ADVERTISEMENT

ನೀರಿನ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿದೆ

’ನಮ್ಮ ಕೆರೆ ನಮ್ಮ ಹಕ್ಕು’ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಜೆಎಂಎಸ್‌ ರಾಜ್ಯ ಘಟಕದ ಅಧ್ಯಕ್ಷೆ ವಿ.ಗೀತಾ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2017, 10:01 IST
Last Updated 26 ಅಕ್ಟೋಬರ್ 2017, 10:01 IST
ನೀರಿನ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿದೆ
ನೀರಿನ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿದೆ   

ಕೋಲಾರ: ‘ಜಿಲ್ಲೆಯಲ್ಲಿ ನೀರಿನ ಹೆಸರಿನಲ್ಲಿ ರಾಜಕಾರಣ ನಡೆಯುತ್ತಿದೆ. ನೀರಿನ ಸಮಸ್ಯೆಯ ಪರಿಹಾರಕ್ಕೆ ಜಿಲ್ಲೆಯ ಜನಪ್ರತಿನಿಧಿಗಳು ಪ್ರಮಾಣಿಕ ಪ್ರಯತ್ನ ಮಾಡುತ್ತಿಲ್ಲ’ ಎಂದು ಜನವಾದಿ ಮಹಿಳಾ ಸಂಘಟನೆ (ಜೆಎಂಎಸ್‌) ರಾಜ್ಯ ಘಟಕದ ಅಧ್ಯಕ್ಷೆ ವಿ.ಗೀತಾ ವಾಗ್ದಾಳಿ ನಡೆಸಿದರು.

ಭೀಮಸೇನೆ ಹಾಗೂ ಪ್ರಗತಿಪರ ಸಂಘಟನೆಗಳ ಸಹಯೋಗದಲ್ಲಿ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ‘ನಮ್ಮ ಕೆರೆ ನಮ್ಮ ಹಕ್ಕು’ ಕುರಿತ ಸಂವಾದದಲ್ಲಿ ಮಾತನಾಡಿದರು.

ಕೆರೆಗಳು ತುಂಬಿ ಕೋಡಿ ಹರಿದಾಗ ಬಾಗಿನ ಅರ್ಪಿಸಲು ಬರುವ ರಾಜಕಾರಣಿಗಳು ಆಸಕ್ತಿ ತೋರಿ ಮುಂಚೆಯೇ ಕೆರೆಗಳ ಹೂಳು ತೆಗೆಸಿದ್ದರೆ ಮಳೆ ನೀರು ಜಿಲ್ಲೆಯಿಂದ ವ್ಯರ್ಥವಾಗಿ ತಮಿಳುನಾಡಿಗೆ ಹರಿದು ಹೋಗುತ್ತಿರಲಿಲ್ಲ ಎಂದು ಕಿಡಿಕಾರಿದರು.

ADVERTISEMENT

ಜಿಲ್ಲೆಯಲ್ಲಿ 2,180 ಕೆರೆಗಳಿವೆ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಅನುದಾನವನ್ನು ಬಳಸಿಕೊಂಡು ಕೆರೆಗಳ ಹೂಳು ತೆಗೆಯಬಹುದಿತ್ತು. ರಾಜಕಾರಣಿಗಳು ಮತ್ತು ಅಧಿಕಾರಿಗಳು ಪ್ರಾಮಾಣಿಕ ಪ್ರಯತ್ನ ಮಾಡಿದ್ದರೆ ಕಳೆದೊಂದು ದಶಕದಲ್ಲಿ ಎಲ್ಲಾ ಕೆರೆಗಳ ಹೂಳು ತೆಗೆಸಬಹುದಿತ್ತು. ಆದರೆ, ಅದಕ್ಕೆ ಬದಲಾಗಿ ರಸ್ತೆ ಮತ್ತು ಚರಂಡಿಗಳನ್ನು ನಿರ್ಮಿಸಿ ಹಣ ಮಾಡಿಕೊಂಡರು ಎಂದು ದೂರಿದರು.

ಜನರಲ್ಲಿ ಕೆರೆಗಳ ರಕ್ಷಣೆ ಕುರಿತು ಜಾಗೃತಿ ಮೂಡಿಸಬೇಕು. ಸಂಘಟನೆಗಳು ಇದರ ಹೊಣೆ ಹೊತ್ತು ಕೆಲಸ ಮಾಡಿದಾಗ ಜಿಲ್ಲೆಯ ಕೆರೆಗಳಲ್ಲಿ ನೀರು ಉಳಿಸಿ ಅಂತರ್ಜಲ ಹೆಚ್ಚಿಸಬಹುದು ಎಂದು ಸಲಹೆ ನೀಡಿದರು.

ಶ್ರಮ ವಹಿಸಿದ್ದರು: ಈ ಹಿಂದೆ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿದ್ದ ಐಎಎಸ್‌ ಅಧಿಕಾರಿ ಡಿ.ಕೆ.ರವಿ ಅವರು ಕೆರೆಗಳ ಉಳಿವಿಗಾಗಿ ಸಾಕಷ್ಟು ಶ್ರಮ ವಹಿಸಿದ್ದರು. ಹಿಂದಿನ ಜಿಲ್ಲಾಧಿಕಾರಿ ತ್ರಿಲೋಕಚಂದ್ರ ಸಹ ಆ ಹಾದಿಯಲ್ಲೇ ಸಾಗಿದ್ದರು. ಆದರೆ, ಕೆಲಸ ಕೈಗೆತ್ತಿಕೊಳ್ಳುವ ಮುನ್ನವೇ ಸರ್ಕಾರ ಅವರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಿತು ಎಂದು ಭೀಮಸೇನೆ ರಾಜ್ಯ ಘಟಕದ ಅಧ್ಯಕ್ಷ ಪಂಡಿತ್‌ ಮುನಿವೆಂಕಟಪ್ಪ ಹೇಳಿದರು.

ಜಿಲ್ಲಾಧಿಕಾರಿ ಜಿ.ಸತ್ಯವತಿ ಅವರು ಕೆರೆಗಳ ಸಂರಕ್ಷಣೆಗೆ ಹೆಚ್ಚು ಕಾಳಜಿ ವಹಿಸುತ್ತಿದ್ದಾರೆ. ಅವರಿಗೆ ಜನ ಹಾಗೂ ಸಂಘಟನೆಗಳು ಸಹಕಾರ ನೀಡಬೇಕು. ಆಗ ಮಾತ್ರ ಕೆರೆಗಳ ರಕ್ಷಣೆ ಸಾಧ್ಯ. ಗ್ರಾಮ ಪಂಚಾಯಿತಿವಾರು ಕೆರೆಗಳ ಹರಾಜನ್ನು ಮೀನುಗಾರಿಕೆ ಸೇರಿದಂತೆ ಇನ್ನಿತರೆ ಚಟುವಟಿಕೆಗಳಿಗೆ ಖಾಸಗಿಯವರಿಗೆ ನೀಡಲಾಗುತ್ತಿದೆ. ಅದನ್ನು ತಡೆದು ಮೀನು ಮರಿಗಳನ್ನು ಕೆರೆಗಳಲ್ಲೇ ಬಿಟ್ಟರೆ ಜಲ ಸಂಪತ್ತು ವೃದ್ಧಿಯಾಗುತ್ತದೆ ಎಂದು ಸಲಹೆ ನೀಡಿದರು.

ಈ ಹಿಂದೆ ಕೆರೆ ಎಂದರೆ ನೀರು ಮತ್ತು ಮೀನು ಎಂಬ ಚಿತ್ರಣವಿತ್ತು. ಆದರೆ, ಈಗ ಜಾಲಿ ಮತ್ತು ನೀಲಗಿರಿಯಿಂದ ಕೆರೆ ಸಂಪತ್ತು ಸಂಪೂರ್ಣ ನಾಶವಾಗಿದೆ. ನೀಲಗಿರಿ ನಿಷೇಧದ ಕಾನೂನು ಕೇವಲ ಕಾನೂನಾಗಿಯೇ ಉಳಿದಿದ್ದು, ನೀಲಗಿರಿ ಯಾರಿಗೂ ಕಾಳಜಿ ಇಲ್ಲದಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಸಾಕಷ್ಟು ವರ್ಷಗಳ ಬಳಿಕ ತುಂಬಿರುವ ಕೆರೆಗಳ ಬಳಿ ಜನ ಆನಂದ ಅನುಭವಿಸಲು ತೆರಳಿದರೆ ಪೊಲೀಸರ ಕಾವಲು ಹಾಕಿ ಅದಕ್ಕೂ ಅಡ್ಡಿಪಡಿಸಲಾಗುತ್ತಿದೆ. ಹೀಗಾದರೆ ಹೊಸ ಪೀಳಿಗೆಗೆ ಕೆರೆಯ ಅನುಭವ ಸಿಗುವುದಾದರೂ ಹೇಗೆ ಎಂದು ಪ್ರಶ್ನಿಸಿದರು.

ಕೆರೆಗಳನ್ನು ಉಳಿಸುವ ಜವಾಬ್ದಾರಿ ಎಲ್ಲರ ಮೇಲಿದೆ. ಇದಕ್ಕೆ ಪ್ರಮಾಣಿಕ ಪ್ರಯತ್ನ ಅಗತ್ಯ. ನಮ್ಮ ಕೆರೆ ನಮ್ಮ ಹಕ್ಕು ಎನ್ನುವುದನ್ನು ಸಾಬೀತುಪಡಿಸುವ ಮೂಲಕ ಕೆರೆಗಳನ್ನು ಉಳಿಸಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಉಪನ್ಯಾಸಕ ಶಿವಪ್ಪ ಅರಿವು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.