ADVERTISEMENT

ದಾಖಲೆ ನೀಡದಿದ್ದರೆ ಅಮಾನತು: ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2012, 7:35 IST
Last Updated 14 ಆಗಸ್ಟ್ 2012, 7:35 IST
ದಾಖಲೆ ನೀಡದಿದ್ದರೆ ಅಮಾನತು: ಎಚ್ಚರಿಕೆ
ದಾಖಲೆ ನೀಡದಿದ್ದರೆ ಅಮಾನತು: ಎಚ್ಚರಿಕೆ   

ಕೋಲಾರ: ಗ್ರಾಮಗಳಿಗೆ ಟ್ಯಾಂಕರ್ ನೀರು ಪೂರೈಸಿರುವ ಕುರಿತು ಮೂರು ದಿನದೊಳಗೆ ಟ್ರಿಪ್ ಶೀಟ್,ಲಾಗ್ ಪುಸ್ತಕ ಮತ್ತು ಬಳಕೆ ಪ್ರಮಾಣಪತ್ರ ನೀಡದಿದ್ದರೆ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳನ್ನು ಅಮಾನತು ಮಾಡಿ ಎಂದು ಉಪಮುಖ್ಯಮಂತ್ರಿ ಆರ್.ಅಶೋಕ್ ಅವರು ಜಿಲ್ಲಾಧಿಕಾರಿ ಡಾ.ಡಿ.ಎಸ್.ವಿಶ್ವನಾಥ್‌ಗೆ ಸೂಚಿಸಿದರು.

ಬರ ಪರಿಸ್ಥಿತಿ ಅಧ್ಯಯನ ಸಲುವಾಗಿ ಜಿಲ್ಲೆಗೆ ಸೋಮವಾರ ಭೇಟಿ ನೀಡಿದ್ದ ಅವರು, ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆಸಿದ ಬರ ಪರಿಸ್ಥಿತಿ ನಿರ್ವಹಣೆ ಸಭೆಯಲ್ಲಿ ಅಧಿಕಾರಿಗಳ ಕಾರ್ಯವೈಖರಿಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಸಮರ್ಪಕ  ದಾಖಲೆ ನೀಡದೆ ಕೇವಲ ವಿವರವನ್ನಷ್ಟೇ ನೀಡಿದರೆ ಜಿಲ್ಲಾಧಿಕಾರಿ ಹಣ ಬಿಡುಗಡೆ ಮಾಡಲು ಸಾಧ್ಯವಿಲ್ಲ. ಹೀಗಾಗಿ ಕೂಡಲೇ ದಾಖಲೆ ಸಲ್ಲಿಸಿ ಎಂದರು.

ಎಷ್ಟು ಟ್ರಿಪ್ ನೀರನ್ನು ಪೂರೈಸಲಾಗಿದೆ ಎಂದು  ಶೀಟ್‌ನಲ್ಲಿ ನಮೂದಿಸಲು ನಿಮಗೆ ಬರುವುದಿಲ್ಲವೆಂದರೆ ನಿಮ್ಮ ಅರ್ಹತೆ ಏನು? ಬೇಡವೆಂದರೆ ಹೇಳಿ ನಿಮ್ಮನ್ನು ರಾಯಚೂರಿಗೋ, ಗುಲ್ಬರ್ಗಕ್ಕೋ ವರ್ಗಾಯಿಸುವೆ. ಅಲ್ಲಿ ನಿಮಗೆ ಜನ ಸನ್ಮಾನ ಮಾಡುತ್ತಾರೆ ಎಂದು ವ್ಯಂಗ್ಯವಾಡಿದರು. 

 ಬರ ನಿರ್ವಹಣೆಯಲ್ಲಿ ಉದಾಸೀನ ತೋರುವ ಯಾವುದೇ ಅಧಿಕಾರಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಅದಕ್ಕೆ ಕೂಡಲೇ ಪ್ರತಿಕ್ರಿಯಿಸಿದ ವಿಶ್ವನಾಥ್, ಲೆಕ್ಕವಿಲ್ಲದೆ, ಕಾರ್ಯನಿರ್ವಹಣಾಧಿಕಾರಿಗಳು- ತಹಶೀಲ್ದಾರರ ದೃಢೀಕರಣವಿಲ್ಲದೆ ಹಣ ಬಿಡುಗಡೆ ಮಾಡಿದರೆ ಲೆಕ್ಕಪರಿಶೋಧನೆ ವೇಳೆಯಲ್ಲಿ ಆಕ್ಷೇಪಣೆ ಎದುರಿಸಬೇಕಾಗುತ್ತದೆ.

ಹೀಗಾಗಿ ಹಣ ಬಿಡುಗಡೆ ಮಾಡಿಲ್ಲ. ಎಲ್ಲ ದಾಖಲೆಗಳನ್ನೂ ಸಭೆಗೆ ತಂದರೆ ಅಲ್ಲಿಯೇ ಹಣ ಬಿಡುಗಡೆ ಮಾಡುವೆ ಎಂದರು.

ಸೂಕ್ತ ದಾಖಲೆ ನೀಡದಿದ್ದರೆ ಟ್ಯಾಂಕರ್ ನೀರು ಪೂರೈಸಿದ ಹಣ ನೀಡಲಾಗುವುದಿಲ್ಲ ಎಂದು ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ನಡೆಸಿದ ಮೊದಲ ಸಭೆಯಲ್ಲಿ ಸ್ಪಷ್ಟಪಡಿಸಿದ್ದೆ. ಆದರೆ ಅಧಿಕಾರಿಗಳು ಸಮಸ್ಯಾತ್ಮಕ ಹಳ್ಳಿಗಳ ಗ್ರಾಮದ ಪಟ್ಟಿಯನ್ನಷ್ಟೇ ನೀಡಿದರು. ಆದರೂ  ಪ್ರತಿ ತಾಲ್ಲೂಕಿಗೆ 10 ರಿಂದ 15 ಲಕ್ಷ ರೂಪಾಯಿ ಬಿಡುಗಡೆ ಮಾಡಿರುವೆ ಎಂದರು.

ಗರಂ: ಕೊಳವೆಬಾವಿಗಳಿಗೆ ಪಂಪ್-ಮೋಟರ್ ಅಳವಡಿಸಲು ವಿಳಂಬವಾಗಿರುವ ಬಗ್ಗೆ ಗ್ರಾಮಸ್ಥರು ದೂರಿದ್ದನ್ನು ಸಭೆ ಆರಂಭದಲ್ಲೇ ಪ್ರಸ್ತಾಪಿಸಿದ ಅವರು, ಬರ ಹಿನ್ನೆಲೆಯಲ್ಲಿ ಬಿಡುಗಡೆಯಾಗಿರುವ ಹಣವನ್ನು ಬಳಸಿ ಪಂಪ್-ಮೋಟರ್‌ಗಳನ್ನು ಮುಂದಿನ ವರ್ಷ ಅಳವಡಿಸಿದರೆ ಏನು ಪ್ರಯೋಜನ? ಅಧಿಕಾರಿಗಳು ಸೋಮಾರಿತನ ಬಿಟ್ಟು ಕೆಲಸ ಮಾಡಿದರೆ ಮಾತ್ರ ಜನ ಸುಮ್ಮನಿರುತ್ತಾರೆ ಎಂದು ತೀಕ್ಷ್ಣವಾಗಿ ಪ್ರಶ್ನಿಸಿದರು.

7 ದಿನ ಗಡುವು: ಜಿಲ್ಲೆಯಲ್ಲಿ ಕೊರೆಯಲಾಗಿರುವ ಎಲ್ಲ ಕೊಳವೆಬಾವಿಗಳಿಗೆ 7 ದಿನದೊಳಗೆ ಪಂಪ್, ಮೋಟರ್ ಅಳವಡಿಸಬೇಕು ಎಂದು ಅವರು ಕಟ್ಟುನಿಟ್ಟಾಗಿ ಸೂಚಿಸಿದರು.

ಬರ ನಿರ್ವಹಣೆಯನ್ನು ಜನಪ್ರತಿನಿಧಿಗಳು, ಅಧಿಕಾರಿಗಳು ಒಟ್ಟಾಗಿ ಸೇರಿ ಮಾಡಿದರೆ ಮಾತ್ರ ಸನ್ನಿವೇಶ ಸುಧಾರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಬೇಕು ಎಂದು ಅವರು ಕೋರಿದರು.

ಖಾತ್ರಿ ಅಸಮಾಧಾನ: ಉದ್ಯೋಗಖಾತ್ರಿ ಯೋಜನೆ ಅನುಷ್ಠಾನದ ಕುರಿತು ಮಾಹಿತಿ ಪಡೆದ ಸಚಿವರು, ಅಸಮಾಧಾನ ವ್ಯಕ್ತಪಡಿಸಿದರು. ನಿರೀಕ್ಷಿತ ರೀತಿಯಲ್ಲಿ ಯೋಜನೆ ಪ್ರಗತಿ ಕಂಡಿಲ್ಲ. ಜಿಲ್ಲೆಯಲ್ಲಿ ಯೋಜನೆ ಅಡಿ ಕೆಲಸ ಮಾಡಲು ಕೂಲಿಕಾರರೇ ಬರುತ್ತಿಲ್ಲ ಎಂಬುದು ಅಚ್ಚರಿ ಮೂಡಿಸಿದೆ ಎಂದರು.

ಶಾಶ್ವತ ಪರಿಹಾರ: ಜಿಲ್ಲಾ ಪಂಚಾಯಿತಿ ಸದಸ್ಯರಾದ ಚೌಡೇಶ್ವರಿ, ಎಂ.ಎಸ್.ಆನಂದ್, ಎಸ್.ಬಿ.ಮುನಿವೆಂಕಟಪ್ಪ, ನಾರಾಯಣರೆಡ್ಡಿ, ಮುತ್ಯಾಲಮ್ಮ ಮತ್ತು ಅ.ಮು.ಲಕ್ಷ್ಮಿನಾರಾಯಣ ಅವರು ಜಿಲ್ಲೆಗೆ ಶಾಶ್ವತ ನೀರಾವರಿ ಸೌಲಭ್ಯ ಕಲ್ಪಿಸಬೇಕು ಎಂದು ಕೋರಿದರು.

ಸಭೆಯಲ್ಲಿ ಪದೇಪದೇ ಮಾತನಾಡಲು ಎದ್ದು ನಿಲ್ಲುತ್ತಿದ್ದ ಆನಂದ್ ಅವರ ಕಡೆಗೆ ಗರಂ ಆದ ಸಚಿವರು, ಇದೇನು ಜಿಲ್ಲಾ ಪಂಚಾಯಿತಿ ಸಭೆ ಎಂದು ತಿಳಿದಿದ್ದೀರಾ? ಹಲವರು ಮಾತನಾಡುವವರಿದ್ದಾರೆ. ನೀವು ಸುಮ್ಮನಿರಿ ಎಂದು ಸೂಚಿಸಿದರು. ಎಲ್ಲ ಸದಸ್ಯರಿಗೂ ಮಾತನಾಡುವ ಅವಕಾಶ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಆರ್.ವರ್ತೂರು ಪ್ರಕಾಶ್, ಉಸ್ತುವಾರಿ ಕಾರ್ಯದರ್ಶಿ ಪಿ.ಎನ್.ಶ್ರೀನಿವಾಸಾಚಾರಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಮಂಜುಳಾ, ಉಪಾಧ್ಯಕ್ಷ ಡಿ.ವಿ.ಹರೀಶ್, ಮಾಜಿ ಶಾಸಕ ಬಿ.ಪಿ.ವೆಂಕಟಮುನಿಯಪ್ಪ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.