ADVERTISEMENT

ಪರಿಶಿಷ್ಟರ ಜಮೀನು ಅಭಿವೃದ್ಧಿಗೆ ಖಾತ್ರಿ ದೂರ!

ಎರಡು ತಿಂಗಳಾದರೂ ದಕ್ಕದ ಕೆಲಸ: ಒಣಗುತ್ತಿದೆ ಶ್ರೀಗಂಧ

​ಪ್ರಜಾವಾಣಿ ವಾರ್ತೆ
Published 4 ಸೆಪ್ಟೆಂಬರ್ 2013, 6:59 IST
Last Updated 4 ಸೆಪ್ಟೆಂಬರ್ 2013, 6:59 IST

ಕೋಲಾರ: ಪರಿಶಿಷ್ಟ ಸಮುದಾಯದ ಅಭಿವೃದ್ಧಿ ಅನುದಾನದ ಅಡಿ ವೈಯಕ್ತಿಕ ಜಮೀನು ಅಭಿವೃದ್ಧಿ ಮಾಡಲು ಅನುವು ಮಾಡಲು ಕೋರಿ ಅರ್ಜಿ ಸಲ್ಲಿಸಿ ಎರಡು ತಿಂಗಳಾಗಿದೆ. ಅದೇ ಉದ್ದೇಶದಿಂದ ಉದ್ಯೋಗಖಾತ್ರಿ ಅಡಿ ಕೆಲಸ ಕೊಡಿ ಎಂದು ಕೋರಿ ಒಂದು ತಿಂಗಳಾಗಿದೆ.

ಕೆಲಸವೂ ಸಿಗಲಿಲ್ಲ. ಜಮೀನು ಅಭಿವೃದ್ಧಿಯೂ ಆಗಲಿಲ್ಲ. ಪರಿಶಿಷ್ಟ ಸಮುದಾಯವನ್ನು ಅಧಿಕಾರಿಗಳು ಹೀಗೆ ನಿರ್ಲಕ್ಷ್ಯಿಸಬಹುದೇ?
-ತಾಲ್ಲೂಕಿನ ಗರುಢನಹಳ್ಳಿಯ ರೈತ ದೊಡ್ಡವೆಂಕಟಪ್ಪ ನಿರಾಶೆಯಿಂದ ಕೇಳುವ ಪ್ರಶ್ನೆ ಇದು.

ತಮ್ಮ 3 ಎಕೆರೆ ಜಮೀನಿನಲ್ಲಿ ಶ್ರೀಗಂಧವನ್ನು ಬೆಳೆಸುವ ಉದ್ದೇಶದಿಂದ ಕಳೆದ ಜು 2ರಂದು ಸೂಲೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗೆ ಅರ್ಜಿ ಸಲ್ಲಿಸಿದ್ದಾರೆ. ಖಾತ್ರಿ ಯೋಜನೆ ಅಡಿ ಕೆಲಸ ಕೊಡಿ ಎಂದು ಜಮೀನಿನಲ್ಲಿ ಬೆಳೆಸುವ ಸಲುವಾಗಿ ತಾಲ್ಲೂಕಿನ ಮಡೇರಹಳ್ಳಿ ಸಸ್ಯಕ್ಷೇತ್ರದಿಂದ 1 ಸಾವಿರ ಶ್ರೀಗಂಧ ಸಸಿಗಳನ್ನೂ ಅವರು ಖರೀದಿಸಿದ್ದಾಗಿದೆ. ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿ ಯೋಜನೆಯಡಿ ನೆರವು ಸಿಗಲಿಲ್ಲ. ಖಾತ್ರಿ ಅಡಿ ಕೆಲಸವೂ ಸಿಗಲಿಲ್ಲ. ನಿರುದ್ಯೋಗ ಭತ್ಯೆಯೂ ಸಿಗಲಿಲ್ಲ ಎಂಬುದು ಅವರ ಅಳಲು.

ಉದ್ಯೋಗಖಾತ್ರಿ ಯೋಜನೆ ಜಾರಿಯಲ್ಲಿ ಜಿಲ್ಲೆಯು ಅತ್ಯಂತ ಹಿಂದುಳಿದಿದೆ. ಯೋಜನೆ ಅಡಿ ಲಭ್ಯವಿರುವ ಎಲ್ಲ ಬಗೆಯ ಕಾಮಗಾರಿಗಳನ್ನೂ ತಡಮಾಡದೇ ಅನುಷ್ಠಾನಕ್ಕೆ ತನ್ನಿ ಎಂದು ಅಧಿಕಾರಿಗಳು ಹೇಳುತ್ತಲೇ ಇದ್ದಾರೆ. ಆದರೆ ಗ್ರಾಮ ಪಂಚಾಯತಿ ಮಟ್ಟದ ಅಧಿಕಾರಿಗಳು ಮಾತ್ರ ತಮ್ಮ ಇಷ್ಟಾನುಸಾರ ಕೆಲಸ ಮಾಡುತ್ತಿದ್ದಾರೆ

ಎಂಬುದಕ್ಕೆ ದೊಡ್ಡವೆಂಕಟಪ್ಪನವರ ಪ್ರಕರಣ ನಿದರ್ಶನವಾಗಿ ಕಾಣುತ್ತಿದೆ. ನೀಲಗಿರಿಯನ್ನು ಇಲ್ಲವಾಗಿಸಿ ಶ್ರೀಗಂಧವನ್ನು ಬೆಳೆಸುವಲ್ಲಿ ರೈತರು ಮುಂದೆ ಬರಬೇಕು ಎಂಬ ಜಿಲ್ಲಾಡಳಿತದ ಸಲಹೆಯೂ ಬಾಯಿಮಟ್ಟದಲ್ಲೇ ಉಳಿದಿರುವುದು ಕೂಡ ಇಲ್ಲಿ ಕಂಡುಬರುವ ಮತ್ತೊಂದು ಅಂಶ.

ಹಳ್ಳಿಯ ಸರ್ವೆ ನಂ 106ರಲ್ಲಿರುವ ತಮ್ಮ 3 ಎಕರೆ ಜಮೀನಿನಲ್ಲಿ ಅವರು ನೀಲಗಿರಿ ಬೆಳೆದಿದ್ದಾರೆ. ಅವುಗಳನ್ನು ತೆಗೆಸಿ ಶ್ರೀಗಂಧವನ್ನು ನೆಟ್ಟು ಬೆಳೆಸಬೇಕು ಎಂದು ಅವರು ಜಿಲ್ಲಾಡಳಿತದ ಸಲಹೆ ಮೇರೆಗೆ ನಿರ್ಧರಿಸಿದ್ದರು. ಆದರೆ ಈಗ ಸ್ಥಳೀಯ ಆಡಳಿತದ ನಿರ್ಲಕ್ಷ್ಯದ ಪರಿಣಾಮವಾಗಿ ಶ್ರೀಗಂಧವೂ ಒಣಗುವಂತಾಗಿದೆ.

ಒಂದು ಸಾವಿರ ಗಿಡಗಳನ್ನು ನೆಡುವ ಮುನ್ನ ನೀಲಗಿರಿ ಮರಗಳನ್ನು ತೆಗೆಯುವುದು, ಲೆವೆಲಿಂಗ್ ಮಾಡುವುದು, ಚೆಕ್‌ಡ್ಯಾಂ ನಿರ್ಮಿಸುವುದು, ಜಮೀನಿನ ಸುತ್ತ ರಿವಿಟ್‌ಮೆಂಟ್ ಮಾಡುವುದು, ಕಾಲುವೆಗೆ ಅಡ್ಡವಾಗಿ ಮೋರಿ ನಿರ್ಮಿಸುವ ಕೆಲಸ ಆಗಬೇಕಾಗಿದೆ ಎಂದು ಅವರು ಅರ್ಜಿಯಲ್ಲಿ ಮಾಹಿತಿ ನೀಡಿದ್ದರು.

ಕೆಲಸಕ್ಕೂ ಅರ್ಜಿ: ಜಮೀನು ಅಭಿವೃದ್ಧಿಪಡಿಸುವ ಸಲುವಾಗಿ ಉದ್ಯೋಗ ಖಾತ್ರಿ ಯೋಜನೆ ಅಡಿ ಕೆಲಸ ಕೊಡಬೇಕು ಎಂದು ಕೋರಿ ಅವರು ಜು 22ರಂದು ಅರ್ಜಿ ಸಲ್ಲಿಸಿದ್ದರು. ಅವರೊಂದಿಗೆ 12 ಮಂದಿ ಕೂಡ ಅಂದು ಅರ್ಜಿ ಸಲ್ಲಿಸಿದರು. ಒಟ್ಟಾರೆ 13 ಮಂದಿಗೆ ಇದುವರೆಗೆ ಪಂಚಾಯಿತಿಯು ಯಾವುದೇ ಕೆಲಸವನ್ನೂ ನೀಡಿಲ್ಲ. ನಿರುದ್ಯೋಗ ಭತ್ಯೆಯನ್ನೂ ನೀಡಿಲ್ಲ ಎಂದು ಅವರು ದೂರುತ್ತಾರೆ.

ಖಾತ್ರಿ ಯೋಜನೆ ಅಡಿಯಲ್ಲಿ ಪರಿಶಿಷ್ಟರ ವೈಯಕ್ತಿಕ ಜಮೀನು ಅಭಿವೃದ್ಧಿಗೆ ಅದರಲ್ಲೂ ತೋಟಗಾರಿಕೆ ಬೆಳೆಗಳನ್ನು ಬೆಳೆಯುವವರಿಗೆ ಆದ್ಯತೆ ನೀಡಬೇಕು ಎಂದು ಮೇಲಿನ ಅಧಿಕಾರಿಗಳು ಹೇಳುತ್ತಾರೆ. ಆದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮಾತ್ರ ಅಂಥ ಅವಕಾಶವೇ ಇಲ್ಲ ಎಂಬಂತೆ ಕೆಲಸ ಮಾಡುತ್ತಾರೆ ಎಂಬುದು ಅವರ ಆರೋಪ.

ನಮ್ಮಂಥ ಪರಿಶಿಷ್ಟರಿಗೆ ವೈಯಕ್ತಿಕ ಜಮೀನು ಅಭಿವೃದ್ಧಿಗಾಗಿ ಅನುದಾನ ಮತ್ತು ಕೆಲಸ ಕೊಡದೇ ಕ್ರಿಯಾಯೋಜನೆಗಳನ್ನು ಗ್ರಾಮ ಪಂಚಾಯಿತಿ ಅಧಿಕಾರಿಗಳು ಸಿದ್ಧಪಡಿಸಿದ್ದಾರೆ. ಇನ್ನಾದರೂ ಮುತುವರ್ಜಿ ವಹಿಸಿ ಪರಿಶಿಷ್ಟ ಸಮುದಾಯಕ್ಕೆ ಅನುಕೂಲ ಮಾಡಿಕೊಡಬೇಕು ಎಂಬುದು ಅವರ ಆಗ್ರಹ.

ಪರಿಶೀಲಿಸಿ ಕ್ರಮ: ಜಿ.ಪಂ. ಸಿಇಒ
ವೈಯಕ್ತಿಕ ಫಲಾನುಭವಿಗಳ ಜಮೀನುಗಳಲ್ಲಿ ತೋಟಗಾರಿಕೆ, ಜಲಾನಯನ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವಲ್ಲಿ ಕೆಳ ಹಂತದ ಅಧಿಕಾರಿಗಳು ಹೆಚ್ಚು ಗಮನ ಹರಿಸದಿರುವುದು ಸಮಸ್ಯೆಯಾಗಿ ಮಾರ್ಪಟ್ಟಿದೆ. ಈ ಸಮಸ್ಯೆ ನಿವಾರಣೆ ಕಡೆಗೆ ಜಿಲ್ಲಾಧಿಕಾರಿಗಳು ಕೂಡ ಹೆಚ್ಚು ಗಮನ ಹರಿಸಿದ್ದಾರೆ.

ಖಾತ್ರಿ ಯೋಜನೆಯ ಲಾಭ ಪಡೆಯಲು ಪರಿಶಿಷ್ಟ ಸಮುದಾಯದ ರೈತರು ಸಿಗದಿದ್ದರೆ ಅಂಬೇಡ್ಕರ್ ಅಭಿವೃದ್ಧಿ ನಿಗಮ ಸೇರಿದಂತೆ ಪರಿಶಿಷ್ಟರಿಗೆ ಅನುಕೂಲ ಕಲ್ಪಿಸುವ ಸಂಸ್ಥೆಗಳ ಫಲಾನುಭವಿಗಳನ್ನು ಪರಿಗಣಿಸಬೇಕು ಎಂದೂ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಅರ್ಜಿ ಸಲ್ಲಿಸಿದವರಿಗೆ ಕೆಲಸ ಕೊಡಲೇಬೇಕು. ವೈಯಕ್ತಿಕ ಫಲಾನುಭವಿಯ ಜಮೀನಿನಲ್ಲಿ ಶ್ರೆಗಂಧ ಬೆಳೆಸಲು ಅನುವು ಮಾಡಿಕೊಡುವುದು ಅಧಿಕಾರಿಯ ಕರ್ತವ್ಯ. ಈ ನಿಟ್ಟಿನಲ್ಲಿ ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು.
-ಎಸ್.ಎಂ.ಝಲ್ಫಿಕರ್ ಉಲ್ಲಾ,  ಸಿಇಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT