಟರವಣಪ್ಪ ಹಾಜರಿದ್ದರು.  ಸೋಮಣ್ಣ  ನಿರೂಪಿಸಿದರು. ರೋಜೇನಹಳ್ಳಿ ವೆಂಕಟರವಣ ಸ್ವಾಗತಿಸಿದರು. ವೆಂಕಟರವಣಪ್ಪ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.