ADVERTISEMENT

ದೀಪದಲ್ಲಿ ಮಿಂದ ಅಂತರಗಂಗೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2013, 6:46 IST
Last Updated 16 ಡಿಸೆಂಬರ್ 2013, 6:46 IST

ಕೋಲಾರ: ಕಾರ್ತೀಕ ಮಾಸದ ಕಡೆಯ ಸೋಮವಾರ ಜಾತ್ರೆಯ ಮೂಲಕ ಇತ್ತೀಚೆಗೆ ಸಾವಿರಾರು ಭಕ್ತರನ್ನು ಆಕರ್ಷಿಸಿದ್ದ ನಗರದ ಅಂತರಗಂಗೆ ಬೆಟ್ಟವು ಭಾನು­ವಾರ ಅದೇ ಭಕ್ತರು ಅಂಟಿಸಿದ ಲಕ್ಷದೀಪದ ಬೆಳಕಿನಲ್ಲಿ ಪ್ರಜ್ವಲಿಸಿತು.

ಬೆಟ್ಟದ ತಪ್ಪಲಿಂದ ಶುರುವಾದ ದೀಪಗಳ ಬೆಳಕು ತುದಿಯಲ್ಲಿರುವ ಕಾಶಿವಿಶ್ವೇಶ್ವರ ದೇವಾಲಯದ ಆವರಣದವರೆಗೂ ಬೆಳಗುತ್ತಿತ್ತು.
ಪ್ರತಿ ಮೆಟ್ಟಿನ­ಲಿ­ನಲ್ಲೂ ತಲಾ ಮೂರು ದೊಡ್ಡ ಹಣತೆಗಳನ್ನು ಅಂಟಿಸಲಾಗಿತ್ತು. ದೀಪಗಳಿಗೆ ಭಕ್ತರು ಎಣ್ಣೆ ಹಾಕಿ ಕೈ ಮುಗಿಯುತ್ತಿದ್ದರು.
ದೇಗುಲದ ಹೊರ ಆವರಣದಲ್ಲಿರುವ ಗಣೇಶನ ಗುಡಿ, ಪುಷ್ಕರಣಿಯು ದೀಪದ ಬೆಳಕಿನಲ್ಲಿ ಸೊಗಸಾಗಿ ಕಾಣುತ್ತಿತ್ತು. ಪುಷ್ಕರಣಿಯ ನೀರಲ್ಲಿ ದೀಪಗಳ ಪ್ರತಿಬಿಂಬ ಲಾಸ್ಯವಾಡಿ ಹೊಸ ಲೋಕವೊಂದನ್ನು ಸೃಷ್ಟಿ ಮಾಡಿತ್ತು.

ದೀಪದ ಬೆಳಕಿನಲ್ಲಿ ವಿದ್ವಾನ್ ಗಣೇಶ್ ಮತ್ತು ಸಹಕಲಾವಿದರು ಪ್ರಸ್ತುತ ಪಡಿಸಿದ ನಾದಸ್ವರ ವಾದನವು ಇಡೀ ವಾತಾವರಣದಲ್ಲಿ ಭಕ್ತಿ ರಸಧಾರೆಯನ್ನು ಹರಿಸಿತು.

ದೀಪವನ್ನು ಬೆಳಗಿ ದೇವರಿಗೆ ಕೈ ಮುಗಿದ ಭಕ್ತರು ನಾದಸ್ವರ ವಾದನಕ್ಕೆ ತಲೆದೂಗಿ ಹೋಗುತ್ತಿದ್ದರು.

ನಗರದ ಕೀಲಾರಿಪೇಟೆಯ ನಿವಾಸಿ, ಪೊಲೀಸ್ ಇಲಾಖೆಯ ನೌಕರರಾದ ಗೋಪಾಲ್ ಅವರು ಪ್ರತಿ ವರ್ಷವೂ ತಮ್ಮ ಸ್ವಂತ ಖರ್ಚಿನಿಂದ ಏರ್ಪಡಿಸುವ ಲಕ್ಷದೀಪೋತ್ಸದ ನಗರದ ಮನೆಮಾತಾಗಿದೆ. ಕಾರ್ತೀಕ ಮಾಸದ ಕಡೆಯ ಸೋಮವಾರವೇ ಈ ದೀಪೋತ್ಸವ ಪ್ರತಿವರ್ಷವೂ ನಡೆಯುತ್ತದೆ.ಆದರೆ ಈ ಬಾರಿ ಕಾರಣಾಂತರ­ಗಳಿಂದ ದೀಪೋತ್ಸವವನ್ನು ಒಂದು ವಾರ ತಡವಾಗಿ ನಡೆಸಲಾಗಿದೆ. ಸಂಜೆ 6.30ರ ಬಳಿಕ ಶುರುವಾದ ದೀಪೋತ್ಸವ ಮಧ್ಯರಾತ್ರಿ ಸಮೀಪಿಸುವವರೆಗೂ ನಡೆಯಿತು.

ಅಲ್ಲಿಯವರೆಗೂ ಭಕ್ತರು ಭೇಟಿ ನೀಡಿ ದೀಪಗಳಿಗೆ ತಮ್ಮ ಭಕ್ತಿ ಎಂಬ ಎಣ್ಣೆಯನ್ನು ಸುರಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.