ADVERTISEMENT

ಪಿಜಿ ಹಾಸ್ಟೆಲ್‌ನಲ್ಲಿ ಮಧ್ಯರಾತ್ರಿ ಊಟ !

ಬೆಂಗಳೂರು ವಿಶ್ವವಿದ್ಯಾಲಯ ಸ್ನಾತಕೋತ್ತರ ಕೇಂದ್ರದಲ್ಲಿ ಧರಣಿ

​ಪ್ರಜಾವಾಣಿ ವಾರ್ತೆ
Published 6 ಜುಲೈ 2013, 7:06 IST
Last Updated 6 ಜುಲೈ 2013, 7:06 IST

ಕೋಲಾರ: ನಗರದ ಟೇಕಲ್ ರಸ್ತೆಯಲ್ಲಿರುವ ಬೆಂಗಳೂರು ವಿಶ್ವವಿದ್ಯಾಲಯದ ಸ್ನಾತಕೋತ್ತರ ಕೇಂದ್ರದ 60 ವಿದ್ಯಾರ್ಥಿಗಳಿರುವ ವಿದ್ಯಾರ್ಥಿನಿಲಯದಲ್ಲಿ ಗುರುವಾರ ಎಂದಿನಂತೆ ರಾತ್ರಿ ಸಮಯಕ್ಕೆ ಸರಿಯಾಗಿ ಊಟ ಸಿದ್ಧವಿರಲಿಲ್ಲ.

ಅದಕ್ಕಾಗಿ ವಿದ್ಯಾರ್ಥಿಗಳ ಧರಣಿ, ಪೊಲೀಸರ ಮಧ್ಯಪ್ರವೇಶದ ಪರಿಣಾಮವಾಗಿ ಮಧ್ಯರಾತ್ರಿ ವೇಳೆಗೆ ಊಟ ತಯಾರಾಯಿತು. ಶುಕ್ರವಾರ ಬೆಳಿಗ್ಗೆ ವಿವಿಧ ಪರೀಕ್ಷೆಗೆ ಹಾಜರಾಗಬೇಕಿದ್ದ ವಿದ್ಯಾರ್ಥಿಗಳು ಹಿಂದಿನ ರಾತ್ರಿ ಊಟಕ್ಕಾಗಿ ಧರಣಿ ನಡೆಸಬೇಕಾದ ಸನ್ನಿವೇಶ ಸೃಷ್ಟಿಯಾಗಿತ್ತು.

ನಗರ ಸರ್ಕಲ್ ಇನ್ಸ್‌ಪೆಕ್ಟರ್ ರಮೇಶ್ ಅವರ ಮಧ್ಯಪ್ರವೇಶದಿಂದ ಅಡುಗೆ ತಯಾರಾಗಿ ಊಟ ಮಾಡಿ ವಿದ್ಯಾರ್ಥಿಗಳು ಮಲಗಿದರೂ, ಶುಕ್ರವಾರ ಬೆಳಿಗ್ಗೆ ಸನ್ನಿವೇಶ ತಿಳಿಯಾಗಿರಲಿಲ್ಲ. ವಿದ್ಯಾರ್ಥಿಗಳು ನಿಲಯದ ಸಿಬ್ಬಂದಿ ಬಗ್ಗೆ ಅಸಮಾಧಾನದಿಂದಲೇ ಇದ್ದರು.

ಆರೋಪ-ಪ್ರತ್ಯಾರೋಪ: ಸ್ಥಳಕ್ಕೆ ಭೇಟಿ ನೀಡಿದ `ಪ್ರಜಾವಾಣಿ'ಯೊಡನೆ ಮಾತನಾಡಿದ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಮಾಡಿದರು.

ಸ್ನಾತಕೋತ್ತರ ಪರೀಕ್ಷೆಗಳು ಕೆಲವೇ ದಿನಗಳಲ್ಲಿ ಮುಕ್ತಾಯವಾಗುತ್ತಿರುವುದರಿಂದ ಹೊರಹೋಗುವ ವಿದ್ಯಾರ್ಥಿಗಳ ಅನುದಾನ ಸಹಜವಾಗಿಯೇ ಕಡಿತಗೊಳ್ಳುತ್ತದೆ. ಹೀಗಾಗಿ ಚಿಕನ್ ಊಟವನ್ನು ಎಂದಿನಂತೆ ಗುರುವಾರ ನೀಡಲು ಸಾಧ್ಯವಿಲ್ಲ ಎಂದು ನೋಟಿಸ್ ಬೋರ್ಡ್‌ನಲ್ಲಿ ಮಾಹಿತಿ ಪ್ರಕಟಿಸಲಾಗಿತ್ತು.

ಆದರೆ ಅದನ್ನು ಲೆಕ್ಕಿಸದ ವಿದ್ಯಾರ್ಥಿಗಳು ಗುರುವಾರ ಸಂಜೆ ಸಾಮಾನ್ಯ ಅಡುಗೆ ಮಾಡುತ್ತಿದ್ದ ಅಡುಗೆ ಸಿಬ್ಬಂದಿಯನ್ನು ಅಡುಗೆ ಮನೆಯಿಂದ ಹೊರಗೆ ಕಳಿಸಿ ಬೀಗ ಹಾಕಿದರು. ನಂತರ, ರಾತ್ರಿ ಊಟ ನೀಡಿಲ್ಲ ಎಂದು ಆರೋಪಿಸಿ ಧರಣಿ ಮಾಡಿದರು ಎಂಬುದು ಸಿಬ್ಬಂದಿಯ ಆರೋಪ.

ಈ ಆರೋಪವನ್ನು ವಿದ್ಯಾರ್ಥಿಗಳು ಒಪ್ಪುವುದಿಲ್ಲ. ಅನುದಾನ ಕಡಿಮೆಯಾಗುವುದು, ಅದಕ್ಕಾಗಿ ಮಾಂಸಾಹಾರ ನೀಡಲು ಸಾಧ್ಯವಾಗದಿರುವ ಬಗ್ಗೆ ತಮ್ಮಡನೆ ನಿಲಯ ಪಾಲಕರಾಗಲಿ, ಮೇಲ್ವಿಚಾರಕರಾಗಲೀ ಚರ್ಚಿಸಿಲ್ಲ. ಮಾಹಿತಿಯನ್ನೂ ನೀಡಿಲ್ಲ. ನಾವು ಯಾರೂ ಅಡುಗೆ ಸಿಬ್ಬಂದಿಯನ್ನು ಹೊರಗೆ ಕಳಿಸಿ ಅಡುಗೆ ಮನೆಗೆ ಬೀಗ ಹಾಕಿಲ್ಲ ಎಂಬುದು ಅವರ ನುಡಿ.

ಎಂದಿನಂತೆ ಊಟ ನೀಡದಿರುವ ಬಗ್ಗೆ ಮಾಹಿತಿ ಪಡೆಯಲು ದೂರವಾಣಿ ಮೂಲಕ ಸಂಪರ್ಕಿಸಲು ಪ್ರಯತ್ನಿಸಿದಾಗ ಮೇಲ್ವಿಚಾರಕ ಆಂಜಿನಪ್ಪ, ನಿಲಯ ಪಾಲಕರಾದ ಡಾ.ವಿ.ನಾಗರಾಜ್ ಲಭ್ಯವಾಗಲಿಲ್ಲ. ಹೀಗಾಗಿ ಧರಣಿಯನ್ನು ಮಾಡಬೇಕಾಯಿತು. ಸರ್ಕಲ್ ಇನ್ಸ್‌ಪೆಕ್ಟರ್ ಸ್ಥಳಕ್ಕೆ ಬಾರದೇ ಹೋಗಿದ್ದರೆ ನಾವೆಲ್ಲರೂ ಹಸಿವಿನಿಂದ ಮಲಗಬೇಕಾಗಿತ್ತು ಎಂಬುದು ವಿದ್ಯಾರ್ಥಿಗಳ ಅಸಮಾಧಾನದ ನುಡಿ.

ಸಂಪರ್ಕ ಸಮಸ್ಯೆ: ಹಾಸ್ಟೆಲ್ ವಾರ್ಡನ್ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಒಮ್ಮೆ ಸಭೆ ನಡೆಸಿದ್ದ ಡಾ.ನಾಗರಾಜ್ ಮತ್ತೆ ವಿದ್ಯಾರ್ಥಿಗಳ ಸಭೆ ನಡೆಸಿಲ್ಲ. ಸಂಪರ್ಕಕ್ಕೆ ಸಿಗುವುದಿಲ್ಲ. ಅವರ ಸಹಾಯಕರ ಬಳಿ ಸಮಸ್ಯೆ ಬಗ್ಗೆ ಹೇಳಿದರೆ ಪ್ರಯೋಜನವಾಗುವುದಿಲ್ಲ. ಮೇಲ್ವಿಚಾರಕರಾದ ಆಂಜಿನಪ್ಪ ಕೂಡ ವಿದ್ಯಾರ್ಥಿ ಸ್ನೇಹಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ವಿದ್ಯಾರ್ಥಿಗಳಾದ ಶಿವಕುಮಾರ್, ಶಿವರಾಜ್, ವಸಂತಕುಮಾರ್, ವಿಜಯಕುಮಾರ್ ಮತ್ತಿತರರು ದೂರಿದರು.

ಅತಿಥಿ ಭಾರ: ಬಹಳಷ್ಟು ವಿದ್ಯಾರ್ಥಿಗಳು ತಮ್ಮ ಗೆಳೆಯರನ್ನು ಹಾಸ್ಟೆಲ್‌ಗೆ ಅತಿಥಿಗಳನ್ನಾಗಿ ಕರೆತಂದರೆ ಅವರಿಗೂ ಊಟ ನೀಡಬೇಕು. ಕೆಲವರು ಹತ್ತರಿಂದ ಐವತ್ತು ಮಂದಿವರೆಗೂ ಕರೆತರುತ್ತಾರೆ. ಆಗ ಹಾಸ್ಟೆಲ್ ಖರ್ಚ ಅನ್ನು ನಿಭಾಯಿಸುವುದು ಹೇಗೆ? ಇದನ್ನು ಪ್ರಶ್ನಿಸಿ, ನಿಲಯದ ಕೊಠಡಿಗಳನ್ನು ತಪಾಸಣೆ ಮಾಡಿದ್ದಕ್ಕೆ ವಿದ್ಯಾರ್ಥಿಗಳು ಹುಸಿ ಆರೋಪ ಮಾಡಿ ಧರಣಿ ನಡೆಸಿದ್ದಾರೆ.

ವಿದ್ಯಾರ್ಥಿಗಳ ವಿರುದ್ಧ ಅಡುಗೆ ಸಿಬ್ಬಂದಿಯು ತಮಗೆ ನೀಡಿರುವ ದೂರನ್ನು ಆಧರಿಸಿ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ ಎಂದು ವಾರ್ಡನ್ ಡಾ.ವಿ.ನಾಗರಾಜ್ ತಿಳಿಸಿದ್ದಾರೆ. ವಿಶ್ವವಿದ್ಯಾಲಯದ ಸಮಾಜ ಕಲ್ಯಾಣಾಧಿಕಾರಿಯನ್ನು ಭೇಟಿ ಮಾಡುವ ಸಲುವಾಗಿ ತಾವು ಬೆಂಗಳೂರಿಗೆ ತೆರಳಿದ್ದಾಗಿ ಆಂಜಿನಪ್ಪ ಹೇಳುತ್ತಾರೆ.

ಸ್ನಾತಕೋತ್ತರ ಶಿಕ್ಷಣ ಪಡೆಯುವ ಸಲುವಾಗಿ ದೂರದ ರಾಯಚೂರಿನಿಂದ ಇಲ್ಲಿಗೆ ಬಂದರೆ ಊಟ, ಮೂಲಸೌಕರ್ಯಗಳಿಗೆ ಹಾಸ್ಟೆಲ್‌ನಲ್ಲಿ ಜಗಳವಾಡಬೇಕಾದ ಸನ್ನಿವೇಶ ನಿರ್ಮಾಣವಾಗಿರುವುದು ತೀವ್ರ ಬೇಸರ ತರಿಸಿದೆ. ಕೆಲವೇ ದಿನಗಳಲ್ಲಿ ಪರೀಕ್ಷೆ ಮುಗಿದು, ಊರುಗಳಿಗೆ ವಾಪಸಾಗುವ ಹೊತ್ತಿನಲ್ಲೇ ಇಂಥ ಘಟನೆ ನಡೆದಿದೆ. ಮುಂದಿನ ವರ್ಷ ಬರಲಿರುವ ವಿದ್ಯಾರ್ಥಿಗಳಿಗೆ ಇಂಥ ಸಮಸ್ಯೆ ಬರದಿರಲಿ ಎಂದು ಸಮಾಜಕಾರ್ಯ ವಿದ್ಯಾರ್ಥಿ ವಸಂತಕುಮಾರ್ ಆಶಿಸಿದರು. ಅವರ ಮಾತಿಗೆ ಇತರ ವಿದ್ಯಾರ್ಥಿಗಳು ಸಹಮತ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.