ADVERTISEMENT

ನಡೆದಿದೆ ಹಂಚಿಕೆ ಲೆಕ್ಕಾಚಾರ...

ನಗರಸಭೆ ಅಧ್ಯಕ್ಷ ಸ್ಥಾನ: ಚುನಾವಣೆ ಇಂದು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2014, 9:03 IST
Last Updated 10 ಮಾರ್ಚ್ 2014, 9:03 IST

ಕೋಲಾರ: ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ನಗರ­ಸಭೆ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ಸೋಮವಾರ ನಡೆಯಲಿದೆ.

ಒಗ್ಗಟ್ಟು ಕಾಪಾಡುವ ಸಲುವಾಗಿ ಜೆಡಿಎಸ್‌ನ 16 ಸದಸ್ಯರು ಮತ್ತು ಇಬ್ಬರು ಪಕ್ಷೇತರ ಸದಸ್ಯರು (31ನೇ ವಾರ್ಡಿನ ಸುಲ್ತಾನ, 16ನೇ ವಾರ್ಡಿನ ಪಕ್ಷೇತರ ಸದಸ್ಯ ಟಿ.ಎಂ.ಬಷೀರ್‌) ಮಾ.3ರಿಂದ ಕೈಗೊಂಡಿದ್ದ ಕೇರಳ ಪ್ರವಾಸ ಮುಗಿಯುವ ಹಂತಕ್ಕೆ ಬಂದಿದ್ದು, ಎಲ್ಲರೂ ರಾತ್ರಿಯೇ ಬೆಂಗ­ಳೂರಿಗೆ ಬಂದಿದ್ದಾರೆ. ಕೋಲಾರಕ್ಕೆ ಚುನಾವಣೆ ದಿನವಾದ ಸೋಮವಾರ ಬರಲಿದ್ದಾರೆ.

ಈ ನಡುವೆ, ಅಧ್ಯಕ್ಷ ಸ್ಥಾನ ಯಾರಿಗೆ ದೊರಕುತ್ತದೆ ಎಂಬ ಪ್ರಶ್ನೆಗಿಂತಲೂ ಚುನಾವಣೆ ಬಳಿಕ ಆ ಸ್ಥಾನವನ್ನು ಎಷ್ಟು ಜನಕ್ಕೆ ಹಂಚಲಾಗುತ್ತದೆ ಎಂಬ ಕುರಿತ ಚರ್ಚೆಯೇ ಹೆಚ್ಚು ನಡೆಯುತ್ತಿದೆ. ಮೊದಲ 30 ತಿಂಗಳ ಅವಧಿಗೆ (ಈಗಾ­ಗಲೇ 12 ತಿಂಗಳು ಮುಗಿದಿದೆ) ಅಧ್ಯಕ್ಷ­ರಾಗುವ ಮೊದಲಿಗರು ಯಾರು ಎಂಬ ಪ್ರಶ್ನೆಯೂ ಮೂಡಿದೆ. ಈ ಮುಂಚಿನ ಅವಧಿಯಲ್ಲಿ ಅಲ್ಪಸಂಖ್ಯಾತ ಸಮು­ದಾಯಕ್ಕೆ ಸೇರಿದವರೇ ಅಧಿಕಾರದ ಅವಕಾಶ ಹೆಚ್ಚು  ಪಡೆದಿದ್ದಾರೆ ಎಂಬ ವಾದ ಮಂಡಿಸಿರುವ ಆಕಾಂಕ್ಷಿಗಳು ಅಲ್ಪಸಂಖ್ಯಾತರ ಬದಲು ಹಿಂದುಳಿದ ವರ್ಗಕ್ಕೆ ಸೇರಿದವರಿಗೆ ಅಧ್ಯಕ್ಷ ಸ್ಥಾನದ ಅಧಿಕಾರ ಹಂಚಬೇಕು ಎಂದೂ ಪ್ರತಿಪಾದಿಸುತ್ತಿದ್ದಾರೆ ಎನ್ನ­ಲಾಗಿದೆ.
ಆಕಾಂಕ್ಷಿಗಳು ಹೆಚ್ಚು: ಅಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿರುವುದ­ರಿಂದ ಪಕ್ಷದ ಬಹುತೇಕರು ಆಕಾಂಕ್ಷಿ­ಗಳಾಗಿರುವುದು ಜೆಡಿಎಸ್‌ ಅನ್ನು ಇಕ್ಕಟ್ಟಿಗೆ ಸಿಲುಕಿಸಿದೆ.

3ನೇ ವಾರ್ಡಿನ ಬಿ.ಎಂ.ಮುಬಾ­ರಕ್, 11ನೇ ವಾರ್ಡಿನ ಸಿ.ಎ.ಸುಕು­ಮಾರ್, 12ನೇ ವಾರ್ಡಿನ ವಿ.ರವೀಂದ್ರ, 14ನೇ ವಾರ್ಡಿನ ಎಸ್.­ಆರ್‍.­ಮುರಳಿಗೌಡ, 17ನೇ ವಾರ್ಡಿನ ಅಫ್ರೋಸ್ ಪಾಷಾ ಅಧ್ಯಕ್ಷ ಸ್ಥಾನಕ್ಕೆ ತಾವು ಆಕಾಂಕ್ಷಿಗಳಾ­ಗಿದ್ದೇವೆ ಎಂದು ಈ ಮುಂಚೆಯೇ ಮುಖಂಡ ಕೆ.ಶ್ರೀನಿವಾಸಗೌಡರಿಗೆ ತಿಳಿಸಿ­ದ್ದರು. ಪಕ್ಷ ಬೆಂಬಲ ನೀಡಿದರೆ ತಾವೂ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದಾಗಿ 2ನೇ ವಾರ್ಡಿನ ಸದಸ್ಯ, ಸಿಪಿಎಂ ಮುಖಂಡ ಗಾಂಧಿನಗರ ನಾರಾಯಣಸ್ವಾಮಿ ಹೇಳಿ­ದ್ದರು. ಈಗ ಆಕಾಂಕ್ಷಿಗಳ ಸಾಲಿನಲ್ಲಿ 13ನೇ ವಾರ್ಡಿನ ಸಿ.ವಿ.ರಾಧಾಕೃಷ್ಣ ಕೂಡ ಸೇರಿದ್ದಾರೆ ಎನ್ನಲಾಗಿದೆ.

ಜಾತಿ ಲೆಕ್ಕಾಚಾರ: ಅಧ್ಯಕ್ಷ ಸ್ಥಾನ ದೊರಕುವುದು ಖಚಿತವಾಗಿರುವ ಪಕ್ಷ­ದಲ್ಲಿ ಅಧಿಕಾರದ ಅವಕಾಶವನ್ನು ಒಬ್ಬರಿಗೆ ಮಾತ್ರ ನೀಡುವುದಕ್ಕಿಂತಲೂ ನಿರ್ದಿಷ್ಟ ಅವಧಿಗೆ ಹಂಚುವ ಲೆಕ್ಕಾ­ಚಾರ ಸದಸ್ಯರ ಜಾತಿಗಳ ಹಿನ್ನೆಲೆಯಲ್ಲಿ ನಡೆಯುತ್ತಿದೆ ಎಂದು ಸದಸ್ಯರೊಬ್ಬರು ತಿಳಿಸಿದ್ದಾರೆ.

ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ ಅಫ್ರೋಸ್ ಪಾಶಾ, ಬಿ.ಎಂ.­ಮುಬಾರಕ್, ಒಕ್ಕಲಿಗರಾದ ರವೀಂದ್ರ, ಎಸ್.ಆರ್‌.ಮುರಳಿಗೌಡ, ಸಿ.ವಿ.­ರಾಧಾ­ಕೃಷ್ಣ, ಬಣಜಿಗರಾದ ಸಿ.ಎ.ಸುಕು­ಮಾರ್‌ ಅವರ ಪೈಕಿ ಯಾರಿಗೆ ಅಧ್ಯಕ್ಷ ಸ್ಥಾನವನ್ನು ಕಲ್ಪಿಸುವುದು ಎಂಬ ಜಿಜ್ಞಾ­ಸೆಯೂ ಪಕ್ಷದ ವರಿಷ್ಠರಲ್ಲಿ ನಡೆ­ಯುತ್ತಿದೆ.

ಜೆಡಿಎಸ್‌ಗೆ ಖಚಿತ?
35 ವಾರ್ಡಿರುವ ನಗರಸಭೆಯಲ್ಲಿ ಒಬ್ಬ ಸದಸ್ಯರ ನಿಧನದಿಂದಾಗಿ 34 ಸದಸ್ಯರಿದ್ದಾರೆ. ಅವರೊಂದಿಗೆ ಚುನಾವಣೆಯಲ್ಲಿ ಕ್ಷೇತ್ರದ ಸಂಸದರು, ಶಾಸಕರು, ಒಬ್ಬ ವಿಧಾನ ಪರಿಷತ್ ಸದಸ್ಯರು ಸೇರಿ 37 ಮತಗಳಿರುತ್ತವೆ.

ಅದರಂತೆ ಅಧ್ಯಕ್ಷ ಸ್ಥಾನವನ್ನು ಗೆಲ್ಲಲು ಅಭ್ಯರ್ಥಿ ಅರ್ಧಕ್ಕಿಂತಲೂ ಒಂದು ಹೆಚ್ಚು, ಅಂದರೆ 19 ಮತಗಳನ್ನು ಪಡೆಯಲೇಬೇಕು.
ಜೆಡಿಎಸ್ ಪಕ್ಷದಲ್ಲಿ 17 ಸದಸ್ಯರ ಬಲವಿದೆ. ಅದರೊಂದಿಗೆ ಪಕ್ಷೇತರರಾದ ಇಬ್ಬರು ಸದಸ್ಯರೂ ಪಕ್ಷದವರೊಟ್ಟಿಗೇ ಪ್ರವಾಸದಲ್ಲಿರುವುದರಿಂದ ಅಗತ್ಯವಿರುವ ಮತಗಳಷ್ಟೂ ಜೆಡಿಎಸ್‌ನ ಪಾಳೆಯದಲ್ಲಿವೆ. ಹೀಗಾಗಿ ಅಧ್ಯಕ್ಷ ಸ್ಥಾನ ಖಚಿತ ಎಂಬ ಭರವಸೆಯಲ್ಲಿ ಆ ಪಕ್ಷ ಇದೆ.

ಕಾಂಗ್ರೆಸ್‍ ಪಕ್ಷದಲ್ಲಿ 13 ಮತಗಳ ಬಲವಿದೆ. ಹೆಚ್ಚುವರಿಯಾಗಿ 6 ಸದಸ್ಯರ ಬಲವನ್ನು ಪಕ್ಷ ಗಳಿಸಬೇಕಾಗಿದೆ. ಈ ಗಳಿಕೆ ಪ್ರಯತ್ನಗಳು ನಡೆದಿವೆ. ನಗರಸಭೆಯಲ್ಲಿ ಕೇವಲ ಐವರು ಪಕ್ಷೇತರ ಸದಸ್ಯರ ಬಲವಿರುವ ಶಾಸಕ ಆರ್‍.ವರ್ತೂರು ಪ್ರಕಾಶ್‍ ಅವರ ನಡೆಯೂ ನಿಗೂಢವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT