ADVERTISEMENT

ದೇವನಹಳ್ಳಿ ಜಮೀನಿಗೆ ಬೆಲೆ ಕುಸಿತ !

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2013, 10:59 IST
Last Updated 20 ಏಪ್ರಿಲ್ 2013, 10:59 IST

ಕೆಜಿಎಫ್: ಕಳೆದ ಐದು ವರ್ಷದ ಅವಧಿಯಲ್ಲಿ ದೇವನಹಳ್ಳಿಯ ಸುತ್ತಮುತ್ತಲಿನ ಜಮೀನಿನ ಬೆಲೆ ಕುಸಿತ ಕಂಡಿದೆಯೇ?

ಅಂತರರಾಷ್ಟ್ರೀಯ ವಿಮಾನ ನಿಲ್ದಾಣವೂ ಇರುವ ಈ ಪ್ರದೇಶದಲ್ಲಿ ಜಮೀನಿನ ಬೆಲೆ ಗಗನಕ್ಕೆ ಏರುತ್ತಿದೆ ಎನ್ನುತ್ತಾರೆ ಜನ. ಆದರೆ ಕೆಜಿಎಫ್ ವಿಧಾನಸಭಾ ಕ್ಷೇತ್ರದಲ್ಲಿ  ಆರ್‌ಪಿಐ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿರುವ ಎಸ್.ರಾಜೇಂದ್ರನ್ ಮಾತ್ರ ಇಲ್ಲ ಎನ್ನುತ್ತಿದ್ದಾರೆ.

ನಾಮಪತ್ರದ ಜೊತೆ ಸಲ್ಲಿಸಿರುವ ಅವರ ಅಫಿಡವಿಟ್‌ನಲ್ಲಿ ಈ ಅಂಶ ಎದ್ದು ಕಾಣುತ್ತದೆ. ದೇವನಹಳ್ಳಿ ತಾಲ್ಲೂಕಿನ ಅಂತರಹಳ್ಳಿ ಸರ್ವೆ ನಂಬರ್ 113 ರಲ್ಲಿ 3.05 ಎಕರೆ ಕೃಷಿ ಜಮೀನನ್ನು ಅವರು 1993ರಲ್ಲಿ ರೂ 88 ಸಾವಿರಕ್ಕೆ ಖರೀದಿಸಿದ್ದರು. 2008ರಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದಾಗ ಅವರು ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ಅಂದಿನ ಮಾರುಕಟ್ಟೆ ಮೌಲ್ಯ ರೂ 5 ಲಕ್ಷ ಎಂದು ತಿಳಿಸಿದ್ದರು. ಆದರೆ 2013ರ ಚುನಾವಣೆ ವೇಳೆಗೆ ಅದರ ಬೆಲೆ ಸುಮಾರು 3ರಿಂದ 4 ಲಕ್ಷ ಎಂದು ಅವರು ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. 2008ರಲ್ಲಿ ಅವರ ಬಳಿ 5 ಲಕ್ಷ ಮೌಲ್ಯದ ಕಾರಿತ್ತು. ಈಗ ಅವರ ಬಳಿ 15 ಲಕ್ಷ ಮೌಲ್ಯದ ಇನ್ನೋವಾ ಕಾರಿದೆ.

ಎರಡು ಬಾರಿ ಶಾಸಕರಾಗಿದ್ದ 53 ವಯಸ್ಸಿನ ಎಸ್.ರಾಜೇಂದ್ರನ್ ಅವಿವಾಹಿತರು ಜೊತೆಗೆ ಎಂ.ಎ ಹಾಗೂ ಎಲ್‌ಎಲ್‌ಬಿ ಪದವೀಧರರು.

ಪ್ರಮಾಣ ಪತ್ರದಲ್ಲಿ ಘೋಷಿಸಿರುವ ಪ್ರಕಾರ ಅವರ ಚರಾಸ್ತಿ ರೂ 31.30 ಲಕ್ಷ ಮತ್ತು ಸ್ಥಿರಾಸ್ತಿ ರೂ 21 ಲಕ್ಷ.  ಅವರ ಬಳಿ 5 ಲಕ್ಷ ರೂಪಾಯಿ ಇದೆ. ರಾಬರ್ಟ್‌ಸನ್‌ಪೇಟೆ ಎಸ್‌ಬಿಎಂ ಶಾಖೆಯ ಅವರ ಖಾತೆಯಲ್ಲಿ ರೂ 2.30 ಲಕ್ಷ ಠೇವಣಿ ಇದೆ. ಇದು ವಿನೋದ್ ರತ್ನಂ ಎಂಬುವವರು ಕೊಡುಗೆಯಾಗಿ ನೀಡಿದ್ದು ಎಂದು ಅವರು ತಿಳಿಸಿದ್ದಾರೆ. 9 ಲಕ್ಷ ಮೌಲ್ಯದ ಸುಮಾರು 250 ರಿಂದ 300 ಗ್ರಾಂ ಚಿನ್ನ ಇದೆ. 2008ರಲ್ಲಿ ಅವರ ಬಳಿ ಅಂದಿಗೆ 55 ಸಾವಿರ ಮೌಲ್ಯದ 50 ಗ್ರಾಂ ಚಿನ್ನವಿತ್ತು.

ಊರಿಗಾಂಪೇಟೆಯಲ್ಲಿ 1982 ರಲ್ಲಿ ಸೈಟ್ ಖರೀದಿ ಮಾಡಿದ್ದು ಅದರ ಪ್ರಸ್ತುತ ಮಾರುಕಟ್ಟೆ ಮೌಲ್ಯ ಸುಮಾರು ರೂ 2 ಲಕ್ಷ. ರಾಬರ್ಟ್‌ಸನ್‌ಪೇಟೆಯಲ್ಲಿ ಒಂದು ವಾಸದ ಮನೆ, ಕರ್ನಾಟಕ ಹೌಸಿಂಗ್  ಬೋರ್ಡ್‌ನಿಂದ ಯಲಹಂಕದಲ್ಲಿ  ಅವರಿಗೆ 445 ಚದರ ಅಡಿಗಳ ನಿವೇಶನ ಮಂಜೂರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.