ADVERTISEMENT

ದೇವಾಲಯಗಳಲ್ಲಿ ಜಾತಿಯತೆ ಸರಿಯಲ್ಲ

ನಾಗನಾಳ: ಮುನೇಶ್ವರ ಸ್ವಾಮಿ ದೇವಾಲಯ ಜೀರ್ಣೋದ್ಧಾರ, ದಲಿತರಿಗೆ ಪ್ರವೇಶ

​ಪ್ರಜಾವಾಣಿ ವಾರ್ತೆ
Published 18 ಜೂನ್ 2018, 8:23 IST
Last Updated 18 ಜೂನ್ 2018, 8:23 IST

ಕೋಲಾರ: ‘ದೇವರಿಗೆ ಅಸಮಾನತೆ ಎನ್ನುವುದೇ ಇಲ್ಲ. ಆದರೆ ದೇವಾಲಯಗಳನ್ನು ಕಟ್ಟಿ ಅಲ್ಲಿಯು ಸಹ ಜಾತಿಯತೆ ಮಾಡುವುದು ಎಷ್ಟರಮಟ್ಟಿಗೆ ಸರಿ’ ಎಂದು ವಿಧಾನಸಭೆ ಅಧ್ಯಕ್ಷ ಕೆ.ಆರ್.ರಮೇಶ್‌ಕುಮಾರ್ ಪ್ರಶ್ನಿಸಿದರು.

ತಾಲ್ಲೂಕಿನ ನಾಗನಾಳ ಗ್ರಾಮದಲ್ಲಿ ಭಾನುವಾರ ನಡೆದ ಮುನೇಶ್ವರಸ್ವಾಮಿ ದೇವಾಲಯದ ಜೀರ್ಣೋದ್ಧಾರ ಹಾಗೂ ದೇವಾಲಯಕ್ಕೆ ದಲಿತರ ಪ್ರವೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ‘ಎಲ್ಲರೂ ಮನುಷ್ಯರಾಗಿ ಬದುಕುವ ಪ್ರಯತ್ನ ಮಾಡಿದರೆ, ಸಮಾಜದಲ್ಲಿ ಸಮಾನತೆ ಕಾಣಲು ಸಾಧ್ಯವಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.

‘ಮನುಷ್ಯ ಎಲ್ಲವನ್ನೂ ತನ್ನ ಸ್ವಾರ್ಥಕ್ಕಾಗಿ ಮಾಡುತ್ತಿದ್ದಾನೆ. ಎಲ್ಲವನ್ನೂ ಮಾಡಿ ಸತ್ಯಕ್ಕೆ ಸಮೀಪವಾಗದಿದ್ದರೆ ಮುನೇಶ್ವರ ದೇವಾಲಯ, ಶನೇಶ್ಚರ ದೇವಾಲಯ ಕಟ್ಟಿ ಏನು ಪ್ರಯೋಜನೆ. ಪ್ರಕೃತಿಯ ಸೃಷ್ಟಿಯನ್ನು ನಾವು ಸ್ಥಳಾಂತರ ಮಾಡಲು ಆಗುವುದಿಲ್ಲ. ಅದನ್ನು ನಮಿಸುವುದರಲ್ಲಿ ಯಾವುದೇ ತಪ್ಪಿಲ್ಲ’ ಎಂದರು.

ADVERTISEMENT

‘ಮನುಷ್ಯ ತಾನು ಸೃಷ್ಟಿ ಮಾಡಿದ ರೂಪಾಯಿ, ನಾಣ್ಯಕ್ಕೆ ಬಲಿಯಾಗುತ್ತಿದ್ದಾನೆ. ಜಾತಿ ದೇವರ ಸೃಷ್ಟಿಸಿಯಲ್ಲ, ಮನುಷ್ಯನ ಸೃಷ್ಟಿಯಾಗಿದೆ. ಪ್ರಕೃತಿ ಮತ್ತು ಮನುಷ್ಯ ಸೃಷ್ಟಿಗೂ ಯಾವುದೇ ಸಂಬಂಧವಿಲ್ಲ. ನಾವೇ ಸೃಷ್ಟಿಸಿರುವ ಅಪಾಯ, ಅಘಾತಗಳನ್ನು ನಿವಾರಣೆ ಮಾಡಿಕೊಳ್ಳಲು ಮುಂದಾಗಬೇಕು’ ಎಂದು ಸಲಹೆ ನೀಡಿದರು.

‘ಜಿಲ್ಲೆಗೆ ಪರಮಶತ್ರುಗಳಾಗಿರುವ ನೀಲಗಿರಿ ಮತ್ತು ಜಾಲಿ ನಿರ್ಮೂಲನೆಗೆ ಪ್ರತಿಯೊಬ್ಬರೂ ಪಣತೊಡಬೇಕು. ಕೆಸಿ ವ್ಯಾಲಿ ಯೋಜನೆಯ ನೀರು ಜಿಲ್ಲೆಗೆ ಬಂದಿದೆ. ಸದ್ಯದಲ್ಲಿಯೇ ನೀರಿನ ಪ್ರಮಾಣ ಮತ್ತಷ್ಟು ಹೆಚ್ಚಾಗುತ್ತದೆ. 1 ವರ್ಷದಲ್ಲಿ ಯರಗೋಳ್ ಯೋಜನೆಯನ್ನು ಪೂರ್ಣಗೊಳಿಸಲು ಪ್ರಮಾಣಿಕವಾಗಿ ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

‘ಜಿಲ್ಲೆಗೆ ಬರುತ್ತಿರುವ ನೀರನ್ನು ನೀಲಗಿರಿ, ಜಾಲಿ ಮರಗಳಿಗೆ ಕುಡಿಸಿದರೆ ಮಲೆನಾಡು ಪ್ರದೇಶವನ್ನಾಗಿ ನಿರ್ಮಾಣ ಮಾಡಲು ಆಗುವುದಿಲ್ಲ. ನಿಷ್ಪ್ರಯೋಜಕ ನೀಲಗಿರಿ ಹಾಗೂ ಜಾಲಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ರೈತರು, ಸಾರ್ವಜನಿಕರು ಮನಸ್ಸು ಮಾಡಬೇಕು’ ಎಂದು ಕೋರಿದರು.

‘ಮುಜರಾಯಿ ದೇವಾಯಕ್ಕೆ ದಲಿತರು ಪ್ರವೇಶ ಮಾಡಲು ಪ್ರತಿ ಗ್ರಾಮದಲ್ಲೂ ಅವಕಾಶ ಮಾಡಿಕೊಡುತ್ತೇನೆ’ ಎಂದು ಶಾಸಕ ಕೆ.ಶ್ರೀನಿವಾಸಗೌಡ ಭರವಸೆ ನೀಡಿದರು.

‘ನಾನು ಬಾಲ್ಯದಿಂದಲ್ಲೂ ದಲಿತರ ಜತೆಗೆ ಬೆಳೆದಿದ್ದೇನೆ. ಗ್ರಾಮಗಳಲ್ಲಿ ಹರಿಜನರಿಗೆ ದೇವಾಲಯಗಳ ಪ್ರವೇಶ ಇಲ್ಲದಿರುವುದು ನೋವಿನ ಸಂಗತಿ. ಯಾರೂ ಹುಟ್ಟುವಾಗ ಇಂತಹ ಜಾತಿಯಲ್ಲಿ ಹುಟ್ಟಬೇಕು ಎಂದು ಅರ್ಜಿ ಹಾಕಿಕೊಂಡು ಹುಟ್ಟುವುದಿಲ್ಲ. ತಿರುಪತಿ ದೇವಾಲಯಕ್ಕೆ ಎಲ್ಲರೂ ಹೋಗುತ್ತಾರೆ. ಆದರೆ, ನಮ್ಮೂರಿನ ದೇವಾಲಯಗಳಿಗೆ ಯಾಕೆ ಪ್ರವೇಶವಿಲ್ಲ ಎನ್ನುವುದರ ಬಗ್ಗೆ ಎಲ್ಲರೂ ಚಿಂತಿಸಿ, ನಾವೆಲ್ಲ ಒಂದೇ ಎನ್ನುವ ಭಾವನೆ ರೂಢಿಸಿಕೊಳ್ಳಬೇಕು’ ಎಂದು ಹೇಳಿದರು.

ಚಿಕ್ಕಬಳ್ಳಾಪುರ ಶಾಖಾ ಮಠದ ಮಂಗಳನಾಥ ಸ್ವಾಮೀಜಿ ಆಶೀರ್ವಚನ ನೀಡಿ ಮಾತನಾಡಿ, ‘ದೇವ ಮಂದಿರಗಳಲ್ಲಿ ಸಮಾನತೆ ಇಲ್ಲದಿದ್ದರೆ ನಾವೆಲ್ಲರೂ ಮನುಷ್ಯರಾಗಿ ಇರುವುದೇ ವ್ಯರ್ಥ. ಪಂಚಭೂತಗಳಿಂದಲೇ ಎಲ್ಲರೂ ಬದುಕಬೇಕಿದ್ದು, ಮನುಷ್ಯರೂ ಸಮಾನವಾಗಿ ಬದುಕಿದರೆ ಅರ್ಥ ಬರುತ್ತದೆ’ ಎಂದರು.

ಗ್ರಾಮದ ದಲಿತರು ಮುನೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ನಾಗಲಾಪುರ ಶಾಖಾ ಮಠದ ತೇಜೇಶಲಿಂಗ ಶಿವಾಚಾರ್ಯ ಸ್ವಾಮೀಜಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಸೋಮಣ್ಣ, ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕರಾದ ರಮೇಶ್, ರಾಮು, ಡಿವೈಎಸ್‌ಪಿ ಶಿವಶಂಕರೆಡ್ಡಿ, ದಲಿತ ಮುಖಂಡ ಟಿ.ವಿಜಿಕುಮಾರ್, ಅರ್ಚಕ ಶ್ರೀರಾಮಯ್ಯ ಹಾಜರಿದ್ದರು.

ದಲಿತರಿಗೆ ಮುಕ್ತ ಅವಕಾಶ ನೀಡಿ

ಜಿಲ್ಲೆಯಲ್ಲಿ 1,300 ಮುಜರಾಯಿ ದೇವಾಲಯಗಳಿದ್ದು, 1,000 ದೇವಾಲಯಗಳಲ್ಲಿ ಆ ಊರಿನ ದಲಿತರಿಗೆ ಪ್ರವೇಶ ಇಲ್ಲ. ಈ ಬಗ್ಗೆ ಅನೇಕ ಶಾಸಕರಿಗೆ ಸೂಕ್ಷ್ಮಪ್ರಜ್ಞೆಯೂ ಇಲ್ಲ. ಇನ್ನಾದರೂ ಜನಪ್ರತಿನಿಧಿಗಳು ದಲಿತರಿಗೆ ಮುಕ್ತ ಅವಕಾಶ ಮಾಡಿಕೊಡಲಿ ಎಂದು ಗೃಹ ಪ್ರವೇಶ ಸಮಿತಿ ಸದಸ್ಯ ಅರಿವು ಶಿವಪ್ಪ ತಿಳಿಸಿದರು.

ಪ್ರಕೃತಿ ಮತ್ತು ಮನುಷ್ಯ ಸೃಷ್ಟಿಗೂ ಯಾವುದೇ ಸಂಬಂಧವಿಲ್ಲ. ನಾವೇ ಸೃಷ್ಟಿಸಿರುವ ಅಪಾಯಗಳನ್ನು ನಿವಾರಣೆ ಮಾಡಿಕೊಳ್ಳಲು ಮುಂದಾಗಬೇಕು
ಕೆ.ಆರ್.ರಮೇಶ್‌ಕುಮಾರ್, ವಿಧಾನಸಭೆ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.