ADVERTISEMENT

ನೆನಪಿನ ಶಕ್ತಿಗಾಗಿ 60 ಕಿ.ಮೀ ನಡಿಗೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 8:35 IST
Last Updated 20 ಸೆಪ್ಟೆಂಬರ್ 2013, 8:35 IST

ಕೋಲಾರ: ವಿಶ್ವ ಮರೆವಿನ ಕಾಯಿಲೆ ಪ್ರಯುಕ್ತ  ನೈಟಿಂಗೇಲ್ಸ್ ಸೆಂಟರ್ ಫಾರ್ ಏಜಿಂಗ್ ಅಂಡ್ ಅಲ್ಜೀಮರ್ಸ್ ಕೋಲಾರದಿಂದ ಬೆಂಗಳೂರಿನ­ವರೆಗೆ ಮೂರು ದಿನ ಕಾಲ ಏರ್ಪಡಿಸಿರುವ 60 ಕಿಮೀ ‘ನೆನಪಿನ ಶಕ್ತಿಗಾಗಿ ನಡಿಗೆ’ಯು (ಮೆಮೊರಿ ವಾಕ್) ನಗರದ ಇಟಿಸಿಎಂ ಆಸ್ಪತ್ರೆ ಆವರಣದಿಂದ ಗುರುವಾರ ಆರಂಭವಾಯಿತು.

ಸಂಚಾರಿ ವಸ್ತುಪ್ರದರ್ಶನದ ಜೊತೆಗೆ ಮೂರು ದಿನ ನಡೆಯುವ ಈ ನಡಿಗೆ ಪ್ರವಾಸವು ಕೋಲಾರ ಮತ್ತು ಬೆಂಗಳೂರು ವ್ಯಾಪ್ತಿಯ 10 ಸ್ಥಳಗಳಲ್ಲಿ ತಂಗಲಿದ್ದು ನೆನಪಿನ ಶಕ್ತಿ ತಪಾಸಣೆ ಶಿಬಿರ ನಡೆಸಲಿದೆ. ವಿಶೇಷವಾಗಿ ಗ್ರಾಮಾಂತರ ಪ್ರಾಥ­ಮಿಕ ಆರೋಗ್ಯ ಕೇಂದ್ರಗಳಲ್ಲಿ  ಸುಮಾರು 2 ಸಾವಿರ ಮಂದಿಯನ್ನು ತಪಾಸಣೆಗೊಳಪಡಿಸಿದ ಬಳಿಕ ಆ ಕುರಿತ ವರದಿ ಜೊತೆಗೇ ಆರೋಗ್ಯ ಸಚಿವರಿಗೆ ಮನವಿಯನ್ನೂ ಸಲ್ಲಿಸಲಿದೆ. ಸೆ.21­ರಂದು ಬೆಂಗಳೂರಿನಲ್ಲಿ ಸಮಾವೇಶ ನಡೆಯಲಿದೆ.

ನಡಿಗೆಗೆ ಚಾಲನೆ ನೀಡಿದ ನಂತರ ನೈಟಿಂಗೇಲ್ಸ್ ಮೆಡಿಕಲ್‍ಸ್ ಟ್ರಸ್ಟ್ ವ್ಯವಸ್ಥಾಪಕ ಟ್ರಸ್ಟಿ ಡಾ.ರಾಧಾ ಮೂರ್ತಿ, 60 ವಯಸ್ಸು ಮೀರಿದವರಿಗೆ ಬರುವ ಮರೆವಿನ ಕಾಯಿಲೆಯು ಮೆದುಳಿನ ನರಕೋಶದ  ಸಾಮರ್ಥ್ಯದ ಕುಸಿತದ ಪರಿಣಾಮ ಉಂಟಾ­ಗುತ್ತದೆ. ವಿಪರ್ಯಾಸವೆಂದರೆ ಇಂಥ ಸಮಸ್ಯೆ­ಯುಳ್ಳ­ವರನ್ನು ಆರೈಕೆ ಮಾಡಲು ರಾಜ್ಯದಲ್ಲಿ ಎಲ್ಲಿಯೂ ಪ್ರತ್ಯೇಕ ಚಿಕಿತ್ಸಾ ಸೌಲಭ್ಯವಿಲ್ಲ. ಹೀಗಾಗಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಆಸ್ಪತ್ರೆಗಳಲ್ಲಿ ಸ್ಮರಣ ಚಿಕಿತ್ಸಾಲಯ,  ಕನಿಷ್ಠ 10 ಹಾಸಿಗೆ ಸೌಲಭ್ಯವುಳ್ಳ ಚಿಕಿತ್ಸಾ ಘಟಕವಿರಬೇಕು ಎಂದು ಅಭಿಪ್ರಾಯ­ಪಟ್ಟರು.

ನೆನಪಿನ ಶಕ್ತಿ ದೋಷವುಳ್ಳವನ್ನು ಆರೈಕೆ ಮಾಡಲು ಆರೋಗ್ಯ ಕಾರ್ಯಕರ್ತರಿಗೆ ವಿಶೇಷ ತರಬೇತಿಯ ಅಗತ್ಯವಿದೆ. ಡಿಮೆನ್ಶಿಯಾ ವಿಷಯದ ಅಧ್ಯಯನ­ವನ್ನು ವೈದ್ಯಕೀಯ ಮತ್ತು ನರ್ಸಿಂಗ್ ಪಠ್ಯಕ್ರಮ­ದಲ್ಲಿ ಸೇರ್ಪಡೆ ಮಾಡಬೇಕಾಗಿದೆ. ಈ ನಿಟ್ಟಿನಲ್ಲಿ ಭಾರತೀಯ ವೈದ್ಯಕೀಯ ಮಂಡಳಿ ಮತ್ತು ನರ್ಸಿಂಗ್ ಮಂಡಳಿಗೆ ರಾಜ್ಯ ಸರ್ಕಾರ ಶಿಫಾರಸು ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ, ವಿಶ್ವದಲ್ಲಿ 36 ಕೋಟಿ ಮಂದಿ ನೆನಪಿನ ಶಕ್ತಿ ಕುಸಿತದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ಪ್ರತಿ 4 ಸೆಕೆಂಡಿನಲ್ಲಿ ಒಬ್ಬರಿಗೆ ಈ ಸಮಸ್ಯೆ ಎದುರಾಗುತ್ತಿದೆ. ಆ ಲೆಕ್ಕದಲ್ಲಿ 7.7 ಕೋಟಿ ಹೊಸ ಪ್ರಕರಣಗಳು ಸೇರ್ಪಡೆಗೊಳ್ಳುತ್ತಿವೆ. ಕುಟುಂಬ ಮತ್ತು ಸಮಾಜದ ಮೇಲೆ ಏಕಕಾಲಕ್ಕೆ ದುಷ್ಪರಿಣಾಮ ಬೀರುವ ಈ ಕಾಯಿಲೆಗೆ ಚಿಕಿತ್ಸೆ ಕಂಡು ಹಿಡಿಯದಿದ್ದರೆ ಮುಂದಿನ ಶತಮಾನದ ಆರೋಗ್ಯ ಮತ್ತು ಸಾಮಾಜಿಕ ಕ್ಷೇತ್ರದ ದೊಡ್ಡ ಸವಾಲಾಗಿ ಮಾರ್ಪಡಾಗುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದರು.

2010ರಲ್ಲಿ ಪ್ರಕಟವಾದ ವರದಿ ಪ್ರಕಾರ, ದೇಶದಲ್ಲಿ 3.7 ಕೋಟಿ ಮಂದಿ ನೆನಪಿನ ಶಕ್ತಿ ಕುಸಿತದಿಂದ ತೊಂದರೆಗೊಳಗಾಗಿದ್ದಾರೆ. ಬೆಂಗ-­ಳೂರಿ­ನಲ್ಲಿ 30 ಸಾವಿರ ಮಂದಿಗೆ ಸಮಸ್ಯೆ ಇರು­ವುದು ಕಂಡುಬಂದಿದೆ. ಬೇರ ದೇಶಗಳಿಗೆ ಹೋಲಿ­ಸಿದರೆ, ಭಾರತವು ಈ ಸಮಸ್ಯೆಯನ್ನು ಎದುರಿ­ಸುವಲ್ಲಿ ಹಿಂದೆಯೇ ಉಳಿದಿದೆ ಎಂದು ಹೇಳಿದರು. ಮರೆವಿನ ಕಾಯಿಲೆ ಬಗ್ಗೆ ಡಾ.ಸಂದೀಪ್‍ ಉಪನ್ಯಾಸ ನೀಡಿದರು.
ಆನಂತರ ನಡಿಗೆಗೆ ಶಾಸಕ ಆರ್.ವರ್ತೂರು ಪ್ರಕಾಶ್ ಚಾಲನೆ ನೀಡಿದರು.

ಇಟಿಸಿಎಂ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ಡಾ. ಪಾಲ್, ಆಡಳಿತಾ­ಧಿಕಾರಿ ಡಾ.ಜಾನ್ಸನ್ ಕುಂದರ್‍, ಉಪಾಧ್ಯಕ್ಷ ರೆವರೆಂಡ್ ಕ್ರಿಸ್ಟೋಫರ್ ಡೇವಿಡ್, ಇಟಿಸಿಎಂ ನರ್ಸಿಂಗ್ ಕಾಲೇಜಿನ  ಪ್ರಾಂಶುಪಾಲ­ರಾದ ಬೀನಾ ಪಾಲ್ಗೊಂಡಿದ್ದರು. ನಡಿಗೆ ಅಂಗವಾಗಿ ಇಟಿಸಿಎಂ ಆಸ್ಪತ್ರೆ, ದೇವರಾಜ ಅರಸ್‌ ಮೆಡಿಕಲ್ ಕಾಲೇಜು, ತಾಲ್ಲೂಕಿನ ಅರಾಭಿಕೊತ್ತನೂರು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ನರಸಾಪುರ ಪ್ರಾಥಮಿಕ ಆರೋಗ್ಯ ಕೇಂದ್ರ­ದಲ್ಲಿ ನೆನಪಿನ ಶಕ್ತಿ ತಪಾಸಣೆ ಶಿಬಿರ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.