ADVERTISEMENT

ದೂರವಾಣಿ ಸೇವೆ ಬಗ್ಗೆ ಗ್ರಾಹಕರ ಬೇಸರ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2011, 8:25 IST
Last Updated 24 ಸೆಪ್ಟೆಂಬರ್ 2011, 8:25 IST

ಗೌರಿಬಿದನೂರು: `ಮೊಬೈಲ್ ಫೋನ್ ಇದ್ದರೂ ಏನೂ ಪ್ರಯೋಜನವಿಲ್ಲ. ಯಾರಿಗಾದರೂ ಕರೆ ಮಾಡಿದರೆ, ದೂರವಾಣಿ ಸಂಪರ್ಕ ಕಡಿದು ಹೋಗುತ್ತದೆ. ಸಂಪರ್ಕ ಸಾಧಿಸಲು ಪ್ರಯತ್ನಿಸಿದರೆ, `ಚಂದಾದಾರರು ವ್ಯಾಪ್ತಿ ಪ್ರದೇಶದಿಂದ ಹೊರಗಿದ್ದಾರೆ~ ಎಂಬ ಉತ್ತರ ಸಿಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನಾವು ಫೋನ್ ಬಳಸುವುದಾದರೂ ಹೇಗೆ....?

-ಹೀಗೆ ದೂರುಗಳ ಸುರಿಮಳೆ ಕೇಳಿ ಬಂದಿದ್ದು, ಬಿಎಸ್‌ಎನ್‌ಎಸಲ್ ದೂರವಾಣಿ ಸಂಸ್ಥೆಯು ಶುಕ್ರವಾರ ಆಯೋಜಿಸಿದ್ದ ಗ್ರಾಹಕರ ಮುಕ್ತ ಅಧಿವೇಶನ ಸಭೆಯಲ್ಲಿ. ಗ್ರಾಹಕರ ಕಡಿಮೆ ಸಂಖ್ಯೆಯಲ್ಲಿದ್ದರೂ ದೂರುಗಳ ಸಂಖ್ಯೆ ಹೆಚ್ಚಿತ್ತು.

ರಾಮಾಕಲಹಳ್ಳಿ ನಿವಾಸಿ ಆರ್.ವೆಂಕಟೇಶ್ ಮಾತನಾಡಿ, `ಸೇವೆಯೇ ಮುಖ್ಯ ಎಂದು ಹೇಳುವ ಬಿಎಸ್‌ಎನ್‌ಎಲ್ ಸಂಸ್ಥೆ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಗ್ರಾಮಗಳಿಗೆ ಹೋದರೆ, ಮೊಬೈಲ್‌ಫೋನ್ ನೆಟ್‌ವರ್ಕ್ ಸಿಗುವುದಿಲ್ಲ. ಬೇರೆ ಸಂಸ್ಥೆ ಮೊಬೈಲ್ ಚೆನ್ನಾಗಿ ಕೆಲಸ ಮಾಡುತ್ತೇವೆ. ಅದಕ್ಕೆ ಎಲ್ಲರೂ ಬಿಎಸ್‌ಎನ್‌ಎಲ್ ಬಿಟ್ಟು ಬೇರೆ ಸಂಸ್ಥೆಗಳ ಸಿಮ್‌ಕಾರ್ಡ್ ಕೊಳ್ಳುತ್ತಿದ್ದಾರೆ. ತಾಲ್ಲೂಕಿನಲ್ಲಿ ಬಿಎಸ್‌ಎನ್‌ಎಲ್ ಕರೆನ್ಸಿ ಕೂಡ ಸಿಗುವುದಿಲ್ಲ~ ಎಂದರು.

`ಹೊಸೂರು, ಗೆದರೆ, ನಗರಗೆರೆ ಗ್ರಾಮಗಳಲ್ಲಿ ಬಿಎಸ್‌ಎನ್‌ಎಲ್‌ನ ನೆಟ್‌ವರ್ಕ ಸಿಗುವುದಿಲ್ಲ, ಸ್ಥಿರ ದೂರವಾಣಿಯಲ್ಲಿ ತೊಂದರೆ ಕಂಡು ಬಂದರೆ, ಬೇಗನೇ ದುರಸ್ಥಿ ಮಾಡುವುದಿಲ್ಲ. ಉತ್ತಮ ಸೇವೆ ಸಿಗದಿರುವಾಗ ನಾವು ಬಿಎಸ್‌ಎನ್‌ಎಲ್ ಸಂಸ್ಥೆ ಮೇಲೆ ಯಾಕೆ ಅಭಿಮಾನ ಇಟ್ಟುಕೊಳ್ಳಬೇಕು~ ಎಂದು ಕೆಲ ಗ್ರಾಹಕರು ಪ್ರಶ್ನಿಸಿದರು.

ಬಿಎಸ್‌ಎನ್‌ಎಲ್ ಸಂಸ್ಥೆಯ ಕೋಲಾರ ದೂರವಾಣಿ ವಿಭಾಗದ ವ್ಯವಸ್ಥಾಪಕಿ ನಿರ್ಮಲಾ ಮಾತನಾಡಿ, `ತಾಲ್ಲೂಕಿನಲ್ಲಿ ಏಳು ಸಾವಿರಕ್ಕೂ ಹೆಚ್ಚು ಬಿಎಸ್‌ಎನ್‌ಎಲ್ ಗ್ರಾಹಕರು ಇದ್ದಾರೆ. 18 ಕಡೆ ನೆಟ್‌ವರ್ಕ್ ಗೋಪುರ ಅಳವಡಿಸಲಾಗಿದೆ. ಪ್ರತಿ ಗ್ರಾಮ ಪಂಚಾಯಿತಿಗೆ ಬ್ರಾಡ್‌ಬ್ಯಾಂಡ್ ಸೌಲಭ್ಯ ಕಲ್ಪಿಸಲಾಗಿದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಪ್ರಯತ್ನಿಸಲಾಗುತ್ತಿದೆ. ದೂರು ಪರಿಹರಿಸಲು ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು~ ಎಂದರು.

ಅಧಿಕಾರಿಗಳಾದ ಚನ್ನಕೃಷ್ಣಪ್ಪ, ಯಲ್ಲಪ್ಪ, ಕೇಂದ್ರದ ಸಹಾಯಕ ಎಂಜಿನಿಯರ್  ರಾಮಕೃಷ್ಣಪ್ಪ, ವೇಣು ಮತ್ತಿತರರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.