ADVERTISEMENT

ನಿರ್ಲಕ್ಷ್ಯಕ್ಕೆ ಗುರಿಯಾದ ಕೌಂಡಿನ್ಯ ನದಿ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2011, 7:30 IST
Last Updated 29 ಆಗಸ್ಟ್ 2011, 7:30 IST
ನಿರ್ಲಕ್ಷ್ಯಕ್ಕೆ ಗುರಿಯಾದ ಕೌಂಡಿನ್ಯ ನದಿ
ನಿರ್ಲಕ್ಷ್ಯಕ್ಕೆ ಗುರಿಯಾದ ಕೌಂಡಿನ್ಯ ನದಿ   

ಮುಳಬಾಗಲು: ಬಯಲು ಸೀಮೆ ಎಂದೇ ಹೆಸರಾಗಿರುವ ಕೋಲಾರ ಜಿಲ್ಲೆಯಲ್ಲಿ ನದಿಯೊಂದು ಹರಿಯುತ್ತದೆ ಎಂಬ ಮಾತೇ ಸೋಜಿಗ. ಆದರೆ ಗುಪ್ತ ಗಾಮಿನಿಯಾಗಿ ಹುಟ್ಟಿ ನೆರೆಯ ರಾಜ್ಯಗಳಿಗೆ ಹರಿದು ಹೋಗುವ, ನಮ್ಮ ಸನಿಹದಲ್ಲಿಯೇ ಇರುವ ನದಿಯನ್ನು ರಕ್ಷಿಸಿಕೊಳ್ಳುವ ಪ್ರಯತ್ನ ಮಾತ್ರ ನಡೆದಿಲ್ಲ ಎನ್ನುವುದು ವಿಷಾದದ ಸಂಗತಿ.

ತಾಲ್ಲೂಕಿನ ಕುರುಡುಮಲೆ ಗ್ರಾಮ ಪುರಾಣ ಪ್ರಸಿದ್ಧ ವಿನಾಯಕ ದೇವಾಲಯಕ್ಕೆ ಹೆಸರು ವಾಸಿ. ಇದೇ ಗ್ರಾಮದ ಬೆಟ್ಟದ ತಪ್ಪಲಿನಲ್ಲಿ ಕೌಂಡಿನ್ಯ ನದಿ ಹುಟ್ಟುತ್ತದೆ. ಇದು ಮಳೆಗಾಲದಲ್ಲಿ ಗ್ರಾಮದ ಪೂರ್ವ ದಿಕ್ಕಿನ ಗ್ರಾಮಗಳ (ತಗ್ಗು ಪ್ರದೇಶ) ಮೂಲಕ ಹರಿದು ಆಂಧ್ರಪ್ರದೇಶದಲ್ಲಿ ಕೆರೆಗಳನ್ನು ತುಂಬಿಸಿ ಮತ್ತೆ ತಮಿಳುನಾಡಿನತ್ತ ಹರಿಯುತ್ತದೆ. ಬಹುಪಾಲು ಇಲ್ಲಿನ ನೀರು ಸದುಪಯೋಗವಾಗುವುದು ಆಂಧ್ರದ ಚಿತ್ತೂರು ಜಿಲ್ಲೆಯವರಿಗೆ. ಅಲ್ಲಿ ಕೌಂಡಿನ್ಯ ನದಿ ತುಂಬ ಹೆಸರು ವಾಸಿ. ಅಂದಿನ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯುಡು ಚಿತ್ತೂರು ಜಿಲ್ಲೆಗೆ  ಬಂದಾಗ ಕೌಂಡಿನ್ಯ ನದಿ ನೀರನ್ನು ಹೆಚ್ಚಿನ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಲು ಚೆಕ್ ಡ್ಯಾಮ್ ನಿರ್ಮಿಸಲು ಇತರೆ ಯೋಜನೆ ಕೈಗೊಳ್ಳಲು ಕ್ರಮ ತೆಗೆದುಕೊಂಡಿದ್ದರು. ಚಿತ್ತೂರಿನಲ್ಲಿ  ಕೌಂಡಿನ್ಯ ನದಿಯ ನೀರಿನ ಉಪಯೋಗದ ಬಗ್ಗೆ ಬಹುತೇಕರು ಕೃತಜ್ಞತೆಯಿಂದ ಮಾತನಾಡುತ್ತಾರೆ.

ನಮ್ಮ ಗ್ರಾಮದಲ್ಲಿ ಹುಟ್ಟಿ ಹರಿಯುವ ನದಿ ನೆರೆ ರಾಜ್ಯದಲ್ಲಿ ಅಷ್ಟೊಂದು ಹೆಸರುವಾಸಿಯಾಗಿದೆ. ಆದರೆ ನಮ್ಮವರಿಗೆ ಇಂತಹ ನದಿಯ ನೀರನ್ನು ಸಮರ್ಥವಾಗಿ ಉಪಯೋಗಿಸಿಕೊಂಡು ಅಂತರ್ಜಲ ಮಟ್ಟ ಹೆಚ್ಚಿಸಿಕೊಳ್ಳುವ ಯೋಚನೆ ಬಂದಿಲ್ಲ.

ಕೌಂಡಿನ್ಯ ನದಿ ಮೂಲದ ಬಗ್ಗೆ ಐತಿಹ್ಯವೊಂದು ಚಾಲ್ತಿಯಲ್ಲಿದೆ. ಕುರುಡುಮಲೆ ತಪ್ಪಲ್ಲಿನಲ್ಲಿ ಜೀವಿಸುತ್ತಿದ್ದ ಕೌಂಡಿನ್ಯ ಮಹರ್ಷಿಯ ಹೆಸರು ನದಿಗೆ ಬಂದಿದೆ ಎಂಬುದು ಪ್ರತೀತಿ. `ಈ ನದಿಯಲ್ಲಿ ಮಳೆಗಾಲವಲ್ಲದೆ ಬೇಸಿಗೆಯಲ್ಲೂ ಸಹ ನೀರು ಹರಿಯುತ್ತಿತ್ತು. ಇದು ನಲವತ್ತು ವರ್ಷಗಳ ಹಿಂದಿನ ಮಾತು~ ಎನ್ನುತ್ತಾರೆ ಗ್ರಾಮದ ವಕೀಲ ಮಂಜುನಾಥ್.

ಆದರೆ ಇಂದು ಕುರುಡುಮಲೆ ಬೆಟ್ಟ ಗಣಿಗಾರಿಕೆಗೆ ತುತ್ತಾಗಿದೆ. ಈಗಾಗಲೇ ಬೆಟ್ಟದ ಮೂಲ ಸ್ವರೂಪವೇ ಬದಲಾಗಿದೆ. ಗಣಿಗಾರಿಕೆ ಹಾಗೂ ಹಿಂದೆ ಇದ್ದ ಅಪಾರವಾದ ಗಿಡಮರಗಳು ಬೆಟ್ಟದ ಮೂಲ ಸ್ವರೂಪವೇ ಬದಲಾಗಿದೆ. ಗಣಿಗಾರಿಕೆ ಹೀಗೆ ಮುಂದುವರಿದರೆ ಕೌಂಡಿನ್ಯ ನದಿ ಹುಟ್ಟುವ ಸ್ಥಳವೇ ಮುಚ್ಚಿಹೋಗುವ ಸಂಭವವಿದೆ. ಅನಧಿಕೃತ ಸಾಗುವಳಿ ಜಮೀನು ಪಡೆಯುವ ಭರದಲ್ಲಿ ಸುತ್ತಮುತ್ತಲ ಅರಣ್ಯ ಸಂಪತ್ತು ಕೂಡ ಹಾಳಾಗಿದೆ.

ನದಿ ಹರಿಯುವ ಲಿಂಗಾಪುರ, ಶಿದ್ಧಘಟ್ಟ ಗ್ರಾಮಗಳ ಕೆರೆಗಳಲ್ಲಿ ಮರಳು ಹಾಗೂ ವೃಕ್ಷ ಸಂಪತ್ತು ಲೂಟಿಯಾಗಿ ಕೌಂಡಿನ್ಯ ನದಿಯ ಸ್ವರೂಪ ನಾಶವಾಗಿದೆ.

ಇಷ್ಟಾದರೂ ಮಳೆಗಾಲದಲ್ಲಿ ಯತೇಚ್ಚವಾಗಿ ಸಂಗ್ರಹವಾದ ನೀರು ನೆರೆ ರಾಜ್ಯದ ಪಾಲಾಗುತ್ತದೆ. ಕೌಂಡಿನ್ಯ ನದಿಯನ್ನು  ರಕ್ಷಿಸಿಕೊಳ್ಳುವ ಚಿಂತನೆ ನಡೆದಿಲ್ಲ.

ಇತಿಹಾಸದಲ್ಲೂ ನದಿಯ ಹೆಸರಿದೆ. ಬಾಣ ರಾಜರು ಕೌಂಡಿನ್ಯ ಮತ್ತು ಪಾಲರ್ ನದಿಗಳ ಸೀಮೆಯಲ್ಲಿ ತಮ್ಮ ಐತಿಹಾಸಿಕ ನೆಲೆಗಳನ್ನು ಸ್ಥಾಪಿಸಿಕೊಂಡಿದ್ದರು ಎನ್ನುತ್ತಾರೆ ಜಿಲ್ಲೆಯ ದೇವಾಲಯಗಳ ಕುರಿತು ಅನೇಕ ಮಾಹಿತಿಗಳನ್ನು ಸಂಗ್ರಹಿಸಿರುವ ಪ್ರೊ.ಕೆ.ಆರ್.ನರಸಿಂಹನ್.  ಅವುಗಳ ರಕ್ಷಣೆಗೆ ಕ್ರಮ ತೆಗೆದುಕೊಳ್ಳದಿದ್ದಲ್ಲಿ ಕ್ರಮೇಣ ಕೌಂಡಿನ್ಯ ನದಿ ಮರೆಯಾಗಬಹುದು ಎಂಬುದು ಅವರ ಅಭಿಪ್ರಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.