ADVERTISEMENT

ಪಪ್ಪಾಯಿ ತೋಟಕ್ಕೆ ಬಂದ ಜಿಲ್ಲಾಧಿಕಾರಿ !

​ಪ್ರಜಾವಾಣಿ ವಾರ್ತೆ
Published 23 ಸೆಪ್ಟೆಂಬರ್ 2011, 8:00 IST
Last Updated 23 ಸೆಪ್ಟೆಂಬರ್ 2011, 8:00 IST

ಕೋಲಾರ: ಸಾವಯವ ಕೃಷಿಕರ ಮನೆಗೆ ಭೇಟಿ ನೀಡುವ ಮುಖ್ಯಮಂತ್ರಿಗಳ ಸಂಪ್ರದಾಯ ಹಳೆಯದು. ಈಗ ಇಲ್ಲಿನ ಜಿಲ್ಲಾಧಿಕಾರಿಯೇ ಸಾವಯವ ಕೃಷಿಕರ ತೋಟಕ್ಕೆ ಭೇಟಿ ನೀಡುವ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಜಿಲ್ಲಾಧಿಕಾರಿ ಮನೋಜ್‌ಕುಮಾರ್ ಮೀನಾ ತಾಲ್ಲೂಕಿನ ನೆನಮನ ಹಳ್ಳಿಯಲ್ಲಿರುವ ಸಾವಯವ ಕೃಷಿಕ  ಎನ್.ಆರ್.ಚಂದ್ರಶೇಖರ್ ಅವರ ಪಪ್ಪಾಯಿ ತೋಟಕ್ಕೆ ಗುರುವಾರ ಭೇಟಿ ನೀಡಿದರು.

ಎರಡು ದಿನದ ಹಿಂದಷ್ಟೆ ತಮ್ಮನ್ನು ಭೇಟಿ ಮಾಡಿದ ರೈತ ಸಾವಯವ ಕೃಷಿಯಿಂದ ಬೆಳೆದ ಪಪ್ಪಾಯಿ ಹಣ್ಣೊಂದನ್ನು ತಂದುಕೊಡಲೆ ಎಂದು ಕೇಳಿದ್ದರಷ್ಟೆ. ಅದಕ್ಕೆ ಕೂಡಲೇ ಪ್ರತಿಕ್ರಿಯಿಸಿದ್ದ ಜಿಲ್ಲಾಧಿಕಾರಿ ತಾವೇ ತೋಟಕ್ಕೆ ಬರುವುದಾಗಿ ಹೇಳಿ ಸಮಯವನ್ನೂ ನಿರ್ಧರಿಸಿದ್ದರು. ಅದರಂತೆ ಗುರುವಾರ ಮಧ್ಯಾಹ್ನ 12.30ರ ವೇಳೆಗೆ ಪಪ್ಪಾಯಿ ತೋಟಕ್ಕೆ ಬಂದರು.

ಅವರೊಂದಿಗೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಶಾಂತಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕೆ.ತ್ಯಾಗರಾಜನ್ ಕೂಡ ಇದ್ದರು.

ಬಿಸಿಲನ್ನು ಲೆಕ್ಕಿಸದೆ ತೋಟದಲ್ಲಿ ಓಡಾಡಿದ ಮೀನಾ, ಮಳೆ ಯಾಶ್ರಯದಲ್ಲೆ, ಯಾವ ಔಷಧಿಯನ್ನೂ ಸಿಂಪಡಿಸದೆ ಪಪ್ಪಾಯಿ ಬೆಳೆದಿರವುದು ನಿಜಕ್ಕೂ ಪವಾಡವೇ ಸರಿ ಎಂದು ಅಭಿಪ್ರಾಯಪಟ್ಟರು. ಮಣ್ಣಿನ ಫಲವತ್ತತೆಯನ್ನು ಕಾಪಾಡುವ ನಿಟ್ಟಿನಲ್ಲಿ ಬೆಳೆಸಿದ ಹುರುಳಿ (ಹಸಿರೆಲೆ ಗೊಬ್ಬರ) ಗಿಡಗಳ ನೆರಳಲ್ಲಿ ತಂಪಾಗಿದ್ದ ಮಣ್ಣನ್ನು ಮುಟ್ಟಿ ಅಚ್ಚರಿಪಟ್ಟರು.

ಪಪ್ಪಾಯಿ ಕಾಯಿಗಳ ಗಾತ್ರವನ್ನೂ ಕಂಡು ಬೆರಗಾದರು. ತೋಟಕ್ಕೆಂದು ರೂಪಿಸಿದ್ದ ಇಂಗುಗುಂಡಿಗಳು ಮತ್ತು ಕೃಷಿಹೊಂಡವನ್ನು ವೀಕ್ಷಿಸಿದರು.

ತಮಗಿರುವ 15 ಎಕರೆ ಜಮೀನಿನಲ್ಲಿ ಹಲವು ವರ್ಷಗಳಿಂದ ಸಾವಯವ ಪದ್ಧತಿಯಲ್ಲೆ ವ್ಯವಸಾಯ ಮಾಡುತ್ತಿದ್ದು, ರಾಗಿ, ಹಿಪ್ಪುನೇರಳೆ, ನೆಲಗಡಲೆಯನ್ನು ಬೆಳೆಯುತ್ತಿರುವೆ. ಇದೇ ಮೊದಲ ಬಾರಿಗೆ ಪಪ್ಪಾಯಿ ಬೆಳೆಸಿದ್ದು, ಯಾವುದೇ ರೋಗವೂ ಕಾಯಿಗಳಿಗೆ ತಗುಲಿಲ್ಲ ಎಂದು ರೈತ ಚಂದ್ರಶೇಖರ ವಿವರಿಸಿದರು. 

ರಾಸಾಯನಿಕಗಳ ಬಳಕೆಯಿಂದ ಭೂಮಿಯ ಫಲವತ್ತತೆ ಕಡಿಮೆ ಯಾಗುತ್ತಿದೆ. ಈ ಸನ್ನಿವೇಶ ಹೀಗೇ ಮುಂದುವರಿದರೆ ಕೊನೆಗೆ ಎಲ್ಲರೂ ಸಾವಯದ ವ್ಯವಸಾಯದ ಕಡೆಗೆ ಬರಲೇಬೇಕಾದ ಸನ್ನಿವೇಶ ನಿರ್ಮಾಣ ವಾಗಬಹುದು ಎಂದು ಮೀನಾ ಅಭಿಪ್ರಾಯಪಟ್ಟರು.

ಜಿಲ್ಲಾಧಿಕಾರಿಗಳ ಜೊತೆಗಿದ್ದ ಶಾಂತಪ್ಪ ಮತ್ತು ತ್ಯಾಗರಾಜನ್ ಅವರೂ ರೈತರ ಸಾವಯವ ಪ್ರೀತಿಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.