ADVERTISEMENT

ದಶಕದ ವಿವಾದಕ್ಕೆ ಜೀವ ಬಂತು!

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 9:00 IST
Last Updated 14 ಮಾರ್ಚ್ 2011, 9:00 IST

ಬಂಗಾರಪೇಟೆ: ಪಟ್ಟಣದ ಅಂಬೇಡ್ಕರ್ ವೃತ್ತ ಸಮೀಪದಲ್ಲಿ 10 ವರ್ಷದಿಂದ ನೆನೆಗುದಿಯಲ್ಲಿದ್ದು ನೇಪಥ್ಯಕ್ಕೆ ಸರಿದಿದ್ದ ಕಟ್ಟಡ ನಿರ್ಮಾಣ ಕಾಮಗಾರಿ ವಿವಾದವೊಂದು ಅನಿರೀಕ್ಷಿತ ತಿರುವುಗಳನ್ನು ಪಡೆಯುವ ಮೂಲಕ ಮತ್ತೆ ಚರ್ಚೆಗೆ ಗ್ರಾಸವಾಗಿದೆ.ಕಟ್ಟಡ ನಿರ್ಮಾಣಕ್ಕೆ ಸಂಬಂಧವಾಗಿ ಪಟ್ಟಣದ ಎರಡು ಗುಂಪುಗಳ ನಡುವೆ ಈಚೆಗೆ ಗಲಾಟೆಯೂ ನಡೆದು ಪ್ರಕರಣವು ಪಟ್ಟಣ ಪೊಲೀಸ್ ಠಾಣೆ ಮೆಟ್ಟಲೇರಿತ್ತು. ಈ ವಿಷಯದಲ್ಲಿ ಸಹಕರಿಸಲಿಲ್ಲ ಎಂಬ ಕಾರಣಕ್ಕೆ ಒಂದು ಗುಂಪು ಪಟ್ಟಣದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಅಮಾನತ್ತು ಒತ್ತಾಯಿಸಿ ಅಂಬೇಡ್ಕರ್ ಪ್ರತಿಮೆಯ ಮುಂದೆ ಕಳೆದ 3 ದಿನಗಳಿಂದಲೂ ನಿರಂತರವಾಗಿ ಪ್ರತಿಭಟಿಸುತ್ತಿದೆ. ಇನ್ನೊಂದು ಗುಂಪಿಗೆ ಒತ್ತಾಸೆಯಾಗಿ ಸಮತಾ ಸೈನಿಕ ದಳದ ಕಾರ್ಯಕರ್ತರು ಬಂದಿರುವುದರಿಂದ ಪ್ರಕರಣವು ಪ್ರತಿಷ್ಠೆ ವಿಷಯವಾಗಿ ಪರಿಣಮಿಸಿದೆ. ಪರಿಸ್ಥಿತಿ ಇನ್ನಷ್ಟು ಹದಗೆಡುವ ಸಾಧ್ಯತೆ ಮೂಡಿದೆ.

ಪಟ್ಟಣದ ಅಂಬೇಡ್ಕರ್ ವೃತ್ತ ಸಮೀಪದ ಪುರಸಭೆ ಖಾತೆ ಸಂಖ್ಯೆ 679 ರಲ್ಲಿ ಟಿ.ಎಸ್.ಕುಮಾರ್ ಎಂಬುವವರು ಅಂಗಡಿ ಮಳಿಗೆ ನಿರ್ಮಾಣಕ್ಕೆ ಮುಂದಾಗಿದ್ದರು. ಕಟ್ಟಡ ನಿರ್ಮಾಪಕರು ಕಾಮಗಾರಿ ಸ್ಥಳವು ತಮ್ಮದೆಂದು ಪ್ರತಿಪಾದಿಸುತ್ತಿದ್ದರೆ ದಲಿತ ಸಂಘರ್ಷ ಸಮಿತಿಯ ಎಂ.ರಾಜೇಂದ್ರಕುಮಾರ್ ಸದರಿ ಜಾಗವು ಸಂತೇ ಮೈದಾನಕ್ಕೆ ಸೇರಿದೆ ಎಂದು ಆರೋಪಿಸಿರುವುದು ವಿವಾದಕ್ಕೆ ಆಸ್ಪದವಾಗಿದೆ.

 ಕುಮಾರ್ ಅವರಲ್ಲಿರುವ ದಾಖಲಾತಿಗಳ ಪ್ರಕಾರ ಅವರ ತಾತನಾದ ಟಿ.ಎಂ.ಸುಬ್ಬಯ್ಯಶೆಟ್ಟಿ ಅವರು 1953 ರ ಜೂ. 10 ರಂದು ನಡೆದ ಬಹಿರಂಗ ಹರಾಜಿನಲ್ಲಿ ರೂ. 6500 ತೆತ್ತು ಸದರಿ ನಿವೇಶನವನ್ನು ಪುರಸಭೆಯಿಂದ ಖರೀದಿಸಿದ್ದಾರೆ. ಅದಕ್ಕೆ 1953 ರ ಮೇ 19 ರಂದು ನಡೆದಿರುವ ಪುರಸಭೆ ಸಮಿತಿಯ ನಡಾವಳಿಯು ಇಂಬು ನೀಡುತ್ತದೆ. ನಿವೇಶನ ಮಾರಾಟಕ್ಕೆ ಸಂಬಂಧಿಸಿದಂತೆ 1953 ರ ಜೂ. 11 ರಂದು ನಡೆದ ಸಾಮಾನ್ಯ ಸಭೆಯಲ್ಲಿ ಪುರಸಭೆ ಸಮಿತಿಯ ಅನುಮೋದನೆಯೂ ಸಿಕ್ಕಿದೆ. ಅದರಂತೆ ಸಬ್ ರಿಜಿಸ್ಟ್ರಾರ್ ರಾಜಾ ಅಯ್ಯಂಗಾರ್ 1954 ರ ಮಾ. 29 ರಂದು ನಿವೇಶನವನ್ನು ಸುಬ್ಬಯ್ಯಶೆಟ್ಟಿ ಅವರಿಗೆ ನೋಂದಣಿ ಮಾಡಿರುತ್ತಾರೆ.

ಕಾಲಾನಂತರ ನಿವೇಶನವು ಕುಮಾರ್ ಅವರ ಪಾಲಿಗೆ ಬಂದಿರುತ್ತದೆ. ಅವರು ನಿವೇಶನದಲ್ಲಿ ಅಂಗಡಿ ಮಳಿಗೆ ನಿರ್ಮಿಸಲು 2000 ರ ಸೆ. 12 ರಂದು ಕೆ.ಜಿ.ಎಫ್ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅನುಮತಿ ಪಡೆದಿರುತ್ತಾರೆ. ಫೆ.19 ರಂದು ಬಂಗಾರಪೇಟೆ ಪುರಸಭೆಯಿಂದ ಕಟ್ಟಡ ನಿರ್ಮಾಣಕ್ಕೆ ಪರವಾನಗಿಯನ್ನು ಪಡೆದು ಕಾಮಗಾರಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿಯ ಎಂ.ರಾಜೇಂದ್ರ ಕುಮಾರ್ ಸದರಿ ನಿವೇಶನವು ಸಂತೇ ಮೈದಾನಕ್ಕೆ ಸೇರಿರುವುದರಿಂದ ಕಾಮಗಾರಿ ಕೂಡದು ಎಂದು ತಡೆಯೊಡ್ಡಿದ್ದರು.

ಆನಂತರ ಪ್ರಕರಣವು ಬಂಗಾರಪೇಟೆ ಕಿರಿಯ ವಿಭಾಗ, ಕೆ.ಜಿ.ಎಫ್ ಹಿರಿಯ ವಿಭಾಗ, ಉಪವಿಭಾಗಾಧಿಕಾರಿ, ರಾಜ್ಯ ಉಚ್ಛ ನ್ಯಾಯಾಲಯಗಳ ಮೆಟ್ಟಲೇರಿತ್ತು. 2011 ರ ಫೆ. 4 ರಂದು ಕಂದಾಯ ಇಲಾಖೆಯ ಉಪವಿಭಾಗಾಧಿಕಾರಿ ಪೆದ್ದಪ್ಪಯ್ಯ ಅವರು ನೀಡಿದ ತೀರ್ಪಿನ ಮೇರೆಗೆ ಕುಮಾರ್ ಈಚೆಗೆ ಮತ್ತೆ ಕಟ್ಟಡ ಕಾಮಗಾರಿಗೆ ಮುಂದಾಗಿದ್ದರು. ಆದರೆ ಕಾಮಗಾರಿಗೆ ಸಂಬಂಧಿಸಿದಂತೆ ಎರಡೂ ಗುಂಪುಗಳ ನಡುವೆ ಮಾ 8 ರಂದು ಮತ್ತೆ ಗಲಾಟೆಗಳು ನಡೆದ ಕಾರಣ ಮತ್ತೆ ಕಟ್ಟಡ ಕಾಮಗಾರಿ ನೆನೆಗುದಿಯಲ್ಲಿದೆ.

ಪ್ರಕರಣದಲ್ಲಿ ಪಟ್ಟಣದ ಸಬ್ ಇನ್ಸ್‌ಪೆಕ್ಟರ್ ಅವರು ಕುಮಾರ್ ಅವರಿಗೆ ಪರೋಕ್ಷವಾಗಿ ಸಹಕರಿಸುತ್ತಿದ್ದಾರೆ ಎಂದು ಆರೋಪಿಸಿ ರಾಜೇಂದ್ರ ಬಣದ ಕಾರ್ಯಕರ್ತರು ಕಳೆದ 3 ದಿನಗಳಿಂದ ಪಟ್ಟಣದ ಅಂಬೇಡ್ಕರ್ ಪ್ರತಿಮೆಯ ಮುಂದೆ ಪ್ರತಿಭಟನೆ ಮಾಡುತ್ತಿದ್ದಾರೆ. ಕುಮಾರ್ ಅವರ ಬೆಂಬಲಕ್ಕೆ ಸಮತಾ ಸೈನಿಕ ದಳದ ಕಾರ್ಯಕರ್ತರು ಮುಂದೆ ಬಂದಿದ್ದಾರೆ. ಹೀಗಾಗಿ ಪ್ರಕರಣವು ಅನಿರೀಕ್ಷಿತ ತಿರುವು ಕಂಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.