ADVERTISEMENT

ನೀರು ಪೂರೈಕೆ ಸರ್ಕಾರದ ಕರ್ತವ್ಯ - ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2011, 7:00 IST
Last Updated 23 ಏಪ್ರಿಲ್ 2011, 7:00 IST

ಚಿಂತಾಮಣಿ: ಕುಡಿಯುವ ನೀರಿಗಾಗಿ ಒತ್ತಾಯಿಸಿ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಶಾಸಕರ ಬೇಡಿಕೆ ಬಗ್ಗೆ ಸರ್ಕಾರ ಶೀಘ್ರ ಸ್ಪಂದಿಸಬೇಕು. ಅನಾಹುತವಾದರೆ ಸರ್ಕಾರವೇ ನೇರ ಹೊಣೆ ಎಂದು ವಿಧಾನ ಸಭೆಯ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಎಚ್ಚರಿಸಿದರು.

ನಗರದ ತಾಲ್ಲೂಕು ಕಚೇರಿ ಆವರಣದಲ್ಲಿ ಕುಡಿಯುವ ನೀರಿಗಾಗಿ ಒತ್ತಾಯಿಸಿ ಶಾಸಕ ಡಾ.ಎಂ.ಸಿ.ಸುಧಾಕರ್ ಮತ್ತು ಬೆಂಬಲಿಗರು ನಡೆಸುತ್ತಿರುವ ಉಪವಾಸ ಸ್ಥಳಕ್ಕೆ ಶುಕ್ರವಾರ ಭೇಟಿ ನೀಡಿ ಮಾತನಾಡಿದರು.

 ಕುಡಿಯುವ ನೀರು ಕೊಡುವುದು ಸರ್ಕಾರದ  ಕರ್ತವ್ಯ. ರೈತರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ರೈತರ ಮೇಲೆ ಗೋಲಿಬಾರ್ ಮಾಡಿ ಮೋಸ ಮಾಡಿದ ಭ್ರಷ್ಟ ಸರ್ಕಾರ.  ನೀರಿಲ್ಲದೆ ಜನರು ಪರದಾಡುತ್ತಿರುವಾಗ ಯಡಿಯೂರಪ್ಪ ಕ್ರಿಕೆಟ್ ಆಟದಲ್ಲಿ ಮಜಾ ಉಡಾಯಿಸುತ್ತಿದ್ದಾರೆ ಎಂದು ಟೀಕಿಸಿದರು.

ಸಾರ್ವಜನಿಕರಿಗೆ ಕುಡಿಯುವ ನೀರು ಮತ್ತಿತರ ಮೂಲ ಸೌಲಭ್ಯ ಒದಗಿಸುವುದನ್ನು ಬಿಟ್ಟು ಮಠ ಮಂದಿರಗಳಿಗೆ ಹಣ ನೀಡುತ್ತಾರೆ. ಜನರ ಸಮಸ್ಯೆ ತೆಗೆದುಕೊಂಡು ಶಾಸಕರೊಬ್ಬರು ಅನಿರ್ಧಿಷ್ಟ ಧರಣಿ, ಉಪವಾಸ ಸತ್ಯಾಗ್ರಹ ಮಾಡುತ್ತಿದ್ದರೂ ಕನಿಷ್ಠ ಬಂದು ವಿಚಾರಿಸುವ ಸೌಜನ್ಯ ತೋರಿಸುತ್ತಿಲ್ಲ ಎಂದರು.

ಬಡವರ, ಜನವಿರೋಧಿ ಸರ್ಕಾರವಾಗಿದೆ. ವರ್ಷಕ್ಕೆ 3 ಲಕ್ಷ ಮನೆ ವಿತರಿಸುವುದಾಗಿ ಹೇಳುತ್ತಿರುವ ಸರ್ಕಾರ ಒಂದೇ ಒಂದು ನಿವೇಶನ ನೀಡಿರುವುದನ್ನು ತೋರಿಸಲಿ ಎಂದು ಸವಾಲು ಹಾಕಿದರು.

ರಾಜ್ಯದ ಇತಿಹಾಸದಲ್ಲೇ ಇಂತಹ ಸುಳ್ಳು ಹೇಳುವ  ಮುಖ್ಯಮಂತ್ರಿಯನ್ನು ಕಂಡಿಲ್ಲ,  ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಯಾವುದೇ ನದಿ ನಾಲೆಗಳಿಲ್ಲದೆ ನೀರಿಗಾಗಿ ಕೊಳವೆ ಬಾವಿ ಮೇಲೆ ಅವಲಂಭಿತವಾಗಿವೆ. 2 ಜಿಲ್ಲೆಗೆ ಹೆಚ್ಚಿನ ಹಣ ನೀಡಿ ಎಂದು ವಿಧಾನಸಭೆಯಲ್ಲೇ ಸೂಚಿಸಿದ್ದೆವು. ಶಾಸಕರು ಸಹ  ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದಿದ್ದರು ಎಂದು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.